ವಾಹನ

ಕಪು ಕಾರು!

ಕಪು ಕಾರು!
Published On :

ಕಬ್ಬಿಣದ ದಪ್ಪದ ರಾಡ್‌ಗಳು ಎಂಜಿನ್ ಆಗಿ, ಚಾಸಿಯಾಗಿ, ಬಾಗಿಲಾಗಿ, ಚೆಂದದ ಕಾರಾಗಿ ಪರಿವರ್ತನೆಗೊಳ್ಳುವ ಪರಿಯೇ ಬೆರಗುಮೂಡಿಸುವಂಥದ್ದು. ಅದರಲ್ಲೂ ಮನುಷ್ಯರೇ ಇಲ್ಲದೆ, ಅತ್ತಿಂದಿತ್ತ ತಿರುಗಿ, ಬೇಕಾದ ಸಾಮಗ್ರಿ ಎತ್ತುಕೊಂಡು, ದಣಿವಿಲ್ಲದೇ ಚಕಚಕನೆ ಕೆಲಸ ಮಾಡುವ ರೋಬೋಗಳ ಕೆಲಸವಂತೂ ವಿಸ್ಮಯ ಹುಟ್ಟಿಸುತ್ತದೆ. ಆಧುನಿಕ ತಂತ್ರಜ್ಞಾನದ ಸಹಾಯದಿಂದ ಪಳಪಳನೆ ಹೊಳೆಯುವ ಕಾರೊಂದು ಸಿದ್ಧಗೊಳ್ಳುವ ಪರಿ ಮತ್ತು ಅದರ ಪ್ರತಿ ಹಂತವನ್ನೂ ನೋಡುವುದೇ ಒಂದು ಅಚ್ಚರಿ.
ಇಂಥ ಸುವರ್ಣಾವರ್ಕಾಶವನ್ನು ಹೋಂಡಾ ಕಂಪನಿ ಕೆಲವು ಪತ್ರಿಕೆಗಳಿಗೆ ಒದಗಿಸಿತ್ತು. ಕನ್ನಡದ ಎರಡು ಪತ್ರಿಕೆಗಳಲ್ಲಿ 'ಕನ್ನಡಪ್ರಭ'ವೂ ಒಂದಾಗಿತ್ತು.
ಹೋಂಡಾ ಕಂಪನಿ ರಾಜಸ್ಥಾನ ಮತ್ತು ಹರ್ಯಾಣ ಗಡಿಯಲ್ಲಿರುವ ತಪುಕಾರಾದಲ್ಲಿ 460 ಎಕರೆ ವಿಸ್ತಾರವಾದ ಜಾಗದಲ್ಲಿ ಕಾರು ಮತ್ತು ಬೈಕ್‌ಗಳ ತಯಾರಿಕಾ ಘಟಕ ಸ್ಥಾಪಿಸಿದೆ. ಭಾರತಕ್ಕಷ್ಟೇ ಅಲ್ಲ ಏಷ್ಯಾದ ಬೇರೆ ಬೇರೆ ದೇಶಗಳಿಗೆ ಇಲ್ಲಿ ಉತ್ಪಾದನೆಯಾದ ಹೋಂಡಾ ಕಾರು ರಫ್ತಾಗಲಿದೆ. ಈ ಕೇಂದ್ರ 2008ರಲ್ಲಿ ಸ್ಥಾಪನೆ ಕೆಲಸ ಆರಂಭಗೊಂಡಿದ್ದರೂ, ಕಾರುಗಳು ತಯಾರಿ ಆರಂಭವಾಗಿದ್ದು 2014ರಲ್ಲಿ. ಈಗ ಕೇವಲ ಒಂದು ಶಿಫ್ಟ್‌ನಲ್ಲಿ ಕೆಲಸ ನಡೆಯುತ್ತಿದೆ. ಈಗಾಗಲೇ 3200 ಉದ್ಯೋಗಿಗಳು ಹೋಂಡಾ ಕಾರು ತಯಾರಿಕೆಯಲ್ಲಿ ನಿರತರಾಗಿದ್ದಾರೆ. ವರ್ಷಕ್ಕೆ 1.20 ಲಕ್ಷ ಕಾರುಗಳನ್ನು ತಯಾರಿಸಲಾಗುತ್ತಿದೆ.
