ರೈತರ ಸಾಲಮನ್ನಾ ಆದರೂ, ಕೃಷಿ ವಲಯಕ್ಕೆ ಸಿಗಲಿಲ್ಲ ಮಹತ್ವದ ಅನುದಾನ
ಕೊನೆಗೂ ಎಲ್ಲಾ ವಾದ ವಿವಾದ, ಚರ್ಚೆ, ಟೀಕೆ ನಾಟಕಗಳ ನಂತರ ರಾಜ್ಯ ಬಜೆಟ್ ಗೆ ತೆರೆ ಬಿದ್ದಿದೆ. ..

ಬೆಂಗಳೂರು: ಕೊನೆಗೂ ಎಲ್ಲಾ ವಾದ ವಿವಾದ, ಚರ್ಚೆ, ಟೀಕೆ ನಾಟಕಗಳ ನಂತರ ರಾಜ್ಯ ಬಜೆಟ್ ಗೆ ತೆರೆ ಬಿದ್ದಿದೆ. ಸಾಮಾನ್ಯವಾಗಿ ಚುನಾವಣೆ ಮುಗಿದು ಗೆದ್ದುಬಂದ ಸರ್ಕಾರ ಮಂಡಿಸುವ ಮೊದಲ ಬಜೆಟ್ ನ ಮೇಲೆ ಎಲ್ಲರಿಗೂ ಕುತೂಹಲವಿರುತ್ತದೆ. ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳಲ್ಲಿ ಅನೇಕ ಕಾರ್ಯಕ್ರಮಗಳು ಮತ್ತು ಯೋಜನೆಗಳನ್ನು ಇಲ್ಲಿ ಘೋಷಿಸಲಾಗುತ್ತದೆ.
ಇದೀಗ ರಾಜ್ಯದಲ್ಲಿ ಕಳೆದ ಬಾರಿಯ ಚುನಾವಣೆಯಲ್ಲಿ ಯಾವ ಪಕ್ಷಗಳಿಗೂ ಸ್ಪಷ್ಟ ಬಹುಮತ ಸಿಗದ ಕಾರಣ ಪರಿಸ್ಥಿತಿಗೆ ಹೊಂದಿಕೊಂಡು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚಿಸಿವೆ. ಹೀಗಾಗಿ ಜೆಡಿಎಸ್ ಮತ್ತು ಕಾಂಗ್ರೆಸ್ ನ ಚುನಾವಣಾ ಪ್ರಣಾಳಿಕೆಗಳ ಭರವಸೆಗಳು ಬಜೆಟ್ ನಲ್ಲಿ ಘೋಷಣೆಯಾಗಬಹುದು ಎಂದು ಎಲ್ಲರೂ ಭಾವಿಸಿದ್ದರು. ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ರೈತರ ಸಾಲಮನ್ನಾ ಮಾಡುತ್ತೇವೆ ಎಂದು ಹೇಳಿದ್ದ ಜೆಡಿಎಸ್ ಕೊನೆಗೂ ಹಲವು ವಾದ ವಿವಾದಗಳ ನಂತರ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರು ನಿನ್ನೆ ಬಜೆಟ್ ನಲ್ಲಿ ರೈತರ 2 ಲಕ್ಷದವರೆಗಿನ ಬೆಳೆ ಸಾಲಮನ್ನಾ ಮಾಡುವುದಾಗಿ ಘೋಷಿಸಿದ್ದಾರೆ. ಇದಕ್ಕೆ ಸುಮಾರು 34 ಸಾವಿರ ಕೋಟಿ ರೂಪಾಯಿಗಳು ಬೇಕಾಗಿದೆ.
ಆದರೆ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಭವಿಷ್ಯದಲ್ಲಿ ಇನ್ನೂ ಹಲವಾರು ಸವಾಲುಗಳು ಎದುರಾಗಲಿವೆ. ರೈತರ ಸಾಲಮನ್ನಾ ಘೋಷಿಸಿದ್ದರೂ ಕೂಡ ಗ್ರಾಮೀಣ ಭಾಗದ ರೈತರ ಸಮಸ್ಯೆಗಳ ಪರಿಹಾರಕ್ಕೆ ಒಂದು ಸ್ಪಷ್ಟ ಮಾರ್ಗವನ್ನು ಸೂಚಿಸಿಲ್ಲ.
