ವಾಹನ

ತಂಬ್ರಹಳ್ಳಿ ತಂಗಾಳಿ

ತಂಬ್ರಹಳ್ಳಿ ತಂಗಾಳಿ
Published On :

ತೆಂಗು, ಕಬ್ಬು, ಮೆಕ್ಕೆಜೋಳದ ಹೊಲಗಳ ಹಚ್ಚಹಸಿರು. ಕಣ್ಣಿಗೆ ಕಾಣುವವರೆಗೂ ವಿಶಾಲವಾಗಿ ಹರಡಿರುವ ತುಂಗಾಭದ್ರ ಜಲಾಶಯದ ಹಿನ್ನೀರ ಜಲರಾಶಿಯ ನಡುವೆ ಎತ್ತರದ ಗುಡ್ಡ. ಅದರ ತುದಿಯಲ್ಲಿ ಪ್ರಾಚೀನ ಕಾಲದ ದೇವಸ್ಥಾನ. ನಿಸರ್ಗಪ್ರೇಮಿಗಳು, ಧಾರ್ಮಿಕ ಮನೋಭಾವದವರು ಇಬ್ಬರನ್ನೂ ಖುಷಿಪಡಿಸಲು ಇನ್ನೇನು ಬೇಕು?
ಉತ್ತರ ಕರ್ನಾಟಕದ ಮಂದಿ ದಿನದ ಮಟ್ಟಿಗೆ ಸಂಸಾರಸಮೇತ ಪಿಕ್‌ನಿಕ್‌ಗೆ ಹೋಗಿಬರಲು ತಂಬ್ರಹಳ್ಳಿ  ಸೂಕ್ತ. ರಂಗಪ್ಪನಗುಡ್ಡದ ತುದಿಯಲ್ಲಿ ಬಂಡೆ ರಂಗನಾಥಸ್ವಾಮಿ ದೇವಸ್ಥಾನವಿದೆ. ಇದನ್ನು ಸುಮಾರು 600 ವರ್ಷ ಹಿಂದೆ ಹರಪನಹಳ್ಳಿ ಪಾಳೆಗಾರರು ನಿರ್ಮಿಸಿದ್ದು. ದೇವಾಲಯದ ಕೆತ್ತನೆಯೇ ಮನಮೋಹಕ. ಪಕ್ಕದಲ್ಲಿಯೇ ಲಕ್ಷ್ಮಿ ದೇಗುಲ.
ದೇವರ ದರ್ಶನ ಪಡೆದು ಸನಿಹದಲ್ಲೇ ಇರುವ ಗೋಪುರಕ್ಕೆ ಭೇಟಿ ಕೊಟ್ಟರೆ ಮನಸ್ಸು ಹಗುರ, ಮೈಯ್ಯೆಲ್ಲ ತಂಪು. ವಿಜಯನಗರ ಅರಸರ ಕಾಲದ ವಾಸ್ತುಶೈಲಿಯಲ್ಲಿ ಕಟ್ಟಿರುವ ಸುಂದರ ಗೋಪುರದಲ್ಲಿ ಸದಾಕಾಲ ತಂಗಾಳಿ ಬೀಸುತ್ತಿರುತ್ತದೆ. ಹೀಗಾಗಿ ಇದನ್ನು 'ತಂಗಾಳಿ ಗೋಪುರ', 'ತಂಗಾಳಿ ಮಂಟಪ' ಎನ್ನುತ್ತಾರೆ. ಇಲ್ಲಿ ಬಂದು ಕುಳಿತರೆ ತಣ್ಣನೆಯ ಗಾಳಿ ನಾವು ಈ ಪ್ರಪಂಚವನ್ನೇ ಮರೆಯುವಂತೆ ಮಾಡುತ್ತದೆ. ಬೆಟ್ಟದ ಮೇಲೆ ಅನೇಕ ಸಣ್ಣಪುಟ್ಟ ಗುಹೆಗಳಿವೆ. ನೀರಿನ ಹೊಂಡವಿದೆ. ಬೆಟ್ಟದ ಕೆಳಗಡೆ ಓಬಳನಾಯಕ ಕಟ್ಟಿಸಿದ ಬಾವಿಯಿದೆ. ಬಾವಿಯ ಮುಖಮಂಟಪ ಹಾಗೂ ಸುತ್ತಲೂ ಕೆತ್ತಿರುವ ಉಬ್ಬುಚಿತ್ರಗಳು ಅತ್ಯಾಕರ್ಷಕ. ಆದರೆ ಸರಿಯಾದ ನಿರ್ವಹಣೆಯಿಲ್ಲದೇ ಬಾವಿಯಲ್ಲಿ ಮುಳ್ಳಿನಗಿಡಗಳು ಬೆಳೆದಿವೆ.
ಇತ್ತಿಚಿಗೆ ಒಂದು ಕೋಟಿ ರುಪಾಯಿ ವೆಚ್ಚದಲ್ಲಿ ಪ್ರವಾಸೋದ್ಯಮ ಇಲಾಖೆ ವತಿಯಿಂದ ಬೆಟ್ಟದ ಮೇಲೆ ಹೋಗಲು ಕಾಂಕ್ರೀಟ್ ರಸ್ತೆ, ಗುಡ್ಡದಲ್ಲಿರುವ ನೀರಿನ ಹೊಂಡದ ಸುತ್ತಲೂ ರಕ್ಷಣಾ ಹಿಡಿಕೆ, ತಂಗಾಳಿ ಗೋಪುರ, ಸಮುದಾಯ ಭವನ ನಿರ್ಮಾಣಗಳ ಜತೆಗೆ ದೇವಸ್ಥಾನದ ದುರಸ್ತಿ ಕಾರ್ಯವನ್ನೂ ಕೈಗೊಂಡಿದೆ.  ಬೆಟ್ಟ ಹತ್ತಲು ಮೆಟ್ಟಿಲುಗಳಿವೆ. ಬಳ್ಳಾರಿ ಜಿಲ್ಲೆಯ ತಾಲ್ಲೂಕು ಕೇಂದ್ರ  ಹಗರಿಬೊಮ್ಮನಹಳ್ಳಿಯಿಂದ 19 ಕಿ.ಮಿ.ದೂರದಲ್ಲಿ ಬಂಡೆರಂಗಪ್ಪನ ಗುಡ್ಡವಿದೆ.
ಮಳೆಗಾಲದಲ್ಲಿ ಮೈದುಂಬಿ ಹರಿಯುತ್ತಿರುವ ತುಂಗಭದ್ರೆ ಜೂನ್‌ನಿಂದ ಜನವರಿ ತನಕವೂ ಈ ಬೆಟ್ಟವನ್ನು ಸುತ್ತುವರೆದು ನಿಲ್ಲುತ್ತದೆ. ಆಗ ಇದರ ಸೌಂದರ್ಯ ನೂರ್ಮಡಿಸುತ್ತದೆ. ಈ ದಿನಗಳಲ್ಲಿ ಇಲ್ಲಿಯ ಸೊಬಗು ನೋಡಲು ಪ್ರವಾಸಿಗರು ತಂಡೋಪತಂಡವಾಗಿ ಬರುತ್ತಾರೆ. ಪ್ರತಿವರ್ಷ ಹೋಳಿ ಹುಣ್ಣಿಮೆಯಂದು ರಥೋತ್ಸವ ಜರುಗುತ್ತದೆ. ಆಗ ಲಕ್ಷಾಂತರ ಭಕ್ತರು ಇಲ್ಲಿ ನೆರೆಯುತ್ತಾರೆ.

