ವಾಹನ

ಹಸಿರು ಗಿರಿ

ಹಸಿರು ಗಿರಿ
Published On :

ಕೆಲವರ್ಷಗಳ ಹಿಂದಿನ ಭದ್ರಗಿರಿ ಪರ್ವತವನ್ನು ನೋಡಿದ್ದವರು ಈಗ ಕಂಡರೆ ಮೂಗಿನ ಮೇಲೆ ಬೆರಳಿಡುತ್ತಾರೆ. 'ಅಬ್ಬಾ! ಇದು ಹೇಗೆ ಸಾಧ್ಯವಾಯಿತು'  ಎಂದು ಅಚ್ಚರಿಯ ಉದ್ಗಾರ ತೆಗೆಯುತ್ತಾರೆ. ಕಲ್ಲುಮಣ್ಣಿನಿಂದ ಕೂಡಿದ್ದ ಪರ್ವತದ ಕೆಲಭಾಗ ಈಗ ಹಸಿರಿನಿಂದ ನಲಿಯುತ್ತಿದ್ದರೆ ಅದಕ್ಕೆ ಜೈನಮುನಿಯೊಬ್ಬರ ಇಚ್ಛಾಶಕ್ತಿ ಕಾರಣ.

ರಬಕವಿಯ ಕುಲರತ್ನ ಮುನಿಭೂಷಣ ಮಹಾರಾಜರು ಸಂಕಲ್ಪ ಹಾಗೂ ಇಚ್ಛಾಶಕ್ತಿಯಿಂದಾಗಿ ಭದ್ರಗಿರಿಯ ಕಾಲು ಭಾಗದ ಪ್ರದೇಶಕ್ಕೆ ಈಗ ಹಸಿರು ಹೊದಿಕೆ. ಇಡೀ ಪರ್ವತವನ್ನು ಆಯುರ್ವೇದ ಔಷಧೀಯ ವನವನ್ನಾಗಿ ಪರಿವರ್ತಿಸಲು ಅವರು ಸಂಕಲ್ಪ ತೊಟ್ಟಿದ್ದಾರೆ.
ಈಗಾಗಲೇ ಈ ಪರ್ವತದಲ್ಲಿ ಮುನಿಗಳು 50ಕ್ಕೂ ಹೆಚ್ಚಿನ ವಿವಿಧ ಮಾದರಿಯ ಆಯುರ್ವೇದ ಗುಣವುಳ್ಳ ಸಾವಿರಾರು ಸಸ್ಯಗಳನ್ನು ಪೋಷಿಸುತ್ತಿದ್ದಾರೆ. ಸರ್ಪಗಂಧ, ಗುಡ್ಡದ ನೆಲ್ಲಿ, ನಂದಿ ಬಟ್ಟಲು, ರಕ್ತ ಚಂದನ, ಧೂಪ, ಮದನಾನಿ, ಕರಿಮೆಣಸು, ಹಿಪ್ಪಲಿ, ಪೊಂಗೆ, ಅಡಸೋಗೆ, ಸೀತಾಫಲ, ಹಲಸು, ದಾಲ್ಚಿನ್ನಿ, ನಾಗಸಂಪಿಗೆ, ಬಿಲ್ವಪತ್ರಿ, ದೇವವೃಕ್ಷ, ರಾತ್ರಿರಾಣಿ, ಗ್ರಿಪ್ ಚಂದನ ಮುಂತಾದ ಜಾತಿಯ 2700ಕ್ಕೂ ಹೆಚ್ಚಿನ ಮರಗಳು ಬೆಳೆದು ನಿಂತಿವೆ.
ಭದ್ರಗಿರಿಗೆ ಸಂಪೂರ್ಣ ಹಸಿರು ಹೊದಿಕೆಯಾಗುವವರೆಗೆ ತಾವು ವಿರಮಿಸುವುದಿಲ್ಲ ಎಂದು ಮುನಿಗಳು ಶಪಥ ಮಾಡಿದ್ದು, ಅದರ ಅಂಗವಾಗಿ ಇತ್ತೀಚೆಗೆ ಭಕ್ತರಿಂದ ಒಂದು ಲಕ್ಷ ಎಂಟು ಸಸಿಗಳನ್ನು ನೆಡೆಸಿ ಅವುಗಳನ್ನು ಪೋಷಿಸುವ ಹೊಣೆಗಾರಿಕೆ ಹೊರಿಸಿದ್ದಾರೆ.
ಪ್ರತಿಯೊಬ್ಬ ಭಕ್ತನಿಗೆ ಒಂದು ಗಿಡ ಬೆಳೆಸುವ ಜವಾಬ್ದಾರಿ ನೀಡಲಾಗಿದೆ. ತಮ್ಮ ದರ್ಶನಾರ್ಥ ಬರುವ ಭಕ್ತರಿಂದ ಬೇರೇನೂ ಫಲಾಪೇಕ್ಷೆ ಬಯಸದ ಮುನಿಗಳು, 'ನನ್ನ ಆಶೀರ್ವಾದ ಬಯಸಿ ಬಂದಿದ್ದಲ್ಲಿ ಭದ್ರಗಿರಿ ಪ್ರದೇಶದಲ್ಲಿ ಒಂದು ಸಸಿ ನೆಟ್ಟು ಅದರ ಪಾಲನೆ-ಪೋಷಣೆ ಮಾಡಿ. ಅದರಿಂದ ನೇರವಾಗಿ ನಿಮ್ಮ ಪ್ರಾರ್ಥನೆ ಭಗವಂತನಿಗೆ ಸಲ್ಲುತ್ತದೆ' ಎಂದು ಉಪದೇಶಿಸುತ್ತಿದ್ದಾರೆ. ಇದರಿಂದ ಭಕ್ತರು ಸ್ವಯಂಪ್ರೇರಿತರಾಗಿ ಸಸಿಗಳನ್ನು ನೆಡಲು ಮುಂದೆ ಬಂದಿದ್ದಾರೆ.

