ವಾಹನ

ಮರೋಳಿ ಟ್ರೀಟ್ಮೆಂಟ್

ತಲೆನೋವು ಹೋಗಲಾಡಿಸುವಂತೆ ಯಾವುದಾದರೂ ದೇಗುಲಕ್ಕೆ ಹರಕೆ ಹೇಳಿಕೊಳ್ಳುವುದನ್ನು ಕೇಳಿದ್ದೀರಾ? ಇಲ್ಲ ಅಲ್ಲವೆ?

ಮರೋಳಿ ಟ್ರೀಟ್ಮೆಂಟ್
Published On :

ತಲೆನೋವು ಹೋಗಲಾಡಿಸುವಂತೆ ಯಾವುದಾದರೂ ದೇಗುಲಕ್ಕೆ ಹರಕೆ ಹೇಳಿಕೊಳ್ಳುವುದನ್ನು ಕೇಳಿದ್ದೀರಾ? ಇಲ್ಲ ಅಲ್ಲವೆ? ದಕ್ಷಿಣಕನ್ನಡ ಜಿಲ್ಲೆಯ ಮರೋಳಿ ಸೂರ್ಯನಾರಾಯಣ ದೇಗುಲಕ್ಕೆ ಇಂಥ ಹರಕೆ ಹೊತ್ತು ಬರುವವರಿದ್ದಾರೆ!
ಅತಿಯಾದ ತಲೆನೋವಿನಿಂದ ಬಳಲುವವರು ಈ ಕ್ಷೇತ್ರಕ್ಕೆ ಭೇಟಿ ಕೊಟ್ಟು ಪೂಜೆ ಸಲ್ಲಿಸಿದಲ್ಲಿ ನೋವು ಶಮನವಾಗುತ್ತದೆ. ದೃಷ್ಟಿದೋಷಕ್ಕೂ ಇಲ್ಲಿ ಪರಿಹಾರವಿದೆ. ಇಲ್ಲಿ ಪ್ರಾರ್ಥಿಸಿಕೊಂಡವರಲ್ಲಿ ಯಾವುದಾದರೂ ವಿಶೇಷ ಅಭಿವ್ಯಕ್ತಿ ಸಾಮರ್ಥ್ಯವಿದ್ದಲ್ಲಿ ಅದು ನೂರು ಪಟ್ಟು ವೃದ್ಧಿಸುತ್ತದಂತೆ. ಅದು ಹೇಗೆ ಇಂಥ ವಿಶಿಷ್ಟ ನಂಬಿಕೆ ಬೆಳೆದು ಬಂತು ಎನ್ನುವುದಕ್ಕೆ ಸ್ಪಷ್ಟ ವಿವರಣೆ ಸಿಗದು. ಆದರೆ, ಹರಕೆ ಹೊತ್ತು ಜನ ಬರುತ್ತಿದ್ದಾರೆ, ಪೂಜೆ ಸಲ್ಲಿಸಿದ ಬಳಿಕ ಇಂಥ ಸಮಸ್ಯೆ ಬಂದಿಲ್ಲ ಎಂದು ಹೇಳಿಕೊಳ್ಳುತ್ತಾರೆ. ಮರೋಳಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಳೆ ಬರದೇ ಇದ್ದಲ್ಲಿ ಸೂರ್ಯನಾರಾಯಣನಿಗೆ ಪೂಜೆ, ಎಳನೀರು ಅಭಿಷೇಕ ಮಾಡುವ ಸಂಪ್ರದಾಯ ಇಲ್ಲಿದೆ. ಅಭಿಷೇಕದ ಬಳಿಕ ಮಳೆಯಾಗಿರುವ ನಿದರ್ಶನಗಳಿವೆ. ಸಂತಾನ ಭಾಗ್ಯವಿಲ್ಲದವರು ಈ ಕ್ಷೇತ್ರದಲ್ಲಿ ಪೂಜೆ ಸಲ್ಲಿಸಿ ಸಂತಾನ ಭಾಗ್ಯ ಪಡೆದಿದ್ದಾರೆ. ಖ್ಯಾತ ಗಾಯಕ ಯೇಸುದಾಸ್, ಚಿತ್ರನಟ ಅಂಬರೀಷ್ ಸೇರಿದಂತೆ ಹಲವು ಗಣ್ಯರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ.
