ನಾಗಲಾಪುರ

ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕು ಕೇಂದ್ರದ ಹತ್ತಿರ ನಾಗಾಲಪುರವಿದೆ. ಸೋಮನಾಥಪುರ ದೇಗುಲದ ಕೆತ್ತನೆಯನ್ನೇ ಹೋಲುವ ಇಲ್ಲಿನ ಶಿಲಾಮಂದಿರಗಳು ಅದೇಕೋ ಅಪರಿಚಿತವಾಗಿಯೇ ಉಳಿದಿವೆ...
'ಶಿಲೆಯಲ್ಲವೀ ಗುಡಿಯು, ಕಲೆಯ ಬಲೆಯೂ...' ಇದು ನಾಗಾಲಾಪುರದ ಎರಡು ದೇಗುಲಗಳ ಮುಂದೆ ನಿಂತಾಗ ತಂತಾನೇ ಮನದೊಳಗೆ ಗುನುಗುವ ಶೃತಿ. ಸೋಮನಾಥಪುರ ದೇಗುಲದ ಕೆತ್ತನೆಯನ್ನೇ ಹೋಲುವ ಇಲ್ಲಿನ ಶಿಲಾಮಂದಿರಗಳು ಅದೇಕೋ ಅಪರಿಚಿತವಾಗಿಯೇ ಉಳಿದಿದ್ದು, ಕಾಯಕಲ್ಪಕ್ಕಾಗಿ ಕಾಯುತ್ತಿವೆ.
ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕು ಕೇಂದ್ರದ ಹತ್ತಿರ ನಾಗಾಲಪುರವಿದೆ. ಚೆನ್ನಕೇಶವ ಮತ್ತು ಕೇದಾರೇಶ್ವರ ದೇಗುಲಗಳು ಹೊಯ್ಸಳರ ರಾಜನಾದ ಮೂರನೇ ಬಲ್ಲಾಳನ ಕಾಲದಲ್ಲಿ ನಿರ್ಮಾಣಗೊಂಡಿದ್ದು, ಶಿಲ್ಪಕಲಾ ಸೌಂದರ್ಯದಿಂದ ಕಂಗೊಳಿಸುತ್ತಿದೆ. ನಿಸರ್ಗ ರಮಣೀಯವಾದ ಅಪ್ಪಟ ಗ್ರಾಮೀಣ ಸೊಬಗಿನ ಮಧ್ಯ ಸುಮಾರು 13ನೇ ಶತಮಾನದಲ್ಲಿ ಸ್ಥಾಪಿತಗೊಂಡಿರುವ ಈ ಎರಡು ದೇಗುಲಗಳೂ ಬಹುತೇಕ ಒಂದೇ ರೀತಿಯ ಕೆತ್ತನೆಯಿಂದ ಕೂಡಿರುವುದು ಇಲ್ಲಿನ ವಿಶೇಷ. ಈ ದೇಗುಲಗಳನ್ನು ಭಾರತೀಯ ಪುರಾತತ್ವ ಇಲಾಖೆ 'ರಾಷ್ಟ್ರೀಯ ಮಹತ್ವದ ಸ್ಮಾರಕ' ಎಂದು ಗುರುತಿಸಿದೆ. ಇವು ನಕ್ಷತ್ರಾಕಾರದ ತಳವಿನ್ಯಾಸ ಹೊಂದಿವೆ. ಗರ್ಭಗೃಹ, ಸುಖನಾಸಿ, ಮತ್ತು ನವರಂಗಗಳನ್ನು ಹೊಂದಿವೆ. ಹೊರಗೋಡೆಗಳ ಮೇಲೆ ಆನೆ, ಕುದುರೆ, ಮಕರ, ಹಂಸಗಳ ಸಾಲನ್ನು ಮನಮೋಹಕವಾಗಿ ಕೆತ್ತಲಾಗಿದೆ. ನವರಂಗದ ಮೇಲ್ಭಾಗದಲ್ಲಿ ಕಂಡುಬರುವ ಕುಸುರಿ ಕೆಲಸ ಆಕರ್ಷಕ.
ಚೆನ್ನಕೇಶವ ದೇಗುಲದ ಹೊರಗೋಡೆಗಳ ಮೇಲೆ ನರಸಿಂಹ, ವರಾಹ, ಲಕ್ಷ್ಮೀನಾರಾಯಣ ಮೊದಲಾದ
ವಿಷ್ಣುವಿನ ಹಲವು ಅವತಾರಗಳನ್ನು ಕೆತ್ತಲಾಗಿದ್ದು, ಲಕ್ಷ್ಮೀ, ದುರ್ಗೆ, ಮಹಿಷಾಸುರ ಮರ್ದಿನಿಯ ಶಿಲೆಗಳಿವೆ.
ಕೇದಾರೇಶ್ವರ ದೇಗುಲವು ಸರೋವರದ ತಟದಲ್ಲಿದೆ. ಗರ್ಭಗೃಹದಲ್ಲಿರುವ ಶಿವಲಿಂಗದ ಮೇಲೆ ಬೆಳಗಿನ ಸೂರ್ಯ ಕಿರಣಗಳು ಬೀಳುವಂತೆ ಹೊರಗೋಡೆಯ ಮೇಲೆ ಬೆಳಕಿಂಡಿ ನಿರ್ಮಿಸಲಾಗಿದೆ. ಹೊರಗೋಡೆಯ ಮೇಲೆ ಶಿವನ ವಿವಿಧ ರೂಪಗಳನ್ನು ಕೆತ್ತಲಾಗಿದೆ. ಮತ್ಸ್ಯಯಂತ್ರವನ್ನು ಭೇದಿಸುತ್ತಿರುವ ಅರ್ಜುನನ ಮೂರ್ತಿ ಎಲ್ಲರನ್ನೂ ಸೆಳೆಯುತ್ತದೆ.
= ದಂಡಿನಶಿವರ ಮಂಜುನಾಥ್‌ಚಿತ್ರ: ಅಮ್ಮಸಂದ್ರ ಶಿವು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


