ವಾಹನ

ಹೆಬ್ಬೆ ಹೇರಂಭ

ಹೆಬ್ಬೆ ಹೇರಂಭ
Published On :

ಸುತ್ತಲೂ ಜಲರಾಶಿ, ಹಸಿರಿನ ವನಸಿರಿ, ಪಕ್ಷಿಗಳ ಕಲರವ, ನದಿಯ ಇಂಪಾದ ಜುಳುಜುಳು ನಿನಾದ, ಒಂದಕ್ಕೊಂದು ಜೋಡಿಸಿಟ್ಟಂತೆ ಕಾಣುವ ಬೆಟ್ಟ, ದಿಟ್ಟಿಸಿ ನೋಡಿದರೆ ಕಲ್ಲಿನಿಂದ ಕೆತ್ತಿದ ಬಹಳ ಹಿಂದಿನ ದೇಗುಲ ಅಸ್ಪಷ್ಟ ಗೋಚರ. ಇದು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಹೆಬ್ಬೆ ಹೇರಂಭ ಕ್ಷೇತ್ರ.
ಸ್ಥಳ ಪುರಾಣ
ಅಗಸ್ತ್ಯ ಮಹಾಮುನಿಗಳಿಂದ ಪ್ರೇರಿತರಾಗಿ ತಪಸ್ವಿ ಹೇರಂಭ ಮಹರ್ಷಿ ಸ್ಥಾಪಿಸಿದ ಈ ದೇವಾಲಯ ಹೊಯ್ಸಳ ಶೈಲಿಯಲ್ಲಿದೆ. ಹೆಬ್ಬೆ ಹೇರಂಭ ಕ್ಷೇತ್ರವು ಭದ್ರಾ ನದಿಯ ಬಲಭಾಗದಲ್ಲಿದ್ದು, ಈ ಕ್ಷೇತ್ರಕ್ಕೆ ಸುಮಾರು 1100 ವರ್ಷಗಳ ಇತಿಹಾಸವಿದೆ.
ಸುಮಾರು ವರ್ಷಗಳಿಂದ ಈ ದೇವಸ್ಥಾನದ ಪೂಜೆಯು ನಿರಾತಂಕವಾಗಿ ನಡೆಯುತ್ತಿದ್ದುದು ಅರ್ಚಕರಾದ ಶ್ರೀ ಶ್ರೀನಿವಾಸ ಐತಾಳರಿಂದ. ತಂದೆಯವರ ಮರಣಾನಂತರ ಶ್ರೀ ಚಂದ್ರಶೇಖರ ಐತಾಳರು ಪ್ರತಿ ಸೋಮವಾರ ತಪ್ಪದೇ ಹೋಗಿ ದೇವರಿಗೆ ಅಭಿಷೇಕ ಮಾಡಿ ಬರುತ್ತಾರೆ. ಕೆಲವೊಮ್ಮೆ ಭದ್ರಾ ಹಿನ್ನೀರಿನ ಮಟ್ಟ ಹೆಚ್ಚಾಗಿದ್ದರೂ, ಮಳೆಗಾಲದಲ್ಲಿಯೂ ತೆಪ್ಪವೇರಿ, ಹುಟ್ಟು ಹಾಕಿಕೊಂಡು, ಉಕ್ಕಡದಲ್ಲಿ ಆಚೆ ದಡದಲ್ಲಿರುವ ದೇವಸ್ಥಾನಕ್ಕೆ ಹೋಗುತ್ತಾರೆ.
ಪಂಚಲಿಂಗ ದರ್ಶನ
ಹಿಂದೆ ಕೆಳದಿಯ ಅರಸ ಶಿವಪ್ಪನಾಯಕನು ಶಿವರಾತ್ರಿಯ ದಿನ ಒಂದೇ ದಿನದಲ್ಲಿ ಕಳಸ, ಮೂಡಿಗೆರೆ, ಚಿಕ್ಕಮಗಳೂರು, ಖಾಂಡ್ಯ, ಸೋಮಪುರ (ಲಕ್ಕಹಳ್ಳಿ), ಕೂಡಲಿ (ಹೊಳೆಹೊನ್ನೂರು) ಹಾಗೂ ಹೆಬ್ಬೆಯ ಭವಾನಿಶಂಕರ ದೇವಾಲಯಗಳನ್ನು ಕುದುರೆ ಸವಾರಿಯ ಮೇಲೆ ವೀಕ್ಷಿಸುತ್ತಿದ್ದನೆಂದು, ಹೆಬ್ಬೆಯ ಭವಾನಿಶಂಕರ ದೇವಾಲಯದಲ್ಲಿ ಶಿವರಾತ್ರಿಯ ಒಂದು ಜಾವದ ಪೂಜೆಗೆ ಹಾಜರಿರುತ್ತಿದ್ದರೆಂಬ ಮಾತು ಹಲವು ಹಿರಿಯರಿಂದ ಇಂದಿಗೂ ಪ್ರಚಲಿತದಲ್ಲಿದೆ.
