ವಾಹನ

ಸೂಪರ್ ಸಂಡೂರು

ಸೂಪರ್ ಸಂಡೂರು
Published On :

ಕಣ್ಣು ಹಾದಷ್ಟೂ ಅಗಲಕ್ಕೆ ಹಚ್ಚ ಹಸಿರು, ಆಗಾಗ್ಗೆ ಬೆಟ್ಟಗುಡ್ಡಗಳನ್ನು ಸೋಕುವ ಮೋಡಗಳ ದಿಬ್ಬಣ, ಮುಂಜಾನೆ ಮಂಜಿನ ಮೇಲಾಟ, ಪಕ್ಷಿಗಳ ಕಲರವ, ಅಗಣಿತ ನಾಟ್ಯ ಮಯೂರಗಳ ದರ್ಶನ, ಕಾನನ ಕುಸುಮಗಳ ಮನಸೋಲುವ ಸೌಂದರ್ಯ, ಪರಿಮಳ.

ಇದು ಮಲೆನಾಡಿನ ವರ್ಣನೆ ಅಂದುಕೊಂಡಿರಾ ಇದು ಬಯಲು ಸೀಮೆಯ ಮಲೆನಾಡು. ಬಳ್ಳಾರಿ ಜಿಲ್ಲೆಯ ಸಂಡೂರು ಈ ದಿನಗಳಲ್ಲಿ ಅಕ್ಷರಶಃ ಮಲೆನಾಡು! ದಶಕಗಳ ಅವ್ಯಾಹತ ಗಣಿಗಾರಿಕೆಯಿಂದ ಗಬ್ಬೆದ್ದು ಹೋಗಿದ್ದ ಸಂಡೂರು ಈಗ ನಾಲ್ಕು ಮಳೆ ಬಿದ್ದು ರಮ್ಯ ತಾಣ! ಕೆಂಧೂಳುಮಯವಾಗಿದ್ದ ಪರಿಸರವೀಗ ಕಣ್ಣು ಕೋರೈಸುವ ಹಸಿರಿನ ಆಹ್ಲಾದಕ ಕೂಲ್ ಕೂಲ್ ತಾಣ! ಸಂಡೂರು ಸಹವಾಸವೇ ಸಾಕೆನ್ನುತ್ತಿದ್ದವರೀಗ ಈ ಹಸಿರ ಸೊಬಗಿನ ಸಿರಿ ಸವಿಯಲು ಭೇಟಿ ನೀಡಬಹುದು.

ಸಂಡೂರು ಗಣಿಗಾರಿಕೆಗಿಂತ ಮುಂಚೆಯೇ ಪ್ರಾಕೃತಿಕ ಹಿನ್ನೆಲೆಯಿಂದ ಹೆಸರುವಾಸಿ. ಉತ್ತರ ಕರ್ನಾಟಕದ ಕಾಶ್ಮೀರ ಎಂದೇ ಜನಜನಿತ. ಅದರಲ್ಲೂ ಸಂಡೂರಿನ ರಾಮಘಡ ಪ್ರದೇಶ ಬ್ರಿಟಿಷರ ಮನಸೊರೆಗೊಂಡ ತಾಣ. ಇಂತಿಪ್ಪ ಶ್ರೀಗಂಧದ ನಾಡು ಸಂಡೂರಿಗೆ ರಾಷ್ಟಪೀತ ಗಾಂಧೀಜಿ 1936ರಲ್ಲಿ ಭೇಟಿ ನೀಡಿದಾಗ ಇಲ್ಲಿನ ಪರಿಸರದಿಂದ ಪುಳಕಗೊಂಡು 'See Sandur in September' ಮತ್ತು 'Oasis in Desert' ಎಂದು ಉದ್ಗರಿಸಿದ್ದರು.

ಕಳೆದ ಒಂದೆರಡು ಮಳೆಗಾಲದಿಂದ ಇಲ್ಲಿನ ಕಾಡಿಗೆ ಜೀವಕಳೆ ಬಂದಿದೆ. ಪ್ರತಿ ಮಳೆಗಾಲ ಆರಂಭದೊಂದಿಗೆ ಸಂಡೂರು ಸುತ್ತ ಮುತ್ತ ಪಶ್ಚಿಮ ಘಟ್ಟಗಳ ಹವಾಗುಣ ಪ್ರತ್ಯಕ್ಷವಾಗಿ ಹೊಸ ಮನ್ವಂತರ ಅಡಿ ಇಡುತ್ತದೆ. ತಂಗಾಳಿ, ತುಂತುರು ಮಳೆ, ಸೂರ್ಯನ ನೆರಳು-ಬೆಳಕಿನ ಆಟ ಮನಸ್ಸಿಗೆ ಹಿತ ಅನ್ನಿಸುತ್ತದೆ. ಕಾಣಿಯಾಗುತ್ತಿದ್ದ ಕಾದಿಟ್ಟ ಅರಣ್ಯ ಚೇತರಿಸಿಕೊಳ್ಳುತ್ತಿದೆ.

