ಕೊಳ್ಳೇಗಾಲದ ಮಾಂತ್ರಿಕ!

ಕೊಳ್ಳೆಗಾಲ ಮಾಟ-ಮಂತ್ರಗಳಿಗೆ ಹೆಸರುವಾಸಿ. ಅದನ್ನು ನಂಬಿರಲಿಲ್ಲ. ಇತ್ತೀಚೆಗೆ ಅಲ್ಲಿಗೆ ಹೋದಾಗ ಖುದ್ದಾಗಿ ಕಂಡು ನಂಬಲೇಬೇಕಾಯಿತು. ಈ ಮಂತ್ರವಾದಿ ಶ್ರದ್ಧೆ, ಪ್ರೀತಿ, ಕಾಳಜಿ ಮತ್ತು ಪರಿಶ್ರಮಗಳಿಂದ ಒಂದೊಂದೇ ಮಾಯಾ ಜಾದು ಬಿಚ್ಚಿಡುತ್ತ ಹೋದ, ನಾವು ಬೆರಗಾಗಿ ಹೋದೆವು. ಯಾರು ಆ ಮಂತ್ರವಾದಿ?
ಮಣ್ಣಿನಿಂದ ಬಂಗಾರ ಮಾಡುವಲ್ಲಿ ಇವನು ಸಿದ್ಧಹಸ್ತ! ಮಂತ್ರವಾದಿಯ ಹೆಸರು ಡಾ. ಎನ್. ದತ್ತೇಶಕುಮಾರ, ಮಾನಸ ಶಿಕ್ಷಣ ಸಂಸ್ಥೆಗಳ ಧೀಮಂತ ಕಾರ್ಯದರ್ಶಿ. ಈ ಸಂಸ್ಥೆಯಲ್ಲಿ ಓದಿದ ವಿದ್ಯಾರ್ಥಿಗಳಿಗೆ, ಓದಿಸುತ್ತಿರುವ ಗುರುವೃಂದಕ್ಕೆ ಮತ್ತು ಸಂಸ್ಥೆಗಾಗಿ ದುಡಿಯುವ ಉಳಿದೆಲ್ಲ ಸಿಬ್ಬಂದಿಗಳಿಗೆ ಸ್ಫೂರ್ತಿಯ ಚಿಲುಮೆ. ನಮ್ಮನ್ನು ಆಹ್ವಾನಿಸಿದ್ದು 'ಆಲ್ ದಿ ಬೆಸ್ಟ್!' ನಾಟಕವಾಡಲು. ಅಂದು ರಂಗದ ಮೇಲೆ ಆಶ್ಚರ್ಯವೇ ನಡೆದುಹೋಯಿತು. ಅದೇನೆಂದರೆ 'ಸನ್ಮಾನ!!' ಎಷ್ಟು ಸನ್ಮಾನಗಳು? ಹೆಚ್ಚೂಕಡಿಮೆ 400 ಜನರಿಗೆ! ಸನ್ಮಾನಿತರು ಧನ್ಯತಾಭಾವದಿಂದ ಬೀಗಿದರೆ ದತ್ತೇಶರ ಮುಖದಲ್ಲಿ ನೆಮ್ಮದಿ.
