ಯಕ್ಷಾಂಗನೆ ಯಲಗುಪ್ಪ

ತೆಂಕುತಿಟ್ಟಿಗೂ ಸೈ. ಬಡಗುತಿಟ್ಟಿಗೂ ಇವರು ಸೈ. ಭರತನಾಟ್ಯದಲ್ಲೂ ಎತ್ತಿದ ಕೈ. ಎಲ್ಲವೂ ಮೇಳೈಸಿದ ಕಲಾವಿದ ಯಲಗುಪ್ಪ ಸುಬ್ರಹ್ಮಣ್ಯ ಹೆಗಡೆ.
ಯಕ್ಷಗಾನದಲ್ಲಿ ತೀವ್ರಾಸಕ್ತಿ, ಜತೆಗೆ ಮನೆಯಲ್ಲಿನ ಬಡತನಗಳು 22 ವರ್ಷ ಹಿಂದೆ ಈ ಕಲಾವಿದ ರಂಗಕ್ಕೆ ಬಂದು ಗೆಜ್ಜೆ ತೊಡುವಂತೆ ಮಾಡಿತ್ತು. ಪುರುಷನೇ ಸ್ತ್ರೀಯಾಗಿ ಸ್ತ್ರೀಯನ್ನೂ ನಾಚಿಸುವಂತ ಮೈಕಟ್ಟು ಹೊಂದಿರುವ ಯಲಗುಪ್ಪ ಯಕ್ಷಲೋಕದ ಯಕ್ಷಾಂಗನೆಯಾಗಿ ಈಗ ಪ್ರಬುದ್ಧ ಕಲಾವಿದರಾಗಿ ಬೆಳೆದಿದ್ದಾರೆ. ಉತ್ತರ ಕನ್ನಡದ ಹೊನ್ನಾವರದ ಯಲಗುಪ್ಪ ಇವರ ಊರು. ಆದ್ದರಿಂದ ಯಕ್ಷಲೋಕದಲ್ಲಿ ಯಲಗುಪ್ಪ ಎಂದೇ ಪ್ರಸಿದ್ಧಿ. ಸದ್ಯ ತೆಂಕುತಿಟ್ಟಿನ ಹೊಸನಗರ ಮೇಳದಲ್ಲಿ ಪ್ರಮುಖ ಸ್ತ್ರೀ ವೇಷಧಾರಿ.
ಹಾಡಲು ಬಂದವ ಗೆಜ್ಜೆ ಕಟ್ಟಿದ
ಆರಂಭದಲ್ಲಿ ಇವರು ಯಕ್ಷಗಾನದತ್ತ ಹೆಜ್ಜೆ ಹಾಕಿದ್ದು, ಹಾಡುಗಾರಿಕೆ ಕಲಿಯಬೇಕೆಂಬ ಇಚ್ಛೆಯಿಂದ. ಆದರೆ ಅಂದು ಯಕ್ಷಗಾನದಲ್ಲಿ ಸ್ತ್ರೀಪಾತ್ರಧಾರಿಗಳ ಕೊರತೆಯಿದ್ದರಿಂದ ಗುರುಗಳಾದ ಹೇರಂಜಾಲು ವೆಂಕಟ್ರಮಣ ಗಾಣಿಗರು, ಸ್ತ್ರೀಪಾತ್ರ ಕಲಿಯುವಂತೆ ನೀಡಿದ ಸಲಹೆ, ಪ್ರೋತ್ಸಾಹ ಇವರನ್ನು ಈಗ ಪರಿಪೂರ್ಣ ಸ್ತ್ರೀವೇಷಧಾರಿಯನ್ನಾಗಿಸಿದೆ.
ಕೆರೆಮನೆ, ಸಾಲಿಗ್ರಾಮ, ಪೆರ್ಡೂರು ಹೀಗೆ ಅನೇಕ ವೃತ್ತಿಪರ ಮೇಳಗಳಲ್ಲಿ ಕಾರ್ಯನಿರ್ವಹಿಸಿ ಈಗ ಹೊಸನಗರ ಮೇಳದಲ್ಲಿ ತಿರುಗಾಟದಲ್ಲಿದ್ದಾರೆ. ಕೆರೆಮನೆ ಮೇಳದಲ್ಲಿದ್ದಾಗ 2007 ರಲ್ಲಿ ಅಮೆರಿಕಾದ ನ್ಯೂಯಾರ್ಕ್‌ನಲ್ಲೂ 'ಇನ್‌ಕ್ರೆಡಿಬಲ್ ಇಂಡಿಯಾ' ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಶಂಸೆ ಗಳಿಸಿದ್ದಾರೆ. ಯಕ್ಷಗಾನದ ತಿರುಗಾಟದಲ್ಲಿದ್ದೂ ಸ್ನಾತಕೋತ್ತರ ಪದವಿಯನ್ನು ಪಡೆದ ಮೊದಲ ಕಲಾವಿದ ಎಂಬ ಹೆಗ್ಗಳಿಕೆ ಯಲಗುಪ್ಪ ಸುಬ್ರಹ್ಮಣ್ಯ ಹೆಗಡೆಯವರದ್ದು.
