ಗೆಳತಿ ಗುಡ್ಡ

ನಾಗಮಂಗಲದ ಸೂಳೆಕೆರೆ ಹಾಗೂ ಅದಕ್ಕೆ ತಾಗಿಕೊಂಡಿರುವ ಗೆಳತಿ ಗುಡ್ಡಗಳ ಹಿಂದೆ ಅದ್ಭುತ ಪ್ರೇಮ ಕಥೆ ಇದೆ.
ಪ್ರಿಯತಮೆಗಾಗಿ ತಾಜ್‌ಮಹಲ್ ಕಟ್ಟಿಸಿದ್ದು ಬೇರೆ ಮಾತು. ಆದರೆ ಗೆಳತಿಗಾಗಿ ಒಂದು ಗುಡ್ಡ, ಕೆರೆ ಕಟ್ಟಿಸಿದ ಉದಾಹರಣೆಯೊಂದು ಇಲ್ಲಿದೆ.
ಒಂದೆಡೆ ಬೆಟ್ಟಗಳ ಸಾಲು. ಮತ್ತೊಂದೆಡೆ ಸೂಳೆಕೆರೆಯ ನೀರಿನ ಸೊಬಗು. ಪ್ರಕೃತಿ ಸೌಂದರ್ಯದ ನಡುವೆ ಪುರಾತನ ಕಾಲದ ಮಂಟಪ. ಯುವ ಸಾಹಿತಿಗಳು 'ಗೆಳತಿ ಗುಡ್ಡ' ಎಂದು ಕರೆದ ಈ ತಾಣ ಇರುವುದು
ಮಂಡ್ಯ ಜಿಲ್ಲೆ ನಾಗಮಂಗಲದ ಬಳಿ. ದಂಡನಾಯಕನೊಬ್ಬ ತನಗೆ ಅರ್ಪಿಸಿಕೊಂಡ ವೇಶ್ಯೆಯ ಹೆಸರು ಚಿರಸ್ಥಾಯಿಯಾಗಲೆಂದು ಕಟ್ಟಿಸಿದ ಕೆರೆ, ಸ್ಮಾರಕಗಳು ಇವು!
14 ನೇ ಶತಮಾನದಲ್ಲಿ (ಕ್ರಿ.ಶ.1446 ರಿಂದ 1465) ನಾಗಮಂಗಲವನ್ನು ಆಳುತ್ತಿದ್ದ ತಿಮ್ಮಣ್ಣ ದಂಡನಾಯಕ, ಪಟ್ಟಣದಿಂದ ಕೊಂಚ ದೂರದಲ್ಲಿರುವ ಬೆಟ್ಟದ ಮೇಲೆ ವಾಸ ಮಾಡುತ್ತಿದ್ದ ವೇಶ್ಯೆಯೊಂದಿಗೆ ಸಂಬಂಧ ಇರಿಸಿಕೊಂಡಿದ್ದನಂತೆ. ಆಕೆಯ ಹೆಸರಿನಲ್ಲಿ ದೊಡ್ಡದಾದ ಕೆರೆ ಕಟ್ಟಿಸಿ 'ಸೂಳೆಕೆರೆ' ಎಂದು ನಾಮಕರಣ ಮಾಡಿದ. ಜನೋಪಯೋಗಿ ಕೆರೆ ಇಂದಿಗೂ ನೀರಿನ ದಾಹ ತೀರಿಸುತ್ತಿದೆ. ಈ ಕೆರೆಯ ಸಮೀಪದಲ್ಲೇ ಸೂಳೆಮಂಟಪವೂ ಇದೆ. ಈಗ ಅದು ಪ್ರಕೃತಿ ತಾಣ. ಅಲ್ಲದೇ ಕವಿ, ಸಾಹಿತಿಗಳ ಸಂಗಮ ಸ್ಥಳವಾಗಿದೆ. ಯುವ ಪ್ರೇಮಿಗಳ ಏಕಾಂತತೆಗೂ ಯಾವುದೇ ಭಂಗ ಬಾರದೇ ಇರುವುದರಿಂದ ಗೆಳತಿ ಗುಡ್ಡ ಹಳೇ ಮೈಸೂರು ಭಾಗದಲ್ಲೇ ತುಂಬಾ ಫೇಮಸ್.
ಪಟ್ಟಣದ ದಕ್ಷಿಣ ಭಾಗದಲ್ಲಿರುವ ಗೆಳತಿ ಗುಡ್ಡದ ಬಂಡೆಯ ಮೇಲೆ ಇಪ್ಪತ್ತು ಅಡಿ ಉದ್ದ ಮತ್ತು ಅಷ್ಟೇ ಅಗಲದ ಮಂಟಪವಿದೆ. ಅಲ್ಲೇ ಲಭ್ಯವಿರುವ ಕಲ್ಲುಗಳಿಂದ ಜಗುಲಿ ನಿರ್ಮಿಸಲಾಗಿದೆ. 16 ಕಂಬಗಳುಳ್ಳ ಮಂಟಪದ ಮೇಲೆ ಕಲ್ಲು ಚಪ್ಪಡಿಗಳನ್ನು ಹಾಸಲಾಗಿದೆ. ಈ ಗುಡ್ಡದ ಮೇಲೆ ನಿಂತು ಸುತ್ತಲೂ ಕಣ್ಣು ಹಾಯಿಸಿದರೆ ಪ್ರಕೃತಿ ಸೊಬಗು ಕಣ್ಣಿಗೆ ಹಬ್ಬ. ಸುತ್ತಲೂ ಬೆಟ್ಟಗುಡ್ಡಗಳಿಂದ ಆವೃತವಾಗಿದೆ. ಸುಂದರವಾದ ಬೆಳದಿಂಗಳಿನಲ್ಲಿ ಇಲ್ಲೇ ಬೆಳದಿಂಗಳ ಊಟ ಮಾಡಿ, ರಾತ್ರಿ ಪ್ರಕೃತಿ ಸೌಂದರ್ಯ ಸವಿಯುವ ರಸಿಕರೂ ಇದ್ದಾರೆ.