'ಇವರೆಲ್ಲ ನನ್ನ ಜತೆಯಾಗಿ ಈ ಸಂಸ್ಥೆಗೆ ನನ್ನಷ್ಟೇ ದುಡಿದಿದ್ದಾರೆ ಮತ್ತು ದುಡಿಯುತ್ತಿದ್ದಾರೆ. ಬರಿ ದುಡಿಮೆ ಹಂಚಿಕೊಂಡರೆ ಹೇಗೆ? ಅದಕ್ಕೇ ಕ್ರೆಡಿಟ್ಟು ಹಂಚಿಕೊಳ್ಳುತ್ತಾ ಇದ್ದೀನಿ' ಎಂದರು ದತ್ತೇಶ. ಆ ಮಂತ್ರವಾದಿಯ ಈ ಅಪರೂಪದ ಗುಣವೇ ಅವರನ್ನು ಇವತ್ತು ಎತ್ತರದ ಮಟ್ಟಕ್ಕೆ ತಂದು ನಿಲ್ಲಿಸಿದೆ ಎನ್ನುವ ಗುಟ್ಟು ಅರ್ಥವಾಗಲು ಬಹಳ ಹೊತ್ತು ಬೇಕಾಗಲಿಲ್ಲ. 'ದತ್ತೇಶರ ಈ ಹಂಚಿಕೊಳ್ಳುವ ಗುಣ ಇಂದು ನಿನ್ನೆಯದಲ್ಲ. ಬಾಲ್ಯದಿಂದಲೂ ಹೀಗೆಯೇ' ಎಂದು ವಿವರಿಸುತ್ತಾರೆ ಅವರ ಆತ್ಮೀಯ ಆರ್. ನಾಗಭೂಷಣ. ಸಹಪಾಠಿಯಾಗಿ, ಗೆಳೆಯನಾಗಿ, ಜತೆಗೆ ದುಡಿಯುವ ಪರಿಶ್ರಮಿಯಾಗಿ ದತ್ತೇಶರೊಂದಿಗೆ ಇದ್ದಾರೆ ನಾಗಭೂಷಣ. ತನ್ನ ಮಿತ್ರರು-ಸಿಬ್ಬಂದಿಯನ್ನು ಆರಿಸಿ ಕೊಳ್ಳುವಲ್ಲಿಯೂ ಅವರು ತುಂಬಜಾಣರು.
ಶಿಕ್ಷಣದಿಂದಲೇ ಬೆಳಕು!
ಮೈಸೂರು ವಿಶ್ವವಿದ್ಯಾಲಯದಲ್ಲಿಯ ನೌಕರಿಗೆ ಗುಡ್ಬೈ ಹೇಳಿದ ದತ್ತೇಶರಿಗೆ ಹಿಂದುಳಿದ ಗಡಿ ಜಿಲ್ಲೆ ಚಾಮರಾಜನಗರದ ಕೊಳ್ಳೆಗಾಲದಲ್ಲಿ ಉತ್ತಮ ಶಿಕ್ಷಣಸಂಸ್ಥೆ ಕಟ್ಟುವ ಕನಸು. ಶಿಕ್ಷಣ ಮಾತ್ರ ಬದುಕಿನ ಅಂಧಕಾರವನ್ನು ಓಡಿಸಿ ಬೆಳಕು ನೀಡಬಲ್ಲದು ಎಂಬ ದೃಢ ನಂಬಿಕೆ. 1993-94ರಲ್ಲಿ ಮಾನಸ ಶಿಕ್ಷಣ ಸಂಸ್ಥೆಆರಂಭಿಸಿದರು. ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳಿಂದ ಆರಂಭವಾದ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂದು ಸಾವಿರಾರು ವಿದ್ಯಾರ್ಥಿಗಳು ಓದುತ್ತಿದ್ದಾರೆ. ಒಂದಾದ ಮೇಲೊಂದರಂತೆ ಬಿ.ಬಿ.ಎಂ ಕಾಲೇಜು, ಕಲಾ ಹಾಗೂ ವಾಣಿಜ್ಯ ಸಂಯೋಜನೆಯ ಪಿ.ಯು ಕಾಲೇಜು, ನಿಸರ್ಗ ವಿದ್ಯಾನಿಕೇತನ, ಆಂಗ್ಲ ಮಾಧ್ಯಮ ಶಾಲೆ, ಮಹಾವಿದ್ಯಾಲಯ, ಬಿ.ಎಡ್ ಕಾಲೇಜು ಕಟ್ಟುತ್ತ ಬಂದರು.
