ಓ ಮೈ ಲಾಡ್!

ಮಲೆ ಮಹದೇಶ್ವರಸ್ವಾಮಿ ದೇವಾಲಯ ಕರ್ನಾಟಕದ ಪ್ರಮುಖ ದೇವಾಲಯಗಳಲ್ಲೊಂದು. ಸಾಂಸ್ಕೃತಿಕ ನಾಯಕನ ಆವಾಸ ಸ್ಥಾನ ಎಂದು ಕರೆಸಿಕೊಳ್ಳುವ ಮಲೆಮಹದೇಶ್ವರ ಬೆಟ್ಟವು ಎಪ್ಪತ್ತೇಳು ಮಲೆಗಳಿಂದ ಕೂಡಿದ ಪ್ರಶಾಂತ ತಾಣವಾಗಿ, ಪವಿತ್ರ ಯಾತ್ರಾಸ್ಥಳವಾಗಿದೆ. ಇಂಥ ಹಿನ್ನೆಲೆಯುಳ್ಳ ಮಲೆಮಹದೇಶ್ವರ ದೇವಾಲಯ, ಅಂತಾರಾಷ್ಟ್ರೀಯ ಗುಣಮಟ್ಟದ ವ್ಯವಸ್ಥೆಗಾಗಿ ಐಎಸ್‌ಒ ಪ್ರಮಾಣಪತ್ರ ಗಳಿಸಿಕೊಂಡಿದೆ. ಅಷ್ಟೇ ಅಲ್ಲದೆ, ಇದೀಗ ರಾಜ್ಯದ ಮುಜರಾಯಿ ಇಲಾಖೆಯ ಅಂಕಿ-ಅಂಶಗಳ ಪ್ರಕಾರ, ತನ್ನ ಸುಪರ್ದಿಯಲ್ಲಿರುವ ರಾಜ್ಯದ ದೇವಾಲಯಗಳಲ್ಲಿಯೇ ಅತ್ಯಂತ ಹೆಚ್ಚಿನ ಆದಾಯ ಗಳಿಸುವ ಎರಡನೆ ದೇವಾಲಯ ಎಂಬ ಖ್ಯಾತಿಗೆ ಪಾತ್ರವಾಗಿದೆ.
ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನಲ್ಲಿರುವ ಮಲೆಮಹದೇಶ್ವರಸ್ವಾಮಿ ದೇಗುಲ ಹೆಚ್ಚಿನ ಆದಾಯ ಗಳಿಸಲು ಪ್ರಸಾದ ರೂಪದಲ್ಲಿ ಮಾರಾಟ ಮಾಡುವ ಲಾಡು ಕಾರಣ ಎಂಬುದು ಅತಿಶಯೋಕ್ತಿ ಎನಿಸಿದರೂ ಸುಳ್ಳಲ್ಲ! ಇದಕ್ಕೆ ಮುಜರಾಯಿ ಇಲಾಖೆ ಮತ್ತು ಈ ದೇವಾಲಯದ ದಾಖಲೆಗಳು ಮತ್ತು ಲಾಡು ತಯಾರಿಸುವ ಉಸ್ತುವಾರಿ ಹೊತ್ತವರು ನೀಡುವ ಅಂಕಿ-ಅಂಶಗಳು ಪುಷ್ಟಿ ನೀಡುತ್ತವೆ.
ಲಾಡು; ವೈಶಿಷ್ಟ್ಯತೆ ಏನು?
ಪ್ರತಿ ಲಾಡು ಸುಮಾರು 125 ಗ್ರಾಂ ತೂಕವಿದ್ದು, ಪ್ರತಿ ಲಾಡಿನ ಬೆಲೆ 15 ರೂಪಾಯಿ. ಕಡಲೆಹಿಟ್ಟು, ಸಕ್ಕರೆ, ರೀಫೈನ್ಡ್ ಆಯಿಲ್, ಗೋಡಂಬಿ, ದ್ರಾಕ್ಷಿ, ಏಲಕ್ಕಿಪುಡಿ, ಪಚ್ಚಕರ್ಪೂರದ ಪುಡಿ ಮತ್ತು ಲವಂಗದ ಮೊಗ್ಗುಗಳ ಮಿಶ್ರಣದಿಂದ ತಯಾರಿಸಲಾಗುವ ಇದರ ರುಚಿ ವಿಶಿಷ್ಟವಾಗಿದೆ. ಲಾಡನ್ನು ರುಚಿಯ ಕಾರಣಕ್ಕೆ ಖರೀದಿಸುವುದಕ್ಕಿಂತ 'ದೇವರಪ್ರಸಾದ' ಎಂಬ ಕಾರಣಕ್ಕೇ ಭಕ್ತರು ಕೊಳ್ಳುತ್ತಾರೆ ಎಂಬುದು ಲಾಡು ಮಾರಾಟದ ಉಸ್ತುವಾರಿ ಹೊತ್ತ ಉಗ್ರಾಣ ಸಹಾಯಕ ಮಹದೇವಸ್ವಾಮಿ ಅವರ ಅಭಿಪ್ರಾಯ.