ಸದ್ಯಕ್ಕೆ ಇಲ್ಲಿ ಹೋಂಡಾ ಅಮೇಝ್ ಕಾರನ್ನು ಹಾಗೂ ಎಂಜಿನ್ ಬಿಡಿಭಾಗಗಳನ್ನು ಮಾತ್ರ ತಯಾರಿಸಲಾಗುತ್ತಿದೆ. ಈ ಘಟಕ ಇನ್ನೂ ಅಭಿವೃದ್ಧಿಯ ಹಂತದಲ್ಲಿದ್ದು, ಸಂಪೂರ್ಣ ಸಿದ್ಧಗೊಂಡರೆ ಆಗ ಹೋಂಡಾ ಕಂಪನಿಯ ಬಹುತೇಕ ಕಾರುಗಳನ್ನು ತಯಾರಿಸುವ ಸಾಮರ್ಥ್ಯ ಪಡೆಯಲಿದೆ.
ಹೋಂಡಾ ಕಂಪನಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಈ ಘಟಕ ನಿರ್ಮಿಸಿದ್ದು, ಅತ್ಯಂತ ಅಪಾಯಕಾರಿ ಕೆಲಸವಾದ ವೆಲ್ಡಿಂಗ್ ಕೆಲಸಕ್ಕೆ ಬಹುತೇಕ ರೋಬೊಗಳನ್ನೇ ಬಳಸಿಕೊಳ್ಳಲಾಗಿದೆ. ಕೆಲಸಗಾರರಿಗೆ ಅನುಕೂಲವಾಗುವಂತೆ ಮೂವಿಂಗ್ ಕ್ರೇನ್ ಮೂಲಕ ಉದ್ಯೋಗಿಗಳ ಕೆಲಸಕ್ಕೆ ಅನುಗುಣವಾದ ಎತ್ತರಕ್ಕೆ ಕಾರಿನ ಚಾಸಿ ತಾನಾಗೇ ಬರುವ ವ್ಯವಸ್ಥೆ ಮಾಡಲಾಗಿದೆ. ಎಂಜಿನ್ ಅಸ್ಸೆಂಬ್ಲಿ ಅತ್ಯಂತ ಭಾರವಾಗಿದ್ದು, ಕಾರಿನ ಚಾಸಿ ಬಂದ ಕೂಡಲೇ ಅದು ಲಿಫ್ಟ್ ಮೂಲಕ ಸೂಕ್ತ ಜಾಗಕ್ಕೆ ತೆರಳುವ ವ್ಯವಸ್ಥೆಯಿದ್ದು, ಬೋಲ್ಟ್ ಮತ್ತು ವಯರ್‌ಗಳನ್ನು ಅಳವಡಿಸುವುದಷ್ಟೇ ಉದ್ಯೋಗಿಗಳ ಕೆಲಸ.
ಪ್ರತಿ ಹಂತದಲ್ಲೂ ಗುಣಮಟ್ಟ ಮತ್ತು ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಿರುವುದು ಕಾಣುತ್ತಿತ್ತು. ಅಲ್ಲಿನ ಸ್ವಚ್ಛತೆ ಕೆಲವರ ಮನೆಗಿಂತ ಎಷ್ಟೋ ಪಾಲು ಉತ್ತಮವಾಗಿತ್ತು. ಅಷ್ಟು ದೊಡ್ಡ ಸ್ಥಳದ ಸ್ವಚ್ಛತೆ ಕಾಪಾಡುವುದೇ ದೊಡ್ಡ ಸವಾಲು. ಆದರೆ ಹೊಸ ಕಾರುಗಳಿಗೆ ಯಾವುದೇ ರೀತಿಯಲ್ಲೂ ಸಣ್ಣ ಗೀರು ಕೂಡ ಆಗದಂತೆ ನೋಡಿಕೊಳ್ಳಲು ಸ್ವಚ್ಛತೆ ಕೂಡ ಅಷ್ಟೇ ಮುಖ್ಯ ಎಂಬುದು ಕಂಪನಿ ಅಭಿಪ್ರಾಯ. ಗುಣಮಟ್ಟಕ್ಕೆ ಅತ್ಯಂತ ಹೆಚ್ಚು ಆದ್ಯತೆ ನೀಡುವುದೇ ನಮ್ಮ ಗುರಿ ಎನ್ನುತ್ತಾರೆ ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷ ಜ್ಞಾನೇಶ್ವರ ಸೇನ್.

