ವಾಹನ

ವಿಶ್ವದ ಮುಂದುವರೆದ ನಗರಗಳಿಗೇ ಅಚ್ಚರಿ ಮೂಡಿಸಿದ ಭಾರತದ ವಿಮಾನ ನಿಲ್ದಾಣಗಳಿವು..!

ವಿಶ್ವದ ಮತ್ತು ದೇಶದ ಇತರೆ ವಿಮಾನ ನಿಲ್ದಾಣಗಳನ್ನೇ ನಾಚಿಕೆ ಪಡುವಂತೆ ನಿರ್ಮಾಣವಾಗಿರುವ ಭಾರತದ ಐದು ಆತ್ಯಾಧುನಿಕ ವಿಮಾನ ನಿಲ್ದಾಣಗಳ ವಿವರ ಇಲ್ಲಿದೆ...

ವಿಶ್ವದ ಮುಂದುವರೆದ ನಗರಗಳಿಗೇ ಅಚ್ಚರಿ ಮೂಡಿಸಿದ ಭಾರತದ ವಿಮಾನ ನಿಲ್ದಾಣಗಳಿವು..!
ಅತ್ಯುತ್ತಮ ವಿಮಾನ ನಿಲ್ದಾಣಗಳು (ಸಂಗ್ರಹ ಚಿತ್ರ)
Published On :

ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಭಾರತ ಕೂಡ ಒಂದು. ದಶಕಗಳ ಹಿಂದೆ ಭಾರತವನ್ನು ಅಭಿವೃದ್ಧಿಶೀಲ ರಾಷ್ಟ್ರ ಎಂದು ಹೇಳುತ್ತಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಭಾರತ ವಿಶ್ವದ ಇತರೆ  ಪ್ರಮುಖ ರಾಷ್ಟ್ರಗಳಿಗೆ ನೀಡುತ್ತಿರುವ ತೀವ್ರ ಪೈಪೋಟಿಯನ್ನು ಕಂಡ ಮಂದಿ ಭಾರತ ಅಭಿವೃದ್ಧಿಶೀಲ ರಾಷ್ಟ್ರವಲ್ಲ. ಅಭಿವೃದ್ಧಿ ಹೊಂದಿದ ರಾಷ್ಟ್ರವೆಂಬ ಅಭಿಪ್ರಾಯಪಡುತ್ತಿದ್ದಾರೆ. ಭಾರತ ದೇಶದ  ಈ ಬದಲಾವಣೆಗೆ ಅಭಿವೃದ್ಧಿ ಮತ್ತು ಮೂಲಸೌಕರ್ಯಗಳ ವೃದ್ಧಿಯೇ ಪ್ರಮುಖ ಕಾರಣವೆನ್ನಬಹುದು.