ಗುಂಡಾ ಅರಣ್ಯ, ತಾಯಮ್ಮನಹೊಳ್ಳ ಮೀಸಲು ಅರಣ್ಯ, ತಾರಾನಗರ ಹಿನ್ನೀರು ಅರಣ್ಯ, ಕುಮಾರಸ್ವಾಮಿ ಗುಡಿ, ಗಂಡಿ ಮಾರೆಮ್ಮ ದೇವಸ್ಥಾನದಿಂದ ರಾಮಘಡ, ಯಶವಂತನಗರ ಗೆಸ್ಟ್‌ಹೌಸ್, ದೋಣಿಮಲೈ ಸುತ್ತಮುತ್ತ ಬೆತ್ತಲಾಗುತ್ತಿದ್ದ ಅರಣ್ಯ ಪ್ರದೇಶ ಈಗ ಪುನರ್ಜನ್ಮ ಪಡೆದುಕೊಳ್ಳುತ್ತಿವೆ. ಈ ಭಾಗದ ಜೀವಾಳವಾದ ನಾರಿಹಳ್ಳ ಮೈತುಂಬಿಕೊಳ್ಳುತ್ತಿದೆ. ಗಣಿಗಾರಿಕೆಯ ಬ್ಸಾಸ್ಟಿಂಗ್ ಸದ್ದು, ಲಾರಿಗಳ ಆರ್ಭಟಕ್ಕೆ ಜಾಲ ಖಾಲಿ ಮಾಡಿದ್ದ ವನ್ಯ ಜೀವಿಗಳು ಮರಳುತ್ತಿವೆ. ಹೊಲಗಳಲ್ಲಿ ಮೈನಿಂಗ್ ಮಿಷನ್‌ಗಳು ಮಾಯವಾಗಿ ಕೃಷಿ ಪರಿಕರಣಗಳು ಕಾಣತೊಡಗಿವೆ. ಗಣಿಗಾರಿಕೆಗೆ ತುತ್ತಾದ ಊರುಗಳಲ್ಲಿ ಈಗ ಹಬ್ಬದ ವಾತಾವರಣ, ಕೆಂಧೂಳಿಗೆ ಹೆದರಿ, ಇಷ್ಟಪಟ್ಟ ಬಣ್ಣ ಬಳಿಯಲು ಒಪ್ಪುವಂಥ ಬಣ್ಣ ಬಳಿದು ಸಂಭ್ರಮಿಸುತ್ತಾರೆ!

ಘೋರ್ಪಡೆ ಅರಮನೆ ಸಂಡೂರಿನ ಪ್ರಮುಖ ಆಕರ್ಷಣೀಯ ಕೇಂದ್ರ. ಶಿವಪುರ ಪ್ಯಾಲೇಸ್‌ನಲ್ಲಿ ಘೋರ್ಪಡೆ ಸೆರೆಹಿಡಿದ ನವ್ಯ ಜೀವಿಗಳ ಅದ್ಭುತ ಫೋಟೋಗಳಿವೆ. ಟಿ. ಕಾಳೆಯವರ ಕುಂಚದಲ್ಲಿ ಅರಳಿದ ಪೇಂಟಿಗಳಿವೆ. ಲೋಹಾದ್ರಿ ಗಿರಿ ವನಸಿರಿಯಲ್ಲಿ ಕುಮಾರಸ್ವಾಮಿ ದೇಗುಲ, ವಿಭೂತಿ ಗುಡ್ಡ, ಹರಿಶಂಕರ, ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರ, ಭುಜಂಗನಗರ ಕ್ರಾಸ್ ಬಳಿಯ ಭೀಮತೀರ್ಥ, ಪುಟ್ಟಣ್ಣ ಕಣಗಾಲ್‌ಗೆ ಸ್ಪೂರ್ತಿಯಾಗಿ 'ಮಾನಸ ಸರೋವರ' ಚಿತ್ರೀಕರಣ ನಡೆದ ನಾರಿಹಳ್ಳ ಜಲಾಶಯ, ತಾರಾನಗರದ ಭೈರವತೀರ್ಥ, ರಾಮಘಡ ಏರಿಯಾ, ಜಿಂದಾಲ್ ಉಕ್ಕು ಕಾರ್ಖಾನೆ, ಎನ್‌ಎಂಡಿಸಿ, ಧನ್ವಂತರಿ ವನ ಪ್ರಮುಖ ಪ್ರೇಕ್ಷಣಿಯ ಸ್ಥಳಗಳು. ಧರ್ಮಾಪುರ ಹತ್ತಿರದ ಗಂಡಿ ಲಕ್ಷ್ಮೀನರಸಿಂಹ ದೇವಸ್ಥಾನ ಹಾಗೂ ಅಲ್ಲಿಯೇ ಎರಡು ಬೆಟ್ಟಗಳ ನಡುವೆ ನಾರಿಹಳ್ಳ ಸೀಳಿಕೊಂಡು ಹೋಗುತ್ತಿರುವ ದೃಶ್ಯ ನಯನಮನೋಹರ.

-ಆಶಾ.ಎಸ್‌ಎಂ. ಕೊಟ್ಟೂರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.