ವಾಹನ

ವರ್ಸೇಲ್ಸ್ ಅರಮನೆ

ವರ್ಸೇಲ್ಸ್  ಅರಮನೆ
Published On :

ವರ್ಸೇಲ್ಸ್ ಪ್ಯಾರಿಸ್‌ನಿಂದ 18 ಕಿ.ಮೀ. ದೂರವಿರುವ ನಗರ. ಜಗತ್ತಿನ ಅರಮನೆಗಳಲ್ಲಿ ಅತ್ಯಂತ ಸುಂದರವಾದುದು ಇಲ್ಲಿದೆ, ಅದರ ದರ್ಶನಕ್ಕಾಗಿ ಬರುವ ಪ್ರವಾಸಿಗರ ಸಂಖ್ಯೆ ವರ್ಷಕ್ಕೆ 50 ಲಕ್ಷ! ಅರಮನೆ ನಾಲ್ಕೂವರೆ ಶತಮಾನಗಳ ಹಿಂದಿನದು. ಅದರ ಪಕ್ಕದಲ್ಲಿ ಪೆಟಿಟ್ ಟ್ರಿಯಾನೊನ್ ಮತ್ತು ಗ್ರಾಂಡ್ ಟ್ರಿಯಾನೊನ್ ಎಂಬ ಇನ್ನೆರಡು ಸುಂದರ ಮಹಲುಗಳಿವೆ. ಅರಮನೆಯ ನಿರ್ಮಾತೃ 14ನೇ ಲೂಯಿ. ಅರ್ಥಸಚಿವ ಫೋಕೆ ಎಂಬಾತ ಸುಂದರ ಕಲೆಗಳಿಂದ ಕೂಡಿದ ತನ್ನ ಮನೆಗೆ ದೊರೆಯನ್ನು ಬರಮಾಡಿಸಿದ. ಫೋಕೆಯ ಮನೆ ಮಾತ್ರ ಕಲಾಕೌಶಲದ ಸಾಕ್ಷಿಯಾಗಿರಲಿಲ್ಲ. ಮನೆಯೆದುರಿನ ಹೂದೋಟಗಳು, ಕಾರಂಜಿಗಳು ಮನ ಸೆಳೆಯುವಂತಿದ್ದವು. ತನ್ನ ವೈಭವವನ್ನು ತೋರಿಸಲೆಂದು ಮನೆಗೆ ಕರೆದದ್ದು ತನಗೆ ಅವಮಾನಿಸಲೆಂದೇ ಎಂದು ಭಾವಿಸಿದ ದೊರೆ ಅದನ್ನು ಮೀರಿಸುವ ಕಲಾಸೌಂದರ್ಯದ ಸೃಷ್ಟಿಗೆ ಮುಂದಾದ. ಮಂತ್ರಿಯನ್ನು ಸೆರೆಮನೆಗೆ ತಳ್ಳಿದ.