ಭಾರತದೊಂದಿಗೆ ವಿಶ್ವದ ಬಹುತೇಕ ರಾಷ್ಟ್ರಗಳು ವಾಣಿಜ್ಯ ಸಂಬಂಧ ಹೊಂದಿವೆ.  ಹೀಗಾಗಿ ಪ್ರತಿನಿತ್ಯ ಭಾರತದ ವಿವಿಧ ಮೂಲಗಳಿಗೆ  ವಿಶ್ವದ ನಾನಾ ಮೂಲೆಗಳಿಂದ ವಿದೇಶಿಗರು ಬಂದು  ಹೋಗುವುದು ಸಾಮಾನ್ಯ. ಅಂತೆಯೇ ನಮ್ಮವರು ಕೂಡ ವಿದೇಶಗಳಿಗೆ ಪ್ರವಾಸ ಮಾಡುವುದು ಸಾಮಾನ್ಯ. ಯಾವುದೇ ದೇಶವಾಗಲಿ ಆ ದೇಶದ ಪ್ರವಾಸೋಧ್ಯಮ ಉತ್ತಮವಾಗಿದ್ದರೆ ಅದರ  ಆರ್ಥಿಕ ಹಿನ್ನಲೆ ಕೂಡ ಉತ್ತಮವಾಗಿರುತ್ತದೆ. ದೇಶಕ್ಕೆ ನಾನಾ ನಮೂನೆಗಳಿಂದ ಬಂಡವಾಳವನ್ನು ತರುವ ಏಕೈಕ ಮಾರ್ಗವೆಂದರೆ ಅದು ಪ್ರವಾಸೋಧ್ಯಮ ಮಾತ್ರ. ಈ ನಿಟ್ಟಿನಲ್ಲಿ ಭಾರತ  ಎಷ್ಟರ ಮಟ್ಟಿಗೆ ಸಜ್ಜಾಗಿದೆ. ಪ್ರಮುಖವಾಗಿ ಪ್ರವಾಸಿಗರು  ಭಾರತಕ್ಕೆ ವಿಮಾನಗಳಲ್ಲಿ ಆಗಮಿಸುತ್ತಾರೆ. ಇಂತಹ ಪ್ರವಾಸಿಗರನ್ನು ಬರ ಮಾಡಿಕೊಳ್ಳುವ ನಮ್ಮ ವಿಮಾನ ನಿಲ್ದಾಣಗಳು ಉತ್ಕೃಷ್ಟ  ಮತ್ತು ಆತ್ಯಾಧುನಿಕವಾಗಿರಬೇಕು.

ಈ ನಿಟ್ಟಿನಲ್ಲಿ ಭಾರತದ ಐದು ಪ್ರಮುಖ ವಿಮಾನ ನಿಲ್ದಾಣಗಳು ಇದೀಗ ವಿಶ್ವದ ಮುಂದುವರೆದ ರಾಷ್ಟ್ರಗಳೇ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದ್ದು, ಮೂಲಸೌಕರ್ಯ,  ತಂತ್ರಜ್ಞಾನ ಮತ್ತು ಪ್ರಯಾಣಿಕರ ಸೌಕರ್ಯದ ನಿಟ್ಟಿನಲ್ಲಿ ಸಾಕಷ್ಟು ಅಭಿವೃದ್ಧಿಗೊಂಡಿವೆ. ವಿಶ್ವದ ಮತ್ತು ದೇಶದ ಇತರೆ ವಿಮಾನ ನಿಲ್ದಾಣಗಳನ್ನೇ ನಾಚಿಕೆ ಪಡುವಂತೆ ನಿರ್ಮಾಣವಾಗಿರುವ  ಭಾರತದ ಐದು ಆತ್ಯಾಧುನಿಕ ವಿಮಾನ ನಿಲ್ದಾಣಗಳ ವಿವರ ಇಲ್ಲಿದೆ.

