ಬಸಾಪುರ ಹೋಟೆಲ್
ಆಗ ತಾನೇ ತಯಾರಿಸಿದ ಗರಿಗರಿ ಅಲಸಂದಿ ವಡೆ, ಶತಮಾನದಷ್ಟು ಹಳೆಯದಾದ ಗಿಡಮೂಲಿಕೆಯ ಕಣಜದ...

ಆಗ ತಾನೇ ತಯಾರಿಸಿದ ಗರಿಗರಿ ಅಲಸಂದಿ ವಡೆ, ಶತಮಾನದಷ್ಟು ಹಳೆಯದಾದ ಗಿಡಮೂಲಿಕೆಯ ಕಣಜದ ವೈರುಧ್ಯದ ವಿಶೇಷ ಈ ಬಸಾಪುರ ಹೊಟೇಲ್.
ಬಿಸಿಲೂರು ಹಗರಿಬೊಮ್ಮನಹಳ್ಳಿ ಪಟ್ಟಣದ ರಾಮನಗರದ ರಥಬೀದಿಯಲ್ಲಿರುವ ಈ ತಿಂಡಿ ಹೊಟೇಲ್‌ಗೆ ಶತಮಾನದ ಇತಿಹಾಸವಿದೆ. ಇಲ್ಲಿ ಮಾಡುವ ಅಲಸಂದಿವಡೆ, ಮಂಡಕ್ಕಿ ವಗ್ಗರಣೆಗೆ ಮನ ಸೋಲದವರೇ ಕಮ್ಮಿ. ಈ ಊರಿನವರಾದ ಮಾಜಿ ಉಪಮುಖ್ಯಮಂತ್ರಿ ದಿ. ಎಂ.ಪಿ.ಪ್ರಕಾಶ ಇಲ್ಲಿಗೆ ಬಂದಾಗೆಲ್ಲ ಈ ಹೊಟೇಲ್‌ನ ಅಲಸಂದಿವಡೆ, ವಗ್ಗರಣಿ ಸವಿಯನ್ನು ಸವಿಯದೇ ಹೋದರೆ ಅವರ ಪ್ರವಾಸ ಅಪೂರ್ಣವೆ ಸರಿ. ಈಗ ಅವರ ಪುತ್ರ, ಹರಪನಹಳ್ಳಿ ಕ್ಷೇತ್ರದ ಶಾಸಕ ಎಂ.ಪಿ. ರವೀಂದ್ರ ಇಲ್ಲಿಗೆ ಬಂದಾಗೆಲ್ಲ ಈ ಹೊಟೇಲ್‌ಗೆ ಬಂದು ಗಿರಾಕಿಗಳ ಜೊತೆಯಲ್ಲಿ ಕುಳಿತು ವಡೆ ಚಪ್ಪರಿಸುತ್ತಾರೆ.
ಗರಿಗರಿ, ಸ್ವಾಧಿಷ್ಟಕರವಾದ ಅಲಸಂದಿವಡೆ, ಮಜಬೂತಾದ ಮಂಡಕ್ಕಿ ವಗ್ಗರಣೆ ತಿಂಡಿಗೆ ಬಸಾಪುರ ಹೊಟೇಲ್ ಈ ಸೀಮೆಯಲ್ಲಿ ಟ್ರೇಡ್‌ಮಾರ್ಕ್. ಅದೇ ರೀತಿ ಶತಮಾನಗಳಷ್ಟು ಹಳೆಯದಾದ ವಿಶೇಷ, ವಿಶಿಷ್ಟವಾದ ಗಿಡಮೂಲಿಕೆಗಳು, ಆಯುರ್ವೆದ ಔಷದಿಗಳ ಮಾರಾಟಕ್ಕೂ ಈ ಹೊಟೇಲ್ ಅಷ್ಟೇ ಫೇಮಸ್.
ಈ ಭಾಗದಲ್ಲಿ ಬೇರೆಲ್ಲೂ ಸಿಗದಂಥ ಹಳೆ ಕಾಲದ ಗಿಡಮೂಲಿಕೆ, ಔಷಧಿಗುಣವುಳ್ಳ ವಸ್ತುಗಳು ಇಲ್ಲಿ ಸಿಗುತ್ತಿರುವ ಹಾಗೂ ಗುಣಮಟ್ಟ, ವಿಶ್ವಾಸ, ನಂಬಿಕೆ ಉಳಿಸಿಕೊಂಡಿರುವುದೇ ಈ ಜನಪ್ರಿಯತೆಗೆ ಕಾರಣ. ಇಂದಿಗೂ ನಾಡಿನ ವಿವಿಧ ಮೂಲೆಮೂಲೆಗಳಿಂದ ನಿತ್ಯವೂ ಬಸಾಪುರ ಹೊಟೇಲ್ ಹುಡುಕಿಕೊಂಡು ಹತ್ತಾರು ಜನರು ಇಲ್ಲಿಗೆ ಬರುತ್ತಾರೆ. ಅಮಾವಾಸ್ಯೆ ಹಾಗೂ ವಿಶೇಷ ದಿನಗಳಲ್ಲಿ ಈ ಸಂಖ್ಯೆ ದುಪ್ಪಟ್ಟಿರುತ್ತದೆ.
ಮುತ್ತಜ್ಜನ ಕಾಲದಿಂದಲೂ ಗಿಡಮೂಲಿಕೆ, ಆಯುರ್ವೆದ ಔಷಧಿಗಳನ್ನು ಬಸಾಪುರ ಕುಟುಂಬ ಮಾರಾಟ ಮಾಡುತ್ತ ಬರುತ್ತಿದೆ. ಈಗ ಆ ಕುಟುಂಬದ ಯುವಕ ರಾಘವೇಂದ್ರ ತನ್ನ ಬಿಜಿಯಾದ ಹೊಟೇಲ್ ಶೆಡ್ಯೂಲ್‌ನಲ್ಲೂ ಈ ಕಾರ್ಯವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾನೆ.