ರಾಜ್ಯದಲ್ಲಿ ಹಲವು ಸೂಳೆಕೆರೆಗಳಿವೆ. ಅವುಗಳ ಹಿಂದೆಯೂ ಇಂತಹುದೇ ಪ್ರೇಮಕಥೆಗಳು ಅಡಗಿರಬಹುದಾ?
ಅದ್ಭುತ ಪ್ರಕೃತಿ ಸಿರಿ
ಗೆಳತಿ ಗುಡ್ಡದ ಪರಿಕಲ್ಪನೆ ತುಂಬಾ ಅದ್ಭುತವಾಗಿದೆ. ವಿಶಾಲವಾದ ಕೆರೆ, ಸದಾ ತುಂಬಿರುವ ನೀರು, ಸುಂದರ ಮಂಟಪ, ಈ ಗುಡ್ಡ, ಪ್ರಕೃತಿ ಸಿರಿ ಬೇರೆಲ್ಲೂ ಸಿಗುವುದಿಲ್ಲ. ಇದೊಂದು ಉತ್ತಮ ಪ್ರವಾಸಿ ತಾಣವಾಗಬೇಕು. ಈ ಸ್ಥಳ ಅರಣ್ಯ ಇಲಾಖೆಗೆ ಸೇರಿದೆ. ಗೆಳತಿ ಗುಡ್ಡವನ್ನು ಮತ್ತಷ್ಟು ಅಭಿವೃದ್ದಿಪಡಿಸಿದರೆ, ಇತಿಹಾಸ ಹಾಗೂ ಪುರಾತನ ಸ್ಥಳವನ್ನು ಸಂರಕ್ಷಣೆ ಮಾಡಿದಂತೆ ಆಗುತ್ತದೆ.
= ಎನ್.ಜೆ. ರಾಮಕೃಷ್ಣ, ಪ್ರಾಚೀನ ವಸ್ತು ಸಂಗ್ರಹಕಾರ, ನಾಗಮಂಗಲ
ಗೆಳತಿ ಗುಡ್ಡದಲ್ಲೇ ನಾಟಕ
ಗೆಳತಿ ಗುಡ್ಡದ ಪ್ರಕೃತಿ ಸೌಂದರ್ಯಕ್ಕೆ ಮನಸೋತ ರಂಗಭೂಮಿ ಕಲಾವಿದ, ನಿರ್ದೇಶಕ ಮಂಡ್ಯ ರಮೇಶ್ ತಮ್ಮದೇ ನಿರ್ದೇಶನದಲ್ಲಿ 2005ರಲ್ಲಿ ತಮ್ಮ ತಂಡದಿಂದ ಗೆಳತಿ ಗುಡ್ಡದ ಮೇಲಿನ ಸ್ವಾಭಾವಿಕ ವೇದಿಕೆಯಲ್ಲಿಯೇ 'ಯುಯುತ್ಸು' ನಾಟಕ ಪ್ರದರ್ಶಿಸಿದ್ದರು. ಆ ವರ್ಷ ಸತತ 10 ದಿನಗಳ ನಿರಂತರವಾಗಿ ಯುಯುತ್ಸು ನಾಟಕ ಪ್ರದರ್ಶನಗೊಂಡಿತು. ಇದು ರಂಗಭೂಮಿಯ ಇತಿಹಾಸದಲ್ಲಿ ಉಲ್ಲೇಕಾರ್ಹ ಪ್ರಯೋಗವಾಗಿ ದಾಖಲಾಯಿತು. ಹಾಡು, ನಾಟಕ, ಸಾಹಿತ್ಯ ರಚನೆ, ಸಾಹಿತ್ಯ ವಿಮರ್ಶೆಗಳು, ಕಾವ್ಯ ರಚನೆಗಳೂ ಈ ಮಂಟಪದಲ್ಲಿ ಆಗಿವೆ.
ಗೆಳತಿ ಗುಡ್ಡಕ್ಕೆ ದಾರಿ ಹೇಗೆ?
ಬೆಂಗಳೂರಿನಿಂದ ಮಂಡ್ಯ ಮೂಲಕ ಅಥವಾ ನೆಲಮಂಗಲ, ಕುಣಿಗಲ್, ಯಡಿಯೂರು, ಬೆಳ್ಳೂರು ಕ್ರಾಸ್ ಮೂಲಕವೂ ನಾಗಮಂಗಲಕ್ಕೆ ಬರಬಹುದು. ಮೈಸೂರಿನಿಂದ ಶ್ರೀರಂಗಪಟ್ಟಣ, ಪಾಂಡವಪುರ, ಜಕ್ಕನಹಳ್ಳಿ ಸರ್ಕಲ್, ಚೀಣ್ಯ, ನಾಗಮಂಗಲಕ್ಕೆ ಬರಬೇಕು. ನಾಗಮಂಗಲದಿಂದ ಆಟೋ ಅಥವಾ ಸ್ವಂತ ವಾಹನಗಳಲ್ಲಿ ತೆರಳಬಹುದು. ನಾಗಮಂಗಲದಿಂದ 2 ಕಿ. ಮಿ. ದಾರಿ ಅಷ್ಟೆ.
= ಕೆ.ಎನ್. ರವಿ
ಚಿತ್ರಗಳು: ಕರಡಹಳ್ಳಿ ಸೀತಾರಾಮು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


