ಶಿವ ಶಿವಾ...

ಅಂದು ಅದೊಂದು ಪುಟ್ಟ ಹಳ್ಳಿ. ಆಗಾಗ ನೀರಿಗಿಳಿಯುವ ಬೆಸ್ತರು ಮತ್ತು ಭಕ್ತರು ಸಮುದ್ರದ ನೀರು ದಾಟಿಕೊಂಡು ಪುಟ್ಟ ಗುಡ್ಡದ ಚಿಕ್ಕ ಗುಡಿಯಲ್ಲಿ ಇದ್ದ 'ಶಿವ'ನಿಗೆ ನಮಸ್ಕರಿಸಿ ಬರುತ್ತಿದ್ದರು. ಹತ್ತಿರದ ಹೆದ್ದಾರಿಯಿಂದ ಈ ಊರಿಗೆ ಸರಿಯಾದ ದಾರಿಯೂ ಇರಲಿಲ್ಲ, ಹೆಚ್ಚಿನ ವಾಹನಗಳೂ ಬರುತ್ತಿರಲಿಲ್ಲ. ಅಲ್ಲಿ ಊಟ, ವಸತಿಯಂತೂ ದೂರದ ಮಾತಾಗಿತ್ತು. ಆಗಿನ ಸಣ್ಣ ಶಿವ ದೇವಾಲಯ ಇಂದು ಬೆಳೆದು ನಿಂತು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿರುವುದನ್ನು ನೋಡಿದರೆ 'ಶಿವ ಶಿವಾ... ಊರು ಇಷ್ಟು ದೊಡ್ಡ ಬೆಳೆದಿದೆಯೇ' ಎನ್ನುವಂತಾಗುತ್ತದೆ.
ಈಗ ಈ ಊರಿಗೆ ರಾಷ್ಟ್ರೀಯ ಹೆದ್ದಾರಿಗೆ (ಎನ್‌ಎಚ್63) ಹೊಂದಿಕೊಂಡೇ ರೈಲು ಸಂಪರ್ಕ ಇದೆ. ಬಸ್ಸಿನ ಅನುಕೂಲ ಬೇಕಾದಷ್ಟಿದೆ. ಮಹಾದ್ವಾರದಿಂದ ಒಳ ಬಂದರೆ ದೂರದಿಂದಲೇ ಕಾಣುವ ಜಗತ್ತಿನ ಅತಿ ಎತ್ತರದ ಗೋಪುರದ ಜೊತೆಗೆ ಅತಿ ಎತ್ತರದಲ್ಲಿ ಕುಳಿತ ಭಂಗಿಯ ಶಿವನ ಆಕೃತಿ ಗಮನ ಸೆಳೆಯುತ್ತದೆ. ಹತ್ತಿರ ಬಂದಂತೆಯೇ ಗುಡ್ಡಕ್ಕೆ ಅಪ್ಪಳಿಸುವ ಸಮುದ್ರದ ಅಲೆಗಳ ಸೊಬಗು. ಇನ್ನು ಸೂರ್ಯಾಸ್ತ ಸಮಯದಲ್ಲಿ ಮುಗಿಲ ಮಾರಿಗೆ ರಂಗು ಚೆಲ್ಲಿದಂತಿರುವ ದೃಶ್ಯ. ಅಲ್ಲೀಗ ಸದಾ ಗಿಜಿಗಿಜಿಗುಟ್ಟುವ ಜನ ಜಾತ್ರೆ. ಈಗ ಊರು ಹಲವರ ನಿತ್ಯ ಆದಾಯದ ತಾಣ.
ಈಗ ಹಿಂದೆ ಇದ್ದ ಹಾಗೆ ಸಮುದ್ರದ ನೀರು ದಾಟಿ ಶಿವ ದೇಗುಲಕ್ಕೆ ಹೋಗಬೇಕಿಲ್ಲ, ನೇರವಾಗಿ ಮಹಾಗೋಪುರದವರೆಗೂ ಹೋಗಬಹುದು. ಅದು ಭಟ್ಕಳ ತಾಲ್ಲೂಕಿನ ಮುರುಡೇಶ್ವರ.
ಎಂಥಾ ಎತ್ತರದ ಗೋಪುರ!