1.ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ- ನವದೆಹಲಿ

Story image


ದೇಶದ ರಾಜಧಾನಿಯಾದ ದೆಹಲಿ ರಾಜಕೀಯವಾಗಿ ಮತ್ತು ವಾಣಿಜ್ಯಾತ್ಮಕ ನಿಟ್ಟಿನಲ್ಲಿ ವಿಶ್ವದ ಇತರೆ ರಾಷ್ಟ್ರಗಳಿಗೆ ತೀರಾ ಅಚ್ಚುಮೆಚ್ಚು. ಭಾರತದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣಗಳಲ್ಲಿ  ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕೂಡ ಒಂದು. ವಾರ್ಷಿಕ ಸುಮಾರು 60 ಮಿಲಿಯನ್ ಪ್ರಯಾಣಿಕರು ಪ್ರಯಾಣಿಸುವ ಸಾಮರ್ಥ್ಯ ಈ ವಿಮಾನ ನಿಲ್ದಾಣಕ್ಕಿದೆ. ಇನ್ನು 2013ರಲ್ಲಿ   ಇಲ್ಲಿಂದ ಸುಮಾರು 36.88 ಮಿಲಿಯನ್ ಪ್ರಯಾಣಿಕರು ವಿಶ್ವದ ಮತ್ತು ದೇಶದ ವಿವಿಧೆಡೆಗೆ ಪ್ರಯಾಣಿಸಿದ್ದರು. ಇಂತಹ ಜನನಿಭಿಡ ವಿಮಾನ ನಿಲ್ದಾಣದಲ್ಲಿ ಮೂಲಸೌಕರ್ಯಕ್ಕೆ ಕೊರೆತೆ  ಉಂಟಾಗಬಹುದು ಎಂದು ನೀವು ಭಾವಿಸಿದ್ದರೆ ಅದು ತಪ್ಪು. ಏಕೆಂದರೆ ಈ ವಿಮಾನ ನಿಲ್ದಾಣವನ್ನು ಬಹಳ ಮುನ್ನೆಚ್ಚರಿಕೆಯಿಂದ ಮತ್ತು ದೂರಾಲೋಚನೆಯಿಂದ ಅತ್ಯಾಧುನಿಕ  ತಂತ್ರಜ್ಞಾನದೊಂದಿಗೆ ನಿರ್ಮಿಸಲಾಗಿದೆ. ಅಂತಾರಾಷ್ಟ್ರೀಯ ವಿಮಾನಗಳಿಗೆ ಮತ್ತು ದೇಶಿ ವಿಮಾನಗಳಿಗೆಂದೇ ಪ್ರತ್ಯೇಕ ಟರ್ಮಿನಲ್ ಗಳಿದ್ದು,  ಪ್ರತಿ ರನ್ ವೇ ಕೂಡ 1.2 ಕಿ.ಮೀ ಉದ್ದವಿದೆ.  ಹೀಗಾಗಿ ಟರ್ಮಿನಲ್ ಗಳಲ್ಲಿ ಏಕಕಾಲದಲ್ಲಿ 2 ವಿಮಾನಗಳನ್ನು ಇಳಿಸಿದರೂ ಯಾವುದೇ ಅಪಾಯವಿರುವುದಿಲ್ಲ. ಹೀಗಿದ್ದರೂ ನಿಲ್ದಾಣದ ಅಧಿಕಾರಿಗಳು ಒಂದೇ ವಿಮಾನಕ್ಕೆ ಅವಕಾಶ ನೀಡುತ್ತಾರೆ.  ಇನ್ನು ಸತತ ಐದು ವರ್ಷಗಳ ಕಾಮಗಾರಿ ಬಳಿಕ 2010ರಲ್ಲಿ ಟಿ3 ಟರ್ಮಿನಲ್ ಅನ್ನು ಬಳಕೆ ಮಾಡಲಾಗುತ್ತಿದ್ದು, ಇದಕ್ಕಾಗಿ ಸುಮಾರು 12, 700 ಕೋಟಿ ರುಗಳನ್ನು ವ್ಯಯಿಸಲಾಗಿದೆ. ದೇಶದ  ಅತ್ಯುತ್ತಮ ವಿಮಾನ ನಿಲ್ದಾಣಗಳ ಪಟ್ಟಿಯಲ್ಲಿ ದೆಹಲಿ ವಿಮಾನ ನಿಲ್ದಾಣಕ್ಕೆ ಎರಡನೇ ಸ್ಥಾನವಿದ್ದು, ಇದು ಸತತ ಮೂರನೇ ಬಾರಿಗೆ ಸಂದಿರುವ ಗೌರವವಾಗಿದೆ.

