ಮಾಲಿನ್ಯ ತಪಾಸಣೆ: ವೋಕ್ಸ್ ವಾಗನ್ ನಿಂದ ಭಾರಿ ವಂಚನೆ
ಮಾಲಿನ್ಯ ತಪಾಸಣೆ ಮಹಾ ಮೋಸ ಪ್ರಕರಣಕ್ಕೆ ಸಂಬಂಧಿಸಿದಂತೆ ಜರ್ಮನಿಯ ಪ್ರತಿಷ್ಠಿತ ಕಾರು ನಿರ್ಮಾಣ ಸಂಸ್ಥೆ ವೋಕ್ಸ್ ವ್ಯಾಗನ್ ವಿರುದ್ಧ ತನಿಖೆ ಆರಂಭಗೊಂಡ ಬೆನ್ನಲ್ಲೇ ಅಮೆರಿಕ, ಭಾರತ ಸೇರಿದಂತೆ ವಿಶ್ವದ ಇತರೆ ದೇಶಗಳಲ್ಲೂ ತನಿಖೆ ನಡೆಯುವ ಸೂಚನೆ ಸಿಕ್ಕಿದೆ...

ನವದೆಹಲಿ: ಮಾಲಿನ್ಯ ತಪಾಸಣೆ ಮಹಾ ಮೋಸ ಪ್ರಕರಣಕ್ಕೆ ಸಂಬಂಧಿಸಿದಂತೆ ಜರ್ಮನಿಯ ಪ್ರತಿಷ್ಠಿತ ಕಾರು ನಿರ್ಮಾಣ ಸಂಸ್ಥೆ ವೋಕ್ಸ್ ವ್ಯಾಗನ್ ವಿರುದ್ಧ ತನಿಖೆ ಆರಂಭಗೊಂಡ ಬೆನ್ನಲ್ಲೇ ಅಮೆರಿಕ, ಭಾರತ ಸೇರಿದಂತೆ ವಿಶ್ವದ ಇತರೆ ದೇಶಗಳಲ್ಲೂ ತನಿಖೆ ನಡೆಯುವ ಸೂಚನೆ ಸಿಕ್ಕಿದೆ.
ವಿಶ್ವದ ಅತಿ ದೊಡ್ಡ ಕಾರು ತಯಾರಿಕಾ ಸಂಸ್ಥೆಗಳಲ್ಲಿ ಒಂದಾಗಿರುವ ವೋಕ್ಸ್ ವ್ಯಾಗನ್ ಸಂಸ್ಥೆ ಮಾಲಿನ್ಯ ನಿಂಯತ್ರಣಕ್ಕೆ ಸಂಬಂಧಿಸಿದಂತೆ ಭಾರಿ ಪ್ರಮಾಣದ ವಂಚನೆ ಎಸಗಿದ್ದು, ಈ ಸಂಸ್ಥೆಯ ಕಾರುಗಳಲ್ಲಿರುವ ತಂತ್ರಾಂಶಗಳು ಲೋಪದೋಷದಿಂದ ಕೂಡಿದೆ ಎಂಬ ವಿಚಾರವನ್ನು ಇದೀಗ ತಜ್ಞರು ಹೊರಹಾಕಿದ್ದಾರೆ. ಆ ಮೂಲಕ ಸಂಸ್ಥೆಯ ಸುಮಾರು 78 ವರ್ಷಗಳ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ 11 ಮಿಲಿಯನ್ ಗೂ ಅಧಿಕ ವಾಹನಗಳಲ್ಲಿರುವ ತಂತ್ರಾಂಶ ಲೋಪದೋಷದಿಂದ ಕೂಡಿದ್ದು, ಜರ್ಮನಿ ಹಾಗೂ ವೋಕ್ಸ್ ವ್ಯಾಗನ್ ಸಂಸ್ಥೆಯ ಘನತೆ, ಗೌರವವನ್ನು ಮಣ್ಣುಪಾಲಾಗುವಂತೆ ಮಾಡಿದೆ.
