ಮರವಂತೆ ಬಹಳ ಚೆಲುವಂತೆ!
ದಕ್ಷಿಣಕನ್ನಡದ ಕರಾವಳಿ ತನ್ನದೇ ಆದ ವಿಶಿಷ್ಟ ಸೌಂದರ್ಯ ಹೊಂದಿದೆ. ಒಂದೆಡೆ ಹಸಿರು ಹೊದ್ದು ಮಲಗಿದ ...

ದಕ್ಷಿಣಕನ್ನಡದ ಕರಾವಳಿ ತನ್ನದೇ ಆದ ವಿಶಿಷ್ಟ ಸೌಂದರ್ಯ ಹೊಂದಿದೆ. ಒಂದೆಡೆ ಹಸಿರು ಹೊದ್ದು ಮಲಗಿದ ಪರ್ವತಗಳ ಶ್ರೇಣಿ, ಇನ್ನೊಂದೆಡೆ ನದಿ-ಶರಧಿಗಳ ಅಬ್ಬರದ ಭೋರ್ಗರೆತ, ಪ್ರತಿ ದಿಕ್ಕಿನ ನೋಟ ಸಿರಿಯು ಎಂಥಾವರನ್ನಾದರೂ ಮಂತ್ರಮುಗ್ಧರನ್ನಾಗಿಸುತ್ತದೆ. ಇವುಗಳ ಪೈಕಿ ಕುಂದಾಪುರ ತಾಲೂಕಿನ ಮಾರಾಸ್ವಾಮಿ (ಮರವಂತೆ) ಊರು ಪ್ರಸಿದ್ಧ.
ನದಿ-ಕಡಲಿನ ಸಂಗಮದ ಅಪೂರ್ವ ತಾಣವಾಗಿ ವಿಶ್ವಖ್ಯಾತಿ ಪಡೆದ ಮರವಂತೆಯಲ್ಲಿ ಪುರಾಣ ಪ್ರಸಿದ್ಧ ಮಹಾರಾಜ ಸ್ವಾಮಿ ಶ್ರೀವರಾಹ ದೇವಸ್ಥಾನ ಇರುವುದು ಹೆಚ್ಚಿನವರಿಗೆ ತಿಳಿದಿರಲಾರದು. ಇಲ್ಲಿ ಕುಳಿತ ಭಂಗಿಯಲ್ಲಿರುವ ವರಾಹನ ಮೂರ್ತಿ ಕಾಣಬಹುದು. ವರಾಹನೆಂದರೆ ಹಂದಿ. ಹಾಗೇ ಸಂಸ್ಕೃತ ಗ್ರಂಥಗಳಲ್ಲಿ ಮೋಡ ಅನ್ನುವ ಅರ್ಥವಿದೆ.
ಕುಂದಾಪುರ ಮೂಲಕ ರಾ.ಹೆ. 66ರಲ್ಲಿ ಕ್ರಮಿಸಿದರೆ ಕೇವಲ 13 ಕಿ.ಮೀ. ದೂರದಲ್ಲಿ ಸಿಗುವ ಈ ತಾಣದ ಹೆದ್ದಾರಿಯ ಪೂರ್ವಕ್ಕೆ ಜುಳು ಜುಳು ಮಂಜುಳ ನಾದಗೈಯುತ್ತಾ ತನ್ನ ಒನಪು ವೈಯಾರದಿಂದ ಹರಿಯುವ ಲಾವಣ್ಯವತಿ ಸೌಪರ್ಣಿಕಾ (ಚಕ್ರ) ನದಿಯಾದರೆ, ಪಶ್ಚಿಮದ ಇನ್ನೊಂದಡೆ ಮಳೆಗಾಲದಲ್ಲಿ ಬಾನೆತ್ತರಕ್ಕೆ ಚುಂಬಿಸಲು ಯತ್ನಿಸುವಂತೆ ಭಾಸವಾಗುವ ಅಲೆಗಳ ಸೃಷ್ಟಿಕರ್ತ (ಅರಬ್ಬೀ) ಸಮುದ್ರರಾಜನ ಸೊಬಗಿನ ದೃಶ್ಯ. ಮನಮೋಹಕ ಈ ದೃಶ್ಯ ಅಂತಿಮ ಹಂತ ಬಂದಾಗ ನಮ್ಮ ಮನಸ್ಸನ್ನು ಎಚ್ಚರಿಸುವ ದೇವಾಲಯವೆಂದರೆ ವರಹಾ ದೇವಸ್ಥಾನ. ಕವಿ ವಿಜಯ ನರಸಿಂಹ ಈ ಊರಿನ ಬಗ್ಗೆ 'ಧೀರ ಶರಧಿ ಮೆರೆವಂತೆ, ಮೊರೆವಂತೆ ಹೊಸರಾಗ ಧಾರೆಯಂತೆ' ಎಂದು ಮಂಜುಳ, ಮಧುಮಯ, ಮಧುರಾ ಎಂಬ ಕವನದ ಮೂಲಕ ಬಣ್ಣಿಸಿದ್ದಾನೆ. ಆದರೆ ಎಂದಿಂದಿಗೂ ಸಮುದ್ರದ ನೀರು ಹೆದ್ದಾರಿ ಹಾಗೂ ಊರನ್ನು