2.ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ-ಹೈದರಾಬಾದ್

Story image


ಪ್ರಸ್ತುತ ತೆಲಂಗಾಣ ರಾಜ್ಯದ ಭಾಗವಾಗಿರುವ ಹೈದರಾದ್ ನಲ್ಲಿರುವ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಸ್ತುತ ಆಂಧ್ರ ಪ್ರದೇಶ ಮತ್ತು ತೆಲಂಗಾಣ ಎರಡೂ  ರಾಜ್ಯಗಳಿಗಾಗಿ ಕಾರ್ಯನಿರ್ವಹಿಸುತ್ತಿವೆ. ದೇಶದ ಅತ್ಯಂತ ಜನನಿಭಿಡ ವಿಮಾನ ನಿಲ್ದಾಣಗಳಲ್ಲಿ ಹೈದರಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕೂಡ ಒಂದಾಗಿದ್ದು, ಹೈದರಾಬಾದ್  ಹೊರವಲಯದಲ್ಲಿರುವ ಶಂಷಾಬಾದ್ ನಲ್ಲಿ ಸುಮಾರು 22 ಕಿ.ಮೀ ಆವರಣದಲ್ಲಿ ಈ ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡಲಾಗಿದೆ. ಈ ಪ್ರಮುಖ ವಿಮಾನ ನಿಲ್ದಾಣದಿಂದ ವಾರ್ಷಿಕ  ಸುಮಾರು 7 ಮಿಲಿಯನ್ ನಷ್ಟು ಪ್ರಯಾಣಿಕರು ವಿವಿಧ ಪ್ರದೇಶಗಳಿಗೆ ಪ್ರಯಾಣಿಸುತ್ತಾರೆ. ತನ್ನ ಅತ್ಯಾಧುನಿಕ ಮೂಲಸೌಕರ್ಯ ವ್ಯವಸ್ಥೆಯ ಮೂಲಕವೇ ವಿಶ್ವದ ಇತರೆ ವಿಮಾನ ನಿಲ್ದಾಣಗಳಿಗೆ  ಅಚ್ಚರಿ ಮೂಡಿಸಿದೆ. ಅತ್ಯಾಧುನಿಕ ಬ್ಯಾಗೇಜ್ ಸ್ಕ್ರೀನಿಂಗ್ ವ್ಯವಸ್ಥೆಯನ್ನು ಇಲ್ಲಿ ಅಳವಡಿಸಲಾಗಿದ್ದು, ಪ್ರಯಾಣಿಕರಿಗೆ ಅನಾನುಕೂಲ ಉಂಟಾಗದಿರಲಿ ಎಂಬ ಕಾರಣಕ್ಕಾಗಿ ಸಾಕಷ್ಟು ಪ್ರಯಾಣಿಕ  ಕೌಂಟರ್ ಗಳನ್ನು, ಇಮಿಗ್ರೇಷನ್ ಕೌಂಟರ್ ಗಳು ಮತ್ತು ಬ್ಯಾಗೇಜ್ ಸ್ಕ್ರೀನಿಂಗ್ ಕೌಂಟರ್ ಗಳನ್ನು ತೆರೆಯಲಾಗಿದೆ.

