ವಾಹನ

ಇಂಧನಾತ್ಮಕ ಕಾರು!

ಕಾರಿಗೆ ಅಪ್ಪ ಇಂಧನ ತುಂಬಿಸಿದರೆ ಮೊಮ್ಮಗ ಹುಟ್ಟುವವರೆಗೂ ಖಾಲಿಯಾಗುವುದಿಲ್ಲ!...

ಇಂಧನಾತ್ಮಕ ಕಾರು!
Published On :

ಕಾರಿಗೆ ಅಪ್ಪ ಇಂಧನ ತುಂಬಿಸಿದರೆ ಮೊಮ್ಮಗ ಹುಟ್ಟುವವರೆಗೂ ಖಾಲಿಯಾಗುವುದಿಲ್ಲ!
ನೀವು ಪೆಟ್ರೋಲ್ ಕಾರು ಒಳ್ಳೇದೋ, ಡೀಸೆಲ್ ಕಾರೇ ಉತ್ತಮವೋ ಎಂದು ವಿಚಾರ ಮಾಡುತ್ತಿರುವ ಹೊತ್ತಿಗೆ ಇಂಥದ್ದೊಂದು ಅದ್ಭುತ ತಂತ್ರಜ್ಞಾನ ಅಮೆರಿಕದಲ್ಲಿ ತಯಾರಾಗುತ್ತಿದೆ. ಒಮ್ಮೆ ಇಂಧನ ತುಂಬಿಸಿದರೆ 16 ಲಕ್ಷ ಕಿ.ಮೀ. ಓಡಿಸಬಹುದು. ತಿಂಗಳಿಗೆ 2 ಸಾವಿರ ಕಿ.ಮೀ. ಸರಾಸರಿಯಲ್ಲಿ ವಾಹನ ಚಲಾಯಿಸುವವರು ಬರೋಬ್ಬರಿ 67 ವರ್ಷ ವಾಹನವನ್ನು ಓಡಿಸಬಹುದು. ಆದರೆ, ಯಾವ ವಾಹನ ಆರೂವರೆ ದಶಕ ಬಾಳುತ್ತದೆ ಎಂದು ಪ್ರಶ್ನಿಸಬೇಡಿ.

'ಒಂದು ಶತಮಾನಕ್ಕೆ ಒಮ್ಮೆ ಇಂಧನ ಭರ್ತಿ' ಎಂಬ ವಿಚಾರದೊಂದಿಗೆ ಈ ಸಂಶೋಧನೆ ಅಮೆರಿಕದಲ್ಲಿ ನಡೆಯುತ್ತಿದೆ. ಕೇವಲ 8 ಗ್ರಾಂ ಇಂಧನದ ಕ್ಯಾಪ್ಸೂಲ್ ಮೂಲಕ ಒಂದೂವರೆ ಮಿಲಿಯನ್‌ಗೂ ಹೆಚ್ಚು ಕಿ.ಮೀ. ವಾಹನ ಚಲಾಯಿಸಬಹುದೆಂದು ಒಮ್ಮೆ ಆಲೋಚಿಸಲೂ ಸಾಧ್ಯವಿಲ್ಲ. ಆಲೋಚನೆಗೂ ನಿಲುಕದ ಸಂಶೋಧನೆಗೆ ಕಾರಣವಾಗಿದ್ದು ಥೋರಿಯಂ. ದರ ಎಷ್ಟಾಗುತ್ತದೆ ಎಂದು ಕೇಳಬೇಡಿ!

ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ನಾಲ್ಕು ವರ್ಷಗಳ ಹಿಂದೆ ಥೋರಿಯಂ ಬಗ್ಗೆ ಹೇಳಿರುವುದನ್ನು ಕೇಳಿರಬಹುದು; 'ಈ ಶತಮಾನವು ಭಾರತದ ಕೈನಲ್ಲಿರಬೇಕು ಎಂದರೆ ಥೋರಿಯಂ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಬೇಕು. ಇದು ಭವಿಷ್ಯದ ಇಂಧನ ಹಾಗೂ ವಿದ್ಯುತ್. ಕೇಂದ್ರ ಸರ್ಕಾರವು ಈ ಬಗ್ಗೆ ಸಂಶೋಧನೆ ಪ್ರಾರಂಭಿಸಬೇಕು'. ಅಂದಹಾಗೆ, ವಿಶ್ವದಲ್ಲಿ ಅತಿ ಹೆಚ್ಚು ಥೋರಿಯಂ ನಿಕ್ಷೇಪಗಳಿರುವುದು ಹಿಂದೂ ಮಹಾಸಾಗರದ ತೀರದಲ್ಲಿ ಎಂದು ಹೇಳಲಾಗುತ್ತದೆ.

