ಕೊಬ್ಬರಿ ಕುಸುರಿ
ಕೆಲವು ವಸ್ತುಗಳು ಕೆಲವರ ಕೈಗೆ ಸೇರಿದರೆ ಅದು ಏನೇನೋ ಆಗಿ ಬಿಡುತ್ತೆ. ಉದಾಹರಣೆಗೆ ನಮ್ಮ ನಿಮ್ಮಂತೋರ ಕೈಗೆ ಒಣಗಿದ ಕೊಬ್ಬರಿ ...

ಕೆಲವು ವಸ್ತುಗಳು ಕೆಲವರ ಕೈಗೆ ಸೇರಿದರೆ ಅದು ಏನೇನೋ ಆಗಿ ಬಿಡುತ್ತೆ. ಉದಾಹರಣೆಗೆ ನಮ್ಮ ನಿಮ್ಮಂತೋರ ಕೈಗೆ ಒಣಗಿದ ಕೊಬ್ಬರಿ ಸಿಕ್ಕಿದ್ರೆ ಸಾಕು ಬಾಯಲ್ಲಿ ನೀರೂರಿಸಿಕೊಂಡು, ಅದಕ್ಕೊಂದಿಷ್ಟು ಬೆಲ್ಲವನ್ನೂ ಸೇರಿಸಿಕೊಂಡು ಕ್ಷಣಮಾತ್ರದಲ್ಲಿ ಗುಳುಂ ಮಾಡಿ ಬಿಟ್ಟಿರುತ್ತೇವೆ. ಆದ್ರೆ ಅದೇ ಕೊಬ್ಬರಿ ಗಾಯತ್ರಿ ಗೋಪಾಲಕೃಷ್ಣನ್ ಅವರ ಕೈ ಸೇರಿದ್ರೆ ಅದು ಪುನಃ ನಿಮ್ಮ ಎದುರಿಗೆ ಕಾಣುವುದು ಒಂದು ಸುಂದರ, ಆಕರ್ಷಕ, ಮುದ್ದಾದ ಬೊಂಬೆಯ ರೂಪ ತಾಳಿಯೇ.
ಹೌದು, ಬೆಂಗಳೂರಿನ ಮಲ್ಲೇಶ್ವರಂನಲ್ಲಿ ವಾಸವಾಗಿರುವ ಗಾಯತ್ರಿಯವರಿಗೆ ಬಾಲ್ಯದಿಂದಲೂ ಕೊಬ್ಬರಿಯೊಂದಿಗೆ ವಿಶೇಷ ನಂಟು. ಹೀಗಾಗಿಯೇ ಇದುವರೆಗೆ ಕೊಬ್ಬರಿಯಲ್ಲಿ ಅವರು ಸುಮಾರು 47,000 ಕಲಾಕೃತಿಗಳನ್ನು ಮಾಡಿದ್ದಾರೆ.
ಮದುವೆ, ವರಪೂಜೆಯಂತಹ ಶುಭ ಸಮಾರಂಭಗಳಿಗೆ ಕೊಬ್ಬರಿ, ಬೆಲ್ಲ ಇಡುವುದು ಹಿಂದಿನಿಂದಲೂ ನಡೆದುಬಂದ ಸಂಪ್ರದಾಯ. ಅಂತಹ ಕೊಬ್ಬರಿ ಗಿಟುಕಿನ ಮೇಲೆ ವಿವಿಧ ಬಗೆಯ ಚಿತ್ತಾರ ಬಿಡಿಸುವುದೂ ಮಾಮೂಲು. ಆದರೆ ಗಾಯತ್ರಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕೊಬ್ಬರಿಯಲ್ಲಿ ಕುಸುರಿ ಕೆತ್ತನೆ ಮಾಡಿ ಸೈ ಎನಿಸಿಕೊಂಡಿದ್ದಾರೆ.