ಕೊಚ್ಚಿ ಹೋಗದಂತೆ ತಡೆಹಿಡಿದಿರುವ ವರಾಹನ ಮಹಿಮೆ ಅದ್ಭುತ. ನಡುರಾತ್ರಿಯಲ್ಲಿ ಸೂಕರ ರೂಪದಲ್ಲಿ ದೇವಸ್ಥಾನದಿಂದ ಹೋರಹೋಗಿ ನದಿ-ಸಮುದ್ರ ಒಂದಾಗದಂತೆ ತಡೆ ನಿರ್ಮಿಸಿರುವುದು ಈ ದೇವನ ಮಹಿಮೆ ಎಂಬುದು ಊರಿನವರ ನಂಬಿಕೆ. ಶ್ರೇಷ್ಠ ತೀರ್ಥಕ್ಷೇತ್ರ ಎನಿಸಿಕೊಂಡಿರುವ ಈ ಕ್ಷೇತ್ರದಲ್ಲಿ ವರ್ಷಂಪ್ರತಿ ಕರ್ಕಾಟಕ(ಆಟಿ) ಅಮವಾಸ್ಯೆ (ಜು. 26ರಂದು) ಜಾತ್ರೆ ನಡೆಯುತ್ತದೆ. ಆಷಾಢದ ಜಡಿಮಳೆಯಲ್ಲೂ ಆಸುಪಾಸಿನ ಹಳ್ಳಿಗಳಿಂದ ಸಾವಿರಾರು ಸಂಖ್ಯೆಯ ಭಕ್ತಜನರು ತಂಡೋಪತಂಡವಾಗಿ ಬಂದು ನದಿ-ಕಡಲಲ್ಲಿ ಸ್ನಾನಗೈದು ವರಾಹನ ದರ್ಶನ ಪಡೆದು ಪಾವನರಾಗುತ್ತಾರೆ.
ದೇವಸ್ಥಾನ ಮುಕ್ಕಾಲು ಭಾಗ ನದಿಯಲ್ಲಿದೆ. ಸುತ್ತ-ಮುತ್ತ ಉಪ್ಪು ನೀರಿನ ಸೆಳೆತವಿದ್ದರೂ ದೇವಸ್ಥಾನದ ಬಾವಿ ನೀರು ಮಾತ್ರ ಸಿಹಿಯಾಗಿರುವುದು ವಿಸ್ಮಯ. ಈ ಕ್ಷೇತ್ರದ ಮುಂಭಾಗದಲ್ಲಿ ಪುರಾತನಕಾಲದ ಶಿಲಾಶಾಸನವಿದ್ದು, ಶಿಥಿಲಗೊಂಡಿದೆ. ಪ್ರತಿ ಮೂರು ವರ್ಷಕೊಮ್ಮೆ ಇಲ್ಲಿ ಆಭಾರಿ ಸೇವೆ ಜರುಗುತ್ತದೆ. ದೇವೇಂದ್ರನು ಸ್ಥಾಪಿಸಿದ ಶ್ರೀ ಗಂಗಾಧರೇಶ್ವರನ ದೇವಸ್ಥಾನ ಕೂಡಾ ಹತ್ತಿರದಲ್ಲಿದೆ.
ಕುರುನಾಡು
ಇಲ್ಲೇ ನದಿಯಲ್ಲಿ ಸಾಗಿದರೆ ಪಡುಕೋಣೆ ಸಿಗುತ್ತದೆ. ಅದರ ಪಕ್ಕದಲ್ಲಿ ಕುರು ಎಂಬ ದ್ವೀಪವಿದೆ. ಮನಸ್ಸಿಗೆ ಆಹ್ಲಾದ ನೀಡುವ ಈ ದ್ವೀಪವನ್ನು ನೋಡಬೇಕಿದ್ದರೆ ಯಾಂತ್ರೀಕೃತ ಬೋಟಿನಲ್ಲಿ ಸುತ್ತು ಹಾಕಬಹುದು. ಇಲ್ಲಿಯ ಬಗ್ಗೆ 'ಕುರುನಾಡು' ಎಂಬ ಚಲನಚಿತ್ರ ಹೊರಬಂದಿದೆ. ಚಿತ್ರೀಕರಣಕೆ ಬೇಕಾಗುವ ಲೋಕೇಶನ್‌ಗಳು ಇಲ್ಲಿ ಸಾಕಾಷ್ಟಿವೆ. ಚಿತ್ರಬೃಹ್ಮ ಪುಟ್ಟಣ್ಣ ಕಣಗಾಲ್ ಅವರ ಅಚ್ಚುಮೆಚ್ಚಿನ ಸ್ಥಳವಿದು. ಹೆಚ್ಚಿನ ಮಾಹಿತಿಗಾಗಿ ರಾಮಚಂದ್ರ ಹೆಬ್ಬಾರ್ರನ್ನು (ಮೊ.9480266762) ಸಂಪರ್ಕಿಸಬಹುದು.
- ಪಿ.ವಿಜಯ್ ಗಂಗೊಳ್ಳಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