ಕಾಡುಪ್ರದೇಶವನ್ನು ನಾಲ್ಕೂವರೆ ಶತಮಾನಗಳ ಹಿಂದೆ ಸುಂದರ ನಾಡಾಗಿಸಲು ಲೂಯಿ ದೊರೆ ಸಿದ್ಧನಾದ. ಮೃಗ ಪಕ್ಷಿಗಳೇ ತುಂಬಿದ್ದ ಆ ಜಾಗದಲ್ಲಿ ನೀರಿನ ಸೆಲೆಯಿರಲಿಲ್ಲ. ಹಿಂದಿನ ದೊರೆ ಬೇಟೆಯಾಡಲು ಕಾಡಿಗೆ ಬಂದಾಗ ತಂಗಿಕೊಳ್ಳಲು ನಿರ್ಮಿಸಿದ ಸಣ್ಣಮನೆ ಅಲ್ಲಿತ್ತು. ಮಂತ್ರಿಯ ಭವನ ನಿರ್ಮಿಸಿದ್ದ ವಾಸ್ತುಶಾಸ್ತ್ರಜ್ಞ ಲೂಯಿ ಲಿವಾನನ್ನು ಮಂದಿರ ನಿರ್ಮಾಣಕ್ಕೆ ಕರೆಸಿದ. ಉದ್ಯಾನಗಳ ಸೃಷ್ಟಿಯಲ್ಲಿ ಸಿದ್ಧಹಸ್ತನಾದ ಅಂದ್ರೆ ಲಿ ನೋಟರ್ ಹಾಗೂ ಖ್ಯಾತ ಕಲಾವಿದ ಚಾರ್ಲ್ಸ್ ಲೆಬ್ರನ್ ಮಂತ್ರಿಯ ಮನೆಯ ಚೆಲುವಿಗೆ ಶ್ರಮಿಸಿದವರು. ದೊರೆ ಅವರನ್ನು ಸ್ವಾಗತಿಸಿದ. ದೇಶದ ಪ್ರತಿ ಪ್ರಜೆಯನ್ನೂ ಒತ್ತಾಯದಿಂದ ಈ ಕೆಲಸಕ್ಕೆ ತೊಡಗಿಸಿದ. 35 ಸಾವಿರಕ್ಕೂ ಅಧಿಕ ಕೆಲಸಗಾರರಿಂದ ಹಲವು ವರ್ಷಗಳ ಕೆಲಸ ಸಾಗಿತು.1400 ಕಾರಂಜಿಗಳು, ಉದ್ಯಾನಗಳು, ಹತ್ತು ಸಾವಿರ ಮಂದಿ ಆರಾಮವಾಗಿ ಇರಬಹುದಾದ ಬೃಹತ್ ಅರಮನೆ ನಿರ್ಮಾಣವಾಯಿತು. ಕೆಳ ಅಂತಸ್ತು ಕೂಡ ಇದೆ. ಈಗ ಅದು ಒಂದು ವಸ್ತು ಸಂಗ್ರಹಾಲಯವಾಗಿದ್ದು, 18ನೇ ಶತಮಾನದ ಕಲಾಕೃತಿಗಳೂ ಅಲ್ಲಿವೆ.
ಪಿಂಗಾಣಿ ಗಾರೆ
ಲೂಯಿ ದೊರೆ ಮದಾಂ ಡಿ ಮೊಂಟೆಸ್ಪಾನ್ ಎಂಬ ಹೆಣ್ಣನ್ನು ಮೋಹಿಸಿದ. ಅವಳಿಗಾಗಿ ಸುಂದರವಾದ ಗ್ರಾಂಟ್ ಟ್ರಿಯಾನೊನ್ ಮಹಲನ್ನು 1687ರಲ್ಲಿ ಕಟ್ಟಿದ. ಈ ಮಹಲಿನಲ್ಲಿ ದಿನವೂ ಹೊಸ ಹೂಗಳನ್ನಿಡಲು 20 ಲಕ್ಷ ಕಲ್ಲಿನ ಹೂದಾನಿಗಳಿದ್ದವು. ನಿತ್ಯವೂ ವಸಂತಕಾಲವನ್ನು ಬಿಂಬಿಸುವ ಉದ್ಯಾನವನ ಕೃತಕ ಸರೋವರಗಳ ಶೋಭೆಯಿದೆ. ಮಹಲಿನ ಒಳಗೋಡೆಗಳಿಗೆ ವರ್ಣರಂಜಿತ ಪಿಂಗಾಣಿಯ ಗಾರೆಯಿದೆ. ಮಹಲಿನ ಹೊರಭಾಗದಲ್ಲಿ ಬಿಳಿ ಮತ್ತು ಕೆಂಪು ಸಂಗಮವರಿ ಶಿಲೆಗಳಿಂದ ಕಟ್ಟಿದ ಮಂಟಪಗಳಿವೆ.