ಹಾವು, ಚೇಳು ಸೇರಿದಂತೆ ವಿಷಜಂತುಗಳ ಕಡಿತಕ್ಕೆ, ಬಾಣಂತಿ, ಹಳೆ ರೋಗದಿಂದ ಬಳಲುತ್ತಿರುವವರು, ಎತ್ತು, ಎಮ್ಮೆ, ದನ, ಕುರಿ, ಕೋಳಿ ರೋಗಗಳಿಗೆ ಅಗತ್ಯವಿರುವ ಗಿಡಮೂಲಿಕೆ ಔಷಧಿಗಳು ಬಸಾಪುರ ಹೊಟೇಲ್ ಬಿಟ್ಟರೆ ಈ ಸೀಮೆಯಲ್ಲಿ ಬೇರೆ ಎಲ್ಲೂ ಸಿಗುವುದಿಲ್ಲ.
ಬಳ್ಳಾರಿಯಲ್ಲಿ ನಾವು ಹೋಲ್‌ಸೇಲ್ ತರುತ್ತೇವೆ. ನಂತರ ಇಲ್ಲಿ ಚಿಲ್ಲರೆಯಾಗಿ ಮಾರಾಟ ಮಾಡುತ್ತೇವೆ. ನಮ್ಮ ಹತ್ತಿರ ಬಂದು ಕೆಲವರು ಹೋಲ್‌ಸೇಲ್‌ನಲ್ಲಿ ತೆಗೆದುಕೊಂಡು ಹೋಗುತ್ತಾರೆ. ಇಂದಿಗೂ ಹಳೆಯ ತಲೆಮಾರಿನವರು ವೈದ್ಯರ ಬಳಿ ಹೋಗದವರು ಇದ್ದಾರೆ. ಅಲ್ಲದೆ ಇತ್ತೀಚಿಗೆ ಆಯುರ್ವೇದದ ಕಡೆಗೆ ಬಹುತೇಕರು ಚಿತ್ತ ನೆಟ್ಟಿದ್ದಾರೆ ಎನ್ನುತ್ತಾರೆ ಬಸಾಪುರ ರಾಘವೇಂದ್ರ.
ಹೆಸರೇ ಕೇಳದ ವಸ್ತುಗಳು
ಯಟ್ಟಿಬೀಜ, ಭಜ್ಜಿ, ಸೂಜಿಗಲ್ಲು, ಮೊಸಂಬರ, ಸಮುದ್ರ ನೋರೆ, ಒಳಮುಚ್ಚುಗ, ಹೊರಮುಚ್ಚಗ, ಬೆನ್ನಅತ್ತಾಗ್, ಅಂಬಿಅರಿಷಿಣ, ಅಳವಿ, ಮಾಪಾಳಕಾಯಿ, ಜಾಪಾಳಮಾತ್ರೆ, ಅಶ್ವಗಂಧಚೂರ್ಣ,ತ್ರಿಫಲ ಚೂರ್ಣ, ಅಶ್ವಗಂಧಲೇಹ- ಹೀಗೆ ಇಂದಿನ ಪೀಳಿಗೆಗೆ ಹೆಸರೇ ಗೊತ್ತಿಲ್ಲದಂಥ ಗಿಡಮೂಲಿಕೆಗಳು, ಸಾಸಿವೆ, ಎಳ್ಳು, ಬೇವು, ಹರಳೆ, ಹತ್ತಿ, ಔಡಲ, ಬತ್ತಿ ಸೇರಿದಂತೆ ವಿವಿಧ ತೈಲ(ಎಣ್ಣೆ)ಗಳು ಬಸಾಪುರ ಹೊಟೇಲ್‌ನಲ್ಲಿ ಸಿಗುತ್ತವೆ.
ಇವತ್ತು ಜಗತ್ತು ಸಾಕಷ್ಟು ಆಧುನಿಕವಾಗಿ ವಿಸ್ತಾರಗೊಂಡಿದೆ. ವೈದ್ಯಕ್ಷೇತ್ರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸಂಶೋಧನೆಗಳು ನಡೆಯುತ್ತಲೇ ಇವೆ. ಆದರೂ ಪರಂಪರಾಗತವಾಗಿ ಬಂದಿರುವ ಗಿಡಮೂಲಿಕೆ, ಆಯುರ್ವೆದ ಔಷಧಿಗುಣವುಳ್ಳ ವಸ್ತುಗಳನ್ನು ಬಳಸುವವರ ಸಂಖ್ಯೆ ಕಮ್ಮಿಯಾಗುತ್ತಿಲ್ಲ. ಇಂಥವರ ಮನೆಮದ್ದಿಗೆ ಸಹಾಯಕವಾಗಿ ಬಿಸಿಲೂರಿನ ಬಸಾಪುರ ಹೊಟೇಲ್ ಕಾರ್ಯ ನಿರ್ವಹಿಸುತ್ತಿದೆ. ಬಸಾಪುರ ರಾಘವೇಂದ್ರ ಅಳರ ಸಂಪರ್ಕ ಸಂಖ್ಯೆ 99017-9085.
- ಚಿತ್ರಲೇಖನ: ಹುಳ್ಳಿ ಪ್ರಕಾಶ, ರಾಮನಗರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


