ಮಾರುತಿ ಮಹಿಮೆ!

ಭಾರತೀಯ ಕಾರು ಗ್ರಾಹಕರ ಒತ್ತಾಸೆಗೆ ಮಾರುತಿ ಸುಝುಕಿಯೂ ಮಣೆ ಹಾಕುವ ಲಕ್ಷಣ ಕಂಡುಬರುತ್ತಿದೆ. ಮುಂದಿನ ವರ್ಷದೊಳಗೆ ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಮಾರುಕಟ್ಟೆಗೆ ತರುವ ಇಂಗಿತವನ್ನು ಸುಝುಕಿ ಈಗ ತೆರೆದಿಟ್ಟಿದೆ
ಭಾರತೀಯ ಕಾರು ಮಾರುಕಟ್ಟೆಯಲ್ಲಿ ಕಳೆದೆರಡು ವರ್ಷದಿಂದ ಋಣಾತ್ಮಕ ಬೆಳವಣಿಗೆಯಾಗುತ್ತಿದ್ದರೂ ಎಸ್‌ಯುವಿ ವ್ಯಾಪಾರದಲ್ಲಿ ಏರಿಕೆಯಾಗಿದೆ. ಭಾರತದಲ್ಲಿ ಯಾವುದೇ ಎಸ್‌ಯುವಿ ಹೊಂದದ ಮಾರುತಿ ಸುಝುಕಿ ಮಾರುಕಟ್ಟೆಯಲ್ಲಿ ಹಿಂದೆಬಿದ್ದಿತ್ತು. ಈ ಕೊರತೆ ತುಂಬಿಕೊಳ್ಳುವ ನಿಟ್ಟಿನಲ್ಲಿ ಇತ್ತೀಚೆಗೆ ಫ್ರ್ಯಾಂಕ್‌ಫರ್ಟ್‌ನಲ್ಲಿ ನಡೆದ ಮೋಟಾರ್ ಶೋನಲ್ಲಿ ಕಂಪನಿಯು ಐವಿ-4 ಕಾನ್ಸೆಪ್ಟ್ ಕಾರನ್ನು ಅನಾವರಣ ಮಾಡಿದೆ.
2012ರಲ್ಲಿ ದೆಹಲಿಯಲ್ಲಿ ನಡೆದ ಆಟೋ ಎಕ್ಸ್‌ಪೋನಲ್ಲಿ ಪ್ರದರ್ಶನವಾಗಿದ್ದ ಎಕ್ಸ್‌ಎ-ಆಲ್ಫಾದ ಮಾದರಿಯಲ್ಲೇ ಐವಿ-4 ಕೂಡ ರೂಪುಗೊಂಡಿದೆ. ಆದರೆ ಎಕ್ಸ್‌ಎ- ಆಲ್ಫಾ ಕಾನ್ಸೆಪ್ಟ್ ಕಾರಿಗಿಂತ ಐವಿ-4 ಆಕರ್ಷಕವಾಗಿ ಗೋಚರಿಸುತ್ತಿದೆ. ಇವೆರಡು ಕಾರುಗಳು ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗಕ್ಕೆ ಸೇರುತ್ತವೆ.
ಆದರೆ, ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗದ ಎರಡು ಕಾರುಗಳನ್ನು ಒಂದೇ ಬಾರಿಗೆ ಮಾರುಕಟ್ಟೆಗೆ ಬಿಡಲಾಗುತ್ತದೆಯೇ ಎಂಬ ಪ್ರಶ್ನೆ ಕಾಡಲಾರಂಭಿಸಿದೆ. ತಜ್ಞರ ಪ್ರಕಾರ, ಐವಿ-4 ಕಾನ್ಸೆಪ್ಟ್‌ಗೆ ಉತ್ತಮ ಪ್ರತಿಕ್ರಿಯೆ ಬಂದಲ್ಲಿ ಆಲ್ಫಾ ಯೋಜನೆಯನ್ನು ಕೈಬಿಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಆದರೆ ಸುಝುಕಿ ಭಾರತ ವಿಭಾಗದ ತಂಡ ರೂಪಿಸಿರುವ ಆಲ್ಫಾ ಕಾನ್ಸೆಪ್ಟ್ ಕಾರು ಕೂಡ 2014ರ ವರ್ಷಾರ್ಧದೊಳಗೆ ಬಿಡುಗಡೆಯಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಐವಿ- 4 ವಿಶೇಷ