ಲಾಡು ಮಾರಾಟದ ಆದಾಯ
ವಿಶಿಷ್ಟ ರುಚಿಯಿಂದ ಕೂಡಿರುವ ಈ ಲಾಡು ಭಕ್ತರಿಗೆ ಅಚ್ಚುಮೆಚ್ಚು. ರುಚಿಗಿಂತ ದೇವರ ಪ್ರಸಾದವೆಂಬುದೇ ಈ ಲಾಡು ಇಷ್ಟವಾಗಲು ಕಾರಣ. ಸಾಧಾರಣವಾಗಿ ಮಾಮೂಲಿ ದಿನಗಳಲ್ಲಿ ತಿಂಗಳಿಗೆ 3 ಲಕ್ಷ ಲಾಡುಗಳು ಬಿಕರಿಯಾಗುತ್ತವೆ. ವಿಶೇಷ ದಿನಗಳಲ್ಲಿ ಅಂದರೆ, ಕಾರ್ತೀಕಮಾಸ, ಭೀಮನ ಅಮಾವಾಸ್ಯೆ, ಶಿವರಾತ್ರಿ ಮತ್ತಿತರೆ ದಿನಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಾದಾಗ ಲಾಡು ಮಾರಾಟದಲ್ಲಿ ಏರಿಕೆಯಾಗುತ್ತದೆ. ಭೀಮನ ಅಮಾವಾಸ್ಯೆಯ ಪ್ರಯುಕ್ತ ಕಳೆದ ತಿಂಗಳಲ್ಲಿ ಕೇವಲ 2 ದಿನಗಳಲ್ಲಿ ಬರೋಬ್ಬರಿ 1 ಲಕ್ಷ ಲಾಡು ಮಾರಾಟವಾಗಿರುವುದು ದಾಖಲೆಯಾಗಿದೆ.
ಲಾಡು ತಯಾರಿಕಾ ವಿಧಾನ
ಲಾಡು ತಯಾರಿಸಲು 11 ಜನ ಕಾಯಂ ಬಾಣಸಿಗರಿದ್ದು, ದಿನವೊಂದಕ್ಕೆ 10 ಸಾವಿರ ಲಾಡುಗಳನ್ನು ತಯಾರಿಸುತ್ತಾರೆ. ಒಮ್ಮೆಗೆ 1 ಸಾವಿರದಂತೆ 10 ಬಾರಿ ಲಾಡು ಮಿಶ್ರಣವನ್ನು ಕಲಸಿ ತಯಾರಿಸಲಾಗುತ್ತದೆ. ಹತ್ತು ಸಲದ ಮಿಶ್ರಣಕ್ಕೆ 160 ಕೆ.ಜಿ ಕಡಲೆಹಿಟ್ಟು, 240 ಕೆ.ಜಿ ಸಕ್ಕರೆ, 150 ಕೆ.ಜಿ ರೀಫೈನ್‌ಡ್ ಆಯಿಲ್, 15 ಕೆ.ಜಿ ಗೋಡಂಬಿ, 15 ಕೆ.ಜಿ ಒಣದ್ರಾಕ್ಷಿ, 200 ಗ್ರಾಂ. ಏಲಕ್ಕಿಪುಡಿ, 200 ಗ್ರಾಂ. ಪಚ್ಚಕರ್ಪೂರದ ಪುಡಿ, 200 ಗ್ರಾಂ. ಲವಂಗದ ಮೊಗ್ಗು ಬಳಕೆಯಾಗುತ್ತಿದೆ. ಭಕ್ತರ ಅಗತ್ಯಕ್ಕೆ ತಕ್ಕಂತೆ ನಾವು ಲಾಡು ತಯಾರಿಸುತ್ತಿದ್ದೇವೆ ಎನ್ನುತ್ತಾರೆ ಸುಮಾರು 28 ವರ್ಷಗಳಿಂದಲೂ ಲಾಡು ತಯಾರಿಸುತ್ತಾ ಬಂದಿರುವ ಬಾಣಸಿಗ ತಂಬಡಗೇರಿಯ ಡಿ.ಹುಚ್ಚಯ್ಯ.
ಒಟ್ಟಿನಲ್ಲಿ ಈ ದೇಗುಲಕ್ಕೆ ಕೇವಲ ಲಾಡುಗಳಿಂದಲೇ ತಿಂಗಳಿಗೆ ಸರಾಸರಿ 50 ಲಕ್ಷ ಆದಾಯ ದೊರೆಯುತ್ತಿದ್ದರೆ, ವಾರ್ಷಿಕ 6 ಕೋಟಿ ಆದಾಯ ಸಿಗುತ್ತಿದೆ.
- ರೇಷ್ಮಾ ಎಚ್.ಸಿ.ಗೌಡ, ಬೆಂಗಳೂರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