ಶಾಖೋತ್ಪಾದಕ ಥೋರಿಯಂ
ಅತಿ ಹೆಚ್ಚು ಶಾಖ ಉತ್ಪಾದನೆ ಮಾಡುವ ತಾಕತ್ತು ಥೋರಿಯಂಗಿದೆ. ಇದೇ ಕಾರಣದಿಂದ ಅಮೆರಿಕದ ಲೇಸರ್ ಪವರ್ ಸಿಸ್ಟಮ್ ಎಂಬ ಸಂಸ್ಥೆಯು ಈ ಸಂಶೋಧನೆಗೆ ಮುಂದಾಗಿದೆ. ಸಣ್ಣ ಪ್ರಮಾಣದ ಥೋರಿಯಂ ಕಣದೊಂದಿಗೆ ಪ್ರಯೋಗ ಪ್ರಾರಂಭಿಸಿದೆ. ಟರ್ಬೈನ್‌ನಲ್ಲಿ ಥೋರಿಯಂ ಮೂಲಕ ಎಷ್ಟು ಶಾಖ ಹಾಗೂ ಶಕ್ತಿ ಉತ್ಪಾದನೆಯಾಗುತ್ತದೆ ಎಂದು ಪರೀಕ್ಷಿಸಲಾಗುತ್ತಿದೆ.

ಸಂಸ್ಥೆಯು ಪರೀಕ್ಷಿಸುತ್ತಿರುವ ಎಂಜಿನ್ ತೂಕ 227 ಕೆ.ಜಿ.ಯಷ್ಟಿದೆ. ಲೇಸರ್ ಪವರ್ ಸಿಸ್ಟಮ್ ಹೇಳುತ್ತಿರುವಂತೆ ಒಂದು ಗ್ರಾಂ ಥೋರಿಯಂನಿಂದ 7396 ಗ್ಯಾಲನ್ ಶಕ್ತಿ ಉತ್ಪತ್ತಿಯಾಗುತ್ತದೆ. ವಿಜ್ಞಾನಿಗಳ ಪ್ರಕಾರ, ಇದು ಸ್ಟೀಮ್ ಎಂಜಿನ್‌ನ ಮುಂದುವರಿದ ಭಾಗ.
ಥೋರಿಯಂ ಆಧಾರಿತ ಲೇಸರ್ ಕಿರಣವು ಸ್ಟೀಮ್ ರೂಪದಲ್ಲಿ ಶಕ್ತಿಯನ್ನು ಉತ್ಪತ್ತಿ ಮಾಡಲಿದೆ ಎಂದು ಹೇಳಲಾಗುತ್ತಿದೆ. ಆದರೆ ಲೇಸರ್‌ನಂಥ ಸೂಕ್ಷ್ಮ ಕಿರಣ ಆಧರಿಸಿ ಕಾರ್ಯನಿರ್ವಹಿಸುವ ಎಂಜಿನ್‌ಗಳಿಗೆ ಹೇಗೆ ಅಂತಿಮ ರೂಪ ನೀಡಲಾಗುತ್ತದೆ ಎನ್ನುವುದು ಸವಾಲು. ಏಕೆಂದರೆ, ಥೋರಿಯಂ ಕೂಡ ವಿಕಿರಣಗಳನ್ನು ಸೂಸುವ ಪರಮಾಣು.
ಈ ಇಂಧನವನ್ನು ಕೇವಲ ಕಾರಿಗೆ ಸೀಮಿತಗೊಳಿಸಲು ಸಂಸ್ಥೆ ಮುಂದಾಗುತ್ತಿಲ್ಲ. ಬೈಕ್ ಹೊರತುಪಡಿಸಿ ಉಳಿದೆಲ್ಲ ರೀತಿಯ ವಾಹನಗಳು ಹಾಗೂ ಫ್ಯಾಕ್ಟರಿ ಯಂತ್ರಗಳ ಎಂಜಿನ್‌ನ ಇಂಧನಕ್ಕೂ ಥೋರಿಯಂ ಬಳಸಲು ಚಿಂತಿಸಲಾಗುತ್ತಿದೆ.