ಐತಿಹಾಸಿಕ ಹಿನ್ನೆಲೆ
ಉತ್ತರ ಭಾರತದಿಂದ ಬಂದು ತಮ್ಮ 776 ಶಿಷ್ಯರೊಡನೆ ಈ ಪರ್ವತದಲ್ಲಿ ಚಾತುರ್ಮಾಸ ಆಚರಿಸಿದ್ದ ಭದ್ರಬಾಹು ಮುನಿಗಳಿಂದಾಗಿ ಜೈನ ಮುನಿಗಳು ವಾಸಿಸುವ ಗುಂಫಾಗಳನ್ನು ಹೊಂದಿರುವ ಕಾರಣಕ್ಕೆ ಈ ಪರ್ವತವನ್ನು ಭದ್ರಗಿರಿ ಎಂದು ಕರೆಯಲಾಗುತ್ತಿದೆ.
ಈಚೆಗೆ ಮೂರು ದಿಗಂಬರ ಮೂರ್ತಿಗಳು ದೊರೆತ ಬಳಿಕ ಕುಲರತ್ನ ಮುನಿಭೂಷಣ ಮಹಾರಾಜರು ಸರ್ಕಾರದ ಮತ್ತು ಭಕ್ತರ ನೆರವಿನಲ್ಲಿ ಪವಿತ್ರ ಜಲಮಂದಿರ ನಿರ್ಮಿಸಲು ಮುಂದಾಗಿದ್ದಾರೆ.

ಸುಂದರ ಪರಿಸರ ಉಳಿಸುವ ಹೊಣೆ
ಪಶು-ಪಕ್ಷಿ-ವನ್ಯ ಪ್ರಾಣಿ ಸಂಕುಲನಕ್ಕೆ ಜೀವಜಲವಾಗಿ ಜಲಮಂದಿರದ ನೀರು ಮತ್ತು ಆಹಾರವಾಗಿ ಮರಗಳಿಂದ ಫಲಗಳು ದೊರೆಯುವಂತಾಗಬೇಕು. ಪ್ರಾಚೀನ ಔಷಧೀಯ ಮರಗಳನ್ನು ಉಳಿಸಿಕೊಂಡು ಅವುಗಳ ಬಳಕೆಯಿಂದ ಆಯುರ್ವೇದ ವೈದ್ಯ ವಿಜ್ಞಾನವನ್ನು ಬೆಳೆಸುವಂತಾಗಬೇಕು ಮತ್ತು ಮುಂಬರುವ ಪೀಳಿಗೆಗೆ ವಿಷಯುಕ್ತವಲ್ಲದ ಸುಂದರ ಹಸಿರುಯುಕ್ತ ಪರಿಸರ ನೀಡುವ ಹೊಣೆಗಾರಿಕೆ ಎಲ್ಲರ ಮೇಲಿದೆ ಎನ್ನುತ್ತಾರೆ ಸ್ವಾಮೀಜಿ.

ವಾರದಲ್ಲಿ 50 ಸಾವಿರ ಸಸಿ ನೆಡುವ ಗುರಿ
ಮಹಾರಾಷ್ಟ್ರದ ಸತಾರಾ, ಇಚಲಕರಂಜಿ, ಮುಂಬೈ ಸೇರಿದಂತೆ ರಾಜ್ಯದ ವಿವಿಧ ಪ್ರದೇಶಗಳ ಭಕ್ತರು ತಾವೇ ಸ್ವತಃ ಸಸಿಗಳನ್ನು ತಂದು ನೆಡುತ್ತಿದ್ದಾರೆ. ಸರ್ಕಾರ ಮತ್ತು ಸಾರ್ವಜನಿಕರು ಸಸಿಗಳಿಗೆ ನೀರುಣಿಸಲು ಅಗತ್ಯ ಸೌಲಭ್ಯ ಕಲ್ಪಿಸಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿಯೂ ಸಹಾಯ ಹಸ್ತ ಚಾಚಿದ್ದಾರೆ. ಹೀಗಾಗಿ ಕೇವಲ ಒಂದು ವಾರದಲ್ಲಿ 50 ಸಹಸ್ರ ಸಸಿಗಳನ್ನು ನೆಡುವ ಉದ್ದೇಶ ತಮ್ಮದಾಗಿದೆ ಎಂದು ಕುಲರತ್ನ ಮುನಿಭೂಷಣ ಮಹಾರಾಜರು ತಿಳಿಸಿದ್ದಾರೆ.

ಬನ್ನಿ... ಸಸಿ ನಡಿ...
ನನ್ನ ಆಶೀರ್ವಾದ ಬಯಸಿ ಬರುವವರು ಭದ್ರಗಿರಿ ಪ್ರದೇಶದಲ್ಲಿ ಒಂದು ಸಸಿ ನೆಟ್ಟು ಅದರ ಪಾಲನೆ-ಪೋಷಣೆ ಮಾಡಿ. ಅದರಿಂದ ನೇರವಾಗಿ ನಿಮ್ಮ ಪ್ರಾರ್ಥನೆ ಭಗವಂತನಿಗೆ ಸಲ್ಲುತ್ತದೆ.
- ಕುಲರತ್ನ ಮುನಿಭೂಷಣ ಮಹಾರಾಜರು

- ಶಿವಾನಂದ ಮಹಾಬಳಶೆಟ್ಟಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.