ವಾಹನ

ಆನೆ ಭಾಸ್ಕರ್!

ಜಕ್ಕಣಕ್ಕಿ ಭಾಸ್ಕರ್ ಹಲವು ವರ್ಷಗಳಿಂದ ಮರದ ಆನೆಗಳ ತಯಾರಿಕೆಯಲ್ಲಿ ತೊಡಗಿಕೊಂಡವರು. ಸ್ಥಳೀಯವಾಗಿ 'ಆನೆ ಭಾಸ್ಕರ್‌' ಎಂದೇ...

ಆನೆ ಭಾಸ್ಕರ್!
Published On :

ಜಕ್ಕಣಕ್ಕಿ ಭಾಸ್ಕರ್ ಹಲವು ವರ್ಷಗಳಿಂದ ಮರದ ಆನೆಗಳ ತಯಾರಿಕೆಯಲ್ಲಿ ತೊಡಗಿಕೊಂಡವರು. ಸ್ಥಳೀಯವಾಗಿ 'ಆನೆ ಭಾಸ್ಕರ್‌' ಎಂದೇ ಚಿರಪರಿಚಿತ.
ಭಾಸ್ಕರ್ ಮೂಲತಃ ಕೇರಳದವರು. ತ್ರಿವೇಂದ್ರಮ್ ಸಮೀಪದ ಎಚ್. ಅಬ್ದುಲ್ ಕರೀಮ್ ಬಳಿ ಈ ಕಲೆಯನ್ನು ಕಲಿತದ್ದು ತಮ್ಮ 18 ವಯಸ್ಸಿನಲ್ಲಿ. ಮೈಸೂರು, ಮಡಿಕೇರಿಯ ಶುಂಠಿಕೊಪ್ಪದಲ್ಲಿ ಇದೇ ವೃತ್ತಿ ಮಾಡಿ, ನಂತರ ಚಿಕ್ಕಮಗಳೂರು ಜಿಲ್ಲೆ ಜಕ್ಕಣಕ್ಕಿಗೆ ಬಂದು ನೆಲೆಸಿದರು. 67 ವರ್ಷದ ಭಾಸ್ಕರ್‌ಗೆ ಕಳೆದ 45 ವರ್ಷಗಳಿಂದ ಇದೇ ವೃತ್ತಿ. ಅದೇ ಜೀವನ.
ಇಲ್ಲಿನ ಸುತ್ತಮುತ್ತಲಿನ ಎಸ್ಟೇಟ್ ಹಾಗೂ ತೋಟಗಳಲ್ಲಿ ಒಣಗಿ ಬಿದ್ದು ಹೋಗಿರುವ ಶಿವನೆ (ಶೂನೆ) ಮರವನ್ನು ತೋಟದ ಮಾಲೀಕರಿಂದ ಕೇಳಿ ತಂದು ಆನೆಗಳನ್ನು ತಯಾರಿಸುತ್ತಾರೆ. 'ಶಿವನೆ ಮರದಿಂದ ಮಾತ್ರ ಆನೆ ತಯಾರಿಸಬಹುದು. ಬೀಟೆ ಹಾಗೂ ಸಾಗುವಾನಿ ಮರಗಳಿಂದಲೂ ಮಾಡಬಹುದಾದರೂ ಅದಕ್ಕೆ ಅರಣ್ಯ ಇಲಾಖೆಯ ಅನುಮತಿ ಇರುವುದಿಲ್ಲ. ಹೀಗಾಗಿ ಬೀಟೆ, ಸಾಗುವಾನಿ ಮರಗಳನ್ನು ಬಳಸುವುದಿಲ್ಲ' ಎನ್ನುತ್ತಾರೆ ಭಾಸ್ಕರ್.
ಎಸ್ಟೇಟ್‌ಗಳಲ್ಲಿ ಒಣಗಿ ಬಿದ್ದು ಹೋಗಿ ದೊರೆಯುವ ಶಿವನೆ ಮರ ಬಳಸಲು ಯಾವುದೇ ಅಡ್ಡಿಯಿಲ್ಲ. ಇಂಚಿನ ಆನೆಯಿಂದ 4 ಅಡಿಯವರೆಗಿನ ಆನೆಗಳನ್ನು ಇವರು ತಯಾರಿಸುತ್ತಾರೆ. ಮರಗಳನ್ನು ತಂದು ಬೇಕಾದ ಗಾತ್ರಕ್ಕೆ ಅನುಗುಣವಾಗಿ ಮೊದಲು ಕತ್ತರಿಸುತ್ತಾರೆ. ನಂತರ ಅದನ್ನು ಉಳಿ ಹಾಗೂ ಅರಗಳ ಸಹಾಯದಿಂದ ಆನೆ ಆಕಾರಕ್ಕೆ ಕೆತುತ್ತಾರೆ. ಫಿನಿಷಿಂಗ್ ಪೇಪರ್‌ನಲ್ಲಿ ಉಜ್ಜಿ ಅಂತಿಮ ರೂಪು ನೀಡಲಾಗುತ್ತದೆ.
