ವಾಹನ

ವಿಜಯದ ಹಾಥಿ

ವಿಜಯದ ಹಾಥಿ
Published On :

ಬಿಜಾಪುರದ ಇಟ್ಟಂಗಿಹಾಳ ರಸ್ತೆಯಲ್ಲಿ ಆದಿಲಶಾಹಿ ಕಾಲದ ನೂರಾರು ಸ್ಮಾರಕಗಳು ಕಾಣಿಸುತ್ತವೆ. ಅವುಗಳಲ್ಲಿ ಅರಮನೆಗಳು, ಮಸೀದಿಗಳು, ದರ್ಗಾಗಳು, ನೀರ್‌ಗೋಪುರಗಳು, ಸಮಾಧಿ ಮಂಟಪಗಳು, ಕೆರೆಗಳು, ಅಶ್ವಶಾಲೆಗಳು, ಗಜಶಾಲೆಗಳು ಮುಂತಾದವುಗಳಿವೆ. ಈ ಪ್ರದೇಶವನ್ನು ಬ್ರಿಟಿಷರು 'ಶಹಾಪುರ ಹಿಲ್ಕಾಕ್‌' ಎನ್ನುತ್ತಿದ್ದರು.
ಈ ಸ್ಮಾರಕಗಳೆಲ್ಲ ಕಲೆ ಮತ್ತು ವಾಸ್ತುನಿರ್ಮಿತಿಯಿಂದ ನಿಜಕ್ಕೂ ಅಧ್ಯಯನಾರ್ಹ. ಆದರೆ, ಇಲಾಖೆ ಮತ್ತು ನಾಗರಿಕರ ಬೇಜವಾಬ್ದಾರಿತನದಿಂದ ಅವುಗಳು ನಶಿಸುತ್ತಿವೆ. ಇಟ್ಟಂಗಿಹಾಳ ರಸ್ತೆಯ ಬಲಬದಿಯಲ್ಲಿ ಮುಳ್ಳುಗಂಟಿಗಳಿಂದ ಆವೃತವಾದ ಎರಡಂತಸ್ತಿನ ಅನಾಥ ಮಹಲೊಂದು ಕಣ್ಸೆಳೆಯುತ್ತದೆ. ಇದೇ ಹಾಥಿ ಮಹಲ್. ಇದಕ್ಕೆ ಫತೇ ಮಹಲ್ ಅಂತಲೂ ಹೆಸರಿದೆ. ಇದರರ್ಥ ವಿಜಯದ ಅರಮನೆ ಎಂದು. ಈ ಹೆಸರು ತಾಳಿಕೋಟೆ ಯುದ್ಧದ ವಿಜಯದ ನಂತರ ಬಂದಿರಬಹುದು.
ಆದಿಲ್‌ಶಾಹಿ ಸೈನ್ಯದಲ್ಲಿ ಗಜಬಲದ ಸಂಖ್ಯೆ ಸಾಕಷ್ಟಿತ್ತು. ಗಜಗಳನ್ನು ತರಬೇತಿಗೊಳಿಸುವ, ಪಳಗಿಸುವ ಕೆಲಸವನ್ನು ತುರ್ಕಸ್ತಾನ್, ಪರ್ಶಿಯಾ ಮತ್ತು ಆಫಘಾನಿಸ್ತಾನದ ನುರಿತ ಗಜತಜ್ಞರು ಮಾಡುತ್ತಿದ್ದರು. ಅವರಲ್ಲಿ ಅಸದ್‌ಖಾನ್ ಲ್ಯಾರಿ ಎಂಬ 1ನೇ ಅಲಿ ಆದಿಲ್‌ಶಾಹಿಯ ಗಜದಳದ ಸರದಾರ. ಆತನು ಹೆಸರಿಗೆ ತಕ್ಕಂತೆ ವೀರಕೇಸರಿ. ಈ ಗಜಶಾಲೆಯ ಸಮಸ್ತ ಉಸ್ತುವಾರಿ ಆತನದಾಗಿತ್ತು.
ಹಾಥಿಮಹಲ್ ಎರಡಂತಸ್ತಿನ ಮಹಲಾಗಿದ್ದು, ಮೇಲಂತಸ್ತಿನಲ್ಲಿ ಸುತ್ತಲಿನ ಪ್ರದೇಶ ವೀಕ್ಷಿಸುವ ಕಿಂಡಿಗಳು, ಕಮಾನು ಬಾಗಿಲುಗಳು, ಗೂಡುಗಳು ನೆಲಮನೆಗೆ ಹೋಗುವ ಮೆಟ್ಟಿಲುದ್ವಾರ ಮುಂತಾದವುಗಳಿವೆ. ಚಾವಣಿಯಲ್ಲಿ ಕಾಣಬರುವ ಗಚ್ಚು ನಿರ್ಮಿತ ಪುಷ್ಪಾಲಂಕಾರ ಮನೋಹರವಾಗಿದೆ.
ಕಾಪಾಡಿ...
ಕಿಡಿಗೇಡಿಗಳು ಈ ಮಹಲಿನ ತುಂಬೆಲ್ಲ ಕಲ್ಲು- ಇದ್ದಿಲುಗಳಿಂದ ಅಸಹ್ಯಕರ ಲಿಪಿಗಳನ್ನು ಕೆತ್ತಿ ಅಂದಗೆಡಿಸಿದ್ದಾರೆ. ಇದೀಗ ಉಸ್ತುವಾರಿ ಇಲ್ಲದೇ ಅನಾಥವಾಗಿ ನರಳುತ್ತಿರುವ ಸುಂದರವಾದ ನರಕಸದೃಶ ಸ್ಮಾರಕ. ಇದರ ಕೆಳ ಅಂತಸಿನಲ್ಲಿ ನಿಧಿಗಾಗಿ ಅಗೆದ ಗುಂಡಿಗಳು, ವಾಮಾಚಾರಕ್ಕಾಗಿ ಬಳಸಿದ ವಸ್ತುಗಳು ಧಾರಾಳವಾಗಿ ಕಾಣಸಿಗುತ್ತವೆ. ಈ ಮಹಲಿನ ಆಸುಪಾಸು ಕಿಶ್ವರಖಾನನೆಂಬ ಮತ್ತೊಬ್ಬ ಸರದಾರನ ನೆಲಕ್ಕಚ್ಚಿದ ಮಹಲು, ನಾಮಾವಶೇಷಗೊಂಡ ನೀರ್ಗೋಪುರಗಳು, ಬಾವಿಗಳು ಮುಂತಾದವುಗಳು ನೋಡುಗರಲ್ಲಿ ಕನಿಕರ ಹುಟ್ಟಿಸುತ್ತವೆ.
ಆದಿಲ್‌ಶಾಹಿ ಕಾಲದ ಈ ಸ್ಮಾರಕಗಳನ್ನು ರಕ್ಷಿಸುವ ಜವಾಬ್ದಾರಿಯನ್ನು ಸರ್ಕಾರ ಎಂದು ಹೊರುವುದು?

-ಪ್ರೊ. ಎ.ಎಲ್. ನಾಗೂರ
----

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.