ಡೇಂಜರ್ ಗಡ ಸೇಫ್!
ವಾಹನ ಅಥವಾ ಇತರೆ ಎಂಜಿನ್‌ಗಳಿಗೆ ಥೋರಿಯಂ ಬಳಸುವುದು ಸುರಕ್ಷಿತ ಎಂಬ ವಾದ ಹೆಚ್ಚಾಗಿ ಕೇಳಿಬರುತ್ತಿದೆ. ಇದೇ ಕಾರಣಕ್ಕೆ ಥೋರಿಯಂಗೆ ಸೂಫರ್ ಫ್ಯೂಯಲ್ ಎಂದು ಹೇಳಲಾಗುತ್ತಿದೆ. ಆದರೆ, ಅವಘಡ ಸಂಭವಿಸಿದಲ್ಲಿ ವಿಕಿರಣ ಹೊರಸೂಸುವ ಸಾಧ್ಯತೆಯೂ ಇದೆ ಎಂದು ವಿಜ್ಞಾನಿಗಳ ಗುಂಪೊಂದು ವಾದಿಸುತ್ತಿದೆ. ಥೋರಿಯಂ ಕಣವು ಬಾಹ್ಯ ವಾತಾವರಣದಲ್ಲಿ ಸೋರಿಕೆಯಾದಾಗ ಸಣ್ಣ ಪ್ರಮಾಣದಲ್ಲಿ ಯುರೇನಿಯಂ-232 ಅನ್ನು ಉತ್ಪಾದಿಸುತ್ತದೆ. ಇದು ಸಣ್ಣ ಪ್ರಮಾಣದ ಅಣು ಬಾಂಬ್‌ನಂತೆಯೇ ವರ್ತಿಸಲಿದೆ ಎಂದು ಹೆದರಿಸುವವರೂ ಇದ್ದಾರೆ.  ಆದರೆ ಯುರೋಪಿನ ಕೆಲ ವಿಜ್ಞಾನಿಗಳ ತಂಡವೊಂದು ಪಕ್ಕಾ ವಾದ ಮುಂದಿಟ್ಟಿದೆ. 'ಥೋರಿಯಂನಲ್ಲಿರುವ ಪ್ರೊಟ್ಯಾಕ್ಟೀನಿಂಯ-233 ಅನ್ನು ಬೇರ್ಪಡಿಸುವುದರಿಂದ ವಿಕಿರಣ ಸೂಸುವುದಿಲ್ಲ. ಇದರಿಂದ ಅವಘಡ ಸಂಭವಿಸಿದಾಗಲೂ ಯಾವುದೇ ಅಪಾಯ ಎದುರಾಗುವುದಿಲ್ಲ'. ಇದರಿಂದ ಅಣು ವಿದ್ಯುತ್ ಬದಲಾಗಿ ಥೋರಿಯಂ ವಿದ್ಯುತ್ ಉತ್ಪಾದನೆಗೆ ಮುಂದಾಗಬೇಕು. ಇದರಿಂದ ಅಣು ಬಾಂಬ್ ಉತ್ಪಾದನೆಯ ಹೆದರಿಕೆಯೂ ಕಡಿಮೆಯಾಗುತ್ತದೆ ಎಂಬ ವಾದವೂ ಕೇಳಿಬಂದಿದೆ.

ಶತಮಾನಕ್ಕೊಂದು ಕಾರು ಸಾಧ್ಯವೇ?
ಆರೂವರೆ ದಶಕಕ್ಕೊಮ್ಮೆ ಕಾರಿಗೆ ಇಂಧನ ತುಂಬಿದರೆ ಸಾಕು ಎಂದು ನಿರಾಳವಾದರೆ ಸಾಲದು. ಏಕೆಂದರೆ ವರ್ಷಕ್ಕೊಂದು ಕಾರು, ಫೋನ್ ಬದಲಿಸುವ ಜಮಾನವಿದು. ಅರ್ಧ ಶತಮಾನಕ್ಕೂ ಹೆಚ್ಚು ಒಂದೇ ಕಾರನ್ನು ಬಳಸಲು ಸಾಧ್ಯವೇ? ಅಷ್ಟೊಂದು ಬಾಳಿಕೆ ಬರುವ ಕಾರನ್ನು ಯಾರು ಉತ್ಪಾದಿಸುತ್ತಾರೆ? ಅದರ ರೂಪ ಹೇಗಿರುತ್ತದೆ? ಇಷ್ಟೊಂದು ಕಡಿಮೆ ಪ್ರಮಾಣದ ಇಂಧನವು ಹೇಗೆ ವಿಭಜನೆಯಾಗಿ 16 ಲಕ್ಷ ಕಿ.ಮೀ. ಕ್ರಮಿಸಲು ನೆರವಾಗಲಿದೆ? ಎಂಬ ಪ್ರಶ್ನೆಗಳಿಗೆ ಭವಿಷ್ಯದ ತಂತ್ರಜ್ಞಾನವು ಉತ್ತರಿಸಬೇಕಿದೆ.