ಇದು ಸಮ್ಮಿಶ್ರ ಸರ್ಕಾರವಾಗಿರುವುದರಿಂದ ಹಿಂದಿನ ಸಿದ್ದರಾಮಯ್ಯ ಸರ್ಕಾರದ ಹಲವು ಭಾಗ್ಯ ಯೋಜನೆಗಳನ್ನು ಮುಂದುವರಿಸಿದ್ದಾರೆ. ಅನ್ನಭಾಗ್ಯ ಯೋಜನೆಯಡಿ ನೀಡಲಾಗುತ್ತಿದ್ದ ಅಕ್ಕಿ ಪ್ರಮಾಣವನ್ನು ಕುಮಾರಸ್ವಾಮಿಯವರು ಇಳಿಸಿದ್ದು ಇದಕ್ಕೆ ಕಾಂಗ್ರೆಸ್ ಹೇಗೆ ಪ್ರತಿಕ್ರಿಯಿಸಲಿದೆ ಎನ್ನುವುದು ಕುತೂಹಲಕಾರಿ. ಗ್ರಾಮೀಣ ಕರ್ನಾಟಕಕ್ಕೆ ಬಜೆಟ್ ನಲ್ಲಿ ಹೆಚ್ಚಿನ ಆದ್ಯತೆ ನೀಡಿರುವಂತೆ ಕಂಡುಬರುತ್ತಿಲ್ಲ.
ಮೇಲ್ಮಧ್ಯಮ ಮತ್ತು ಮಧ್ಯಮ ವರ್ಗದ ಜನರಿಗೆ ಕೂಡ ಬಜೆಟ್ ನಲ್ಲಿ ನಿರಾಸೆಯಾಗಿದೆ. ಇಂಧನ ಮತ್ತು ವಿದ್ಯುತ್ ಬೆಲೆ ಏರಿಕೆ ಸಾಮಾನ್ಯ ಜನತೆ ಮೇಲೆ ನೇರ ಪರಿಣಾಮ ಬೀರುವುದಲ್ಲದೆ ಅದರ ಪರೋಕ್ಷ ಪರಿಣಾಮ ಎಲ್ಲಾ ವರ್ಗದ ಜನರ ಮೇಲಾಗುತ್ತದೆ. ಹೆಚ್ಚಿನ ಆದಾಯ ಸಂಗ್ರಹಣೆಗೆ ಒಲವು ತೋರಿದಂತೆ ಕಂಡುಬರುತ್ತಿಲ್ಲ. ಸರ್ಕಾರಿ ವೆಚ್ಚಗಳಿಗೆ ಮತ್ತು ಸೋರಿಕೆಗಳಿಗೆ ಸಹ ಗಂಭೀರವಾಗಿ ಸರ್ಕಾರಗಳು ಕಡಿವಾಣ ಹಾಕುತ್ತಿಲ್ಲ.
ಅಂತಿಮವಾಗಿ ಒಂದು ಬಜೆಟ್ ರಾಜ್ಯದ ಮುಂದಿನ ಕೆಲಸಗಳು ಮತ್ತು ಅಭಿವೃದ್ಧಿಯನ್ನು ಕೇಂದ್ರೀಕರಿಸಿರಬೇಕು. ರೈತರ ಸಾಲಮನ್ನಾಗೆ ಒತ್ತು ನೀಡಲಾಗಿದ್ದರೂ ಕೂಡ ಕೃಷಿ ಕ್ಷೇತ್ರದ ಬೆಳವಣಿಗೆ ಮತ್ತು ಆ ಮೂಲಕ ಆರ್ಥಿಕಾಭಿವೃದ್ಧಿಯ ಯೋಜನೆಗಳು ಈ ಬಾರಿಯ ಬಜೆಟ್ ನಲ್ಲಿ ಕಾಣೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