ಭಾರತದಲ್ಲಿ ಈಗಾಗಲೇ ಹೆಸರು ಮಾಡಿರುವ ಮಹೀಂದ್ರಾ ಎಕ್ಸ್‌ಯುವಿ, ನಿಸಾನ್ ಜ್ಯೂಕ್ ಹಾಗೂ ರೆನೊ ಕ್ಯಾಪ್ಚರ್ ಕಾರಿನಂತೆಯೇ ಐವಿ-4 ಅನ್ನು ರೂಪಿಸಲಾಗಿದೆ. ಕಾನ್ಸೆಪ್ಟ್ ಕಾರು ಎಂದಾಕ್ಷಣ ಅದನ್ನು ಯಥಾವತ್ತಾಗಿ ಮಾರುಕಟ್ಟೆಗೆ ತರಲಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಕೆಲವು ಸಂದರ್ಭದಲ್ಲಿ ಕಾನ್ಸೆಪ್ಟ್ ಕಾರುಗಳು ಮಾರುಕಟ್ಟೆಗೆ ಬರುವುದೇ ಇಲ್ಲ. ಆದರೆ ಐವಿ-4 ಮೇಲೆ ಸುಝುಕಿ ಕಂಪನಿಯು ಅತಿಯಾದ ನಿರೀಕ್ಷೆ ಇರಿಸಿಕೊಂಡಿದೆ. 2014ರ ಅಂತ್ಯದೊಳಗೆ ಕಾರನ್ನು ಮಾರುಕಟ್ಟೆಗೆ ತರುವ ಉದ್ದೇಶವನ್ನು ಕಂಪನಿ ಇಟ್ಟುಕೊಂಡಿದೆ. ಪ್ರಾರಂಭಿಕ ಹಂತದಲ್ಲಿ ಹಂಗೇರಿಯಲ್ಲಿ ಕಾರು ಉತ್ಪಾದನೆಯಾಗಲಿದೆ. 4 ವ್ಹೀಲ್ ಡ್ರೈವ್ ಹಾಗೂ 5 ಪ್ರಯಾಣಿಕರು ಚಲಿಸಲು ಕಾರನ್ನು ವಿನ್ಯಾಸಗೊಳಿಸಲಾಗಿದೆ. ಬಾನೆಟ್, ಗ್ರಿಲ್ ಹಾಗೂ ಕಾರಿನ ಹಿಂದಿನ ಭಾಗಗಳಿಗೆ ಆಲ್ಫಾ ಕಾನ್ಸೆಪ್ಟ್ ಅನ್ನೇ ಉಳಿಸಿಕೊಳ್ಳಲಾಗಿದೆ.
ಕಂಪನಿಯ ಮೂಲಗಳು ಹೇಳಿರುವಂತೆ ನಿಸಾನ್ ಜ್ಯೂಕ್ ಹಾಗೂ ಫೋರ್ಡ್ ಇಕೋ ಸ್ಪೋರ್ಟ್‌ಗೆ ಪರ್ಯಾಯವಾಗಿ ಐವಿ-4 ಅನ್ನು ಬಿಡಲಾಗುತ್ತಿದೆ. ಇದರರ್ಥ ದರ ಹಾಗೂ ಗಾತ್ರದಲ್ಲೂ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಇಕೋಸ್ಪೋರ್ಟ್‌ಗೆ ಸರಿಸಾಟಿಯಾಗಿಯೇ ಬರಬಹುದು. ಕಾರಿನ ಒಳ ವಿನ್ಯಾಸ ಹಾಗೂ ಎಂಜಿನ್ ವಿವರಗಳು ಇನ್ನಷ್ಟೇ ಹೊರಬರಬೇಕಿದೆ.
ಆಲ್ಫಾ ವಿನ್ಯಾಸದಲ್ಲಿ ಭಾರತೀಯ ಎಂಜಿನಿಯರ್‌ಗಳೇ ಕೆಲಸ ಮಾಡಿದ್ದರೇ, ಐವಿ-4 ವಿನ್ಯಾಸದಲ್ಲಿ ಸುಝುಕಿ ಜಪಾನ್ ಹಾಗೂ ಭಾರತೀಯ ವಿಭಾಗ ಜಂಟಿಯಾಗಿ ಕಾರ್ಯನಿರ್ವಹಿಸಿದೆ. ಇದಲ್ಲದೇ ಇವರೆಡು ಕಾರುಗಳ ಉತ್ಪಾದನೆಯಲ್ಲೂ ಜಪಾನ್ ಮಾರುತಿ ಮತ್ತು ಸುಝುಕಿ ಜಂಟಿಯಾಗಿಯೇ ಕಾರ್ಯನಿರ್ವಹಿಸಲಿವೆ.
ಎಸ್‌ಎಕ್ಸ್-4ನ ನೂತನ ಮಾದರಿಗೆ ಖ್ಯಾತ ಫಿಯೆಟ್ ಡೀಸೆಲ್ ಎಂಜಿನ್ ಅನ್ನೇ ಬಳಸಿಕೊಳ್ಳಲಾಗಿದೆ. ಈ ಕಾಂಪ್ಯಾಕ್ಟ್ ಎಸ್‌ಯುವಿಗಳಲ್ಲಿಯೂ ಫಿಯೆಟ್ ಡಿಸೇಲ್ ಎಂಜಿನ್‌ನ್ನೇ ಬಳಸಿಕೊಳ್ಳಲು ಕಂಪನಿ ಚಿಂತನೆ ನಡೆಸುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


