ಮೋಹಕ ಮೇಲುಕೋಟೆ

ಬೆಟ್ಟಗುಡ್ಡ, ಕಲ್ಯಾಣಿ ಕೊಳ, ಭಕ್ತಿಭಾವ ಸಂಗಮಗಳಿಂದ ಪ್ರವಾಸಿಗರ ಮನಸೂರೆಗೊಳ್ಳುವ ಪ್ರಸಿದ್ಧ ಪ್ರವಾಸಿ ತಾಣ ಮೇಲುಕೋಟೆ. ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನಲ್ಲಿರುವ ಈ ತಾಣ ಪ್ರವಾಸಿಗರಿಗೆ ಸ್ವರ್ಗ. ಭಕ್ತರಿಗೆ ಧಾರ್ಮಿಕ ಕೇಂದ್ರ. ಅಷ್ಟೇ ಅಲ್ಲ, ಸಿನಿಮಾ ಮಂದಿಗೂ ಚಿತ್ರೀಕರಣಕ್ಕೆ ಅಚ್ಚುಮೆಚ್ಚಿನ ಸ್ಥಳ.
ಮೇಲುಕೋಟೆಯ ಪ್ರತಿಯೊಂದು ಸ್ಥಳಗಳೂ ಸುಂದರ. ಪ್ರತಿವರ್ಷ ಇಲ್ಲಿ ನಡೆಯುವ 'ವೈರಮುಡಿ' ಉತ್ಸವ ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತದೆ. ಹಿಂದಿನ ಕಾಲದಲ್ಲಿ ವೇದಾದ್ರಿ, ನಾರಾಯಣಾದ್ರಿ, ಯಾದಲಾದ್ರಿ ಮುಂತಾದ ಹೆಸರುಗಳಿಂದ ಕರೆಯಲಾಗುತ್ತಿದ್ದ ಈ ಕ್ಷೇತ್ರದಲ್ಲಿ ರಾಮಾನುಜಾಚಾರ್ಯರು ನೆಲೆಸಿದ್ದರು. ಇಲ್ಲಿಯ ಚೆಲುವ ನಾರಾಯಣ ಮತ್ತು ಯೋಗಾನರಸಿಂಹಸ್ವಾವುಯ ದೇವಾಲಯಗಳು ಪುರಾಣ ಪ್ರಸಿದ್ಧವಾದವು. ನೋಡಲು ಸೊಗಸಾಗಿರುವ ಚೆಲುವನಾರಾಯಣ ದೇವಾಲಯದ ಒಳಭಾಗದ ಕಂಬಗಳಲ್ಲಿ ಮಹಾಭಾರತದ ಕಥೆ ಹೇಳುವ ಕೆತ್ತನೆಗಳಿವೆ. ಬೆಟ್ಟದ ತುದಿಯಲ್ಲಿರುವ ಯೋಗಾನರಸಿಂಹಸ್ವಾವು ದೇವಾಲಯ ಬಹಳ ಪ್ರಾಚೀನವಾದುದು. ಇಲ್ಲಿನ ನರಸಿಂಹನನ್ನು ಪ್ರಹ್ಲಾದನು ಸ್ಥಾಪಿಸಿದನೆಂಬ ಪ್ರತೀತಿ ಇದೆ. ಬೆಟ್ಟದ ಮೇಲೆ ತಂಪಾದ ವಾತಾವರಣವಿದ್ದು, ಪ್ರವಾಸಿಗರಿಗೆ ಮುದ ನೀಡುತ್ತದೆ. ಇಲ್ಲಿ ನಿಂತು ಮೈಸೂರಿನ ಹಲವು ಸ್ಥಳಗಳನ್ನು ವೀಕ್ಷಿಸಬಹುದಾಗಿದೆ.
ಪುಷ್ಕರಿಣಿ
ಮೇಲುಕೋಟೆಯಲ್ಲಿನ ದೊಡ್ಡ ಕಲ್ಯಾಣಿ (ಪುಷ್ಕರಿಣಿ) ಬಹಳ ಜನರನ್ನು ಆಕರ್ಷಿಸುತ್ತದೆ. ಕಲ್ಯಾಣಿ ಹತ್ತಿರ ನಿಂತು ಯಾವುದೇ ಕೋನಗಳಿಂದ ನೋಡಿದರೂ ಸುಂದರ ದೃಶ್ಯಗಳೇ ಕಾಣುತ್ತವೆ. ಕಲ್ಯಾಣಿಯ ಸುತ್ತಮುತ್ತಲಿನ ಕಲ್ಲಿನ ಕಂಬಗಳು ಸೊಗಸಾಗಿ ಕಾಣುತ್ತವೆ. ಹಿನ್ನೆಲೆಯಲ್ಲಿ ಬೆಟ್ಟದ ಮೇಲಿನ ದೇವಾಲಯ ತುಂಬಾ ಚೆಲುವಾಗಿ ಕಾಣುತ್ತದೆ.
ರಾಯಗೋಪುರ
ಇಲ್ಲಿನ ಮತ್ತೊಂದು ಜನಾಕರ್ಷಕ ತಾಣವೆಂದರೆ ಗೋಪಾಲರಾಯನ ಬಾಗಿಲು (ರಾಯಗೋಪುರ). ಈ ಕೋಟೆ ಬಾಗಿಲಿನ ಕಟ್ಟಡ ಅರ್ಧಕ್ಕೆ ನಿಂತರೂ ಸಹ ಸುಂದರ ದೃಶ್ಯಕಾವ್ಯವೇ ಸರಿ. ನಾಲ್ಕು ದೊಡ್ಡ ದೊಡ್ಡ ಕಂಬಗಳಿಂದ ಕೂಡಿರುವ ಈ ಕಟ್ಟಡದಲ್ಲಿ ಹಲವು ಶಿಲ್ಪಗಳನ್ನು ಕೆತ್ತಲಾಗಿದೆ. ಇದನ್ನು ವಿಜಯನಗರದ ಅರಸರ ಕಾಲದಲ್ಲಿ ನಿರ್ಮಸಲಾಗಿದೆ ಎಂಬ ಪ್ರತೀತಿ ಇದೆ. ನೋಡುಗರ ಕಣ್ಮನ ಸೆಳೆಯುವ ಈ ಸ್ಥಳವು ಅಸಂಖ್ಯ ಚಲನಚಿತ್ರಗಳಿಗೆ ತನ್ನ ಹಿನ್ನೆಲೆ ದೃಶ್ಯ ಒದಗಿಸಿದೆ. ಇನ್ನು ಮೇಲುಕೋಟೆಯಲ್ಲಿ ಕವಿ ಪುತಿನ ಹುಟ್ಟಿದ ಮನೆ, ಸಂಸ್ಕೃತ ಸಂಶೋಧನೆ ಕೇಂದ್ರಗಳನ್ನೂ ಕಾಣಬಹುದು.
- ದಂಡಿನಶಿವರ ಮಂಜುನಾಥ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


