ಡಬ್ಕು ಡಬಲ್

ಡಬಲ್ ಡೆಕ್ಕರ್ ಎಂದಾಕ್ಷಣ ಕೆಂಪು ಬಣ್ಣದ ಮಾಳಿಗೆ ಬಸ್ಸು ಕಣ್ಣುಂದೆ ಹಾದು ಹೋಗುತ್ತದೆ. ಮುಂಬೈ ಚಿತ್ರಣವೂ ಸರ್ರನೆ ಸರಿದುಹೋಗುತ್ತದೆ. ಇಲ್ಲೆಲ್ಲ ಹೊಸ ಲುಕ್ಕಿನ ಬಸ್‌ಗಳು ಓಡಾಡುತ್ತಿದ್ದರೂ ಮುಂಬೈ ರಸ್ತೆಯಲ್ಲಿ ಇಂದಿಗೂ ಡಬಲ್ ಡೆಕ್ಕರ್ ಬಸ್‌ಗಳು ಸಂಪ್ರದಾಯದ ರಾಯಭಾರಿಗಳಂತೆ ಚಲಿಸುತ್ತಿವೆ.
ದೈತ್ಯ ಗಾತ್ರ, ಗಡಗಡ ಸದ್ದು ಮಾಡುತ್ತಾ ಮಾಯಾನಗರಿ ಮುಂಬೈ ರಸ್ತೆಗಳಲ್ಲಿ ಓಡಾಡುವ ಡಬಲ್ ಡೆಕ್ಕರ್ ಬಸ್‌ನ ಖದರ್ರೇ ಬೇರೆ. ನೋಡುಗರ ಗಮನ ಸೆಳೆಯುವುದರೊಂದಿಗೆ ಒಮ್ಮೆ ಇದರಲ್ಲಿ ಕುಳಿತು ಪ್ರಯಾಣಿಸುವ ಆಸೆ ಮನದಲ್ಲಿ ಮೂಡದೇ ಇರದು. ಏನೇ ಹೇಳಿ, ಈ ಡಬಲ್ ಡೆಕ್ಕರ್ ಬಸ್ಸಿನ ಮಾಳಿಗೆ ಮೇಲೆ ಕುಳಿತು ಸಂಚರಿಸುವುದೇ ಒಂದು ಥರದ ಮಜಾ. ಮುಂಬೈ ಸೌಂದರ್ಯವನ್ನು ಸವಿಯ ಬೇಕೆಂದುಕೊಂಡವರು ಬಸ್ಸಿನ ಮಾಳಿಗೆ ಸೀಟನ್ನು ಅಲಂಕರಿಸಿ, ರಾಜ ಗಾಂಭೀರ್ಯದಿಂದ ಪಯಣಿಸಬಹುದು.
ಅಂದ ಹಾಗೆ, ಅಂದಿನ ಬೊಂಬಾಯಿಯಲ್ಲಿ ಏರುತ್ತಿರುವ ಜನಸಂಖ್ಯೆಯನ್ನಾಧರಿಸಿ 1937ರಲ್ಲಿ ಡಬಲ್-ಡೆಕ್ಕರ್ ಬಸ್ ಸೇವೆ ಆರಂಭಿಸಲಾಯಿತು. ಇಂದಿಗೂ ಡಬಲ್ ಡೆಕ್ಕರ್ ಬಸ್ಸುಗಳ ಓಡಾಟದಲ್ಲಿ ಮುಂಬೈ ವಿಶ್ವದ ಕೆಲವೇ ನಗರಗಳಲ್ಲಿ ಒಂದಾಗಿದೆ. ಕಡಿದಾದ ರಸ್ತೆ, ತೀಕ್ಷ್ಣ ತಿರುವುಗಳ ಮಧ್ಯೆಯೂ ಇಂದಿಗೂ ಮುಂಬೈ ನಗರಿಯಲ್ಲಿ 200ಕ್ಕೂ ಹೆಚ್ಚು ಡಬಲ್ ಡೆಕ್ಕರ್ ಬಸ್ಸುಗಳಿವೆ ಎನ್ನುತ್ತಾರೆ ಬಸ್ ಚಾಲಕ ಸಂಜು ಪಾಠಕ್. ಈ ಹಿಂದಿನ ದಿನಗಳಿಗೆ ಹೋಲಿಸಿದರೆ ಡಬಲ್ ಡೆಕ್ಕರ್ ಬಸ್‌ಗಳ ಸಂಖ್ಯೆ ಇಳಿಮುಖವಾಗಿದೆಯಾದರೂ ಪ್ರಯಾಣಿಕರಿಗೆ ಮಾತ್ರ ಕೊರತೆಯಿಲ್ಲ. ಅದರಲ್ಲೂ ವಿಶೇಷವಾಗಿ ಮುಂಬೈ ದರ್ಶನಕ್ಕೆ ಬಂದ ಪ್ರವಾಸಿಗರಂತೂ ಡಬಲ್ ಡೆಕ್ಕರ್ ಬಸ್ ಹತ್ತಿ ಮಜಾ ಅನುಭವಿಸಿಯೇ ಹೋಗುತ್ತಾರೆನ್ನುವುದು ಸಂಜು ಅನುಭವ. ಡಬಲ್ ಡೆಕ್ಕರ್ ಬಣ್ಣ ಕೆಂಪು. ಇದೀಗ ಮುಂಬೈ ರಸ್ತೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುತ್ತಿರುವ 'ಬೆಸ್ಟ್' ಬಸ್‌ಗಳ ಬಣ್ಣವೂ ಕೆಂಪು. ಈ ಕೆಂಪಿಗೆ ಪ್ರೇರಣೆ ಲಂಡನ್ನಿನ ಕೆಂಪು ಬಸ್ಸುಗಳೇ.
ಡಬಲ್ ಡೆಕ್ಕರ್ ಬಸ್ ಐರೋಪ್ಯ ರಾಷ್ಟ್ರಗಳಲ್ಲಿ ಸಮೂಹ ಪ್ರಯಾಣಕ್ಕಾಗಿ ವಿಶೇಷವಾಗಿ ತಯಾರಿಸಲಾಗಿದೆ. ಅದರಲ್ಲೂ ಡಬಲ್ ಡೆಕ್ಕರ್ ಲಂಡನ್ ಮಾದರಿಯ ಬಸ್‌ಗಳೇ ಭಾರತಕ್ಕೆ ಲಗ್ಗೆ ಇಟ್ಟವು. ಮುಂಬೈ ಬಿಟ್ಟರೆ ತಿರುವನಂತಪುರಂ, ಕೊಚ್ಚಿ, ಕೋಲ್ಕತ್ತಾ, ಹೈದ್ರಾಬಾದ್‌ನಲ್ಲಿ ಅಲ್ಪ ಪ್ರಮಾಣದಲ್ಲಿ ಡಬಲ್ ಡೆಕ್ಕರ್ ಬಸ್ ಕಾಣಸಿಗುತ್ತವೆ. ಬೆಂಗಳೂರಿನಲ್ಲೂ ಓಡಾಡುತ್ತಿದ್ದ ಡಬಲ್ ಡೆಕ್ಕರ್ ಬಸ್‌ಗಳು ಈಗ ಕಣ್ಮರೆಯಾಗಿವೆ. ಪುನಃ ಬೆಂಗಳೂರಲ್ಲಿ ಡಬಲ್ ಡೆಕ್ಕರ್ ಆರಂಭಿಸಬೇಕೆಂಬ ಪ್ರಸ್ತಾಪ ಎದುರಾಗಿತ್ತಾದರೂ ಅದು ಕಾರ್ಯರೂಪಕ್ಕೆ ಬಂದಿಲ್ಲ. ಭಾರತ ಬಿಟ್ಟು ಹಾಂಕಾಂಗ್, ಸಿಂಗಾಪುರ, ಮಕಾವೋ, ಮಲೇಷ್ಯಾ, ಕೆನಡಾ, ಜಪಾನ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ದೇಶಗಳ ಪ್ರಮುಖ ನಗರಗಳಲ್ಲಿ ಇಂದಿಗೂ ಡಬಲ್ ಡೆಕ್ಕರ್ ಬಸ್ ಓಡಾಡುತ್ತಿವೆ.
= ಪ್ರಕಾಶ ಎಸ್. ಶೇಟ್
prakashjoida@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


