ವಾಹನ

ಉಲ್ಲನ್ ಕೆ ಬಟ್ಟೆ!

ಈ ಚಳಿಗಾಲದ ಅಬ್ಬರಕ್ಕೆ ಮೈಯೆಲ್ಲಾ ಥರಗುಟ್ಟಿ ನಡುಗಿ, ಬೆಚ್ಚಗಿನ ಹಿತವನ್ನು ಹುಡುಕುತ್ತದೆ. ಹಾಗೇ ಹಿತ ಹುಡುಕಿಕೊಂಡು...

ಉಲ್ಲನ್ ಕೆ ಬಟ್ಟೆ!
Published On :

ಈ ಚಳಿಗಾಲದ ಅಬ್ಬರಕ್ಕೆ ಮೈಯೆಲ್ಲಾ ಥರಗುಟ್ಟಿ ನಡುಗಿ, ಬೆಚ್ಚಗಿನ ಹಿತವನ್ನು ಹುಡುಕುತ್ತದೆ. ಹಾಗೇ ಹಿತ ಹುಡುಕಿಕೊಂಡು ಹೋದರೆ ನಮಗೆ ಎದುರಾಗುವುದೇ ಉಣ್ಣೆ, ಉಲ್ಲನ್, ನೈಲಾನ್ ಬಟ್ಟೆಗಳು. ಈಗ ಉಣ್ಣೆ ಬಟ್ಟೆಗಳಿಗಿಂತ, ಉಲನ್ ಬಟ್ಟೆಗಳಿಗೆ ಹೆಚ್ಚು ಬೇಡಿಕೆ. ನಮ್ಮ ಬೇಡಿಕೆಯನ್ನು ಪೂರೈಸಲು ಈ ಟಿಬೆಟಿನ ನಿರಾಶ್ರಿತರು ಬೀದಿ ಬದಿಯಲ್ಲಿ ಉಣ್ಣೆ ಬಟ್ಟೆ ಹಾಗೂ ರಗ್ಗುಗಳ ಅಂಗಡಿ ತೆರೆದಿದ್ದಾರೆ.
ಗಮನಿಸಿ ನೋಡಿ, ಕನ್ಯಾಕುಮಾರಿಯಿಂದ ಕಾಶ್ಮೀರದ ತನಕ ಹೋದರೂ ಈ ಟಿಬೆಟಿಯನ್ನರ ಜನಾಂಗೀಯ ಉದ್ಯೋಗ ಒಂದೇ, ಅದು ಉಲನ್‌ನಿಂದ ತಯಾರಿಸಿದ ಉಡುಪುಗಳನ್ನು ಮಾರುವುದು. ಹೀಗೆ ಮಾರಾಟ ಮಾಡುತ್ತಲೇ ಬದುಕಿಗೊಂದು ನೆಲೆ ಕಂಡುಕೊಳ್ಳುವುದು. ಚಳಿಗಾಲ ಬಂತೆಂದರೆ ಇವರು ಚುರುಕು, ಇವರ ವ್ಯಾಪಾರವೂ ಚುರುಕು.
ಲೂಧಿಯಾನದಿಂದ ಉಲನ್ ತಂದು ಅದರಿಂದ ಸ್ವೆಟರ್, ಸಾಕ್ಸ್, ಗ್ಲೌಸ್, ಮಫ್ಲರ್, ಮಂಕಿ ಕ್ಯಾಪ್, ಮಕ್ಕಳ ಕುಲಾವಿ, ಕುಂಚಗೀ ಇತ್ಯಾದಿ ಹೆಣೆದು ಮಾರಾಟ ಮಾಡುತ್ತಾರೆ. ಕೈ ಮಗ್ಗದಲ್ಲಿ ತಯಾರಾದ ಸಿದ್ಧ ಉಡುಪುಗಳನ್ನು ತೀರ ಅಗ್ಗದ ದರದಲ್ಲಿ ಮಾರುತ್ತಾರೆ.
