ವಾಣಿಜ್ಯ

ಆರ್ಥಿಕ ಬೆಲೆಯ ಭರ್ಜರಿ ಐಪಿಓ

ಆರ್ಥಿಕ ಬೆಲೆಯ ಭರ್ಜರಿ ಐಪಿಓ
Published On :

ವಾಣಿಜ್ಯೋದ್ಯಮ ವಲಯದಲ್ಲಿ ಉತ್ಸಾಹವನ್ನು ಮೂಡಿಸಲು ಪ್ರಧಾನಿಯ ಭಾಷಣ ಸಾಕು. ಆದರೆ ಬಜಾರಿನತ್ತ ಬಿಡಿ ವ್ಯವಹಾರಸ್ಥರನ್ನು (ರೀಟೇಲ್) ಆಕರ್ಷಿಸಲು ಅದಕ್ಕಿಂತ ಹೆಚ್ಚಿನ ಪ್ರಯತ್ನ ಬೇಕು. ಷೇರುಗಳ ಮಾರಾಟದಲ್ಲಿನ 'ಕ್ರಾಂತಿ' ಎನ್ನಬಹುದಾದ ರೀತಿಯಲ್ಲಿ ಯುಟಿಐನ ಆಸ್ತಿ ನಿರ್ವಹಣೆ ಸಂಸ್ಥೆಯ (ಅಸೆಟ್ ಮ್ಯಾನೇಜ್‌ಮೆಂಟ್ ಕಂಪನಿಯ) ಹೊಸ ಷೇರುಗಳನ್ನು ಮಾರಲಿದೆ.
ಈ ಷೇರುಗಳಲ್ಲಿ ಸರ್ಕಾರಿ ಸಂಸ್ಥೆಗಳ ಷೇರುಗಳನ್ನು 'ತೀರಸೋಡಿ' ದರದಲ್ಲಿ ಮಾರುವ ವ್ಯವಸ್ಥೆ ಆಗಿದೆ. ಈ ಮಾರ್ಗದಿಂದ ಬಂಡವಾಳದ ಅಗತ್ಯ ಕಂಡು ಬಂದಿರುವ ಸಂಸ್ಥೆಗಳಿಗೆ ಬಂಡವಾಳ ಸಿಕ್ಕಿದಂತೆ ಆದೀತು. ಅದೇ ಸಮಯದಲ್ಲೇ ಸಾಮಾನ್ಯ ಹೂಡಿಕೆದಾರರಿಗೆ ಹಣದ ಉಳಿತಾಯದ ಹಾದಿಯನ್ನೂ ತೋರಿಸಿದಂತೆ ಆಗುತ್ತದೆ.
ಈ ವ್ಯವಹಾರದಲ್ಲಿ ಯುಟಿಐನ ಷೇರು ಮಾರಾಟವೇ ಮೊದಲನೆಯದಾಗಬಹುದು. ಯುಟಿಐ ಆಸ್ತಿ ನಿರ್ವಹಣಾ ಕಂಪನಿಯಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ಪ್ರಧಾನ ಪಾಲುದಾರರ ಸಂಸ್ಥೆ. ಭದ್ರತೆಗೆ ಮೋಸವಿಲ್ಲ. ಇತರ ಪಾಲುದಾರರು ಬ್ಯಾಂಕ್ ಆಫ್ ಬರೋಡಾ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಎಲ್ಲೈಸಿ.
ಮಾರಾಟದ ಆಹ್ವಾನ
ಈಗ ಕೆಲವೇ ಕುಟುಂಬಗಳಲ್ಲಿ ಹೆಪ್ಪುಗಟ್ಟಿ ಕೂತಿರುವ ಪ್ರಾಯೋಜಕರ ಷೇರುಗಳನ್ನು ಮುಕ್ತ ಪೇಟೆಯಲ್ಲಿ ಮಾರಲೇ ಬೇಕು. ಯಾವ ಕುಟುಂಬವೂ ನಿರ್ದಿಷ್ಟವಾದ ಮಿತಿಗಿಂತ ಹೆಚ್ಚಿನ ಷೇರುಗಳನ್ನು ಹೊಂದುವಂತಿಲ್ಲ. ಮಿತಿಗಿಂತ ಹೆಚ್ಚಿಗೆ ಇರುವ ಷೇರುಗಳನ್ನು ಇತರರಿಗೆ ನಿರ್ದಿಷ್ಟ ಬೆಲೆಯಲ್ಲಿ ಮಾರಲೇ ಬೇಕು.
ಈಗ ಇಂತಹ 'ಮಾರಾಟ' ಒಂದು ದೊಡ್ಡ ಕಂಪನಿಯಿಂದ ಇತರ ದೊಡ್ಡ ಕಂಪನಿಗಳ ನಡುವೆ ಮಾತ್ರ ನಡೆಯುವ ವ್ಯವಹಾರ ಎಂದಾಗಿದೆ. ಈ 'ಮಾರಾಟ'ದಲ್ಲೂ ಬಿಡಿ ವ್ಯವಹಾರಸ್ಥರಿಗೆ ಒಂದು ನಿರ್ದಿಷ್ಟ ಪ್ರಮಾಣದ ಷೇರುಗಳನ್ನು ಮಾರಲೇ ಬೇಕೆನ್ನುವ ಮೀಸಲು ನಿಯಮವನ್ನು ಜಾರಿಗೊಳಿಸಲು ಸರ್ಕಾರ-ಸೆಬಿ ನಿರ್ಧರಿಸಿವೆ. ಈ ಷೇರುಗಳು ಪೇಟೆಗೆ ಬಂದಾಗ, ಬಿಡಿ ಹೂಡಿಕೆದಾರರಿಗೆ ತಮ್ಮಲ್ಲಿರುವ ಹಣವನ್ನು ಒಳ್ಳೆಯ ಕಡೆಯಲ್ಲಿ ವಿನಿಯೋಗಿಸುವ ಅವಕಾಶ ಸಿಗುತ್ತದೆ.