'ಎಲ್ಲರಿಗೂ ಯೋಗ್ಯ ಶಿಕ್ಷಣ ದೊರೆಯಬೇಕು, ಅದಕ್ಕೆ ಯಾವುದೇ ಅಡ್ಡಿಯಾಗಬಾರದು' ಎಂಬುದು ದತ್ತೇಶರ ಧ್ಯೇಯವಾಕ್ಯ. ಅದಕ್ಕಾಗಿಯೇ ದೂರದಿಂದ ಬರುವ ಬಡ ವಿದ್ಯಾರ್ಥಿಗಳಿಗೆ ಬೋರ್ಡಿಂಗ್ ವ್ಯವಸ್ಥೆ. ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟಕ್ಕೆಂದು ಸುಸಜ್ಜಿತ ಅಡುಗೆಮನೆ ಮತ್ತು ಊಟದ ಕೋಣೆ. ಜಾಣ ವಿದ್ಯಾರ್ಥಿ ಬಡವನೆಂದು ಗೊತ್ತಾದರೆ ಆತನ ಪೂರ್ಣ ಜವಾಬ್ದಾರಿ ದತ್ತೇಶರದ್ದು!! ಮೈಸೂರಿನಿಂದ ಓಡಾಡುವ ವಿದ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿಗೆ ಉಚಿತ ವಾಹನ ವ್ಯವಸ್ಥೆ. ಕಾರಣಾಂತರಗಳಿಂದ ಉಳಿದುಕೊಳ್ಳಬೇಕಾಗಿ ಬಂದರೆ ಲಾಡ್ಜ್ ವ್ಯವಸ್ಥೆ.
ಬರಿಗೈಲಿ ಕಳಿಸಲ್ಲ
'ಇದೆಲ್ಲವೂ ತಂದೆ ಸಿದ್ದೇಗೌಡ ಹಾಗೂ ತಾಯಿ ಲಿಂಗಮ್ಮ ಅವರ ಆಶೀರ್ವಾದದ ಫಲ' ಎಂದು ವಿನಯದಿಂದ ಹೇಳಿಕೊಳ್ಳುವ ದತ್ತೇಶ, ದೇಹಿ ಎಂದು ಬಂದ ವಿದ್ಯಾರ್ಥಿಗಳಿಗೆ ಬದುಕು ಕಟ್ಟಿಕೊಡದೆ ಕಳಿಸುವುದಿಲ್ಲ. ಅಣ್ಣ ನಾಗಾರ್ಜುನರ ಬೆಂಬಲವಿಲ್ಲದೆ ಯಾವುದಕ್ಕೂ ಕೈ ಹಾಕುವುದಿಲ್ಲ. ದತ್ತೇಶರು ಈ ಸಾಧನಾಸೌಧವನ್ನು ಯಶಸ್ವಿಯಾಗಿ ಕಟ್ಟಲು ಇನ್ನೊಂದು ಗುಪ್ತ ಶಕ್ತಿ ಎಂದರೆ ಅವರಿಗೆ ಅನುರೂಪ ಜೋಡಿಯಾಗಿರುವ ರೂಪಾ. ಎಲ್ಲ ಏರಿಳಿತಗಳಲ್ಲೂ ಪತಿಗೆ ಸಾಥ್ ನೀಡುವವರು. ಪ್ರಥಮ ಪಿಯು ಓದುತ್ತಿರುವ ಮಗ 'ಹಿತೈಶಿ' ಕೂಡ ಹೆತ್ತವರಂತೆ ಎಲ್ಲದರಲ್ಲೂ ಚುರುಕು. ತನಗೆ 'ಹಿತೈಶಿ' ಎಂದು ಹೆಸರಿಟ್ಟಿದ್ದು ಅವನಿಗೆ ಇಷ್ಟವಿಲ್ಲ. 'ನಾನು ನನ್ನ ತಂದೆಯಂತೆ ಎಲ್ಲರಿಗೂ ಹಿತೈಶಿಯಾಗಿ ಬಾಳುತ್ತೇನೆ... ಹೆಸರೇಕೆ?' ಎನ್ನುತ್ತಾನೆ. ಹೆಸರಿದ್ದಂತೆ ಬಾಳಲಿ ಎಂಬುದು ತಂದೆ-ತಾಯಿಯ ಒಳದನಿ.