ಪ್ರಣಯದ ಗುರುತು
ಈ ಮಹಲಿನಲ್ಲಿ ಲೂಯಿಯೊಂದಿಗೆ ಸುಖಿಸಿದ ಅವನ ಪ್ರೇಯಸಿ ಆತ ತನ್ನನ್ನು ಕಡೆಗಾಣಿಸುತ್ತಿದ್ದಾನೆಂದು ತಿಳಿದಾಗ ಅವನಿಗೆ ವಿಷವಿಕ್ಕಿ ಕೊಲ್ಲಲು ಮುಂದಾಗಿ ಸಿಕ್ಕಿಬಿದ್ದು, ಅದೇ ವಿಷಪಾನ ಮಾಡಬೇಕಾಯಿತು. ಅನಂತರ ಇನ್ನೊಬ್ಬಳೊಂದಿಗೆ ಅವನ ಪ್ರಣಯ ಮುಂದುವರಿಯಿತು. 1715ರಲ್ಲಿ ತನ್ನ 72ನೇ ವಯಸ್ಸಿನಲ್ಲಿ ಲೂಯಿ ತೀರಿಕೊಂಡ. ಲೂಯಿಗೆ ತನ್ನ ಸರದಾರರ ಮೇಲೆ ವಿಶ್ವಾಸವಿರಲಿಲ್ಲ. ಅವರು ಸದಾ ತನ್ನ ಹತ್ತಿರವೇ ಇರಬೇಕೆಂಬ ಭಾವನೆಯಿಂದ ಶೀಶ್ ಮಹಲಿನ ಬಳಿಯಲ್ಲೇ ಅವರ ವಾಸಕ್ಕೆಂದು ಸ್ಯಾಲೆನ್ ಡಿ ಲಾಯೆಲ್ ಎಂಬ ಹಜಾರ ನಿರ್ಮಿಸಿದ. 16ನೇ ಲೂಯಿಯ ಹೆಂಡತಿ ಮೇರಿ ಆಂಟೊನೆಟ್ ಸರೋವರದ ನಡುವೆ ಕಾಮದೇವತೆ ಕ್ಯುಪಿಡ್‌ನ ವಿಗ್ರಹವಿರುವ ಮಂದಿರವನ್ನು ಕಟ್ಟಿಸಿದಳು. ಉದ್ಯಾನದಲ್ಲಿ ವಕ್ರ ವಿನ್ಯಾಸದ ಹಾದಿಗಳನ್ನು ನಿರ್ಮಿಸಿ ಅವಳು ನೆಡಿಸಿದ ನೆರಳಿನ ಸಾಲುಮರಗಳು ಹುಲ್ಲುಹಾಸುಗಳು ಈಗಲೂ ಚೆನ್ನಾಗಿ ಉಳಿದಿವೆ. ಆದರೆ ಫ್ರಾನ್ಸಿನಲ್ಲಿ ಹರಡಿದ ಬರಗಾಲದ ಕಾವಿನಿಂದ ಜನ ತತ್ತರಿಸಿ 1879ರಲ್ಲಿ ಕ್ರಾಂತಿಯೆದ್ದರು. ತೆರಿಗೆಯ ಹಣ ಅರಮನೆಯ ಸಿಂಗಾರಕ್ಕೇ ಬಳಕೆಯಾಗುವುದರಿಂದ ಕ್ರುದ್ಧರಾಗಿ ಅರಮನೆಗೆ ನುಗ್ಗಿದರು. ರಾಜದಂಪತಿ ದೇಶ ಬಿಟ್ಟು ಓಡಿಹೋದರು. ಆದರೂ ಕ್ರಾಂತಿಕಾರಿಗಳು ಅವರ ಹತ್ಯೆ ಮಾಡಿದರು. ರಾಜನಿಲ್ಲದ ಅರಮನೆ ಹಾಳು ಸುರಿದು ಧೂಳು ಕಸದಿಂದ ತುಂಬಿತು, ಉದ್ಯಾನವನ ಕುಲಗೆಟ್ಟಿತು.