ಯಾಕೆಂದರೆ, ಇಂತಹ ಕಂಪನಿಗಳೆಲ್ಲವೂ ಭರ್ಜರಿ ಕಂಪನಿಗಳೇ. ಇಲ್ಲಿ ಷೇರು ಬೆಲೆ ಕುಸಿಯುವ ಭೀತಿಯೂ ಇಲ್ಲ, ಡಿವಿಡೆಂಟ್‌ಗಳು ಕಡಿಮೆಯಾಗುವ ಸಂಭವವೂ ಇಲ್ಲ. ಸದ್ಯದಲ್ಲೇ ಈ ವಿಚಾರದಲ್ಲಿ ಅಂತಿಮ ತೀರ್ಮಾನ ಪ್ರಕಟವಾಗಲಿದೆ.
ಕಳೆದ ಎರಡು ವರ್ಷಗಳಲ್ಲಿ ಭಾರತೀಯ ಕಾರ್ಪೋರೇಟ್‌ಗಳು ಸುಮಾರು 50,000 ಕೋಟಿ ರೂಪಾಯಿಗಳ ಬಂಡವಾಳವನ್ನು ಪೇಟೆಯಿಂದ ಎತ್ತಿವೆ. ಅದರಲ್ಲಿ ಬಹುಭಾಗ 'ಷೇರು ಮಾರಾಟ ಅಥವಾ ಆಫ್ ಫಾರ್ ಸೇಲ್‌' ಮಾರ್ಗದಿಂದ ಆ ಮಾರ್ಗದಲ್ಲಿ ಬಿಡಿ ವ್ಯವಹಾರಸ್ಥರು ನಡೆಯುವಂತಿರಲಿಲ್ಲ. ಇನ್ನು ಮುಂದೆ ಅದು ಸಾಧ್ಯವಾಗಬಹುದು.
ಕೊಪ್ಪರಿಗೆ ಹಣವಿದೆ:
ಹೂಡಿಕೆ ಅವಕಾಶವಿಲ್ಲ.
2014ರಲ್ಲಿ 126 ಕಂಪನಿಗಳು (ಬ್ಯಾಂಕಿಂಗ್ ಹಾಗೂ ವಿತ್ತೀಯ ಕಂಪನಿಗಳನ್ನು ಬಿಟ್ಟು) ಹೆಚ್ಚುವರಿ ಹಣದಿಂದ ಬೀಗುತ್ತಿದ್ದವು. ಇದೇನೂ ಸಂಸತ್ತಿನ ಜಂಬದ ಮಾತಲ್ಲ. ಬಂಡವಾಳ ಹೂಡಲು ಒಳ್ಳೆಯ ಅವಕಾಶಗಳು ಇರಲಿಲ್ಲ ಎಂದೇ ಅರ್ಥ.
ಈ ಗುಂಪಿನಲ್ಲಿ ಹಲವು ಸರ್ಕಾರಿ ಕಂಪನಿಗಳೂ ಇವೆ. ಇನ್‌ಫೋಸಿಸ್, ಎನ್‌ಎಂಡಿಸಿ, ಆರೆಕಲ್‌ಗಳಂತಹ ಸಂಸ್ಥೆಗಳಿಗೆ ಸಾಲವೇ ಇರಲಿಲ್ಲ. ಆರ್ಥಿಕ ವ್ಯವಸ್ಥೆ ಚೇತರಿಸಿಕೊಂಡರೆ, ಇಂತಹ ನಗದು ಬಂಡವಾಳ ಉತ್ಪಾದನೆಯ ವಲಯಗಳಿಗೆ ಜೀವದಾನ ಮಾಡಬಹುದು. ಆಗ ಬಜಾರಿನಲ್ಲಿ ಚಟುವಟಿಕೆ ಹೆಚ್ಚುವುದು ಖಚಿತ.
ಕೊನೆ ಮಾತು : ಔದ್ಯಮಿಕ ವಲಯದ ಪ್ರಾತಿನಿಧಿಕ ಸಂಸ್ಥೆಗಳು ಪ್ರಧಾನಿ ಮೋದಿ ಅವರ ಆರ್ಥಿಕ ನೀತಿ ಕುರಿತ ಮಾತುಗಳನ್ನು ಸ್ವಾಗತಿಸಿವೆ. ಈ ಸುದ್ದಿಯ ಜತೆಯಲ್ಲೇ ಔದ್ಯಮಿಕ ಸಾಲದ ಹೆಚ್ಚಳದ ವೇಗ ಕುಗ್ಗಿದೆ ಎನ್ನುವ ಸುದ್ದಿಯೂ ಪ್ರಕಟವಾಗಿದೆ. ಅದೇ ಭಾರತದ ವೈಶಿಷ್ಟ್ಯ.


-ಸತ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.