ಲೈಫ್ ಟೈಮ್ ಫ್ಯೂಯಲ್!
ನಿತ್ಯವೂ ಜೇಬು ಖಾಲಿ ಮಾಡಿಕೊಂಡು ಪೆಟ್ರೋಲ್ ಅಥವಾ ಡೀಸೆಲ್ ಟ್ಯಾಂಕ್ ತುಂಬಿಸುವ ಕಾಲದಲ್ಲಿ ನಾವಿದ್ದೇವೆ. ಹೀಗಿರುವಾಗ ಈ ಇಂಧನದ ಬೆಲೆ ಕೈಗೆಟುಕುವ ದರದಲ್ಲಿರುತ್ತದೆಯೇ ಎಂಬ ಸಂಶಯ ಕಾಡುತ್ತಿರಬಹುದು. ಆದರೆ ವಿಜ್ಞಾನಿಗಳು ಹೇಳುವ ಪ್ರಕಾರ, ಕಲ್ಲಿದ್ದಲಿಗಿಂತ ಕಡಿಮೆ ದರದಲ್ಲಿ ಥೋರಿಯಂ ದೊರೆಯಲಿದೆ. ಮತ್ತೆ ಈ ಸಂಶೋಧನೆಯು ಅಂತಿಮ ರೂಪ ಪಡೆದುಕೊಂಡರೆ ನಿತ್ಯ ಜೇಬು ಖಾಲಿ ಮಾಡಿಕೊಳ್ಳುವ ಪ್ರಶ್ನೆ ಉದ್ಭವಿಸದು. ಬದಲಾಗಿ ವಾಹನ ಖರೀದಿಸಿದಾಗ ಇಂಧನ ತುಂಬಿಸಿದರೆ ಜೀವನ ಪರ್ಯಂತ ಬಂಕ್‌ನತ್ತ ತಲೆ ಹಾಕಬೇಕಿಲ್ಲ!

ಥೋರಿಯಂ ಇರುವುದು ಏಷ್ಯಾದಲ್ಲಿ...
ವಿಚಿತ್ರವೆಂದರೆ, ಈ ಸೂಪರ್ ಫ್ಯೂಯಲ್‌ನ ನಿಕ್ಷೇಪಗಳಿರುವುದು ಏಷ್ಯಾದಲ್ಲಿ ಹೆಚ್ಚು. ಆದರೆ, ಈ ಭಾಗದಲ್ಲಿ ಯಾವುದೇ ಸಂಶೋಧನೆಗಳು ನಡೆಯುತ್ತಿಲ್ಲ. ಪೆಟ್ರೋಲಿಯಂನ ಸೂಪರ್ ಪವರ್ ರಾಷ್ಟ್ರಗಳೆಂದು ಹೇಳಿಕೊಳ್ಳುವ ಗಲ್ಫ್‌ಗೆ ಸಡ್ಡು ಹೊಡೆಯಲು ಏಷ್ಯಾದ ಭಾರತ ಹಾಗೂ ಚೀನಾ ಮನಸ್ಸು ಮಾಡುತ್ತಿಲ್ಲ. ಒಂದೊಮ್ಮೆ ಥೋರಿಯಂ ಅನ್ನು ಇಂಧನಕ್ಕಾಗಿ ಬಳಸಿಕೊಂಡರೆ ಭಾರತವು ಸೂಪರ್ ಫ್ಯೂಯಲ್‌ನ 'ಸೂಪರ್ ಪವರ್‌' ಆವಾಗಿ ಪರಿವರ್ತನೆಯಾಗಲಿದೆ.

- ರಾಧೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.