3.ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ-ಬೆಂಗಳೂರು

Story image


ದೇಶದ ಇತರೆ ವಿಮಾನ ನಿಲ್ದಾಣಗಳಿಗೆ ಹೋಲಿಕೆ ಮಾಡಿದರೆ ಬೆಂಗಳೂರಿನಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಹೊಸದು ಎಂದೇ ಹೇಳಬೇಕು. ಏಕೆಂದರೆ  2008ರಲ್ಲಿ ಈ ವಿಮಾನ ನಿಲ್ದಾಣವನ್ನು ನಾಗರಿಕ ಬಳಕೆಗೆ ಅನುವ ಮಾಡಿಕೊಡಲಾಯಿತು. ಈ ನಿಲ್ದಾಣ ನಿರ್ಮಾಣದ ಸಂದರ್ಭದಲ್ಲಿ ಸಾಕಷ್ಟು ಮುಂಜಾಗ್ರತೆವಹಿಸಿ, ದೇಶದ ಇತರೆ ವಿಮಾನ  ನಿಲ್ದಾಣಗಳಲ್ಲಿರುವ ಸಮಸ್ಯೆಗಳು ಮತ್ತು ವಿಶ್ವದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿರುವ ಮುಂದುವರೆದ ತಂತ್ರಜ್ಞಾನವನ್ನು ಅಳವಡಿಕೆ ಮಾಡಿಕೊಂಡು ಈ ನಿಲ್ದಾಣವನ್ನು ನಿರ್ಮಿಸಲಾಗಿದೆ.  ಸುಮಾರು 4 ಸಾವಿರ ಎಕರೆ ಪ್ರದೇಶದಲ್ಲಿ ನಿಲ್ದಾಣವನ್ನು ನಿರ್ಮಿಸಲಾಗಿದ್ದು, ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆಯನ್ನು ಹೊಂದಿದೆ. ಹೈದರಾಬಾದ್ ವಿಮಾನ ನಿಲ್ದಾಣದಲ್ಲಿರುವಂತೆಯೇ  ಇಲ್ಲಿಯೂ ಅತ್ಯಾಧುನಿಕ ಬ್ಯಾಗೇಜ್ ಸ್ಕ್ರೀನಿಂಗ್ ಮತ್ತು ಇಮಿಗ್ರೇಷನ್ ಸೆಂಟರ್ ಗಳಿದ್ದು, ಅತ್ಯಂತ ಜನನಿಭಿಡ ಸಮಯದಲ್ಲಿ ಏಕಕಾಲದಲ್ಲಿ ಸುಮಾರು 3 ಸಾವಿರ ಮಂದಿ ಪ್ರಯಾಣಿಕರನ್ನು  ನಿರಾಯಾಸವಾಗಿ ನಿಯಂತ್ರಿಸುವ ಸಾಮರ್ಥ್ಯವನ್ನು ಹೊಂದಿದೆ. ಇದೇ ಕಾರಣಕ್ಕೆ ಬೆಂಗಳೂರು ವಿಮಾನ ನಿಲ್ದಾಣವನ್ನು ಪ್ರಯಾಣಿಕ ಸ್ನೇಹಿ ನಿಲ್ದಾಣ ಎನ್ನಲಾಗುತ್ತದೆ.

4. ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ- ಮುಂಬೈ

Story image


ದೇಶದ ವಾಣಿಜ್ಯ ರಾಜಧಾನಿ ಎಂದೇ ಖ್ಯಾತಿ ಗಳಿಸಿರುವ ಮುಂಬೈ ದೇಶದಲ್ಲೇ ಅತ್ಯಂತ ಜನನಿಭಿಡ ನಗರ ಎಂದರೆ ತಪ್ಪಾಗಲಾರದು. ಸುಮಾರು 1, 450 ಎಕರೆ ಬೃಹತ್ ಪ್ರದೇಶದಲ್ಲಿ ಈ  ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡಲಾಗಿದ್ದು, 2006ರಲ್ಲಿ ಖಾಸಗಿ ನಿರ್ವಹಣೆಗೆ ಈ ನಿಲ್ದಾಣವನ್ನು ವಹಿಸಲಾಗಿದೆ. ಅಲ್ಲದೆ ಪ್ರಸ್ತುತ ಇಲ್ಲಿ ಭಾರಿ ಪ್ರಮಾಣದ ಕಾಮಗಾರಿ ನಡೆಯುತ್ತಿದ್ದು,  ವಾರ್ಷಿಕ ಸುಮಾರು 25 ಮಿಲಿಯನ್ ಪ್ರಯಾಣಿಕರನ್ನು ನಿರ್ವಹಿಸಬಲ್ಲ ಸಾಮರ್ಥ್ಯ ಈ ನಿಲ್ದಾಣಕ್ಕಿದೆ. ಹೊಸ ಮತ್ತು ಅತ್ಯಾಧುನಿಕ ವಿಮಾನ ನಿಲ್ದಾಣ 2014ರ ಫೆಬ್ರವರಿಯಲ್ಲಿ ತನ್ನ ಕಾರ್ಯಾರಂಭ  ಮಾಡಿತ್ತು. ಸರಕು ಸಾಗಣೆ ವಿಮಾನಗಳಿಗೆ, ಪ್ರಯಾಣಿಕ ವಿಮಾನಗಳಿಗೆ ಪ್ರತ್ಯೇಕ ಟರ್ಮಿನಲ್ ಗಳಿದ್ದು, ಅಂತಾರಾಷ್ಟ್ರೀಯ ಮತ್ತು ದೇಶಿಯ ಪ್ರಯಾಣಿಕ ವಿಮಾನ ನಿಲ್ದಾಣಗಳಿಗೆ ಪ್ರತ್ಯೇಕ  ಟರ್ಮಿನಲ್ ಗಳಿವೆ. ಇನ್ನು ವಿಮಾನ ನಿಲ್ದಾಣದ ಪ್ರಯಾಣಿಕ ಕಟ್ಟಡ ಕೂಡ ಅತ್ಯಾಧುನಿಕವಾಗಿದ್ದು, ಸಾಕಷ್ಟು ಪ್ರಮಾಣದಲ್ಲಿ ಇಮಿಗ್ರೇಷನ್ ಕೌಂಟರ್ ಮತ್ತು ಬ್ಯಾಗೇಜ್ ಸ್ಕ್ರೀನಿಂಗ್ ಕೌಂಟರ್  ಗಳಿರುವ ಕಾರಣ ಪ್ರಯಾಣಿಕರು ಹೆಚ್ಚು ತ್ರಾಸ ಪಡುವ ಅಗತ್ಯವಿಲ್ಲ.