ಏನೇನು ಕುಸುರಿ
ಕೊಬ್ಬರಿಯ ಗಿಟುಕು, ಹೋಳು ಮತ್ತು ವಿಗ್ರಹ ಎಂದು ಮೂರು ವಿಧವಾಗಿ ಇವರ ಕಲೆಯನ್ನು ವಿಭಾಗಿಸಬಹುದಾಗಿದೆ. ಗಿಟುಕಿನ ಮೇಲೆ ಭಗವದ್ಗೀತೆ, ಗಣೇಶ, ಸುಬ್ರಹ್ಮಣ್ಯ, ಲಕ್ಷೀ, ಸರಸ್ವತಿ, ವೆಂಕಟೇಶ್ವರ, ಜೀಸಸ್ ಸೇರಿದಂತೆ ನೂರಾರು ದೇವಾನುದೇವತೆಗಳ ಚಿತ್ರ ಮೂಡಿಬಂದಿದೆ. ಕೊಬ್ಬರಿಯ ಹೋಳಿನಲ್ಲಿ ಹಲವು ಬಗೆಯ ಕಾರ್ಟೂನುಗಳು, ಬೆಣ್ಣೆಕೃಷ್ಣ ಮೊದಲಾದವನ್ನು ತಯಾರಿಸಿದ್ದು, ಅದನ್ನು ನೋಡುವ ಮಕ್ಕಳಿಗೂ ಮುದವೆನಿಸದಿರದು.
ಏನಿದು ವಿಗ್ರಹ
ಕೊಬ್ಬರಿಯ ವಿಗ್ರಹ ಎಂದರೆ ಹಲವು ಕೊಬ್ಬರಿಗಳನ್ನು ಬಳಸಿ ಮಾಡುವ ಕಲಾಕೃತಿ. ಈ ರಿತಿಯ ಕಲಾಕೃತಿಯಲ್ಲಿ ಶ್ರೀನಿವಾಸ- ಪದ್ಮಾವತಿ, ರಾಧಾಕೃಷ್ಣ, ಲಕ್ಷ್ಮೀ ನರಸಿಂಹ, ಈಶ್ವರ- ಪಾರ್ವತಿ, ಶಾರದಾಂಬೆ- ಗಣೇಶ, ರಾಜರಾಜೇಶ್ವರಿ, ಗೌರಿ ವಿಗ್ರಹಗಳು ಪ್ರಮುಖ ಮತ್ತು ಆಕರ್ಷಣೀಯವಾದವು.
ಕಲೆ ಅರಳಿದ್ದು ಹೇಗೆ?
ಸಣ್ಣವಳಿದ್ದಾಗ ಹಲವು ಸಮಾರಂಭಗಳಲ್ಲಿ ಇಡುತ್ತಿದ್ದ ಕೊಬ್ಬರಿಯ ಚಿತ್ತಾರ ನೋಡಿ ಮನೆಯಲ್ಲಿಯೂ ಒಂದು ಕೊಬ್ಬರಿ ಮೇಲೆ ಅಸ್ಪಷ್ಟ ಚಿತ್ರ ಬಿಡಿಸಿದೆ. ಇದರಿಂದ ಸಂತುಷ್ಟರಾದ ತಂದೆ ಮರುದಿನ ನನ್ನೆದುರಿಗೆ ಹಲವು ಕೊಬ್ಬರಿ ಗಿಟುಕುಗಳನ್ನು ತಂದಿಟ್ಟು ನನ್ನ ಕಲೆಗೆ ಜೀವ ತುಂಬಿದರು ಎಂದು ತಮ್ಮಲ್ಲಿ ಕೊಬ್ಬರಿ ಕಲೆ ಅರಳಿದ್ದನ್ನು ಹೇಳುವ ಗಾಯತ್ರಿ, ಇಂದು ತಮ್ಮ 53 ನೇ ವಯಸ್ಸಿನಲ್ಲಿಯೂ ಈ ಕಲೆ ಉಳಿಸಿಕೊಳ್ಳಲು ಮನೆಯ ಸದಸ್ಯರೆಲ್ಲರ ಪ್ರೋತ್ಸಾಹವಿದೆ ಎನ್ನುತ್ತಾರೆ.
