ಪೆರ್ರಿ & ಲವ್ಲಿ

ಕೇರಳದ ಇಡುಕ್ಕಿ ಜಿಲ್ಲೆಯಲ್ಲಿರುವ ತೆಕ್ಕಡಿಯ ಪೆರಿಯಾರ್ ರಾಷ್ಟ್ರೀಯ ಉದ್ಯಾನವನ ಕೇರಳ ಮತ್ತು ತಮಿಳುನಾಡಿನ ಗಡಿ ಪ್ರದೇಶದಲ್ಲಿದೆ. ದಕ್ಷಿಣ ಭಾರತದ ಅತಿ ದೊಡ್ಡ ಮೃಗಧಾಮವೆನಿಸಿಕೊಂಡಿರುವ ಈ ನಿತ್ಯ ಹಸಿರಿನ ಅರಣ್ಯ ಪಶ್ಚಿಮಘಟ್ಟಗಳ ಸೆರಗಿನಲ್ಲಿದ್ದು, ಇಲ್ಲಿ ಆನೆ, ಜೀಬ್ರಾ, ಜಿಂಕೆ, ಕರಡಿ, ಕಡವೆ, ನರಿ, ಕೆಂಚಳಿಲು, ಕಾಡುನಾಯಿ, ಕಾಡೆಮ್ಮೆ, ಕೆಂಪು ಮೂತಿಯ ಮಂಗ ಆವಾಸ ಹೊಂದಿವೆ. ಅಲ್ಲದೆ ಇದು ಹುಲಿ ಸಂರಕ್ಷಣೆಯ ತಾಣವೂ ಹೌದು.
777 ಚದರ ಕಿ.ಮೀ. ಉದ್ದ ಹಾಗೂ 360 ಚದರ ಕಿ.ಮೀ. ವಿಸ್ತಾರವಿರುವ ಉದ್ಯಾನದ 55 ಕಿ.ಮೀ. ದೂರವನ್ನು ಸುತ್ತುವರಿದಿರುವ ಪೆರಿಯಾರ್ ಸರೋವರದ ಹಿನ್ನೀರು ಈ ಪ್ರದೇಶದ ಸೊಬಗನ್ನು ಇಮ್ಮಡಿಗೊಳಿಸಿದೆ. ಸನಿಹದಲ್ಲೇ ಸರೋವರಕ್ಕೆ ಮುಲ್ಲ ಪೆರಿಯಾರ್ ಡ್ಯಾಮ್ ಇದ್ದು, ಬೇಸಿಗೆಯಲ್ಲೂ ಪ್ರಾಣಿಗಳಿಗೆ ನೀರು ಕುಡಿಯಲು, ಆನೆಗಳಿಗೆ ನೀರಾಟವಾಡಲು ಅನುಕೂಲವೆನಿಸಿದೆ.
1895ರಲ್ಲಿ ಈ ಪ್ರದೇಶದ ಆಳರಸರು ಇದನ್ನು ವನ್ಯಮೃಗಧಾಮವೆಂದು ಘೋಷಿಸಿ ಪೋಷಿಸಿಕೊಂಡು ಬಂದರು. ಇಲ್ಲಿ ಶ್ರೀಗಂಧವೂ ಸೇರಿದಂತೆ 171 ಜಾತಿಯ ಅತ್ಯಮೂಲ್ಯ ವನಸ್ಪತಿಗಳಿವೆ. 143 ಬಗೆಯ ಅಪರೂಪದ ಆರ್ಕಿಡ್ಸ್‌ಗಳಿವೆ. 300ಕ್ಕಿಂತ ಅಧಿಕ ಬಗೆಯ ಪಕ್ಷಿಗಳಿವೆಯಂತೆ. ನರ್ತಿಸುವ ನವಿಲಿನ ಚಂದವೂ ಕಾಣಸಿಗುತ್ತದೆ. ಮನಕ್ಕೆ ಮುದ ನೀಡುವ ಹಸಿರು, ಮೃಗಗಳ ಸಮೀಪದರ್ಶನ, ಸರೋವರದ ಹಿನ್ನೀರಿನಲ್ಲಿ ಬೋಟಿನ ವಿಹಾರ ಆಹ್ಲಾದಕರ. ಮನೋಲ್ಲಾಸಕರವಾದ ಚಾರಣಕ್ಕೂ ಅವಕಾಶವಿದೆ. ಕಾಡುಹಣ್ಣುಗಳು ಅದರಲ್ಲೂ ವೈವಿಧ್ಯಮಯ ಹಲಸಿನಹಣ್ಣುಗಳೂ ಇಲ್ಲಿವೆ. ಸೂರ್ಯಾಸ್ತದ ಅನನ್ಯ ನೋಟ ಆಗುಂಬೆಯ ಹಾಗೆಯೇ ಪೆರಿಯಾರ್ ಸರೋವರ ತೀರದಲ್ಲೂ ಲಭ್ಯ.