5. ಚೆನ್ನೈ ವಿಮಾನ ನಿಲ್ದಾಣ

Story image


ದೇಶದ ಅತ್ಯಂತ ಜನನಿಭಿಡ ವಿಮಾನ ನಿಲ್ದಾಣದಲ್ಲಿ ತಮಿಳುನಾಡಿನ ಚೆನ್ನೈ ವಿಮಾನ ನಿಲ್ದಾಣ ಕೂಡ ಒಂದು. ಅಂತೆಯೇ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳ ಹಾರಾಟಕ್ಕೆ   ಅನುವು ಮಾಡಿಕೊಟ್ಟ ದೇಶದ ಮೊದಲ ವಿಮಾನ ನಿಲ್ದಾಣ ಎಂಬ ಖ್ಯಾತಿ ಕೂಡ ಚೆನ್ನೈ ವಿಮಾನ ನಿಲ್ದಾಣಕ್ಕಿದೆ. ದಕ್ಷಿಣ ಭಾರತದ ಮಟ್ಟಿಗೆ ವಾಣಿಜ್ಯ ರಾಜಧಾನಿಯಾಗಿರುವ ಚೆನ್ನೈ ವಿಮಾನ  ನಿಲ್ದಾಣದಿಂದ ವಾರ್ಷಿಕ ಸುಮಾರು 8 ಮಿಲಿಯನ್ ಪ್ರಯಾಣಿಕರು ಪ್ರಯಾಣಿಸುತ್ತಾರೆ. 2013 ಏಪ್ರಿಲ್ ನಲ್ಲಿ ಹೊಸ ಟರ್ಮಿನಲ್ ಗಳು ಸೇರಿಕೊಂಡವು. ಕೆಲವೊಂದಿಷ್ಟು ನ್ಯೂನ್ಯತೆಗಳನ್ನು ಹೊರತು  ಪಡಿಸಿದರೆ ನಿಲ್ದಾಣ ಉತ್ತಮವಾಗಿದ್ದು, ನಿಲ್ದಾಣದ ಆಧುನೀಕರಣಕ್ಕೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿದೆ. ಪ್ರಸ್ತುತ ನಿಲ್ದಾಣದ ಕಾಮಗಾರಿ ನಡೆಯುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.