ವಾಹನ

ಮರುಳನ ಮಹಾಜಾತ್ರೆ

ಮರುಳನ ಮಹಾಜಾತ್ರೆ
Published On :

ಅದು ಕ್ರಿ.ಶ. 1560 ರ ಆಸುಪಾಸು. ತನ್ನಷ್ಟಕ್ಕೆ ತಾನು ಹಾಡುತ್ತಾ, ಉನ್ಮತ್ತ ಸ್ಥಿತಿಗೆ ತಲುಪಿ ಥೇಟ್ ಹುಚ್ಚನಂತೆ ಜೀವಿಸುವ ಮೂಲಕ ಜನರಿಂದ ಕಲ್ಲು, ಕಟ್ಟಿಗೆಗಳಿಂದ ಒದೆ ತಿಂದು, ಬೈಗುಳಗಳ ಸುರಿಮಳೆಗೆ ತುತ್ತಾಗಿ, ಕೊನೆಗೆ ನಿಂಬಿಯಕ್ಕಳ ಮನೆಯ ದನಗಾಹಿಯಾಗಿ 'ಹುಚ್ಚ ಕೊಟ್ರಯ್ಯ' ಎಂತಲೇ ಜನರಿಂದ ಕರೆಯಿಸಿಕೊಂಡವನಿಗೆ ಜನರ ತಿರಸ್ಕಾರದ ನಡೆಯೇ ಉಡುಗೊರೆ.
ಇಂತಿಪ್ಪನು ಮುಂದೆ ಮಾಡಿದ ವೈದ್ಯಶಕ್ತಿಯ ಸಹಸ್ರಾರು ಪವಾಡಗಳಿಗೆ ಜನರು, ಪ್ರಭುತ್ವ ಬೆರಗಾಗಿತು. ಧಾರ್ಮಿಕ-ಸಾಮಾಜಿಕ ಶಿಷ್ಟಾಚಾರಗಳನ್ನು ಮೀರಿ, ದಾರ್ಶನಿಕ ಸ್ಥಿತಿಗೆ ಸಮಾಜ ಈತನ ಮುಂದೆ ಮಂಡಿಯೂರಿತು. ಅದೇ ಹುಚ್ಚ ಕೊಟ್ರಯ್ಯನು ಕಾಯದ ಅಮರತ್ವ ಸಾಧಕ, ಹಠಯೋಗದ ಅನುಭಾವಿಯಾಗಿ ಜನರ ಕಷ್ಟ-ಸುಖಗಳಲ್ಲಿ ಪಾಲುದಾರನಾದ. ಈಗಾಗಿ ಇಂದು ಹುಚ್ಚ ಕೊಟ್ರಯ್ಯನೀಗ ಲಕ್ಷ-ಲಕ್ಷ ಭಕ್ತರ ಆರಾಧ್ಯ ದೈವ. ಪರಿಣಾಮ ಒಂದು ಕಾಲದಲ್ಲಿ ಜೈನರ ಕೇಂದ್ರ ಸ್ಥಳವಾದ ಕೊಟ್ಟೂರು ನಂತರ ಶೈವಪಂಥದ ಕೇಂದ್ರವಾಗಿ ಕೊಟ್ಟೂರು ಗುರುಬಸವನ ಸಾಧನಾ ಕ್ಷೇತ್ರವಾಗಿ, ಇಂದು ಬಹುದೊಡ್ಡ ಧಾರ್ಮಿಕ ಕ್ಷೇತ್ರವಾಗಿ ಮಾರ್ಪಟ್ಟಿದೆ.