ಅಕ್ಟೋಬರ್‌ನಿಂದ ಜೂನ್ ಇಲ್ಲಿಗೆ ಭೇಟಿ ನೀಡಲು ಪ್ರಶಸ್ತ. 2ರಿಂದ 3 ಸಾವಿರ ಮಿ.ಮೀ. ವಾರ್ಷಿಕ ಮಳೆ. ಉಷ್ಣಾಂಶ 15 ಡಿಗ್ರಿಗೆ ಇಳಿಯುತ್ತದೆ, ಚಳಿ ಹೆಚ್ಚು. ಆಗ ಪ್ರವಾಸಿಗಳು ಬರುವುದಿಲ್ಲ. ಬಂದವರಿಗೆ ಊಟ ವಸತಿಗಳಿಗೆ ಅರಣ್ಯ ಇಲಾಖೆ ವ್ಯವಸ್ಥೆ ಮಾಡುತ್ತದೆ. ಬೆಳಗ್ಗೆ 6ರಿಂದ ಸಂಜೆ 6ರ ತನಕ ಉದ್ಯಾನವನಕ್ಕೆ ಪ್ರವೇಶವಿದೆ. ಆದರೆ ಪ್ರವೇಶ ಶುಲ್ಕ ಕೊಂಚ ದುಬಾರಿಯಾಗಿದೆ. ಆನೆ ಸಫಾರಿ, ಜೀಪ್ ಸಫಾರಿ ದೋಣಿವಿಹಾರಗಳಿಗೂ ಪ್ರತ್ಯೇಕ ಶುಲ್ಕವಿದೆ. ಫೋಟೋ ತೆಗೆಯಲು ಕ್ಯಾಮೆರಾದ ಪ್ರಮಾಣಕ್ಕೆ ತಕ್ಕಂತೆ ವಿಧವಿಧದ ಶುಲ್ಕ ತೆರಬೇಕು. <
ಮಾರ್ಗ ಯಾವುದಯ್ಯ?
ಕೊಟ್ಟಾಯಮ್‌ನಿಂದ ಪೆರಿಯಾರ್ ವನ್ಯಧಾಮಕ್ಕೆ 117 ಕಿ.ಮೀ. ದೂರವಿದೆ. ಕೊಚ್ಚಿಯಿಂದಲೂ ಸುಮಾರು ಅಷ್ಟೇ ದೂರ. ಸನಿಹದಲ್ಲಿರುವ ಕುಮಿಲಿ ಪೇಟೆಗೆ 4 ಕಿ.ಮೀ. ಹಾದಿಯಿದೆ. ಇದರೊಳಗೆ ಕಾಂಕ್ರೀಟಿನಿಂದ ರಚಿಸಿದ ವಿವಿಧ ಪ್ರಾಣಿಗಳ ಆಕೃತಿಯಲ್ಲೇ ಇರುವ ತಂಗುದಾಣಗಳಿವೆ. ಕಾಡಿನೊಳಗೆ ಬೃಹದಾಕಾರದ ಬಿದಿರಿನ ಹಿಂಡಲುಗಳ ನೋಟ ಬಲು ರಮ್ಯ.
= ಪ. ರಾಮಕೃಷ್ಣ ಶಾಸ್ತ್ರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


