ವಾಹನ

ಮಳ್ಳಿ ಇವಳು

ಮಳ್ಳಿ ಇವಳು
Published On :

ಬೇಸಿಗೆಯಾಗಲೀ ಮಳೆಯಿರಲಿ, ಬಿಳಿತೊಗಲಿನ ಈಕೆಯ ಸೌಂದರ್ಯ ಕುಸಿದದ್ದೇ ಇಲ್ಲ. ಬಿಳಿ ಸೆರಗನ್ನು ಊರಗಲ ಹಾಸಿ ನಿರ್ಭೀತಿಯಿಂದ ಧುಮ್ಮಿಕ್ಕುವಾಗ ನೋಡಬೇಕು ನೀವು... ಕೆಳೋಗಿಳಿಯುತ್ತಿದ್ದಂತೆಯೇ ಸಾಹಸಪ್ರಜ್ಞೆಯಲಿ ಹಾರಿದ್ದು ತಾನಲ್ಲವೇ ಅಲ್ಲ ಎನ್ನುವ ಮಳ್ಳಿಯಂತೆ ಸಣ್ಣಗೆ ಬಳುಕುತ್ತಾ ಕಾಡಿನ ಮಧ್ಯ ಹಾದಿ ಮಾಡಿಕೊಂಡು ಹೋಗಿಬಿಡುತ್ತಾಳೆ.
ಜೋಗ ಜಲಪಾತವೂ ಉತ್ಸಾಹ ಕಳೆದುಕೊಂಡು ತೆಪ್ಪಗೆ ನಿಲ್ಲುವ ಬೇಸಿಗೆಯಲ್ಲಿ ಈಕೆ ಮಾತ್ರ ಬತ್ತದ ಚಿಲುಮೆಯಾಗಿ ಸರಸರನೆ ಹರಿದುಬಂದು, ದುಬದುಬನೆ ಕೆಳಗಿಳಿದು, ಕಲಕಲ ನಾದಗೈಯುತ್ತಾ ಮುಂದೆ ಸಾಗುತ್ತಾಳೆ. ಉತ್ತರ ಕನ್ನಡದ ಸಿದ್ದಾಪುರ ಸಮೀಪದ ಉಂಚಳ್ಳಿ ತನ್ನ ವೈಯ್ಯಾರದಿಂದ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದ್ದಾಳೆ.
ಅಘನಾಶಿನಿ ನದಿ ಸುಮಾರು 116 ಮೀ. (381 ಫೀಟ್) ಎತ್ತರದಿಂದ ದಟ್ಟ ಕಾಡಿನ ನಡುವೆ ಧುಮುಕುವಲ್ಲಿ ಈ ಜಲಪಾತದ ಸೃಷ್ಟಿಯಾಗಿದೆ. ಬ್ರಿಟಿಷ್ ಸರ್ಕಾರದ ಆಡಳಿತ ವೇಳೆ ಡಿಸ್ಟ್ರಿಕ್ಟ್ ಕಲೆಕ್ಟರ್ ಆಗಿದ್ದ ಜೆ.ಡಿ. ಲುಷಿಂಗ್ಟನ್ 1845ರಲ್ಲಿ ಈ ಜಲಪಾತವನ್ನು ಪತ್ತೆ ಹಚ್ಚಿದ ಎನ್ನಲಾಗುತ್ತದೆ. ಸಿದ್ದಾಪುರ ತಾಲೂಕು ಕೇಂದ್ರದಿಂದ 35 ಕಿ.ಮೀ. ದೂರದಲ್ಲಿದೆ ಹೆಗ್ಗರಣೆ. ಹೆಗ್ಗರಣೆಯಿಂದ 5 ಕಿ.ಮೀ. ತನಕ ದಟ್ಟ ಕಾಡಿನ ನಡುವಿನ ರಸ್ತೆಯಲ್ಲಿ ಸಾಗಿದರೆ (ವಾಹನ ಸಂಚಾರ ಸಾಧ್ಯ) ಉಂಚಳ್ಳಿ ಜಲಪಾತದ ಎದುರು ಭಾಗವನ್ನು ಎತ್ತರದಿಂದ ವೀಕ್ಷಿಸಬಹುದು. ಕೆಳಗೆ ಇಳಿಯಲೂ ಅವಕಾಶವಿದೆ. ಈ ಜಲಪಾತದಿಂದ ಧುಮುಕಿದ ನೀರು ಬಳಿಕ ದಟ್ಟ ಅರಣ್ಯ ನಡುವಿನ ಸುಂದರ ಕಣಿವೆಯಲ್ಲಿ ಹರಿದು ಹೋಗುವುದನ್ನು ನೋಡುವುದೇ ಸೊಬಗು.
ನಡೆದೂ ನೋಡಬಹುದು...
ರಸ್ತೆ ಮೂಲಕ ಜಲಪಾತ ತನಕವೂ ಸಾಗಲು ಹೆಗ್ಗರಣೆ ಮೂಲಕ ಸಾಗಬೇಕು. ಆದರೆ, ಚಾರಣದ ಮೂಲಕ ನಡೆದು, ಜಲಪಾತದ ಮೇಲ್ಭಾಗ ತಲುಪಬೇಕಾದರೆ, ಕುಮಟ-     ಹೊನ್ನಾವರ ರಸ್ತೆಯಲ್ಲಿ ಸಿಗುವ ಬಿಳಗಿಯಿಂದ ಬಿಳಗಿ ಕಾಲೇಜು ಎದುರು ಬಲಕ್ಕೆ ತಿರುಗಿ ಚಪ್ಪರಮನೆ, ಹಳ್ಳಿಬೈಲು ಮೂಲಕ ಕೆರೆಹೊಂಡಕ್ಕೆ ಸಾಗಿ ಅಲ್ಲಿಂದ ಎಡಕ್ಕೆ 5 ಕಿ.ಮೀ. ಕಚ್ಚಾ ರಸ್ತೆಯಲ್ಲಿ ಸಾಗಿ, ಮರಗಳಿಂದ ಆವೃತ ಬೆಟ್ಟವನ್ನು ಇಳಿಯುತ್ತಾ ಹೋಗಿ ಜಲಪಾತ ಸೇರಬಹುದು. ಈ ರಸ್ತೆಯ ಅಭಿವೃದ್ಧಿ ನಡೆಯುತ್ತಿದ್ದು, ಡಾಂಬರೀಕೃತವಾಗಲಿದೆ. ನಂತರ ಇಲ್ಲೂ ಚಾರಣರಿಗರಿಗೆ ಸಂಚಾರ ಸಲೀಸಾಗಲಿದೆ ಎನ್ನುತ್ತಾರೆ ಚೆನ್ನಖಂಡದ ವೆಂಕಟೇಶ ಹೆಗಡೆ.
ಉತ್ತರ ಕನ್ನಡ ಜಲಪಾತಗಳ ತವರು. ಆದರೆ, ಬಹುತೇಕ ಜಲಪಾತಗಳಲ್ಲಿ ಬೇಸಿಗೆಯಲ್ಲಿ ನೀರಿನ ಹರಿವು ತೀರಾ ಕುಸಿದಿರುತ್ತದೆ. ಇದಕ್ಕೆ ಅಪವಾದ ಉಂಚಳ್ಳಿ ಫಾಲ್ಸ್.