ಬಳ್ಳಾರಿ ಜಿಲ್ಲೆ ಕೊಟ್ಟೂರಿನ ಗುರುಬಸವನೇ ಆ ಅವಧೂತ. ವೀರಶೈವ ಪರಂಪರೆಯಲ್ಲಿನ ನೂತನ ಗಣಗಳ ಪಟ್ಟಿಯಲ್ಲಿ ಪ್ರಮುಖ. ಪಂಚಗಣಾಧೀಶ್ವರರಲ್ಲಿ ಒಬ್ಬರಾದ ಗುರುಬಸವಲಿಂಗ, ಬಸವ ಪ್ರಭು, ನಂದಿಲಿಂಗ, ಕೊಟ್ಟೂರೇಶ್ವರ ಹೀಗೆ ಹಲವು ನಾಮಗಳಿಂದಲೂ; ಯೋಗಿ, ಮಹಾನ್ ಶರಣ, ಮಾನವತವಾದಿ, ದಾರ್ಶನಿಕ ಎಂಬೆಲ್ಲಾ ಬಿರುದುಗಳಿಂದ ಭಕ್ತರಲ್ಲಿ ನೆಲೆನಿಂತಿದ್ದಾನೆ.
ಪಂಚ ಮಠಗಳ ತಾಣ
ಕೊಟ್ಟೂರಿನಲ್ಲಿಯ ಮೂರು ಕಲ್ಲು ಮಠ, ಹಿರೇಮಠ (ದರ್ಬಾರ್) ಮಠ, ತೊಟ್ಟಿಲು ಮಠ, ಗಚ್ಚಿನ ಮಠ ಹಾಗೂ ಮರಿ ಮಠ ಹೀಗೆ ಈ ಐದು ಮಠಗಳು ಗುರುಬಸವನಿಗೆ ಸಂಬಂಧಿಸಿವೆ. ಮೂರು ಕಲ್ಲು ಮಠದಲ್ಲಿನ ಮೂರು ಶಿಲಾಗೋಪುರಗಳು ಚಾಲುಕ್ಯ ಮತ್ತು ಹೊಯ್ಸಳರ ಕಾಲದ ಜೈನರ ಚೈತ್ಯಾಲಯಗಳ ಮಾದರಿಯಲ್ಲಿವೆ. ಹಿರೇಮಠದಿಂದಲೇ ಗುರುಬಸವ ರಾಜ ದರ್ಬಾರ್ ಜತೆಗೆ ವೀರಶೈವ ಧರ್ಮದ ತತ್ವಗಳನ್ನು ಭೋದಿಸಿದ್ದ. ತೊಟ್ಟಿಲು ಮಠದಲ್ಲಿರುವ ತೊಟ್ಟಿಲನ್ನು ಭಕ್ತಿಯಿಂದ ತೂಗಿದರೆ ಸಂತಾನವಾಗುವ ನಂಬಿಕೆ ಭಕ್ತರಲ್ಲಿದೆ. ಗಚ್ಚಿನ ಮಠ ಸ್ವಾಮಿಯ ವಿಶ್ರಾಂತಿ ಸ್ಥಳವಾಗಿದ್ದು, ಅಕ್ಬರನು ನೀಡಿದ ರತ್ನ ಖಚಿತ ಮಣಿಮಂಚವಿದೆ. ಇಲ್ಲಿಯ ಯೋಗ ಮಂಟಪದಲ್ಲಿ ಸ್ವಾಮಿಯ ಜೀವಂತ ಯೋಗ ಸಮಾಧಿ ಇದೆ. ಜೊತೆಗೆ ಇದು ಮನಮೋಹಕ ಶಿಲ್ಪ ಕಲಾಕೃತಿಗಳ ಆಗರ. ಮರಿಮಠವು ಐಕ್ಯಸ್ಥರಾದ ನಂತರ ಸ್ವಾಮಿಯು ನಡೆಸಿದ ಪವಾಡದ ದ್ಯೋತಕವಾಗಿದೆ.