ಅಂದಗೆಟ್ಟಿತು...
ಫ್ರಾನ್ಸಿನ ರಾಜ್ಯಾಡಳಿತದ ವೈಭವಕ್ಕೆ ಸಾಕ್ಷಿಯಾಗಿತ್ತು ಅರಮನೆಯ ಮಹಡಿ. ಕನ್ನಡಿಗಳಿಂದ ರೂಪುಗೊಂಡ ಶೀಶ್ ಮಹಲ್ ನೋಡಲು ಕಣ್ಣುಗಳಿಗೆ ಹಬ್ಬ. ಸ್ಫಟಿಕದಿಂದ ಕೆತ್ತಿದ ವಿಶಿಷ್ಟವಾದ 42 ದೀಪಗಳೊಳಗೆ ಮೊಂಬತ್ತಿ ಉರಿಸಿಟ್ಟರೆ ಸಭಾಭವನವಿಡೀ ಬೆಳಗುತ್ತಿತ್ತು. ಇಂತೊಪ್ಪುವ ವೈಭವದಿಂದ ಮೆರೆದ ಅರಮನೆ ಅನಾಥವಾಗಬಾರದೆಂದು 1830ರಲ್ಲಿ ದೊರೆ ಫಿಲಿಪ್ ಅದನ್ನು ಮ್ಯೂಸಿಯಂ ಆಗಿಸಿದ. ಆದರೆ ಅದರ ಉಸ್ತುವಾರಿಗೆ ನೇಮಕವಾದ ವ್ಯಕ್ತಿ ಗೋಡೆಯಲ್ಲಿರುವ ಕಲಾಕೃತಿಗಳನ್ನು ಯದ್ವಾತದ್ವಾ ಕತ್ತರಿಸಿ ಅಂದಗೆಡಿಸಿದ. ಅವನ ಬುದ್ಧಿ ವಿಕಲ್ಪದಿಂದಾಗಿ ಬೆಲೆಬಾಳುವ ಕಲೆಗಳೂ ಹಾನಿಗೊಳಗಾದವು. ಎರಡನೇ ಮಹಾಯುದ್ಧದ ಬಳಿಕ ವರ್ಸೇಲ್ಸ್ ಅರಮನೆ ಗತಸೌಂದರ್ಯವನ್ನು ಮತ್ತೆ ಪಡೆದು ಜನಾಕರ್ಷಕವಾಗಬೇಕೆಂದು ಫ್ರಾನ್ಸ್ ಕಾಯಕಲ್ಪಕ್ಕೆ ಮುಂದಾದಾಗ ಪೋರ್ಚುಗಲ್, ಅಮೆರಿಕ, ಹಾಲೆಂಡ್, ಬೆಲ್ಜಿಯಂ ಮುಂತಾದ ಹಲವು ದೇಶಗಳು ಅದಕ್ಕೇ ಕೈಗೂಡಿಸಿದವು. 6 ಕೋಟಿ ರುಪಾಯಿಗಳ ಸಹಾಯವೂ ಒದಗಿತು. ಕುಸಿಯುವ ಹಂತದಲ್ಲಿದ್ದ ಚಾವಣಿಯನ್ನು ಸರಿಪಡಿಸಿ ಗೋಡೆಗಳಿಗೆ ಸುಣ್ಣ ಬಣ್ಣ ನಡೆಯಿತು. 3 ವರ್ಷಗಳ ಅವಧಿಯಲ್ಲಿ 15ನೇ ಲೂಯಿಯ ಒಪೇರಾ ಭವನದ ಮರುಹುಟ್ಟು ಆಯಿತು.



-ಪ. ರಾಮಕೃಷ್ಣ ಶಾಸ್ತ್ರಿ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.