ಹೊಸ ಕಾರು ಕ್ಲಿಕ್
ಹೋಂಡಾ ಕಂಪನಿ ಹೊಸದಾಗಿ ಮಾರುಕಟ್ಟೆಗೆ ಪರಿಚಯಿಸಿರುವ ಅಮೇಝ್ ಮತ್ತು ಹೊಸ ಮಾದರಿಯ ಸಿಟಿ ಕಾರುಗಳು ಗ್ರಾಹಕರಿಂದ ಭಾರಿ ಸ್ವಾಗತ ಪಡೆದಿವೆ. ಹೋಂಡಾ ಕಂಪನಿ ಕೊಂಚ ತಡವಾಗಿಯೇ ಡೀಸೆಲ್ ಎಂಜಿನ್ ಹೊಂದಿರುವ ಕಾರುಗಳನ್ನು ಮಾರುಕಟ್ಟೆಗೆ ಬಿಟ್ಟಿದೆ. ಆದರೆ ಮಾರುಕಟ್ಟೆ ಪ್ರವೇಶಿಸಿದ ನಂತರ ಹೋಂಡಾ ಡೀಸೆಲ್ ಕಾರುಗಳಿಗೆ ಭಾರಿ ಬೇಡಿಕೆ ವ್ಯಕ್ತವಾಗಿದೆ.
ಕಂಪನಿ ಈಗಾಗಲೇ 87,000 ಹೋಂಡಾ ಅಮೇಝ್ ಕಾರುಗಳನ್ನು ಮಾರಾಟ ಮಾಡಿದ್ದು, 37,000 ಹೋಂಡಾ ಸಿಟಿ ಕಾರುಗಳನ್ನು ಮಾರಾಟ ಮಾಡಿದೆ. ಅಮೇಝ್ ಕಾರುಗಳನ್ನು ಖರೀದಿಸಲು ಗ್ರಾಹಕರು ಕಾಯಬೇಕಾದ ಸ್ಥಿತಿ ಇದೆ. ಈ ಎರಡು ಕಾರುಗಳಿಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಬಂದಿರುವ ಕಾರಣದಿಂದಾಗಿ ಹೋಂಡಾ ಕಾರುಗಳ ಮಾರಾಟದಲ್ಲಿ ಶೇ.83ರಷ್ಟು ಹೆಚ್ಚಳ ಕಾಣಿಸಿಕೊಂಡಿದೆ.
ಇದರಿಂದ ಉತ್ಸುಕವಾಗಿರುವ ಕಂಪನಿ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವ ಜತೆಗೆ ಡೀಲರ್‌ಶಿಪ್‌ಗಳ ಸಂಖ್ಯೆಯನ್ನೂ ಹೆಚ್ಚಿಸುವ ಮೂಲಕ ತನ್ನ ಮಾರಾಟ ಜಾಲ ವಿಸ್ತರಿಸಲು ನಿರ್ಧರಿಸಿದೆ ಎಂದು ಕಂಪನಿಯ ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷ ಜ್ಞಾನೇಶ್ವರ ಸೇನ್ ಹೇಳಿದ್ದಾರೆ.
