ವಾಹನ

ಮನಮೋಹಕ ಮಡೆನೂರು

ಮನಮೋಹಕ ಮಡೆನೂರು
Published On :

ಶರಾವತಿ ನದಿಗೆ ಅಡ್ಡಲಾಗಿ ಹಾಕಿರುವ ಲಿಂಗನಮಕ್ಕಿ ಜಲಾಶಯ ಬಹುತೇಕರಿಗೆ ಗೊತ್ತು. ಆದರೆ ಲಿಂಗನಮಕ್ಕಿ ಜಲಾಶಯಕ್ಕೆ ನೀರು ತುಂಬುತ್ತಿದ್ದಂತೆ ಹಿನ್ನೀರಿಗೆ ಆಹುತಿಯಾದ ಮಡೆನೂರು ಡ್ಯಾಂನ್ನು ಹೆಚ್ಚಿನವರು ನೋಡಿರಲು ಸಾಧ್ಯವಿಲ್ಲ.
ಬ್ರಿಟಿಷರ ಕಾಲದಲ್ಲಿ ಅಂದರೆ 1944ರ ಆಸುಪಾಸಿನಲ್ಲಿ ನಿರ್ಮಾಣಗೊಂಡ ಮಡೇನೂರು ಡ್ಯಾಂ ಹಿನ್ನೀರಲ್ಲಿ ಮುಳುಗಿ ಇದೀಗ 50ನೇ ವರ್ಷ. ಅಂದರೆ ಲಿಂಗನಮಕ್ಕಿ ಜಲಾಶಯದಲ್ಲಿ ನೀರು ನಿಂತದ್ದು 1964ರಲ್ಲಿ. ದೊಡ್ಡ ಮೀನು ಚಿಕ್ಕ ಮೀನನ್ನು ನುಂಗಿತು ಎನ್ನುವಂತೆ ಅಲ್ಲಿಂದ ಮಡೆನೂರು ಲಿಂಗನಮಕ್ಕಿ ಜಲಾಶಯದ ಹಿನ್ನೀರಲ್ಲಿ ಮುಳುಗಿತು. ಇನ್ನೇನು ಹಿನ್ನೀರು ಇಳಿಯುತ್ತಿದ್ದಂತೆ ನಿಧಾನವಾಗಿ ಕಾಣಸಿಗುವ ಮಡೆನೂರು ಮಳೆ ಬಂದು ಶರಾವತಿ ಹಿನ್ನೀರು ಏರುತ್ತಿದ್ದಂತೆ ಮತ್ತೆ ಮರೆಯಾಗುತ್ತದೆ.
ಈ ಬಾರಿ ಜೂನ್ ಕಳೆದರೂ ಮಳೆಯ ಸುಳಿವು ಇರದ ಕಾರಣ ಲಿಂಗನಮಕ್ಕಿ ಜಲಾಶಯದಲ್ಲಿ ನೀರು ತಳ ಸೇರಿದೆ. ಹಾಗಾಗಿ ಮಡೆನೂರು ಡ್ಯಾಂ ಪೂರ್ಣ ಪ್ರಮಾಣದಲ್ಲಿ ತನ್ನನ್ನು ತೆರೆದುಕೊಳ್ಳುವುದರ ಮೂಲಕ ಗಮನ ಸೆಳೆದಿದೆ. ಹೆಚ್ಚೆಂದರೆ ಡ್ಯಾಂ ಮೇಲ್ಭಾಗದಲ್ಲಿ ಓಡಾಡಿಕೊಂಡು ಬರಬಹುದಿತ್ತು. ಆದರೆ ಈ ಬಾರಿ ಅಣೆಕಟ್ಟಿನ ಕೆಳ ಹಂತಕ್ಕೆ ಇಳಿಯುವ ಅವಕಾಶ ದೊರಕಿದೆ.
