ವಾಹನ

ಸತ್ಯ ದೈವದ ನಿತ್ಯ ಕೋಲ

ಸತ್ಯ ದೈವದ ನಿತ್ಯ ಕೋಲ
Published On :

ಕಾಸರಗೋಡಿನಿಂದ ಆರಂಭಿಸಿ ಕರ್ನಾಟಕದ ಕರಾವಳಿಯ ಎಲ್ಲೆಡೆಯೂ ದೇವಾಲಯಗಳ ಸಂಖ್ಯೆಗಿಂತ ಹೆಚ್ಚು ಭೂತದೈವಗಳ ಗುಡಿಗಳಿವೆ. ಇವುಗಳು ಕೈಲಾಸದಿಂದ ಬಂದ ಶಿವಗಣಗಳೆಂದು ಪಾಡ್ದನಗಳು ಹೇಳುತ್ತವೆ. ಮರದ ಕೆಳಗೆ ಹಾಕಿದ ಕಲ್ಲು ಕೂಡ ಅಗೋಚರ ಶಕ್ತಿಯ ನೆಲೆಯಾಗಿ ನಂಬಿದವರಿಗೆ ಇಂಬು ಕೊಡುತ್ತದೆ. ವರ್ಷಕ್ಕೊಂದು ಬಾರಿ ಈ ದೈವಗಳಿಗೆ ಅದ್ಧೂರಿಯ ಕೋಲಗಳು ನಡೆದು, ಭಕ್ತರನ್ನು ಹರಸುವ ಸಂಪ್ರದಾಯ ಎಲ್ಲೆಡೆ.
ಆದರೆ ಇಲ್ಲೊಂದು ಡಿಫರೆಂಟ್ ದೈವದ ಆವಾಸಸ್ಥಾನವಿದೆ. ಇಲ್ಲಿ ನೆಲೆಯಾಗಿರುವವಳು ತುಳುನಾಡಿನ ಗೊಮ್ಮಟೇಶ್ವರನ ಶಿಲ್ಪಕೃತಿಗಳನ್ನು ರೂಪಿಸಿದ ಕಲ್ಕುಡನ ತಂಗಿ ಕಲ್ಲುರ್ಟಿ ದೈವ. ಸತ್ಯದೇವತೆಯೆಂದೇ ಅವಳನ್ನು ಕರೆಯಲಾಗುತ್ತಿದೆ. ಇಲ್ಲಿ ವರ್ಷದ ಮುನ್ನೂರು ದಿನಗಳಲ್ಲಿ ಕೋಲ ನಡೆಯುತ್ತದೆ. ಇದೆಲ್ಲವೂ ಭಕ್ತರ ಇಷ್ಟಾರ್ಥ ಸಿದ್ಧಿಯಾದುದಕ್ಕೆ ಹರಕೆ ರೂಪದಲ್ಲಿ ಅವರು ಸಲ್ಲಿಸುವ ಸೇವೆ. ಮುಖ್ಯವಾಗಿ ಮಕ್ಕಳಾಗದವರಿಗೆ ಸಂತಾನ ಭಾಗ್ಯ, ಕಳವಾದ ವಸ್ತುವಿನ ಶೋಧನೆ, ಕೋರ್ಟ್ ದಾವೆಯಲ್ಲಿ ನ್ಯಾಯ ಸಂದದ್ದು, ಕೌಟುಂಬಿಕ ವಿವಾದ ಪರಿಹಾರ, ಮದುವೆಯ ಭಾಗ್ಯ ಇಂಥ ಇಷ್ಟಾರ್ಥಗಳ ಸಿದ್ಧಿಯಾದ ಬಗೆಗೆ ಕೋಲ ಸೇವೆ ನಡೆಯುತ್ತದೆ. ದಿನದಲ್ಲಿ ಸರಾಸರಿ ಎರಡು ಕೋಲ ಮಾತ್ರ ಮಾಡುವುದೆಂಬ ನಿಯಮವಿರಿಸಿಕೊಂಡಿದ್ದರೂ ಅಗತ್ಯ ಸಂದರ್ಭಗಳಲ್ಲಿ ಮೂರು ಕೋಲಗಳೂ ನಡೆಯುತ್ತವೆ. ಕೋಲ ನಡೆಸಲು ತಿಂಗಳ ಮೊದಲೇ ಕಾದಿರಿಸಬೇಕು. ಮೂವತ್ತು ವರ್ಷಗಳಲ್ಲಿ ನಡೆದ ಕೋಲಗಳ ಸಂಖ್ಯೆ ಸುಮಾರು ಹತ್ತು ಸಾವಿರ!
ಕೋಲದ ಹರಕೆ ಹೊತ್ತರೆ ಭಕ್ತರ ಬೇಡಿಕೆ ನೆರವೇರಿಸುವ ಕಲ್ಲುರ್ಟಿ ತಾಯಿಯ ಈ ನೆಲೆಯಿರುವುದು ಕಾರ್ಕಳದಿಂದ ಬೆಳ್ತಂಗಡಿಗೆ ಬರುವ ಹಾದಿಯಲ್ಲಿರುವ ಅಳದಂಗಡಿಯಲ್ಲಿ. ಸತ್ಯದೇವತೆಯ ಗುಡಿ ಪಕ್ಕದಲ್ಲೇ 800 ವರ್ಷಗಳ ಹಿಂದಿನ ಇತಿಹಾಸ ಪ್ರಸಿದ್ಧ ಸೋಮನಾಥೇಶ್ವರಿಯ ದೇವಾಲಯವಿದೆ. ಇಲ್ಲಿಗೆ ಸನಿಹದ ಕಟ್ಟೂರಿನಲ್ಲಿ ಹಿಂದೆ ಕಲ್ಲುರ್ಟಿ ದೈವ ಆರಂಭದಲ್ಲೇ ನೆಲೆ ನಿಂತ ಮೂಲ ಗುಡಿಯಿತ್ತು. ಅಲ್ಲಿಯೂ ಇಷ್ಟಾರ್ಥ ಸಿದ್ಧಿಗಾಗಿ ವರ್ಷದಲ್ಲಿ ಐದೋ ಆರೋ ಕೋಲ ನಡೆಯುತ್ತಿದ್ದವು. ದೈವದ ಕೋರಿಕೆಗೆ ಸ್ಪಂದಿಸಿ ದೇವಾಲಯದ ಬಲ ಪಕ್ಕದಲ್ಲಿ 1987ರಲ್ಲಿ ನೂತನ ಗುಡಿ ನಿರ್ಮಿಸಿದವರು ರಾಜವಂಶದ ಶಿವಪ್ರಸಾದ ಅಜಿಲರು.
ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಹಾಲಿ ಸಚಿವ ಅಭಯಚಂದ್ರ, ಸುಷ್ಮಾ ಸ್ವರಾಜ್, ಬಹುತೇಕ ಶಾಸಕರು ಇಲ್ಲಿಗೆ ಬಂದಿದ್ದಾರೆ. ಸಿನಿಮಾ ತಾರೆಗಳು, ಕ್ರೀಡಾಪಟುಗಳೂ ಈ ಸಾಲಿಗೆ ಸೇರಿದ್ದಾರೆ. ಸೋಮವಾರ ಇಲ್ಲಿ ಕೋಲಗಳಾಗುವುದಿಲ್ಲ. ಆಷಾಢದಲ್ಲಿ ನಿಷೇಧ. ಉಳಿದಂತೆ ವರ್ಷದ ಮುನ್ನೂರು ದಿನಗಳಲ್ಲೂ ರಾತ್ರೆ ಏಳರಿಂದ ಹತ್ತು ಗಂಟೆ ತನಕ ಹರಕೆ ಕೋಲ ನಡೆಯುವುದು ವಾಡಿಕೆ. ಒಂದು ಕೋಲವಾಗಬೇಕಿದ್ದರೆ ದೈವದ ಪಾತ್ರಿ ವಾಲಗದವರು ಎಲ್ಲ ಸೇರಿ ಏಳೆಂಟು ಮಂದಿ ಬೇಕು. ಅವರ ವೆಚ್ಚಗಳಿಗೆ ಸಾಕಾಗುವಷ್ಟೇ ಲೆಕ್ಕ ಹಾಕಿ ಈ ಸೇವೆಗೆ ಸ್ವೀಕರಿಸುವ ಹಣ ಕೇವಲ 2500 ರುಪಾಯಿ ಎನ್ನುತ್ತಾರೆ ಮುಖ್ಯಸ್ಥರಾದ ಶಿವಪ್ರಸಾದ ಅಜಿಲರು.
ಕೋಲದಲ್ಲಿ ಸತ್ಯದೇವತೆಯ ಗುಡಿಗೆ ಯಾವುದೇ ಲಾಭ ಉಳಿಯದಿದ್ದರೂ ಈ ಮಾರ್ಗವಾಗಿ ಸಾಗುವ ಯಾತ್ರಿಗಳು ಸಲ್ಲಿಸುವ ಕಾಣಿಕೆಯ ಮೊತ್ತ ಇಲ್ಲಿ ಸದ್ಬಳಕೆಯಾಗುತ್ತದೆ. ಕೋರಿಕೆ ನೆರವೇರಿಸಿಕೊಂಡವರು ಸ್ವಯಂಪ್ರೇರಿತರಾಗಿ ಕೊಟ್ಟರೆ ಮಾತ್ರ ಸ್ವೀಕಾರ. ಪ್ರತಿ ಸಂಕ್ರಮಣದಂದು ನಡೆಯುವ ಸಾರ್ವಜನಿಕ ಅನ್ನದಾನದಲ್ಲಿ ಎರಡೂವರೆ ಸಾವಿರಕ್ಕೂ ಅಧಿಕ ಮಂದಿ ಪ್ರಸಾದ ಸ್ವೀಕರಿಸುತ್ತಾರೆ. ಸನಿಹದ ಶಾಲೆಗಳ 5 ಸಾವಿರ ಮಕ್ಕಳಿಗೆ ಬರೆಯುವ ಪುಸ್ತಕ ನೀಡಲಾಗುತ್ತದೆ. ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹಧನ. ಕ್ಷೇತ್ರದಲ್ಲಿ ಅನ್ಯ ಮತೀಯರೂ ಸೇವೆ ಸಲ್ಲಿಸುತ್ತಾರೆ. ಗುಡಿಯ ಸುತ್ತಣ ಗೋಪುರ ಇತ್ಯಾದಿಗಳನ್ನು ಕೋರಿಕೆ ಸಿದ್ಧಿಸಿಕೊಂಡವರೇ ನಿರ್ಮಿಸಿಕೊಟ್ಟಿದ್ದಾರೆ.
ಈ ಬಗ್ಗೆ ಅಂತರ್ಜಾಲದಲ್ಲಿರುವ ಅಳದಂಗಡಿ ಸತ್ಯದೇವತೆ ಡಾಟ್ಕಾಂ ಎಂಬ ವೆಬ್‌ಸೈಟ್ ಅಥವಾ 08256-272566 ದೂರವಾಣಿಗೆ ಕರೆ ಮಾಡಿ ವಿವರ ಪಡೆಯಬಹುದು.

- ಪ.ರಾಮಕೃಷ್ಣ ಶಾಸ್ತ್ರಿ, ತೆಂಕಕಾರಂದೂರು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.