ಸೂರ್ಯನಾರಾಯಣ ದೇಗುಲ ಎಲ್ಲೆಡೆಯೂ ಕಾಣಸಿಗುವುದಿಲ್ಲ. ಕರ್ನಾಟಕದಲ್ಲಿ ಶೃಂಗೇರಿಯ ವಿದ್ಯಾಶಂಕರ ದೇವಾಲಯ ಹೊರತುಪಡಿಸಿದರೆ ದಕ್ಷಿಣ ಕನ್ನಡದ ಮರೋಳಿ ಮತ್ತು ನಾರಾವಿಗಳಲ್ಲಿ ಸೂರ್ಯನಾರಾಯಣನ ಸನ್ನಿಧಿಯಿದೆ. ಈ ಪೈಕಿ ಮರೋಳಿ ದೇಗುಲ ಅತ್ಯಂತ ಪುರಾತನ.
ಹಳೇ ದೇಗುಲ
ಇದು ದಕ್ಷಿಣಕನ್ನಡ ಜಿಲ್ಲೆಯ ಏಕೈಕ ಹಳೇ ಸೀಮೆ ದೇಗುಲ. 1,200 ವರ್ಷ ಹಿಂದೆ ತಪಸ್ವಿಗಳಿಂದ ಸ್ಥಾಪನೆಗೊಂಡಿದೆ. ಈ ಭಾಗದಲ್ಲಿ ಮರಾಲ ಋಷಿಯು ನೆಲೆಸಿದ್ದರಿಂದ ಕಾಲಕ್ರಮೇಣ ಆ ಹೆಸರು ಮರೋಲಿಯಾಗಿ ನಂತರ ಮರೋಳಿಯಾಗಿ ಪರಿವರ್ತನೆ ಆಗಿರಬಹುದು ಎಂದು ನಂಬಲಾಗಿದೆ. ಸಂಸ್ಕೃತದಲ್ಲಿ ಮರಾಲಿ ಎಂದರೆ ಸ್ವಾತಿಕ, ಸುಂದರ ಎಂಬ ಅರ್ಥವಿದೆ.
ನಂತರದ ದಿನಗಳಲ್ಲಿ ರಾಜಾಶ್ರಯದ ಕೊರತೆ ಮತ್ತು ಯುದ್ಧಗಳಿಂದಾಗಿ ದೇಗುಲ ನಾಶಗೊಂಡು ತನ್ನ ಸ್ವರೂಪ ಕಳೆದುಕೊಂಡಿತು. 500 ವರ್ಷ ಹಿಂದೆ ಬಜಾಲು ಜೈನ ಪಾಳೆಗಾರ್ತಿಯು ಈ ದೇಗುಲವನ್ನು ಮರು ನಿರ್ಮಿಸಿದಳು. ಜತೆಗೆ ಸೂರ್ಯನಾರಾಯಣ ಮತ್ತು ಮಹಾಗಣಪತಿ ದೇವರ ವಿಗ್ರಹಗಳನ್ನು ಪ್ರತಿಷ್ಠಾಪಿಸಿದಳು. ದೇಗುಲಕ್ಕೆ ಬೇಕಾದ ಬೆಳ್ಳಿ, ಬಂಗಾರದ ಆಭರಣಗಳನ್ನು, ಸುತ್ತಮತ್ತಲಿನ 100 ಎಕರೆ ಜಾಗವನ್ನು ನೀಡಿದಳು ಎಂಬುದು ಕ್ಷೇತ್ರದ ಇತಿಹಾಸದಿಂದ ತಿಳಿಯುತ್ತದೆ. ಅಂದಿನಿಂದ ಸೂರ್ಯನಾರಾಯಣ ದೇಗುಲದ ಸಕಲ ಜವಾಬ್ದಾರಿಯು ಈ ಏಳು ಗ್ರಾಮಗಳ ಜನರ ಮೇಲಿದ್ದು ಇಂದಿಗೂ ನಡೆದುಕೊಂಡು ಬರುತ್ತಿದೆ.



ಮಾರ್ಗ ಯಾವುದಯ್ಯಾ...
ಮಂಗಳೂರು- ಕುಲಶೇಖರ- ಕೈಕಂಬ ಮಾರ್ಗವಾಗಿ ಸಾಗಿ ಮರೋಳಿ ಕ್ರಾಸ್‌ನಲ್ಲಿಳಿದು 1.5 ಕಿ.ಮೀ. ಕಾಲ್ನಡಿಗೆಯಲ್ಲಿ ಸಾಗಿ ದೇಗುಲ ತಲುಪಬಹುದು. ಅಥವಾ ಮಂಗಳೂರು- ಪಡೀಲ್ ಮಾರ್ಗವಾಗಿ ಸಾಗಿ ನಾಗುರಿ ಸ್ಥಳದಲ್ಲಿ ಇಳಿದು ಸ್ವಲ್ಪ ದೂರ ಪ್ರಯಾಣ ಮಾಡಿ ಕ್ಷೇತ್ರವನ್ನು ತಲುಪಬಹುದು.


- ಚಿತ್ರ-ಬರಹ: ರವಿರಾಜ್ ಕಟೀಲು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.