ದೊಡ್ಡ ದೊಡ್ಡ ಶೋ ರೂಂಗಳಲ್ಲಿ ಜರ್ಕನ್, ಸ್ವೆಟರ್, ಕಂಬಳಿ, ರಗ್ಗು, ಶಾಲು ಇತ್ಯಾದಿ ಕೊಳ್ಳಲು ಹೋದರೆ ದರ ದುಬಾರಿ. ಅದೇ ಗುಣಮಟ್ಟದ ಸಿದ್ಧ ಉಡುಪುಗಳು ಟಿಬೆಟಿಯನ್ನರ ಬಳಿ ತುಂಬಾ ಸೋವಿ ದರದಲ್ಲಿ ಕೈಗೆಟಕುತ್ತವೆ. ಜನ ಮನ ಮೆಚ್ಚುವಂತೆ ಬದುಕಬೇಕೆಂಬ ಸಿದ್ಧಾಂತ ಇವರದು. ಹೀಗಾಗಿ ಚಳಿಗಾಲದ ಥಂಡಿ ಎಂತಹದೇ ಇರಲಿ, ಬೆಚ್ಚಗಿನ ಉಡುಪು ಮಾತ್ರ ಇವರ ಬಳಿ ಕೊಂಡದ್ದೇ ಇರಲಿ.
ಹುಲಿ ಚರ್ಮ ಹೋಲುವ ಮಕ್ಕಳ ಜಾಕೆಟ್, ಮಾಲ ಬಿಳುವಿನ ತುಪ್ಪಳದ ಟೋಪಿ, ಉಲನ್ ಸ್ಕಾರ್ಫ್ ಎಲ್ಲವೂ 100ರಿಂದ 500 ರೂಪಾಯಿ ಒಳಗಿನ ದರದಲ್ಲಿ ಸಿಗುತ್ತವೆ. ಬೀದಿ ವ್ಯಾಪಾರವಾದರೂ ಮೋಸ, ವಂಚನೆ ಕಡಿಮೆ.
ಕರ್ನಾಟಕದಲ್ಲಿ ಬೈಲುಕುಪ್ಪೆ, ಮುಂಡಗೋಡದಲ್ಲಿ ಹೆಚ್ಚಾಗಿರುವ ಟಿಬೆಟಿಯನ್ನರು, ಈಗ ಪ್ರತಿ ಜಿಲ್ಲೆ, ತಾಲೂಕು, ನಗರದಲ್ಲಿ ಈ ವೃತ್ತಿಯಲ್ಲಿ ತೊಡಗಿದ್ದಾರೆ. ವರ್ಷಪೂರ್ತಿ ನಿಮಗೆ ಬೇಕಾದಾಗ ಉಲನ್ ಉಡುಪುಗಳು ದೊರೆಯುತ್ತವೆ. ಚಳಿಗಾಲ ಬಂದರೂ, ಮಳೆಗಾಲ, ಬೇಸಿಗೆಯಿದ್ದರೂ ಒಂದೇ ದರ. ಮೂಲ ಉತ್ಪನ್ನ ಉಲನ್ ದರ ಹೆಚ್ಚಾದರೆ ಮಾತ್ರ ದರದಲ್ಲಿ ಬದಲಾವಣೆ ಮಾಡುವುದಾಗಿ ದಾವಣಗೆರೆ ವ್ಯಾಪಾರಿ ಹೇಳುವನು.
ಮೈ ಕೊರೆಯುವ ಚಳಿಯಿಂದ ಪಾರಾಗಲು ಕೆಲವರು ಸಿಕ್ಕಾಪಟ್ಟೆ ಕಾಫಿ, ಚಹಾ ಕುಡಿದು ಸಿಗರೇಟ್, ಬೀಡಿ ಸೇದಿ ಅಥವಾ ವಿಸ್ಕಿ, ರಮ್ ಸೇವಿಸಿ ಆರೋಗ್ಯ ಹಾಳು ಮಾಡಿಕೊಳ್ಳುವರು. ಅದೇ ಖರ್ಚಿನ ಅರ್ಧದಲ್ಲಿ ಒಂದು ಸ್ವೆಟರ್, ಮಪ್ಲರ್ ಕೊಂಡರೆ ಕನಿಷ್ಠ ಐದಾರು ಚಳಿಗಾಲವನ್ನು ಬೆಚ್ಚಗಿನ ಸುಖದೊಂದಿಗೆ ಕಳೆಯಬಹುದು.
ಟಿಬೆಟಿಯನ್ನರ ಆರ್ಥಿಕ ಸ್ಥಿತಿಯನ್ನೂ ಬೆಚ್ಚಗಿಡಬಹುದು ಅಲ್ಲವೇ?


- ಗಣೇಶ ವಿ.ರಾಯ್ಕರ್, ಹಾವೇರಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.