ನರಹರಿ ಏರಿ
ನಿತ್ಯವೂ ಮಾಡಿದ್ದೇ ಕೆಲಸ. ಕುಳಿತಲ್ಲೇ ಕುಳಿತು ಬೇಜಾರಾಗಿಬಿಟ್ಟಿದೆಯಾ?...

ನಿತ್ಯವೂ ಮಾಡಿದ್ದೇ ಕೆಲಸ. ಕುಳಿತಲ್ಲೇ ಕುಳಿತು ಬೇಜಾರಾಗಿಬಿಟ್ಟಿದೆಯಾ? ಒಂದು ಸುತ್ತು ಎಲ್ಲಾದರೂ ಹೋಗಿ ಬರೋಣ ಅನ್ನಿಸುತ್ತಿದೆಯಾ? ನರಹರಿಪರ್ವತ ನಿಮ್ಮೆಲ್ಲ ಆಯಾಸ ಪರಿಹರಿಸಿ ಹೊಸ ಚೈತನ್ಯ ತುಂಬಬಲ್ಲದು. ಕೆಲವೆಡೆ ಧುಮ್ಮಿಕ್ಕುವ ಜಲಪಾತಗಳು, ಮತ್ತೊಂದೆಡೆ ಆಳ ಪ್ರಪಾತಗಳು, ಹರಿವ ನದಿ, ಸಮುದ್ರದ ಕಿನಾರೆ, ಬೆಟ್ಟ ಗುಡ್ಡ... ಹೀಗೆ ನಿಸರ್ಗಪ್ರೇಮಿಗಳು ಅಪೇಕ್ಷಿಸುವ ಎಲ್ಲವೂ ಇಲ್ಲುಂಟು. ಗಿರಿಯ ಶಿಖರಲ್ಲೊಂದು ಶಿವನ ತಾಣ, ತಂಪು ತಂಪು ವಾತಾವರಣ. ಅಧ್ಯಾತ್ಮವಾಗಿಯೂ ಮನಸ್ಸಿಗೆ ಖುಷಿ.
ಮಂಗಳೂರಿನಿಂದ ಬಿ.ಸಿ. ರೋಡ್ನಲ್ಲಿ 28 ಕಿ.ಮೀ. ಪೂರ್ವಕ್ಕೆ, ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನರಹರಿ ಪರ್ವತದ ಪ್ರವೇಶ ದ್ವಾರ ನಿಮ್ಮನ್ನು ಸ್ವಾಗತಿಸುತ್ತದೆ. ಸಮುದ್ರ ಮಟ್ಟದಿಂದ 1000 ಅಡಿಗಳಷ್ಟು ಎತ್ತರವಿರುವ, 330 ಮೆಟ್ಟಲುಗಳನ್ನು ಹೊಂದಿರುವ ಪರ್ವತ ಸಾಹಸಪ್ರಿಯ ಚಾರಣಿಗರ ಸವಾಲಿನ ಬುದ್ಧಿಯನ್ನು ಜಾಗೃತಗೊಳಿಸುತ್ತದೆ. ಬೆಟ್ಟ ಹತ್ತಿದರೆ ಸುತ್ತಲಿನ ರಮಣೀಯ ನಿಸರ್ಗ ಸೌಂದರ್ಯ ನಮ್ಮ ಆಯಾಸವನ್ನೆಲ್ಲಾ ಮರೆಸಿಬಿಡುತ್ತದೆ. ಇಲ್ಲಿ ಪ್ರಕೃತಿ ಬರೆದ ಸೊಗಸಾದ ದೃಶ್ಯ- ಕಾವ್ಯವನ್ನು ನೋಡಿಯೇ ಆನಂದಿಸಬೇಕು.
ದೇಗುಲದ ಮೇಲಿನಿಂದ ಪೂರ್ವಕ್ಕೆ ನೋಡಿದರೆ ಸುಳ್ಯ ಮಲೆ, ಬಲ್ಲಮಲೆ, ದಕ್ಷಿಣದ ಕಡೆ ತಿರುಗಿದರೆ ಕಡೆಂಜಮಲೆಯನ್ನು ಕಾಣಬಹುದು. ಒಂದೆಡೆ ರಾಷ್ಟ್ರೀಯ ಹೆದ್ದಾರಿ, ಇನ್ನೊಂದೆಡೆ ಮಂಗಳೂರು- ಹಾಸನ ರೈಲು ಮಾರ್ಗ, ತೆಂಗು ಭತ್ತದ ಗದ್ದೆಗಳು, ಗಂಭೀರವಾಗಿ ಹರಿಯುವ ನೇತ್ರಾವತಿ. ಸೂರ್ಯಾಸ್ತದ ಹೊತ್ತು ಬೀಳುವ ಸೂರ್ಯನ ಹೊಂಬಣ್ಣದ ಕಿರಣಗಳು ನರಹರಿ ಪರ್ವತಕ್ಕೆ ವಿಶಿಷ್ಟ ಹೊಳಪು ನೀಡುತ್ತವೆ. ಒಂದೆರಡು ದಿನಗಳ ಕಾಲಾವಕಾಶ ಇಟ್ಟುಕೊಂಡು ಪ್ರವಾಸ ಯೋಜಿಸಿದರೆ ಮಂಗಳೂರು, ಉಡುಪಿ ಮತ್ತು ಸುತ್ತಮುತ್ತಲಿನ ಧಾರ್ಮಿಕ, ಪ್ರೇಕ್ಷಣೀಯ ಸ್ಥಳಗಳಿಗೂ ಭೇಟಿ ನೀಡಬಹುದು.