ಒಂದು ಇಡೀ ಕೊಬ್ಬರಿಯ ಮೇಲೆ ವಿವಿಧ ದೇವರ ಚಿತ್ರಗಳನ್ನು ಬರೆದು ಪೂರೈಸಲು ಸುಮಾರು 5 ಗಂಟೆ ಬೇಕಾಗಬಹುದು. ಅರ್ಧ ಹೋಳಿನಿಂದ ಮಾಡುವ ಕಲಾಕೃತಿಗೆ ಒಂದೆರಡು ಗಂಟೆ ಸಾಕು. ವಿಗ್ರಹಳ ತಯಾರಿಗೆ ಕೆಲ ದಿನ ಹಿಡಿಯುತ್ತದೆ ಎಂದು ತಮ್ಮ ಕಲೆಗೆ ತಗಲುವ ಸಮಯವನ್ನು ವಿವರಿಸುತ್ತಾರೆ.
ಇಂತಹ ಕುಸುರಿಗಾಗಿಯೇ ಆಕ್ಸಲ್ ಬ್ಲೇಡ್‌ನಿಂದ ತಯಾರಿಸಿರುವ ವಿಶೇಷ ನಮೂನೆಯ ಚೂರಿಯನ್ನು ಬಳಸುತ್ತಿದ್ದೇನೆ ಎನ್ನುವ ಗಾಯತ್ರಿ, ಅದನ್ನು ಕಾಲಕಾಲಕ್ಕೆ ಹದ ಮಾಡಿಕೊಡುವ ಮುಸ್ಲಿಂ ಯುವಕ ಹಾಗೂ ಬೇಕೆಂದಾಗ ಸುಸೂತ್ರವಾಗಿ ತಿಪಟೂರಿನ ಕೊಬ್ಬರಿ ಒದಗಿಸುವ ಅಂಗಡಿ ಮಾಲೀಕರಿಗೆ ಕೃತಜ್ಞತೆ ಸಲ್ಲಿಸುತ್ತಾರೆ.
- ಕೊಬ್ಬರಿಯೊಂದರ ಮೆಲೆ ಬರೆದ ಒಂದೇ ಓಂಕಾರ ಬೇರೆ ಬೇರೆ ಕೋನಗಳಲ್ಲಿ ನೋಡಿದಾಗ ಕನ್ನಡ, ತೆಲುಗು, ಸಂಸ್ಕೃತ, ಹಿಂದಿ, ತಮಿಳು ಹೀಗೆ ಪಂಚ ಭಾಷೆಗಳಲ್ಲಿಯೂ ಕಾಣುತ್ತದೆ.
- ವೆಂಕಟಾಚಲನ ವಿಗ್ರಹದಲ್ಲಿರುವ ದೇವರ ಪಾದವನ್ನು ಯಾವುದೇ ಮೂಲೆಯಿಂದ ನೋಡಿದರೂ ಅದು ನಮ್ಮ ಕಡೆಯೇ ತಿರುಗಿದಂತೆ ಭಾಸವಾಗುತ್ತದೆ.
- ಒಂದು ಭಾಗದಲ್ಲಿ ಗೀತೋಪದೇಶ ಸಾರುವ ಚಿತ್ತಾರವಿರುವ ಕೊಬ್ಬರಿಯ ಇನ್ನೊಂದು ಭಾಗದಲ್ಲಿ ಭಗವದ್ಗೀತೆ, ಗಾಯತ್ರೀ ಮಂತ್ರಗಳನ್ನು ಬರೆಯಲಾಗಿದೆ.
- ಇದುವರೆಗೆ 150ರಿಂದ 200 ವಿಗ್ರಹಗಳೂ ಸೇರಿದಂತೆ 40 ವರ್ಷದಲ್ಲಿ ಒಟ್ಟು ಸುಮಾರು 45,000 ಕೊಬ್ಬರಿಗಳಿಗೆ ಆಕರ್ಷಕ ರೂಪ ಕೊಟ್ಟಿದ್ದಾರೆ.
- ಕೊಬ್ಬರಿ ಕಲೆ ಮಾತ್ರವಲ್ಲದೆ ಬೀಸಣಿಗೆ, ಪಟ್ಟದಬೊಂಬೆ, ಥರ್ಮಾಕೋಲ್ ಬೊಂಬೆ, ಮದುವೆಗೆ ಬೇಕಾದ ಆಲಂಕಾರಿಕ ವಸ್ತುಗಳ ತಯಾರಿ.
sudheeja@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


