ವಾಹನ

ನೇ..ಸರಗಿ ನೋಡು

ಬೈಲಹೊಂಗಲದ ನೇಸರಗಿಯಲ್ಲಿರುವ ಜೋಡುಗುಡಿಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಕೆಲಕಾಲ ರಾಜ್ಯಭಾರ ಮಾಡಿದ್ದಳಂತೆ...

ನೇ..ಸರಗಿ ನೋಡು
Published On :

ಬೈಲಹೊಂಗಲದ ನೇಸರಗಿಯಲ್ಲಿರುವ ಜೋಡುಗುಡಿಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಕೆಲಕಾಲ ರಾಜ್ಯಭಾರ ಮಾಡಿದ್ದಳಂತೆ...

ಪ್ರಾಚೀನ ದೇಗುಲಗಳು ನಮ್ಮ ಸಂಸ್ಕೃತಿಯ ಪ್ರತೀಕ. ಇವುಗಳು ನಿಂತಲ್ಲೇ ಇತಿಹಾಸ ಹೇಳುತ್ತವೆ. ಆದರೆ ಇವುಗಳ ದುಃಸ್ಥಿತಿ ಮಾನವಕೋಟಿಗದೆಂಥ ನಷ್ಟ ಎಂಬ ಅರಿವಿಲ್ಲದಂತೆ ಪ್ರಾಚ್ಯ ವಸ್ತು ಇಲಾಖೆ ಕಣ್ಣು ಮುಚ್ಚಿ ಕುಳಿತಿದೆ ಎನಿಸುವುದು ಬೈಲಹೊಂಗಲ ತಾಲೂಕಿನ ನೇಸರಗಿಯಲ್ಲಿರುವ ಐತಿಹಾಸಿಕ ಜೋಡುಗುಡಿ (ಈಶ್ವರ)ಗಳನ್ನು ನೋಡಿದಾಗ.
ನೇಸರಗಿಯು ದೇಶನೂರ ರಸ್ತೆಯಲ್ಲಿರುವ ಹಳೇ ಗ್ರಾಪಂ ಬಳಿ ಹಳೇ ಕಾಲದ ಜೋಡುಗುಡಿಗಳಿದ್ದು, 12ನೇ ಶತಮಾನದ ರಟ್ಟರ ಕಾಲದ ಕಾತೃವೀರನ ಕಾಲದಲ್ಲಿ ಕಟ್ಟಿದ್ದಾಗಿದೆ. ಈ ದೇಗುಲ ಮತ್ತು ಸಮೀಪದ ಮತ್ತೊಂದು ಗುಡಿ ಕಿತ್ತೂರು ಸಂಸ್ಥಾನಕ್ಕೆ ಸೇರಿದ್ದು. ದೇಗುಲಕ್ಕೆ ಎರಡು ಗುಡಿಗಳು ಒಂದೇ ಆಗಿರುವುದರಿಂದ ಜೋಡು ಗುಡಿ ಎಂದೇ ಕರೆಯಲಾಗುತ್ತದೆ. ಈ ದೇಗುಲವು ಕಿತ್ತೂರ ಚೆನ್ನಮ್ಮನ ಕಾಲದಲ್ಲಿ ವೈರಿಗಳ ಪ್ರಾಬಲ್ಯ ಹೆಚ್ಚಾದಾಗ ಕಿತ್ತೂರು ಸಂಸ್ಥಾನದವರು ಈ ದೇಗುಲದಲ್ಲಿ ರಾಜ್ಯಭಾರ ನಡೆಸುತ್ತಿದ್ದರೆಂದು ಸ್ಥಳೀಯರು ಹೇಳುತ್ತಾರೆ. ಈ ನಿಟ್ಟಿನಲ್ಲಿ ಇದರ ಬಗ್ಗೆ ಸಂಶೋಧನೆಗಳು ನಡೆಯುವುದು ಅವಶ್ಯವಾಗಿದೆ.