5 ದಶಕ ಕಾಲ ನೀರಿನಲ್ಲಿ ಮುಳುಗಿದ್ದರೂ ಡ್ಯಾಂನ ಗಟ್ಟಿತನ ಹಾಗೇ ಇದೆ. ಟ್ಯಾಂಕ್ ಆಕಾರದಲ್ಲಿ 11 ಬುರುಜುಗಳು, ಒಂದು ಟ್ಯಾಂಕಿಗೆ 14 ಕಂಬಗಳು, ಮಾಸದ ಕಟ್ಟಡ ವಿನ್ಯಾಸ ಹೀಗೆ ಹಲವು ರೀತಿಯಲ್ಲಿ ಜಲಾಶಯ ಗಮನ ಸೆಳೆಯುತ್ತದೆ.
ಎಲ್ಲಿದೆ?
ಸಾಗರ ತಾಲೂಕಿನ ಆವಿನಳ್ಳಿಯಿಂದ ಸುಮಾರು 10 ಕಿ.ಮೀ ಮತ್ತು ಹೊಸನಗರ ತಾಲೂಕಿನ ನಿಟ್ಟೂರು- ಸಿಗಂದೂರು ಮಾರ್ಗದ ತುಂಬ್ರಿಯಿಂದ 11 ಕಿ.ಮೀ ದೂರದಲ್ಲಿ ಡ್ಯಾಂ ಕಂಡು ಬರುತ್ತದೆ.
ಸಂರಕ್ಷಣೆ ಆಗಬೇಕಿದೆ
ಈಗಾಗಲೇ ಡ್ಯಾಂನ ಕಲ್ಲುಗಳನ್ನು ಲೂಟಿಕೋರರು ದೋಚುತ್ತಿದ್ದು ಜಲಾಶಯದ ವಿರೂಪಕ್ಕೆ ಕಾರಣವಾಗಿದೆ.  ಬ್ರಿಟಿಷರ ಕಾಲದ ಡ್ಯಾಂ ಕಟ್ಟಡವನ್ನು ಸಂರಕ್ಷಣೆ ಮಾಡಿ ಯುವಪೀಳಿಗೆಗೆ ಪರಿಚಯಿಸುವ ಕೆಲಸವಾಗಬೇಕಿದೆ. ಕಟ್ಟಡ ವಿನ್ಯಾಸದ ಸದುಪಯೋಗವನ್ನು ಎಂಜಿನಿಯರಿಂಗ್ ಕಾಲೇಜುಗಳು ಬಳಸಿಕೊಳ್ಳಬಹುದಾಗಿದೆ.
ಸಂಪರ್ಕಕ್ಕೆ ಬಳಸಬಹುದು
ಹೊಸನಗರ-ಸಾಗರ ಸಂಪರ್ಕದ ಹೊಳೆಬಾಗಿಲು ಮತ್ತು ಹಸಿರುಮಕ್ಕಿ ಸೇತುವೆಗೆ ಅನೇಕ ವರ್ಷಗಳಿಂದ ಬೇಡಿಕೆ ಕೇಳಿಬರುತ್ತಿದೆ. ಮಾತ್ರವಲ್ಲ, ಹೋರಾಟ ಕೂಡ ನಿರಂತರ ಸಾಗಿದೆ. ಆದರೆ ವರ್ಷದಲ್ಲಿ 8 ತಿಂಗಳು ತೆರೆದುಕೊಳ್ಳುವ ಇದೇ ಡ್ಯಾಂನ್ನು ಬಳಸಿಕೊಂಡು ಅಲ್ಪ ವೆಚ್ಚ ಮಾಡಿದರೂ ಸಂಪರ್ಕ ಸಾಧಿಸಲು ಆಗುತ್ತದೆ ಎನ್ನುತ್ತಾರೆ ಸ್ಥಳೀಯರಾದ ಚಕ್ರೆ ನಾರಾಯಣಮೂರ್ತಿ.


ಚಿತ್ರ, ಲೇಖನ: ರವಿ ಬಿದನೂರು
 bidanooru@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.