ಹೋಂಡಾ ಕಂಪನಿ ಈಗಾಗಲೇ 107 ನಗರಗಳಲ್ಲಿ 170 ಡೀಲರ್‌ಗಳನ್ನು ಹೊಂದಿದೆ. 2015ರ ಮಾರ್ಚ್ ಹೊತ್ತಿಗೆ ಡೀಲರ್‌ಗಳ ಸಂಖ್ಯೆಯನ್ನು 250ಕ್ಕೆ ಹೆಚ್ಚಿಸುವ ಗುರಿ ಹೊಂದಿದೆ. ಇಷ್ಟು ಸಮಯ ಹೋಂಡಾ ಕಂಪನಿ ಮುಖ್ಯವಾಗಿ ಮಹಾನಗರಗಳನ್ನು ಮಾತ್ರ ಗುರಿಯಾಗಿಸಿಕೊಂಡಿತ್ತು. ಆದರೆ ಇನ್ನು ಮುಂದೆ 2 ಮತ್ತು 3ನೇ ಹಂತದ ನಗರಗಳತ್ತಲೂ ದೃಷ್ಟಿ ಹರಿಸಲಿದೆ ಎಂದು ಅವರು ತಿಳಿಸಿದ್ದಾರೆ.

ಜುಲೈನಲ್ಲಿ ಮೊಬಿಲಿಯೊ...
ಹೋಂಡಾ ಅಮೇಝ್ ಮತ್ತು ಸಿಟಿ ಡೀಸೆಲ್ ಕಾರುಗಳಿಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವುದರಿಂದ ಉತ್ಸುಕವಾಗಿರುವ ಹೋಂಡಾ ಕಂಪನಿ ಇದೇ ಜುಲೈನಲ್ಲಿ 'ಮೊಬಿಲಿಯೊ'ವನ್ನು ಮಾರುಕಟ್ಟೆಗೆ ಬಿಡಲು ನಿರ್ಧರಿಸಿದೆ.
ಮಾರುತಿ ಎರ್ಟಿಗಾ ಮಾದರಿಯ 7 ಪ್ರಯಾಣಿಕರು ಕುಳಿತುಕೊಳ್ಳಲು ಅವಕಾಶ ಇರುವ ಈ ಕಾರು, ಎರ್ಟಿಗಾಕ್ಕಿಂತ ಹೆಚ್ಚು ಸ್ಥಳ ಹೊಂದಿರಲಿದೆ. ಎರ್ಟಿಗಾದಲ್ಲಿ ಅತ್ಯಂತ ಹಿಂದಿನ ಸೀಟಿನಲ್ಲಿ ದೊಡ್ಡವರಿಗೆ ಕುಳಿತುಕೊಳ್ಳಲು ಕಷ್ಟವಾಗುತ್ತದೆ. ಆದರೆ ಮೊಬಿಲಿಯೋದಲ್ಲಿ ಅತ್ಯಂತ ಆರಾಮವಾಗಿ ಕುಳಿತುಕೊಳ್ಳಲು ಅವಕಾಶವಿದೆ. ಅಲ್ಲದೇ ಅತ್ಯಂತ ಹಿಂದಿನ ಸೀಟಿನ ಪ್ರಯಾಣಿಕರೂ ಸೀಟು ರಿಕ್‌ಲೈನ್ ಮಾಡುವ ಅವಕಾಶ ಹೊಂದಿರುತ್ತಾರೆ. ಹಿಂದಿನ ಮತ್ತು ಮಧ್ಯದ ಸೀಟುಗಳನ್ನು ಮಡಚಲೂ ಹೋಂಡಾ ಕಂಪನಿ ಅವಕಾಶ ನೀಡಿದೆ. ಇದರಿಂದ ಪ್ರಯಾಣಿಕರು ಇಲ್ಲದಿದ್ದರೆ ಸಾಮಾನು ಸರಂಜಾಮುಗಳನ್ನು ತುಂಬಲು ಸಾಧ್ಯವಾಗಲಿದೆ.
ಮೊಬಿಲಿಯೊ ನಂತರ ಹೋಂಡಾ ಜಾಝ್‌ನ ಹೊಸ ಮಾದರಿ ಕಾರು ಮಾರುಕಟ್ಟೆ ಪ್ರವೇಶಿಸಲಿದೆ.


 ವಿನಾಯಕ ಭಟ್ಟ ಮೂರೂರು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.