ಕನಸಿನಲ್ಲಿ ಬಂದ
ಬೆಟ್ಟದ ಮೇಲಿನ ಬಂಡೆಯಲ್ಲಿ ಉದ್ಭವಗೊಂಡ ರಂಗನಾಥಸ್ವಾಮಿ ವಿಗ್ರಹ ಇರುವ ಬಗ್ಗೆ ಈ ಪ್ರದೇಶದ ಉಸ್ತುವಾರಿಗೆ ನೇಮಕಗೊಂಡಿದ್ದ ದಳಪತಿ ಓಬಳ ನಾಯಕನಿಗೆ ಕನಸು ಬಿತ್ತು. ಆ ಪ್ರಕಾರ ಹುಡುಕಲಾಗಿ ವಿಗ್ರಹ ಪತ್ತೆಯಾಯಿತು. ನಾಯಕ ಅಲ್ಲಿಯೇ ಸುಂದರ ದೇವಸ್ಥಾನ ಕಟ್ಟಿಸಿ ರಂಗನಾಥನನ್ನು ಪ್ರತಿಷ್ಠಾಪಿಸಿದ ಎನ್ನುವುದು ಇಲ್ಲಿನ ಐತಿಹ್ಯ.
ಹೀಗೆ ಬನ್ನಿ
ಬೆಂಗಳೂರು ಸೇರಿದಂತೆ ನಾಡಿನ ವಿವಿಧ ಕಡೆಗಳಿಂದ ಹಗರಿಬೊಮ್ಮನಹಳ್ಳಿಗೆ ನೇರ ಬಸ್ಸಿನ ಸೌಲಭ್ಯವಿದೆ. ಹಗರಿಬೊಮ್ಮನಹಳ್ಳಿಯಿಂದ 14 ಕಿ.ಮೀ. ದೂರದಲ್ಲಿರುವ ತಂಬ್ರಹಳ್ಳಿ, ಅಲ್ಲಿಂದ 3 ಕಿ.ಮೀ ದೂರದಲ್ಲಿರುವ ಉತ್ತರತಂಬ್ರಹಳ್ಳಿವರೆಗೆ ಬಸ್ ಸೌಕರ್ಯವಿದೆ.  ಮುಂದೆ ರಂಗಪ್ಪನಗುಡ್ಡಕ್ಕೆ 2 ಕಿ.ಮಿ. ನಡೆದುಕೊಂಡು ಹೋಗಬಹುದು. ಇಲ್ಲವೇ ತಂಬ್ರಹಳ್ಳಿಯಿಂದಲೇ ಖಾಸಗಿ ವಾಹನಗಳಲ್ಲಿ ಹೋಗಬಹುದು. ಊಟ,ತಿಂಡಿ, ನೀರು ಜತೆಯಲ್ಲಿಯೇ ಒಯ್ಯುವುದು ಸೂಕ್ತ.

- ಹುಳ್ಳಿ ಪ್ರಕಾಶ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.