ದುಡಿವ ವರ್ಗದ ದೈವ
ಕೊಟ್ಟೂರೇಶ್ವರನನ್ನು ಆರಾಧಿಸುವರು ಹೆಚ್ಚಾಗಿ ದುಡಿಯುವ ವರ್ಗ. ಇವರು ತಮ್ಮ ಧಾರ್ಮಿಕ ಶ್ರದ್ಧೆಯನ್ನು ಜಾತ್ರೆ, ಉತ್ಸವ, ನಂಬಿಕೆ, ಆಚರಣೆ, ಜನಪದ ಹಾಡು ಮುಂತಾದ ಮೌಖಿಕ ರೂಪದಲ್ಲಿ ವ್ಯಕ್ತಪಡಿಸಿದ್ದಾರೆ. ಹಬ್ಬಗಳು, ರಥೋತ್ಸವ, ಉತ್ಸವದಲ್ಲಿ ಅಸಂಖ್ಯಾತ ಭಕ್ತರು ಕೊಟ್ಟೂರೇಶ್ವರನ ದರ್ಶನಕ್ಕೆ ಕಾತುರರಾಗಿರುತ್ತಾರೆ. ಕೊಟ್ಟೂರೇಶ್ವರನ ರಥೋತ್ಸವ ಪ್ರತಿ ವರ್ಷ ಮಾಘ ಬಹುಳ ನವಮಿ ಮೂಲಾನಕ್ಷತ್ರದ ದಿನ (ಈ ವರ್ಷ ಫೆ.27) ನಡೆಯುತ್ತದೆ. ರಥ ಕಟ್ಟುವುದು, ಸ್ವಾಮಿಯ ಉತ್ಸವ, ರಥೋತ್ಸವದ ವೇಳೆ ಎಲ್ಲಾ ಜಾತಿಯವರ ಪಾಲ್ಗೊಳ್ಳುವಿಕೆ, ನಿಗದಿತ ಸೇವೆ ಕಡ್ಡಾಯ. ರಥೋತ್ಸವಕ್ಕೆ ಸ್ವಾಮಿ ಮಠದಿಂದ ಉತ್ಸವ ಮೂರ್ತಿ ರಥ ಏರಲು ಪಲ್ಲಕ್ಕಿಯಲ್ಲಿ ಸಾಗಲು ದಾರಿ ಮಧ್ಯೆ ದಲಿತ ಜನಾಂಗದ ಹಿರೇಮನೆ ಮಹಿಳೆಯೊಬ್ಬಳು ಕಳಸ ಬೆಳಗಿ, ಧೂಪ ಪಾತ್ರೆ ಹಿಡಿದರೆ ಮಾತ್ರ ಸ್ವಾಮಿಯ ಪಲ್ಲಕ್ಕಿ ಮುಂದೆ ಸಾಗುತ್ತದೆ. ಈ ನಿಯಮ ತಲೆತಲಾಂತರಿಂದ ನಡೆದು ಬಂದಿದೆ.
ಕಾಲ್ನಡಿಗೆಯಲ್ಲಿ ಲಕ್ಷಾಂತರ ಜನ ನೂರಾರು ಕಿ.ಮೀ ದೂರದಿಂದ ಬಂದು ಭಕ್ತಿ ಸಮರ್ಪಿಸುತ್ತಾರೆ. ಹೀಗೆ ಬರುವ ಭಕ್ತರಿಗೆ ಕೊಟ್ಟೂರು ಸೇರಿದಂತೆ ನಾಲ್ಕು ದಿಕ್ಕುಗಳಲ್ಲಿಯೂ ಲಘು ಉಪಹಾರ, ತಂಪು ಪಾನೀಯ, ಔಷಧೋಪಾಚರ, ಪ್ರಥಮ ಚಿಕಿತ್ಸೆ ನೀಡಲು ರಸ್ತೆಯ ಇಕ್ಕೆಲಗಳಲ್ಲಿ ಭಕ್ತರ ಪಡೆಯೇ ಸನ್ನದ್ಧವಾಗಿರುತ್ತದೆ.
