ವಾಹನ

ಗಡಿಯಾರ ಗೋಪುರ

ಮೈಸೂರಿನ ಸೌಂದರ್ಯಕ್ಕೆ ಮೆರಗು ತಂದ ಎರಡು ಗೋಪುರಗಳು ದೊಡ್ಡ ಗಡಿಯಾರ ಮತ್ತು ಚಿಕ್ಕ ಗಡಿಯಾರ ...

ಗಡಿಯಾರ ಗೋಪುರ
Published On :

ಮೈಸೂರಿನ ಸೌಂದರ್ಯಕ್ಕೆ ಮೆರಗು ತಂದ ಎರಡು ಗೋಪುರಗಳು ದೊಡ್ಡ ಗಡಿಯಾರ ಮತ್ತು ಚಿಕ್ಕ ಗಡಿಯಾರ ಗೋಪುರ. ಇವೆರಡೂ ಜನಸ್ನೇಹಿಯಾಗಿದ್ದು ಮೈಸೂರಿಗರ ನಾಗರಿಕ ಪ್ರಜ್ಞೆಗೆ ಸಾಕ್ಷಿಯಾಗಿವೆ.
ದೊಡ್ಡ ಗಡಿಯಾರವು ಮೈಸೂರಿನ ಹೃದಯಭಾಗವಾದ ಗಾಂಧೀವೃತ್ತದ ಬಳಿ ಇದೆ. ಹಿಂದೆ ಜಂಬೂ ಸವಾರಿಯು ಮೈಸೂರಿನ ಅರಮನೆಯಿಂದ ಹೊರಟು ಈ ದೊಡ್ಡಗಡಿಯಾರವನ್ನು ಬಳಸಿ ಅಶೋಕ ರಸ್ತೆಯಲ್ಲಿ ಬನ್ನಿ ಮಂಟಪಕ್ಕೆ ಹೋಗುತ್ತಿತ್ತು.
ಈ ಗಡಿಯಾರವನ್ನು 1927ರಲ್ಲಿ ರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅಧಿಕಾರಕ್ಕೆ ಬಂದ ಬೆಳ್ಳಿಹಬ್ಬದ ನೆನಪಿಗಾಗಿ ಈ ಗೋಪುರವನ್ನು ನಿರ್ಮಿಸಲಾಯಿತು. ನಂತರ ಅದನ್ನು ಜನಸ್ನೇಹಿಯನ್ನಾಗಿ ಮಾಡಬೇಕೆಂದು ಅಲೋಚಿಸಿದ ಮಹಾರಾಜರು ಅದನ್ನು ಕ್ಲಾಕ್ ಟವರ್ ಆಗಿ ಪರಿವರ್ತಿಸಿದರು. ಈ ಗೋಪುರವೀಗ 86 ವಸಂತಗಳನ್ನು ಪೂರೈಸಿದೆ. ನಿರ್ಮಾಣವಾದಾಗ 72 ಅಡಿಗಳ ಎತ್ತರವಿದ್ದ ಈ ಗೋಪುರವನ್ನು ಮತ್ತೆ 20 ಅಡಿ ಎತ್ತರಿಸಲಾಯಿತು. ಈಗ ಅದು 92 ಅಡಿ ಎತ್ತರವಿದೆ. ತಲೆಮಾರಿನಿಂದ ತಲೆಮಾರಿಗೆ ಮೈಸೂರಿಗರ ಸಮಯದ ಒಡನಾಡಿಯಾಗಿದ್ದ ಈ ಗಡಿಯಾರ ಈಗಲೂ ತನ್ನ ಕರ್ತವ್ಯವನ್ನು ಮುಂದುವರಿಸುತ್ತಿದೆ. ಆದರೆ ಅದರ ಶಬ್ಧ ಮಾತ್ರ ಕೇಳಿಸುವುದಿಲ್ಲವಷ್ಟೆ!
ಗಡಿಯಾರದ ಗಂಟೆಯು ಹಿತ್ತಾಳೆಯದಾಗಿದ್ದು ಫ್ರಾನ್ಸ್‌ನಿಂದ ತರಿಸಲಾಗಿತ್ತು. 4 ಅಡಿ ಎತ್ತರ, 4 ಅಂಗುಲ ದಪ್ಪ ಮತ್ತು 50 ಅಂಗುಲ ಅಗಲ ಈ ಗಂಟೆಯಿದೆ. ಗಂಟೆಯ ಮೇಲ್ಭಾಗದಲ್ಲಿ ಗುಮ್ಮಟವಿದೆ. ಅಲ್ಲಿನ ತೊಲೆಯೊಂದಕ್ಕೆ ಗಂಟೆಯನ್ನು ಸಿಕ್ಕಿಸಲಾಗಿದೆ. ಗುಮ್ಮಟದ ಮೇಲೆ ಚಿನ್ನದ ಲೇಪಿತ ಕಳಸವಿದೆ.