237.5 ಅಡಿ ಎತ್ತರದ 20 ಅಂತಸ್ತಿನ ಗೋಪುರ ಜಗತ್ತಿನಲ್ಲೇ ಅತಿ ಎತ್ತರದ ಗೋಪುರ ಎಂದು ಪ್ರಸಿದ್ಧಿ ಪಡೆದಿದೆ. ಈ ಗೋಪುರದ ಒಳಗಡೆ ಹೋಗಿ ತುದಿ ತಲುಪಲು 'ಲಿಫ್ಟ್' ಸೌಲಭ್ಯವಿದ್ದು, ಪ್ರವಾಸಿಗರು ಮೇಲಂತಸ್ತಿನವರೆಗೆ ಹೋಗಿ ಗೋಪುರದ ನಾಲ್ಕೂ ದಿಕ್ಕಿನಿಂದ ಕಡಲ ನೋಟ, ದೇಗುಲದ ನೋಟ, ಊರಿನ ತೋಟ, ಅಲೆಯ ಬಡಿದಾಟ ಇತ್ಯಾದಿಗಳ ಪಕ್ಷಿನೋಟ ಸವಿಯಬಹುದು.
ಎಲ್ಲೆಲ್ಲೂ ಶಿವ
ಗೋಪುರ ಹತ್ತಿಳಿದು ಹೊರ ಹೊರಡುತ್ತಿದ್ದಂತೆಯೇ ಗುಡಿಗೆ ಮೆಟ್ಟಿಲುಗಳನ್ನು ಹತ್ತಿ ಹೋಗುವಂತೆ ಮಾಡಲಾಗಿದೆ. ಗುಡಿಯೊಳಗೆ ರಾವಣ ಬಿಸಾಕಿದ ಆತ್ಮ ಲಿಂಗದ ಒಂದು ತುಂಡು 'ಮುರುಡೇಶ್ವರ' ದೇವರಾಗಿ ನಿತ್ಯ ಪೂಜೆಗೊಳಗಾಗುತ್ತಿದೆ. ದೇಗುಲಕ್ಕೆ ಸೇರಿಕೊಂಡಂತೆಯೇ ನಿತ್ಯ ಉಚಿತ ಭೋಜನಕ್ಕೆಂದು ದೊಡ್ಡ ಹಾಲ್ ಸಹ ಇದೆ. ಗುಡಿಯೊಳಗಿನಿಂದ ಹೊರಬಿದ್ದರೆ 123 ಅಡಿ ಎತ್ತರದ ಶಿವನ ಕುಳಿತ ಭಂಗಿಯ ವಿಗ್ರಹ. ಇದು ವಿಶ್ವದ ಎರಡನೇ ದೊಡ್ಡ ಶಿವನ ವಿಗ್ರಹ. ಅರಬ್ಬಿ ಸಮುದ್ರದ ಕಡಲ ತೀರದ ಗುಡ್ಡದ ಮೇಲೆ ಯಾವ ಅಡತಡೆಯಿಲ್ಲದೆ ನೇರ ಸೂರ್ಯ ಕಿರಣ ಈ ಶಿವ ವಿಗ್ರಹದ ಮೇಲೆ ಬೀಳುವಂತಿದೆ. ಕುಳಿತ ಶಿವನ ಆಕೃತಿಯ ಕೆಳಭಾಗದ ಜಾಗದಲ್ಲಿ ಗುಹೆಯಾಕಾರದಲ್ಲಿ 'ಭೂ-ಕೈಲಾಸ' ಮಹಿಮೆ ಸಾರುವ ದೃಶ್ಯ ರೂಪಕದ ಕಲಾಕೃತಿಗಳು ಮನಸೆಳೆಯುವಂತಿವೆ.