ನರ- ಹರಿ ಬಂದಿದ್ದರು!
ಈ ಪರ್ವತಕ್ಕೆ ಅರ್ಜುನ (ನರ) ಹಾಗೂ ಶ್ರೀಕೃಷ್ಣ (ಹರಿ) ಭೇಟಿ ನೀಡಿದ್ದರಿಂದ ನರಹರಿ ಪರ್ವತವೆಂಬ ಹೆಸರು ಬಂತೆಂದು ಹೇಳಲಾಗುತ್ತದೆ. ಕುರುಕ್ಷೇತ್ರ ಯುದ್ಧದ ಬಳಿಕ ಪಾಂಡವರು ತಮ್ಮ ಪಾಪ ವಿಮೋಚನೆಗಾಗಿ ದಕ್ಷಿಣದ ಪುಣ್ಯಕ್ಷೇತ್ರಗಳನ್ನು ಸಂದರ್ಶಿಸಿದರು. ನರ, ಹರಿ ಒಡಗೂಡಿ ಈ ಗಿರಿಯನ್ನು ಏರಿದಾಗ ಶ್ರೀಹರಿಯು ತಾನು ತಂಗಿದ ಕುರುಹಿಗಾಗಿ ತನ್ನ ಆಯುಧದಿಂದ ಶಂಖ-ಚಕ್ರ-ಗದಾ-ಪದ್ಮಗಳ ತೀರ್ಥ ಕುಂಡಗಳನ್ನು ರಚಿಸಿದನೆಂಬುದು ಇಲ್ಲಿನ ಐತಿಹ್ಯ. ಇಂದಿಗೂ ಈ ನಾಲ್ಕು ತೀರ್ಥಗಳು ಬೆಟ್ಟದ ತುದಿಯಲ್ಲಿವೆ. ಆಷಾಢ (ಆಟಿ) ಅಮವಾಸ್ಯೆ ಮತ್ತು ಸೋಣ (ಶ್ರಾವಣ) ಅಮವಾಸ್ಯೆಯಂದು ಇಲ್ಲಿ ತೀರ್ಥ ಸ್ನಾನ ಮಾಡುತ್ತಾರೆ. ಅಲ್ಲದೆ ಶಿವರಾತ್ರಿ, ನಾಗರ ಪಂಚಮಿ, ಗಣೇಶ ಚೌತಿ ಮೊದಲಾದ ಹಬ್ಬಗಳನ್ನು ವಿಜೃಂಭಣೆಯಿಂದ ನಡೆಸಲಾಗುತ್ತಿದೆ. ಈ ಹಬ್ಬಗಳಂದು ಸಹಸ್ರಾರು ಭಕ್ತರು ನರಹರಿ ದೇಗುಲದಲ್ಲಿ ಶ್ರದ್ಧಾ ಭಕ್ತಿಯಿಂದ ಪಾಲ್ಗೊಳ್ಳುತ್ತಾರೆ. ಭಗವಂತನು ಪರ್ವತದಲ್ಲಿ ಲಿಂಗರೂಪದಲ್ಲಿ ನೆಲೆಸಿ ಭಕ್ತರ ಅಭೀಷ್ಟಗಳನ್ನು ನೆರವೇರಿಸುವುದಕ್ಕಾಗಿ ಪರ್ವತೇಶ್ವರನಾಗಿದ್ದಾನೆಂದೂ, ಇಲ್ಲಿ ತೊಟ್ಟಿಲು ಸೇವೆ ಮಾಡಿಸಿದರೆ ಮಕ್ಕಳಾಗುತ್ತದೆಂದು, ಶ್ರೀ ದೇವರಿಗೆ ಹಗ್ಗ ಸೇವೆ ನೀಡಿದರೆ ಉಬ್ಬಸ, ನರರೋಗ ಮೊದಲಾದ ಕಾಯಿಲೆಗಳು ವಾಸಿಯಾಗುತ್ತವೆ ಎಂಬುದು ಸ್ಥಳೀಯರ ನಂಬಿಕೆ.
- ಎನ್. ಸ್ವಾತಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