ಗೋಪುರವನ್ನು ಗಾರೆಗಟ್ಟಿನಿಂದ ಕಟ್ಟಲಾಗಿದೆ. ಅಂದಿನ ದಿನಗಳಲ್ಲಿ 7 ಸಾವಿರ ರೂಪಾಯಿ ವೆಚ್ಚದಲ್ಲಿ ನಿರ್ಮಿತವಾಗಿರುವ ಈ ದೊಡ್ಡ ಗಡಿಯಾರ ಗೋಪುರ ಈಗ ವಿದ್ಯುತ್ ಚಾಲಿತವಾಗಿದೆ. ಪ್ರಾರಂಭದಲ್ಲಿ ರೋಮನ್ ಅಂಕಿಯನ್ನು  ನಾಲ್ಕು ದಿಕ್ಕಿನ ಗಡಿಯಾರಕ್ಕೆ ಅಳವಡಿಸಲಾಗಿತ್ತು. ಈಗ ಕನ್ನಡ ಅಂಕಿಯನ್ನು ಅಳವಡಿಸಲಾಗಿದೆ. ದೊಡ್ಡ ಗಡಿಯಾರದ ಸರ್ಕಲ್‌ನಲ್ಲಿ ಹೋಗುವವರು, ಒಮ್ಮೆಯಾದರೂ ಗಡಿಯಾರವನ್ನು ತಲೆ ಎತ್ತಿ ನೋಡದೆ ಹೋಗುವುದಿಲ್ಲ. ಹಾಗೆಯೇ ನೋಡಿದ ನಂತರ ತಮ್ಮ ಗಡಿಯಾರದ ಸಮಯ ಸರಿಯಾಗಿದೆಯೇ? ಎಂದು ಪರೀಕ್ಷಿಸಿಕೊಳ್ಳುವುದನ್ನು ಮರೆಯುವುದಿಲ್ಲ. ಅಷ್ಟರಮಟ್ಟಿಗೆ ಮೈಸೂರಿನ ದೊಡ್ಡ ಗಡಿಯಾರ ಜನರ ಜೀವನಾಡಿಯಾಗಿದೆ.
ಚಿಕ್ಕ ಗಡಿಯಾರ
ಚಿಕ್ಕಗಡಿಯಾರ ದೇವರಾಜ ಮಾರುಕಟ್ಟೆಯ ಎದುರಿಗೆ ಇದೆ. ಕೆ.ಆರ್.ಸರ್ಕಲ್‌ಗೆ ಸಮೀಪ ಸಯ್ಯಾಜಿರಾವ್ ರಸ್ತೆ ಮತ್ತು ಶಿವರಾಂ ಪೇಟೆಯ ರಸ್ತೆಯ ಕೂಡುವಿಕೆಯಲ್ಲಿ ಚಿಕ್ಕ ಗಡಿಯಾರವಿದೆ. ಸುಮಾರು 50 ಅಡಿ ಎತ್ತರವಿರುವ ಈ ಗೋಪುರವು ದೊಡ್ಡ ಗಡಿಯಾರಕ್ಕಿಂತ ಹಳೆಯದು. ಇದನ್ನು ಮೈಸೂರಿನ ರಾಜರಾದ ಚಾಮರಾಜೇಂದ್ರ ಒಡೆಯರ್ ಕಾಲದಲ್ಲಿ 1ನೇ ಡಿಸೆಂಬರ್ 1886ರಲ್ಲಿ ಮೈಸೂರು ಸಂಸ್ಥಾನಕ್ಕೆ ಭೇಟಿ ನೀಡಿದ್ದ ವೈಸರಾಯ್ ಮತ್ತು ಭಾರತದ ಗವರ್ನರ್ ಜನರಲ್ ಲಾರ್ಡ್ ಡಿಪರಿನ್ ಅವರ ನೆನಪಿಗಾಗಿ ನಿರ್ಮಿಸಲಾಯಿತು. ಉದ್ಯಾನವನದ ಕಾರಂಜಿಯಿಂದ ಇದನ್ನು ಅಲಂಕರಿಸಲಾಗಿತ್ತು.
ಇದೂ ಕೂಡ ನಾಲ್ಕು ದಿಕ್ಕಿಗೂ ಗಡಿಯಾರವನ್ನು ಹೊಂದಿದೆ. ಇದು ಮರದಿಂದ ಕೂಡಿದ್ದು ಆಕರ್ಷಕವಾಗಿದೆ. ನಾಲ್ಕು ದಿಕ್ಕಿನಲ್ಲಿ ತೆರೆದ ಬಾಗಿಲಿದ್ದು, ಸ್ವಾಗತ ಕಮಾನುಗಳು ಸೊಗಸಾಗಿವೆ. ಈ ಗೋಪುರದ ನಾಲ್ಕು ಭಾಗಗಳಲ್ಲೂ ಆನೆ-ನಂದಿ ವಿಗ್ರಹಗಳಿವೆ. ಬೀದಿ ಬದಿ ವ್ಯಾಪಾರಸ್ಥರ ತಾಣವಾಗಿದ್ದ ಇದನ್ನು ಮೈಸೂರು ನಗರಪಾಲಿಕೆಯವರು 125 ವರ್ಷಗಳ ನೆನಪಾಗಿ ಅಭಿವೃದ್ಧಿಗೊಳಿಸಿದ್ದಾರೆ.

- ಬಲ್ಲೇನಹಳ್ಳಿ ಮಂಜುನಾಥ್, ಕೆ.ಆರ್.ಪೇಟೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.