ಚಿಕ್ಕ ಆನೆ ತಯಾರಿಸಲು ಒಂದು ದಿನ, ಮಧ್ಯಮ ಗಾತ್ರದ್ದಾದ್ದರೆ 3 ರಿಂದ 4 ದಿನ, 3 ರಿಂದ 4 ಅಡಿಗಳ ಆನೆಗಳನ್ನು ತಯಾರಿಸಲು ಬರೋಬ್ಬರಿ 45 ದಿನ ಹಿಡಿಯುತ್ತದೆ. ಆನೆಗಳ ತಯಾರಿಕೆಗೆ ಬೇಕಾಗುವ ಸಲಕರಣೆಗಳಾದ ಉಳಿ ಮತ್ತು ಅರ ಕೇರಳದಲ್ಲಿ ಮಾತ್ರ ದೊರೆಯುತ್ತದೆ. ಸ್ಥಳೀಯವಾಗಿ ಇಲ್ಲೆಲ್ಲೂ ದೊರೆಯುವುದಿಲ್ಲ ಎನ್ನುತ್ತಾರೆ ಭಾಸ್ಕರ್.
ಇವರು ತಯಾರಿಸುವ ಈ ಆನೆಗಳು ಹೆಚ್ಚಾಗಿ ವಿದೇಶ ಹಾಗೂ ಬೇರೆ ರಾಜ್ಯಗಳಿಗೆ ಕೊಂಡಯ್ಯಲಾಗುತ್ತಿದೆ. ಮದುವೆ, ಹುಟ್ಟುಹಬ್ಬ ಹಾಗೂ ಇನ್ನಿತರೆ ಕಾರ್ಯಕ್ರಮಗಳಿಗೆ ಮತ್ತು ಸಭೆ ಸಮಾರಂಭಗಳಲ್ಲಿ ಅತಿಥಿಗಳಿಗೆ ನೀಡಲು ಇವನ್ನು ಹೆಚ್ಚಾಗಿ ಜನ ಕೊಳ್ಳುತ್ತಾರೆ. ಹೊಸ ಮನೆ ಕಟ್ಟಿಸಿದಾಗ ಅಲಂಕಾರಕ್ಕೆ ಇಡಲೂ ಕೊಳ್ಳುವವರಿದ್ದಾರೆ. ತನ್ನ ಕುಟುಂಬದಲ್ಲಿ ತಾನೊಬ್ಬನೆ ಈ ಕಲೆಯನ್ನು ಕಲಿತಿದ್ದು, ಇರುವ ಒಬ್ಬ ಮಗ ವಿಜಯ್ ಇದನ್ನು ಕಲಿತಿಲ್ಲ. ಉದ್ಯೋಗ ಅರಸಿ ಬೆಂಗಳೂರಿಗೆ ಹೋಗಿದ್ದಾರೆ. ತನ್ನ ನಂತರ ಇದನ್ನು ಮಾಡುವವರಿಲ್ಲ ಎಂಬ ಕೊರಗು ಭಾಸ್ಕರ್‌ದು.
ಇದಲ್ಲದೇ ಇವರಿಗೆ ಕಾಫಿ ಬಡ್ಡೆಗಳಿಂದ ಅಲಂಕಾರಿಕ ಸ್ಟ್ಯಾಂಡ್‌ಗಳನ್ನು ತಯಾರಿಸುವ ಕಲೆಯೂ ತಿಳಿದಿದೆ. ಬಂಡವಾಳದ ಕೊರತೆಯಿಂದ ತಾವು ಆನೆ ಕಲಾಕೃತಿಗಳ ಮಾರಾಟದ ಅಂಗಡಿ ಹಾಕಿಲ್ಲ. ಕಲೆಗೆ ಪ್ರೋತ್ಸಾಹ ನೀಡುತ್ತಿರುವವರು ಪತ್ನಿ ವತ್ಸಲಾ ಎಂದು ಹೇಳಲು ಅವರು ಮರೆಯುವುದಿಲ್ಲ. ಈ ಕಲೆಯನ್ನು ಬೇರೆಯವರಿಗೆ ಹೇಳಿಕೊಡಲೂ ಅವರು ಸಿದ್ಧ. ಇವರ ಸಂಪರ್ಕ: 9481410225, 08266-248066.

ಬಹಳ ಬೇಡಿಕೆ
ನಾನು ತಯಾರಿಸಿದ ಒಂದು ಆನೆಗಳು ನನ್ನಲ್ಲಿ ಉಳಿಯುವುದಿಲ್ಲ. ಕುಟುಂಬದಲ್ಲಿ ನಾನೊಬ್ಬನೇ ಈ ಕಲೆ ಕಲಿತಿರುವುದರಿಂದ ಬೇಡಿಕೆಗೆ ಅನುಗುಣವಾಗಿ ಪೂರೈಸಲು ಆಗುತ್ತಿಲ್ಲ. ಬೇರೆಯವರು ಯಾರಾದರೂ ಇದನ್ನು ಕಲಿಯಲು ಆಸಕ್ತಿ ತೋರಿಸಿದರೆ ಕಲಿಸಲು ಸಿದ್ಧನಿದ್ದೇನೆ.
- ಭಾಸ್ಕರ್

- ಆರ್. ತಾರಾನಾಥ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.