ಉದ್ಭವ ಲಿಂಗ
ಶ್ರೀ ಭವಾನಿಶಂಕರ ಲಿಂಗವು ಉದ್ಭವ ಲಿಂಗವಾಗಿದ್ದು, ಇದರ ಆಸುಪಾಸಿನಲ್ಲಿಯೇ ಜಡೆಶಂಕರ ಹಾಗೂ ಜಲಶಂಕರ ಎಂಬ ಲಿಂಗಗಳು ಉದ್ಭವಗೊಂಡಿದ್ದು, ಈಗ ಭದ್ರಾ ಹಿನ್ನೀರಿನ ಕಾರಣದಿಂದಾಗಿ ಜಲಾವೃತಗೊಂಡಿವೆ. ಈ ಸ್ಥಳ ಪ್ರಾಕೃತಿಕವಾಗಿಯೂ ಸಂಪದ್ಭರಿತವಾಗಿದೆ. ವರ್ಷದಲ್ಲಿ ಸುಮಾರು ಎಂಟು ತಿಂಗಳ ಕಾಲ, ದೇವಸ್ಥಾನದ ಮೆಟ್ಟಿಲವರೆಗೂ ನೀರು ಇರುತ್ತದೆ. ದೇವಾಲಯದ ಬಾಗಿಲಿಗೆ ಹೋಗಬೇಕಾದರೆ, ಬೆಸ್ತರ ಉಕ್ಕಡದಲ್ಲಿಯೇ ಕ್ರಮಿಸಬೇಕು. ಇತ್ತೀಚೆಗೆ ಸರ್ಕಾರದ ವತಿಯಿಂದ ಒಂದು ಯಾಂತ್ರಿಕ ದೋಣಿ ವ್ಯವಸ್ಥೆ ಕಲ್ಪಿಸಲಾಗಿದೆ. ದೇವಸ್ಥಾನದ ಸುತ್ತಲೂ ನೀರು ಆವರಿಸಿರುವುದರಿಂದ, ಈ ದೃಶ್ಯವು ನಯನಮನೋಹರ. ಒಂದು ಕಿ.ಮೀ. ನೀರಿನಲ್ಲಿ ಸಂಚರಿಸುವಾಗ, ಭದ್ರಾ ಹಿನ್ನೀರಿನ ಏರಿಳಿತ, ಅಲ್ಲಲ್ಲಿ ಕಾಣಸಿಗುವ ಮೀನುಗಳು, ಮೇಲೆ ಹಾರಾಡುವ ಪಕ್ಷಿಗಳ ಕಲರವ, ಮಧ್ಯಾನ್ಹದ ಸುಡುವ ಬಿಸಿಲಿನಲ್ಲೂ ತಂಪಾಗಿಸುವ ತಂಗಾಳಿಯ ತಂಪು ಅನುಭವಿಸಿದವರಿಗೇ ಗೊತ್ತು. ದೇವಸ್ಥಾನಕ್ಕೆ ಅನತಿ ದೂರದಲ್ಲಿಯೇ, ಭದ್ರಾ ಅಭಯಾರಣ್ಯವಿರುವುದರಿಂದ, ಅನೇಕ ವನ್ಯ ಮೃಗಗಳನ್ನೂ ವೀಕ್ಷಿಸಬಹುದು. ಟ್ರೆಕ್ಕಿಂಗ್ ಹೋಗುವವರು, ಅರಣ್ಯ ಇಲಾಖೆಯ ಅನುಮತಿ ಪಡೆದು, ಅರಣ್ಯದೊಳಗೆ ವಿಹರಿಸಬಹುದು.
ಭದ್ರಾ ನದಿ ತುಂಬಿ ಹರಿಯುತ್ತಿದ್ದರೂ ಇಲ್ಲಿ ಉತ್ಸವ-ಜಾತ್ರೆ ಎಂದಿಗೂ ನಿಂತಿಲ್ಲ. ಪ್ರತಿ ವರ್ಷ ಏಪ್ರಿಲ್‌ನಲ್ಲಿ ಇಲ್ಲಿ ಜಾತ್ರೆ ನಡೆಯುತ್ತದೆ. ಇದು ದಟ್ಟವಾದ ಕಾನನದ ನಡುವೆ ಇರುವುದರಿಂದ, ಇಲ್ಲಿ ಊಟದ ವ್ಯವಸ್ಥೆ ಇರುವುದಿಲ್ಲ. ಬುತ್ತಿ ಕಟ್ಟಿಕೊಂಡು ಹೋದಲ್ಲಿ, ಅಲ್ಲಿಯೇ ತಿನ್ನಲು ಸಾಕಷ್ಟು ಸ್ಥಳಾವಕಾಶವಿದೆ. ಅಥವಾ ಮುಂಚಿತವಾಗಿ ತಿಳಿಸಿದರೆ, ಅಲ್ಲಿನ ಅರ್ಚಕರು ವ್ಯವಸ್ಥೆ ಮಾಡುತ್ತಾರೆ. ಅತಿಥಿಗಳು ತಂಗಲು ಒಂದು ಹಾಲ್‌ನ ವ್ಯವಸ್ಥೆಯಿದೆ.