ನೀರಾಟ-ಚೀರಾಟ
ಗುಡ್ಡವಿಳಿದು ಸಮುದ್ರದ ಅಲೆಗಳತ್ತ ಅಲೆಯುತ್ತಾ ಸಾಗಿದರೆ ಒಂದಕ್ಕಿಂತ ಒಂದು ಸೊಗಸು. ಕೆಲವರು ಗುಂಪು ಗುಂಪಾಗಿ ಸಮುದ್ರದ ಅಲೆಗಳನ್ನು ಸಮುದ್ರಕ್ಕೆ ತಳ್ಳುವ ಪ್ರಯತ್ನ ಮಾಡುತ್ತಿದ್ದರೆ, ಕೆಲವರು ಅಲೆಯಡಿ ಮುಳು ಮುಳುಗಿ ಏಳುವುದರಲ್ಲಿ ನಿರತರಾಗಿರುತ್ತಾರೆ. ಇದೆಲ್ಲದರ ಜೊತೆ ನಾಲ್ಕರಿಂದ ಆರು ಜನರನ್ನು ದೂರದ ವರೆಗೂ ಕೊಂಡೊಯ್ಯುವ ಮೋಟಾರ್ ಬೋಟ್‌ಗಳು ಒಂದೆಡೆಯಾದರೆ, ಅಲೆಗಳನ್ನು ಸೀಳುತ್ತ ಮೈಮೇಲೆ ಬಿದ್ದು ಬಿಡುತ್ತದೆಯೇನೋ ಎನ್ನುವಷ್ಟು ವೇಗದಲ್ಲಿ ಒಬ್ಬಿಬ್ಬರನ್ನು ಬಿಗಿದಪ್ಪಿಸಿಕೊಂಡು ಸಾಗುವ 'ವಾಟರ್ ಸ್ಕೂಟರ್'ಗಳು ಮೈನವಿರೇಳಿಸುತ್ತವೆ. ಆಗ ನೀರಾಟದ ಜೊತೆ ಚೀರಾಟವೂ ಸೇರಿ ಅಲೆಗಳ ಸದ್ದೇ ಅಡಗುವಂತಿರುತ್ತದೆ. ಇದಲ್ಲದೆ, ಕಡಲ ಮೇಲಿನ ಬಾನಿಗೆ ಹಾರಲು 'ಪ್ಯಾರಾ ಗ್ಲೈಡಿಂಗ್', ಕಡಲಾಳದ ನೀರೊಳಗೆ ಮೀನಿನಂತೆ ಸಾಗಲು ಹತ್ತಿರದ ನೇತ್ರಾಣಿ ಗುಡ್ಡದ ಬಳಿ 'ಸ್ಕೂಬ ಡೈವಿಂಗ್' ಸಹ ಇದೆ.
ಹೀಗೆ ಭಕ್ತಿ, ಪ್ರಕೃತಿ, ಆಕೃತಿಗಳ ಸಮಾಗಮವನ್ನು ಒಂದೆಡೆಯಲ್ಲೇ ಬಹುಪಾಲು ಉಚಿತವಾಗಿ ನೋಡಿಕೊಂಡು ದೇಗುಲದಲ್ಲಿ ಸಿಗುವ ಪ್ರಸಾದ ಭೋಜನವನ್ನೂ ಮಾಡಿ ಮರಳ ಬೇಕೆಂದರೆ ಕಡಲಿನ-ಮರಳಿನ ತಾಣವಾದ ಮುರುಡೇಶ್ವರ ಸೂಕ್ತವಾಗಿದೆ. ಬೆಂಗಥೂರು, ಮಂಗಳೂರು, ಹುಬ್ಬಳ್ಳಿ ಎಲ್ಲಾ ಕಡೆಯಿಂದಲೂ ಸಾರಿಗೆ ಸಂಪರ್ಕ ಇದೆ. ಪುಟ್ಟ ಪ್ರಕೃತಿಯನ್ನು ಬಳಸಿಕೊಂಡು ದೊಡ್ಡ ಆಕೃತಿಗಳನ್ನು ನೀಡಿ ಸಣ್ಣ ಹಳ್ಳಿಗೆ ದೊಡ್ಡ ಹೆಸರು ಬರುವಂತೆ ಮಾಡಿದ ಶ್ರೇಯಸ್ಸು ಉದ್ಯಮಿ ಆರ್. ಎನ್. ಶೆಟ್ಟಿಯವರಿಗೆ ಸಲ್ಲುತ್ತದೆ.
-ಚಿತ್ರ-ಲೇಖನ: ಬಿ.ಎಸ್. ವೆಂಕಟಾಚಲಭಟ್ಟ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