ಪಯಣ ಸುಲಭ
     ಹೆಗ್ಗರಣೆ ಮೂಲಕ ಜಲಪಾತದ ಬಹು ಸಮೀಪದವರೆಗೂ ನವೀಕೃತ ಡಾಂಬರು ರಸ್ತೆಯಿದ್ದು ಕೇವಲ 1 ಕಿ.ಮೀ. ನಡಿಗೆ ಮೂಲಕ ಜಲಪಾತ ಸೇರಬಹುದು. ವೃದ್ಧರು, ಮಕ್ಕಳು ಕೂಡಾ ಸುಲಭವಾಗಿ ನಡೆಯಬಹುದು.
    ಜಲಪಾತ ವೀಕ್ಷಣೆಗೆ ಅರಣ್ಯ ಇಲಾಖೆ ಸುಂದರ ಮೆಟ್ಟಿಲುಗಳು ಹಾಗೂ ವೀಕ್ಷಣಾ ಗೋಪುರಗಳ ವ್ಯವಸ್ಥೆ ಮಾಡಿದ್ದು, ಜಲಪಾತ ದರ್ಶನ ಅಪಾಯಕಾರಿಯೇನಲ್ಲ.
    ಮಳೆಗಾಲದ ಚಾರಣದ ವೇಳೆ ಮಂಜು ಮುಸುಕಿದ ವಾತಾವರಣ, ಜಿಗಣೆ ಕಾಟವಿದ್ದರೆ, ಬೇಸಿಗೆಯಲ್ಲಿ ಈ ಸಮಸ್ಯೆಯಿಲ್ಲ. ಚಾರಣದ ಅಭ್ಯಾಸ ಇಲ್ಲದವರೂ ಸುಲಭವಾಗಿ ಉಂಚಳ್ಳಿಯಲ್ಲಿ ಜಲ ವೈಭವ ಕಣ್ತುಂಬಿಕೊಳ್ಳಬಹುದು.

= ಚಿತ್ರ, ಬರಹ: ಕೃಷ್ಣಮೋಹನ ತಲೆಂಗಳ


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.