ರಥದ ಮೇಲೆ ತ್ರಿವರ್ಣ ಧ್ವಜ
ಗುರು ಕೊಟ್ಟೂರೇಶ್ವರನ ರಥ ಸ್ವಾತಂತ್ರ್ಯ ಹೋರಾಟಗಾರರ ಅಸ್ತ್ರವಾಗಿ ಬಳಕೆಯಾಗಿತ್ತು. ಸ್ವಾಂತಂತ್ರ್ಯ ಹೋರಾಟದ ಕಿಚ್ಚು ಹೊತ್ತಿಕೊಂಡ ಸಂದರ್ಭದಲ್ಲೊಮ್ಮೆ ರಥೋತ್ಸವ ಜರುಗಿತ್ತು. ಆಗ ಕೆಲವು ಸ್ವಾತಂತ್ರ್ಯ ಹೋರಾಟಗಾರರು ಬ್ರಿಟಿಷರ ಕಣ್ಣು ತಪ್ಪಿಸಿ ರಥ ಹತ್ತಿ ತ್ರಿವರ್ಣ ಧ್ವಜ ಏರಿಸಿಯೇ ಬಿಟ್ಟರು. ರಥ ಸಾಗುತ್ತಿದ್ದಂತೆ ನೆರೆದವರು ಕೊಟ್ಟೂರೇಶ್ವರನಿಗೆ ಜಯಘೋಷದ ಜೊತೆಗೆ ಬ್ರಿಟಿಷರಿಗೆ ಧಿಕ್ಕಾರ ಕೂಗಿದರು. ಅಪಾರ ಜನಸ್ತೋಮದ ಮುಂದೆ ಬ್ರಿಟಿಷರು ನಿಸ್ಸಹಾಯಕರಾಗಿದ್ದರು. ಕೊನೆಗೆ ರಥ ನಿಂತ ಮೇಲೆ ಬ್ರಿಟಿಷ್ ಅಧಿಕಾರಿಗಳೇ ರಥದಿಂದ ಧ್ವಜವನ್ನು ಕೆಳಗಿಳಿಸಿದರಂತೆ.
ಉತ್ತರ ದಕ್ಷಿಣ ಬೆಸೆದ ಅವಧೂತ
ಗುರುಬಸವನ ಬಾಲ್ಯ, ತಂದೆ-ತಾಯಿಗಳ ಬಗ್ಗೆ ಮಾಹಿತಿ ಇಲ್ಲ.  ಗುರುದೀಕ್ಷೆಯ ನಂತರದ ಮಾಹಿತಿ ಲಭ್ಯವಿದ್ದು, ಒಂದು ಮೂಲದ ಪ್ರಕಾರ ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಹೂಸೂರು ಗುರುಬಸವನ ತವರಾಗಿದ್ದು, ಅಲ್ಲಿಂದ ಕರ್ನಾಟಕದ ಎಡೆಯೂರಿಗೆ ಆಗಮಿಸಿ ತಪೋನಿಧಿ ಸಿದ್ದಲಿಂಗ ಯತಿಗಳ ಬಳಿ ಶಿಷ್ಯತ್ವ ಸ್ವೀಕರಿಸಿ ಚಾಮರಾಜನಗರದಲ್ಲಿ ಧರ್ಮಕಾರ್ಯ ಕೈಗೊಂಡರು. ನಂತರ ಉತ್ತರದ ಹಂಪಿಗೆ ಬಂದು ಅಲ್ಲಿಂದ ಕೊಟ್ಟೂರಿಗೆ ಆಗಮಿಸಿದರು. ಈತನ ಪವಾಡಗಳು, ಇವತ್ತಿಗೂ ಉಳಿದಿರುವ ಅದೆಷ್ಟೋ ಆಚರಣೆಗಳು ಸಿದ್ಧಪಂಥದವನು ಎನ್ನುವುದಕ್ಕೆ ಸಾಕ್ಷಿ.


-ಚಿತ್ರ-ಲೇಖನ: ಸ್ವರೂಪಾನಂದ ಎಂ.ಕೊಟ್ಟೂರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.