ಹರಿವಾಣ ನೃತ್ಯ
ಯಕ್ಷಪ್ರಿಯರು ಯಲಗುಪ್ಪರ ಪ್ರಭಾವತಿ, ಮೋಹಿನಿ, ದಾಕ್ಷಾಯಣಿ ಪಾತ್ರವನ್ನು ಸದಾ ನೆನಪಿಸಿಕೊಳ್ಳುತ್ತಾರೆ. ಶೃಂಗಾರ ಪ್ರಧಾನ ಪಾತ್ರಗಳು ಇವರಿಗೆ ಅಚ್ಚುಮೆಚ್ಚು. ಪ್ರೇಕ್ಷಕರು ಇವರನ್ನು ಸದಾ ನೆನಪಲ್ಲಿ ಇಡುವಂತೆ ಮಾಡಿದ್ದು ಇವರ ಹರಿವಾಣ ನೃತ್ಯ. ಭರತನಾಟ್ಯದಂತೆ ಯಕ್ಷಗಾನದಲ್ಲೂ ಹರಿವಾಣ ನೃತ್ಯ ಹಾಗೂ ಕುಂಭ (ಕೊಡಪಾನ) ನೃತ್ಯ ಮಾಡುವ ಮೂಲಕ ಜನಮನ ಗೆದ್ದಿದ್ದಾರೆ. 'ನಾನು ಭರತನಾಟ್ಯವನ್ನೂ ಕಲಿತಿದ್ದರಿಂದ ಅದನ್ನು ಯಕ್ಷಗಾನದಲ್ಲಿ ಅಳವಡಿಸಿಕೊಂಡು ಹೊಸಪ್ರಯೋಗ ಮಾಡಲು ಅವಕಾಶ ಲಭಿಸಿತು. ಈಶ್ವರಿ ಪರಮೇಶ್ವರಿ ಯಕ್ಷಗಾನದಲ್ಲಿ ಮೊದಲು ಹರಿವಾಣ ನೃತ್ಯ ಪ್ರಯೋಗ ಮಾಡಿದೆ. ಪ್ರೇಕ್ಷಕರಿಂದ ಉತ್ತಮ ಸ್ಪಂದನೆ ದೊರಕಿದ್ದು, ಇನ್ನಷ್ಟು ಪ್ರಯೋಗಕ್ಕೆ ನಾಂದಿಯಾಯಿತು' ಎನ್ನುತ್ತಾರೆ ಯಲಗುಪ್ಪ ಸುಬ್ರಹ್ಮಣ್ಯ ಹೆಗಡೆ.
ಹೊನ್ನಾವರದ ಯಲಗುಪ್ಪದಲ್ಲಿ ಸುರಭಿ ಯಕ್ಷಗಾನ ಪಲ್ಲವ ಎಂಬ ಸಂಸ್ಥೆ ಕಟ್ಟಿಕೊಂಡಿದ್ದಾರೆ. ಈ ಸಂಸ್ಥೆ ಮೂಲಕ ಯಕ್ಷಗಾನಾಸಕ್ತರಿಗೆ ತರಬೇತಿಯನ್ನು ಕೊಡಲು ಉದ್ದೇಶಿಸಿದ್ದಾರೆ. ಕಳೆದ ವರ್ಷ ಹುಬ್ಬಳ್ಳಿಯಲ್ಲಿ ಯಕ್ಷಗಾನ ಉಚಿತ ತರಬೇತಿ ಶಿಬಿರ ನಡೆಸಿಕೊಟ್ಟಿದ್ದು, 30 ಜನ ಶಿಬಿರಾರ್ಥಿಗಳು ಪಾಲ್ಗೊಂಡು ಉತ್ತಮ ಸ್ಪಂದನೆ ದೊರೆತಿದೆ. ಯಾವುದೇ ಸಂಘ ಸಂಸ್ಥೆಗಳು ಮುಂದೆ ಬಂದಲ್ಲಿ ಮೇಳದ ತಿರುಗಾಟದ ಸಮಯ ಬಿಟ್ಟು ಉಳಿದ ಬಿಡುವಿನ ವೇಳೆಯಲ್ಲಿ ತರಬೇತಿ ನೀಡಲು ಯಲಗುಪ್ಪ ಅವರು (ಮೊ- 8762150598) ಉತ್ಸುಕರಾಗಿದ್ದಾರೆ.
- ರಾಘವೇಂದ್ರ ಅಗ್ನಿಹೋತ್ರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