ಬಡ ವಿದ್ಯಾರ್ಥಿಗಳು ಇ-ಮೇಲ್ ಟ್ಛಿ141.ಠ್ಡಜಅ್ಜಟಛ್ಝಟ.್ಛ್ಟಟ ಮೂಲಕ ಅವರನ್ನು ಸಂಪರ್ಕಿಸಬಹುದು.
ಮಾನಸೋತ್ಸವ
ಇದು ಮೂರು ದಿನಗಳು ನಡೆಯುವ ವಿಶೇಷ ಹಬ್ಬ. ಮಾನಸ ಶಿಕ್ಷಣ ಸಂಸ್ಥೆಯ ಎಲ್ಲ ಶಾಲಾ ಕಾಲೇಜು ವಿದ್ಯಾರ್ಥಿಗಳು ಸೇರಿ ಆಚರಿಸುವ ಈ ಹಬ್ಬದಲ್ಲಿ ಹಾಡು, ಕುಣಿತ, ನಾಟಕ, ಭಾಷಣ, ಸ್ಪರ್ಧೆ, ಸನ್ಮಾನಗಳು ನಡೆಯುತ್ತವೆ. ಮಾನಸ ಕಾಲೇಜು ಆವರಣವನ್ನು ಸಂಪೂರ್ಣವಾಗಿ ಶೃಂಗರಿಸಲಾಗಿರುತ್ತದೆ. ವಿದ್ಯಾರ್ಥಿಗಳು-ಸಿಬ್ಬಂದಿ ಹೊಸ ಬಟ್ಟೆಯಲ್ಲಿ ಮಿಂಚುವ ಈ ಹಬ್ಬದಲ್ಲಿ ನಾಡಿನ ಗಣ್ಯರನ್ನು ಆಹ್ವಾನಿಸಲಾಗಿರುತ್ತದೆ. ಈ ಕಾರ್ಯಕ್ರಮದ ರೂಪುರೇಷೆ-ವಿನ್ಯಾಸ ಎಲ್ಲ ರಂಗಾಯಣದ ರಾಮನಾಥರದ್ದು. ರಾಮನಾಥ ದತ್ತೇಶರ ಆತ್ಮೀಯ ಮಿತ್ರರು. ರಾಮನಾಥರ ಕ್ರಿಯಾಶೀಲತೆಗೆ ದತ್ತೇಶ ಸಾಥ್ ನೀಡುತ್ತಾರೆ, ಗೌರವಿಸುತ್ತಾರೆ.
ಮೈಸೂರಿನಲ್ಲೂ ಕಾಲೇಜು
ದತ್ತೇಶಕುಮಾರ ಮೈಸೂರಿನಲ್ಲಿ ಭವ್ಯ ಪಿ.ಯು ಕಾಲೇಜು ನಿರ್ಮಿಸುತ್ತಿದ್ದಾರೆ. ಈ ಕಾಲೇಜಿನಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ಯೋಗ್ಯ ವಿದ್ಯಾಭ್ಯಾಸವನ್ನು ದತ್ತೇಶ ತಂಡ ಕಲ್ಪಿಸಲಿದೆ. ಹೊಸದೇನನ್ನೇ ಮಾಡಿದರೂ ಮನುಕುಲಕ್ಕೆ ಅನುಕೂಲವಾಗಲಿ ಎಂಬ 'ಮಾಟ'ದ ಮಂತ್ರ ಈ ಮಂತ್ರವಾದಿಯದು.
-ಯಶವಂತ ಸರದೇಶಪಾಂಡೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


