ವಾಹನ

ಕೊಡ್ಲಮನೆ ಜಾತ್ರೆ

ಕೊಡ್ಲಮನೆ ಜಾತ್ರೆ
Published On :

ಜೈನರ ನೆಲೆವೀಡಾಗಿದ್ದ ಕರಾವಳಿ ತೀರದ ಹೊನ್ನಾವರ ತಾಲ್ಲೂಕು ಸರ್ವಧರ್ಮ ಸಮನ್ವಯತೆಗೆ ಹೆಸರಾದದ್ದು. ಈ ಪ್ರಕೃತಿ ಸೌಂದರ್ಯದ ಬೀಡು ದೇವಾಲಯಗಳ ನಾಡೂ ಹೌದು. ತಾಲ್ಲೂಕಿನ ಬಳಕೂರು ಗ್ರಾಮದ ಕೊಡ್ಲಮನೆ ವಿಷ್ಣುಮೂರ್ತಿ ದೇವಸ್ಥಾನವು ಜಿಲ್ಲೆಯ ಜಾಗೃತ ಸ್ಥಳಗಳಲ್ಲಿ ಒಂದು ಎಂದೇ ಖ್ಯಾತವಾಗಿದೆ. ಉತ್ತರ ಕನ್ನಡದ ಪುರಾತನ ದೇವಾಲಯಗಳಲ್ಲಿ ಇದೂ ಒಂದು.
ಬಳಕೂರು ಕೊಡ್ಲುಮನೆ ಮಹಾವಿಷ್ಣು ದೇವಾಲಯವು ಸುಮಾರು 500 ವರ್ಷಗಳ ಇತಿಹಾಸ ಹೊಂದಿದೆ. ಇದು ಊರಿನ ಗ್ರಾಮದೇವತೆಯಾಗಿದ್ದು ಪ್ರಮುಖ ಆರಾಧ್ಯ ದೈವವಾಗಿ ಪೂಜಿಸಲ್ಪಡುತ್ತಿದೆ. 1904 ರಂದು ಈ ದೇವಾಲಯವು ಪುನರ್ ನಿರ್ಮಾಣಗೊಂಡಿದ್ದು 2004 ನೇ ಇಸವಿಯಲ್ಲಿ ಹೊಸ ಕಟ್ಟಡಕ್ಕೆ 100 ತುಂಬಿದ ಸಂಭ್ರಮ ಆಚರಿಸಲಾಯಿತು. ಈ ವರ್ಷ ದೇವರ ಪುನರ್ ಪ್ರತಿಷ್ಠಾಪನಾ ದಶಮಾನೋತ್ಸವವನ್ನು ಆಚರಿಸಲಾಗುತ್ತಿದೆ. ಮಾರ್ಚ್ 3ರಿಂದ ಆರಂಭವಾಗಿರುವ ಧಾರ್ಮಿಕ ಕಾರ್ಯಕ್ರಮಗಳು ಮಾರ್ಚ್ 13ರವರೆಗೂ ನಡೆಯುತ್ತವೆ. ಪ್ರತಿದಿನ ಶತ ಕುಂಭಾಭಿಷೇಕ, ವಾಯುಸ್ಥಿತಿ ಪುನಶ್ಚರಣ, ರಂಗಪೂಜೆ, ಭಜನೆ, ಪಲ್ಲಕ್ಕಿ ಉತ್ಸವ, ಅಷ್ಟಾವಧಾನ, ಧ್ವಜಾರೋಹಣ, ಸಪ್ತ ಪ್ರಹರ ಕಾರ್ಯಕ್ರಮಗಳು ನಡೆಯುತ್ತಿವೆ. ಜೊತೆಯಲ್ಲಿ ಧಾರ್ಮಿಕ ಪ್ರವಚನಗಳು. ತನ್ಮಧ್ಯೆ ಮಾರ್ಚ್ 8, ಶನಿವಾರ ಮಹಾರಥೋತ್ಸವ.
ಮಹಾರಥೋತ್ಸವದ ಮುನ್ನಾದಿನ ಪುಷ್ಪ ರಥೋತ್ಸವ ನಡೆಯುತ್ತದೆ. ರಥವನ್ನು ಹೂವಿನಿಂದ ಅಲಂಕರಿಸಿ, ದೇವರನ್ನು ಪ್ರತಿಷ್ಠಾಪಿಸಿ ರಥ ಎಳೆಯುತ್ತಾರೆ. ಮರುದಿನದ ಮಹಾರಥೋತ್ಸವದಲ್ಲಿ ಸಾವಿರಾರು ಭಕ್ತಾದಿಗಳು ಹರೆಕೆ ಸಲ್ಲಿಸುತ್ತಾರೆ. ಹೊಂಬಾಳೆ, ಅಡಿಕೆಗೊನೆ, ಬಾಳೆಗೊನೆ, ಎಳನೀರು, ಕಾಯಿಸೇವೆ ನಿರಂತವಾಗಿ ನಡೆಯುತ್ತಿರುತ್ತದೆ. ಭಕ್ತಾದಿಗಳು ಜೈಕಾರವನ್ನು ಹಾಕುತ್ತ ಸಂಜೆ ಮತ್ತು ರಾತ್ರಿಯ ಸಮಯದಲ್ಲಿ ವಾದ್ಯಘೋಷಗಳೊಂದಿಗೆ ರಥ ಎಳೆದು ಭಕ್ತಿಯ ಭಾವ ಪರವಶತೆಯಲ್ಲಿ ಮಿಂದೇಳುತ್ತಾರೆ.