ಆಹಾ, ನೇಸರ!
ಇದಲ್ಲದೆ ಕಿತ್ತೂರ ಚೆನ್ನಮ್ಮ ಈ ದೇಗುಲದ ಹತ್ತಿರ ಒಂದು ದಿನ ನಸುಕಿನ ವೇಳೆ ಬಂದಿದ್ದಾಗ ಸೂರ್ಯನನ್ನು ಕಂಡು 'ಆಹಾ! ನೇಸರನೇ ಎಷ್ಟೊಂದು ಚೆಂದ ನೀನು' ಎಂದು ಉದ್ಗರಿಸಿದ ಪರಿಣಾಮವಾಗಿ ನೇಸರಗಿ ಗ್ರಾಮಕ್ಕೆ ನೇಸರ ಎಂದು ಕರೆಯಲಾಯಿತು ಎಂಬ ಪ್ರತೀತಿ ಇದೆ. ತದ ನಂತರದಲ್ಲಿ ನೇಸರಗಿ ಎಂದು ಬದಲಾಯಿತೆಂದು ಹಳೇ ಕಥೆಗಳಿಂದ ತಿಳಿದು ಬರುತ್ತದೆ.
ದೇಗುಲದ ಒಳಗಡೆ ಸೂಕ್ಷ್ಮ ಕೆತ್ತನೆಯ ಕುಸುರಿ ಕಲೆಯಿಂದ ಚಿತ್ರಗಳನ್ನು ಕೊರೆಯಲಾಗಿದೆ. ಒಳಗಡೆ ಇರುವ ಬಸವಣ್ಣ ಮೂರ್ತಿಗಳು ಭಿನ್ನಗೊಂಡಿದ್ದು ಅನಾದರಕ್ಕೆ ಸಾಕ್ಷಿಯಾಗಿವೆ. ಆದರೂ ಇಲ್ಲಿ ಇಂದಿಗೂ ನಿತ್ಯ ಪೂಜೆ ನಡೆಯುತ್ತದೆ. ಗುಡಿಯ ಮೇಲುಗಡೆ ರಟ್ಟರ ಕಾಲದ ಲಾಂಛನ. ದಿನಗಳೆದಂತೆ ದೇಗುಲ ಅವಸಾನದತ್ತ ಸಾಗಿದೆ. ಇಲ್ಲಿಯವರೆಗೆ ಪ್ರಾಚ್ಯ ವಸ್ತು ಇಲಾಖೆ ಜೀರ್ಣೋದ್ಧಾರ ಮಾಡಲು ಪ್ರಯತ್ನಿಸಿಲ್ಲ.

ಶಾಸನ ನಾಪತ್ತೆ!
ಅಲ್ಲದೆ 19-1-2007ರಂದು ಜಿಲ್ಲಾಡಳಿತ ಸಂಶೋಧನೆ ನೆಪದಲ್ಲಿ ಹಳೇ ಶಿಲಾಶಾಸನವನ್ನು ತೆಗೆದುಕೊಂಡು ಹೋಗಿದ್ದು, ಆ ಶಾಸನ ಈಗ ಎಲ್ಲಿದೆ ಎಂಬುದು ನಿಗೂಢವಾಗಿದೆ. ಈ ಶಾಸನವನ್ನು ಕಿತ್ತ ಪರಿಣಾಮ ಅಲ್ಲಿಯ ಕಲ್ಲುಗಳು ಸಡಿಲಗೊಂಡು ಉಳಿದ ಕಲ್ಲುಗಳೂ ಬಿದ್ದು ಹೋಗಿವೆ. ಇತ್ತೀಚೆಗೆ ಬಿದ್ದ ಮಳೆಯಿಂದ ದೇಗುಲದ ಎಡ ಭಾಗದಲ್ಲಿರುವ ಕಲ್ಲುಗಳು ಬಿದ್ದು ಹಾನಿಯಾಗಿದೆ. ಇದೇ ರೀತಿ ಬಿದ್ದಿರುವ ಕಲ್ಲುಗಳನ್ನು ಬೇಗ ದುರಸ್ತಿ ಮಾಡದೆ ಹೋದರೆ ಈ ಪ್ರಾಚೀನ ದೇಗುಲ ಸಂಪೂರ್ಣ ಬಿದ್ದು ಹೋಗುವ ಸಂಭವವಿದೆ.
ಕೂಡಲೇ ಕಿತ್ತೂರ ಸಂಸ್ಥಾನಕ್ಕೆ ಸೇರಿದೆ ಎನ್ನಲಾಗುವ ಈ ದೇಗುಲದ ಬಿದ್ದಿರುವ ಕಲ್ಲುಗಳನ್ನು ಸರಿಪಡಿಸಿ, ಜೀರ್ಣೋದ್ಧಾರ ಕಾರ್ಯ ಮುಗಿಸಲು ಗ್ರಾಮಸ್ಥರು ಆಗ್ರಹಿಸಿದ್ದಾರೆ.

-ಮಹಾಂತೇಶ ರಾಜಗೋಳಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.