ಓರ್ವ ಭಾರತೀಯ ಸೇರಿದಂತೆ ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ರಚನೆಯಾಗಿದ್ದ ವೆಸ್ಟ್ ವರ್ಜೀನಿಯಾ ವಿಶ್ವವಿದ್ಯಾಲಯದ ಐವರು (ಭಾರತೀಯ ಮೂಲದ ಒಬ್ಬ ಇಂಜಿನಿಯರ್ ಅರವಿಂದ ಸೇರಿದಂತೆ) ಇಂಜಿನಿಯರ್ಗಳ ಸಮಿತಿ ವೋಕ್ಸ್ ವ್ಯಾಗನ್ ಸಂಸ್ಥೆಯ ಈ ಮಹಾ ವಂಚನೆಯನ್ನು ಬಯಲಿಗೆಳೆದಿದ್ದರು. ವೋಕ್ಸ್ ವ್ಯಾಗನ್ನ ಒಂದೇ ಮಾದರಿಯ ಎರಡು ಕಾರು (ಡೀಸೆಲ್ ಇಂಜಿನ್)ಗಳಲ್ಲಿ ಹೊರ ಸೂಸುವ ಹೊಗೆಯ ಪ್ರಮಾಣದಲ್ಲಿ ಭಾರಿ ವ್ಯತ್ಯಾಸ ಕಂಡು ಬಂದಿತ್ತು. ಹೀಗಾಗಿ ಮಾಲಿನ್ಯ ಪರೀಕ್ಷೆಯಲ್ಲಿ ಈ ಸಂಸ್ಥೆಯ ಕಾರುಗಳು ವಿಫಲವಾಗಿದ್ದವು.
ಭಾರತದಲ್ಲೂ ತನಿಖೆ ಆರಂಭ
ಇನ್ನು ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಎಚ್ಚೆತ್ತ ಜರ್ಮನಿ ಸರ್ಕಾರ ಐದು ಜನರ ತಜ್ಞರ ಸಮಿತಿಯಿಂದ ವೋಕ್ಸ್ ವ್ಯಾಗನ್ ಸಂಸ್ಥೆಯ ಮಾಲಿನ್ಯ ತಪಾಸಣೆ ವಂಚನೆ ಪ್ರಕರಣದ ತನಿಖೆ ನಡೆಯಲಿದೆ ಎಂದು ಹೇಳಿತ್ತು. ಇದರ ಬೆನ್ನಲ್ಲೇ ಭಾರತದಲ್ಲೂ ವೋಕ್ಸ್ ವ್ಯಾಗನ್ ವಿರುದ್ಧ ತನಿಖೆ ನಡೆಯಲಿದ್ದು, ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ (ARAI) ನಿಂದ ಈ ಪ್ರಕರಣದ ತನಿಖೆ ನಡೆಸಲಾಗುವುದು ಎಂದು ಭಾರತ ಸರ್ಕಾರ ಘೋಷಿಸಿದೆ. ಈ ಬಗ್ಗೆ ಮಾಹಿತಿ ನೀಡಿರುವ ಭಾರಿ ಕೈಗಾರಿಕಾ ಇಲಾಖೆ ಕಾರ್ಯದರ್ಶಿ ರಾಜನ್ ಕಟೋಚ್ ಅವರು, ಶೀಘ್ರದಲ್ಲಿಯೇ ವೋಕ್ಸ್ ವ್ಯಾಗನ್ ಸಂಸ್ಥೆಯ ವಿರುದ್ಧ ತನಿಖೆ ಆರಂಭಿಸಲಾಗುವುದು ಎಂದು ಹೇಳಿದ್ದಾರೆ. ಆದರೆ ಇದನ್ನು ನಿರಾಕರಿಸಿರುವ ವೋಕ್ಸ್ ವ್ಯಾಗನ್ ಇಂಡಿಯಾ ಘಟಕ, ಈ ಬಗ್ಗೆ ತಮಗೆ ಯಾವುದೇ ನೋಟಿಸ್ ಬಂದಿಲ್ಲ ಎಂದು ಪ್ರತಿಕ್ರಿಯಿಸಿದೆ.
ಭಾರಿ ದಂಡ ಹೇರಿದ ಅಮೆರಿಕ
ಇನ್ನು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕ ಸರ್ಕಾರದಿಂದ ಛೀಮಾರಿಗೆ ಗುರಿಯಾಗಿರುವ ವೋಕ್ಸ್ ವ್ಯಾಗನ್ ಭಾರಿ ದಂಡವನ್ನೇ ತೆರಬೇಕಾಗಿದೆ. ಅಮೆರಿಕದಲ್ಲಿ ಸಂಸ್ಥೆ ವಿರುದ್ಧ ಸುಮಾರು 18 ಬಿಲಿಯನ್ ಡಾಲರ್ ನಷ್ಟು ದಂಡಹಾಕಲಾಗಿದ್ದು, ಸಂಸ್ಥೆ ಇದೀಗ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಇದಲ್ಲದೆ ಫ್ರಾನ್ಸ್, ಆಸ್ಟ್ರೇಲಿಯಾ ಸೇರಿದಂತೆ ವಿಶ್ವದ ಅನೇಕ ದೇಶಗಳು ಕೂಡಾ ಈ ಪ್ರಕರಣದ ಬಗ್ಗೆ ತನಿಖೆ ನಡೆಸುವುದಾಗಿ ಹೇಳಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