ಮೃಗಬೇಟೆ ಎಂಬ ವಿಶಿಷ್ಟ ಆಚರಣೆ
ಮಹಾರಥೋತ್ಸವದ ರಾತ್ರಿಯ ಸಮಯದಲ್ಲಿ 'ಮೃಗಬೇಟೆ' ಎನ್ನುವ ವಿಶಿಷ್ಟ ಆಚರಣೆ ರೂಢಿಯಲ್ಲಿದೆ. ಅನಾದಿಕಾಲದಿಂದಲೂ ಇದನ್ನು ನಡೆಸಿಕೊಂಡು ಬಂದಿದ್ದಾರೆ. ಮೃಗಬೇಟೆ ಎಂದರೆ ಬೇಟೆಗಾರನ ವೇಷಧಾರಿಯಾಗಿ ಚಂಡೆ ಕುಣಿತಕ್ಕೆ ಲಯಬದ್ಧವಾಗಿ ಕುಣಿಯುತ್ತಾ ತನ್ನ ಕುಲಕಸುಬಾದ ಬೇಟೆಯಲ್ಲಿ ತಾನು ಆಡಿದ ಪ್ರಾಣಿ ಬೇಟೆಯ ಒಂದು ಭಾಗವನ್ನು ಭಕ್ತಿಯಿಂದ ದೇವರಿಗೆ ಅರ್ಪಿಸಿ ಪುನೀತನಾಗುವ ಕ್ಷಣ. ಆದರೆ ಈಗ ಎಳೆನೀರಿಗೆ ಬಾಣವನ್ನು ಹೊಡೆದು ನಂತರ ದೇವರಿಗೆ ಅರ್ಪಿಸಲಾಗುತ್ತದೆ. ಈ ರೀತಿಯ ಸಾಂಕೇತಿಕ ಮೃಗಬೇಟೆ ಉತ್ತರ ಕನ್ನಡದ ಬಹುತೇಕ ದೇವಸ್ಥಾನಗಳ ರಥೋತ್ಸವದಂದು ನಡೆಯುತ್ತದೆ.

ಇಡಗುಂಜಿಗೆ ಸಮೀಪ  
ಬಳಕೂರು ಕೊಡ್ಲಮನೆ ವಿಷ್ಣುಮೂರ್ತಿ ದೇವಾಲಯಕ್ಕೆ ಬಂದರೆ ಜೈನರ ಸ್ಥಳವಾದ ನಗರಬಸ್ತಿ ಕೇರಿ (20 ಕಿ.ಮೀ), ಇಡಗುಂಜಿ ಮಹಾಗಣಪತಿ ದೇವಾಲಯ (2 ಕಿ.ಮೀ), ಮುರ್ಡೇಶ್ವರ (25 ಕಿ.ಮೀ), ಕಾಸರಕೋಡು ಅಪ್ಸರಕೊಂಡ (12 ಕಿ.ಮೀ)ಗಳಿಗೂ ಭೇಟಿ ನೀಡಬಹುದು. ಹೊನ್ನಾವರದಿಂದ 20 ಕಿ.ಮೀ ದೂರದಲ್ಲಿರುವ ಬಳಕೂರಿಗೆ ರಾಜ್ಯ ಸಾರಿಗೆ ಬಸ್ ಸೇವೆ, ಖಾಸಗಿ ಟೆಂಪೋ ಸೇವೆ ನಿರಂತರವಾಗಿ ಲಭ್ಯ.


= ಬಳಕೂರು ವಿ.ಎಸ್.ನಾಯಕ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.