ಆಸುಪಾಸು
ಕಟ್ಟೆಹೊಳೆ: ಹೆಬ್ಬೆ ಶ್ರೀ ಭವಾನಿಶಂಕರ ದೇವಸ್ಥಾನದಿಂದ ಎರಡು ಕಿ.ಮೀ. ಕಾನನದೊಳಗೆ ನಡೆದುಕೊಂಡು ಹೋದರೆ ಅಲ್ಲಿ ಸೋಮವಾಹಿನಿ ನದಿಗೆ ಅಡ್ಡಲಾಗಿ ಕಟ್ಟೆ ಕಟ್ಟಲಾಗಿದೆ. ಈ ಸ್ಥಳಕ್ಕೆ ಕಟ್ಟೆಹೊಳೆ ಎಂದು ಕರೆಯುತ್ತಾರೆ.  ರಾಜರ ಕಾಲದಲ್ಲಿ ಈ ಪ್ರದೇಶದಲ್ಲಿ ಬರಗಾಲ ಎದುರಾದಾಗ ನದಿಗೆ ಅಡ್ಡ ಕಟ್ಟೆ ಕಟ್ಟಿ, ಊರಿಗೆ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಅಂದು ಕಟ್ಟಿದ ಕಟ್ಟೆ ಇಂದಿಗೂ ಇದೆ.
ಮಡವತ್ತಿ ಕ್ಷೇತ್ರ: ಹೆಬ್ಬೆ ಕ್ಷೇತ್ರಕ್ಕೆ ಹೋಗುವ ಮಾರ್ಗದಲ್ಲಿ ಮಡವತ್ತಿ ಎಂಬ ಸ್ಥಳವಿದೆ. ಇಲ್ಲಿ ವನದುರ್ಗಾಪರಮೇಶ್ವರಿ ಎಂಬ ಖ್ಯಾತಿಯ ದೇವಾಲಯವಿದೆ. ವನಸಿರಿಯ ನಡುವೆ ತಾಯಿಯು ಉದ್ಭವವಾಗಿದ್ದು, ಬಲಭಾಗದಲ್ಲಿ ಲಕ್ಷ್ಮಿ, ಎಡಭಾಗದಲ್ಲಿ ಸರಸ್ವತಿ ಮತ್ತು ಮಧ್ಯಭಾಗದಲ್ಲಿ ಮಹಾಕಾಳಿಯು ಅವತಾರವೆತ್ತಿದ್ದಾಳೆ.
ಮಾರ್ಗ
ಶಿವಮೊಗ್ಗದಿಂದ ಸುಮಾರು 52 ಕಿ.ಮೀ. ದೂರದ ನರಸಿಂಹರಾಜಪುರಕ್ಕೆ ಬಂದು, ಇಲ್ಲಿಂದ ಬಾಳೆಹೊನ್ನೂರು ಮಾರ್ಗ ಹಿಡಿಯಿರಿ. ಶಾಂತಿಭವನ ಕ್ರಾಸ್‌ನಿಂದ ಹೊಸ್ಕೆರೆ, ಹಂತುವಾನಿ ಹಳ್ಳಿಗಳ ಮಾರ್ಗವಾಗಿ ಮುಂದೆ ಸಾಗಿದರೆ, ಹೆಬ್ಬೆ ಸಿಗುತ್ತದೆ. ನಂತರ ಉಕ್ಕಡ ಅಥವಾ ಬೋಟಿನ ಮೂಲಕ ಒಂದು ಕಿ.ಮೀ. ಸಾಗಿದರೆ ಹೆಬ್ಬೆ ಶ್ರೀ ಭವಾನಿಶಂಕರ ದೇವಸ್ಥಾನವನ್ನು ತಲುಪಬಹುದು.


= ಭಾಗ್ಯ ನಂಜುಂಡಸ್ವಾಮಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.