ವಾಹನ

ಅಮೃತಯಾನ

ಅಮೃತಯಾನ
Published On :

ಬೆಂಗಳೂರಿನಲ್ಲಿ ಇರುವವರು ಒಂದು ದಿನದ ಪ್ರವಾಸ ಕೈಗೊಳ್ಳಲು ಹೇಳಿಮಾಡಿಸಿದ ತಾಣ ಅಮೃತಾಪುರ. ಚಿಕ್ಕಮಗಳೂರು ಜಿಲ್ಲೆಗೆ ಹೋದವರು ಭೇಟಿ ಕೊಡಲೇಬೇಕಾದ ತಾಣವಿದು.
ಬೆಂಗಳೂರಿನ ಕೆಲಸದ ಗೋಜಲು ತಪ್ಪಿಸಿಕೊಳ್ಳಲಿಕ್ಕೆ ಅಂತಲೇ ಸ್ನೇಹಿತರೆಲ್ಲ ಚಿಕ್ಕದೊಂದು ಪ್ರವಾಸ ಕೈಗೊಂಡಿದ್ದೆವು. ತುಂಬಾನೇ ಅಪರೂಪಕ್ಕೆ ಹೋಗುತ್ತಿದ್ದರಿಂದ ಇದುವರೆಗೂ ನೋಡಿರದ ಹೊಸದೊಂದು ಜಾಗಕ್ಕೆ ಹೋಗುವ ಪ್ಲಾನ್ ಎಲ್ಲರದ್ದೂ. ಹಿಂದೊಮ್ಮೆ ನಾನು ಅಮೃತಾಪುರಕ್ಕೆ ಹೋಗಿ ಬಂದುದ್ದರ ನೆನಪಾಗಿ ಅದರ  ಹೆಸರನ್ನು ಪ್ರಸ್ತಾಪಿಸಿದೆ. ಗೆಳೆಯರ ಬಳಗಕ್ಕದು ಹೊಸ ಜಾಗವಾಗಿದ್ದರಿಂದ ಎಲ್ಲರೂ ಸಮ್ಮತಿಸಿದರು.
ನಾವೆಲ್ಲರೂ ಬೆಂಗಳೂರಲ್ಲಿ ಕೆಲಸ ಮಾಡುತ್ತಿದ್ದರೂ ನೆಲೆ ನಿಂತಿದ್ದು ಮಾತ್ರ ತುಮಕೂರಿನಲ್ಲಿ. ಹೀಗಾಗಿ ಪ್ರವಾಸ ತುಮಕೂರಿನಿಂದಲೇ ಆರಂಭವಾಯ್ತು. ಮುಂಜಾನೆಯ ಚುಮುಚುಮು ಚಳಿಯಲ್ಲೇ ಇಂಡಿಕಾ ಕಾರಿನ ಕಿವಿ ಹಿಂಡಿದೆವು. ಆಗಷ್ಟೇ ಆರಂಭವಾಗಿದ್ದ ಮಳೆಯನ್ನು ಸೀಳಿಕೊಂಡು ರಾಷ್ಟೀಯ ಹೆದ್ದಾರಿ 206ರಲ್ಲಿ ಕಾರು ನುಗ್ಗುತ್ತಿತ್ತು. ಇನ್ನೇನು ತರೀಕೆರೆ ತಲುಪಿದೆವು ಅನ್ನುವಾಗ 'ಅಮೃತೇಶ್ವರಕ್ಕೆ ದಾರಿ' ಅನ್ನೋ ಫಲಕ ಕಾಣಿಸಿ ಕಾರು ತಿರುಗಿಸಿದೆವು. ರಸ್ತೆ ಅಷ್ಟೇನೂ ಚೆನ್ನಾಗಿಲ್ಲದಿದ್ದರೂ, ತೀರ ಕಳಪೆಯಾಗಿರಲಿಲ್ಲ. ಕೆಲವೇ ಕ್ಷಣಗಳಲ್ಲಿ ಎಲ್ಲರ ಕಣ್ಣು ಅರಳಿಸಿತ್ತು ಅಮೃತೇಶ್ವರ ದೇವಸ್ಥಾನ.

ಸ್ನೇಹಿತರ ಬಾಯಲ್ಲಿ 'ವಾವ್...' ಅನ್ನೋ ಉದ್ಗಾರ ತಾನೇತಾನಾಗಿ ಹೊರಹೊಮ್ಮಿತ್ತು. ಕಾರಿನ ವೇಗ ನಿಧಾನವಾಗಿ ತಗ್ಗಿ ದೇವಸ್ಥಾನದ ಬಾಗಿಲಲ್ಲಿ ಬಂದು ನಿಂತಿತು. ಸಣ್ಣಗೆ ಸುರಿಯುತ್ತಿದ್ದ ಸೋನೆ ಮಳೆಯನ್ನು ಲೆಕ್ಕಿಸದೆ ಕಾರಿಂದ ಎಲ್ಲರೂ ಇಳಿದು ಒಳ ನಡೆದೆವು. ದೇವಾಲಯದ ಆಕರ್ಷಣೆ ಮಳೆಯಲ್ಲೂ ನಮ್ಮನ್ನು ಮೆಲ್ಲಗೆ ನಡೆಯುವಂತೆ ಮಾಡಿತ್ತು. ಅಮೃತೇಶ್ವರನಿಗೆ ಪೂಜೆ ಸಲ್ಲಿಸಿ, ಇತಿಹಾಸ ತಿಳಿಯುವ ಯತ್ನ ಮಾಡಿದೆವು.

ಸೂರ್ಯ ರಶ್ಮಿ ಬೆರಗು
ಹೊಯ್ಸಳರ ದೊರೆ ಎರಡನೇ ವೀರಬಲ್ಲಾಳನ ದಂಡನಾಯಕ ಅಮೃತೇಶ್ವರ, ಮಲ್ಲಿನಾಥನ ಕೈ ಚಳಕದಲ್ಲಿ ಈ ದೇವಾಲಯವನ್ನು ಕಟ್ಟಿಸಿದ್ದಾನೆ. ಹಳೆ ಹೊಯ್ಸಳ ಶೈಲಿಯ ದೇವಾಲಯ ಕ್ರಿ.ಶ. 1196 ರಲ್ಲಿ ನಿರ್ಮಾಣವಾಗಿದ್ದು, ಏಕಕೂಟವಾಗಿದೆ. ಸುತ್ತಲೂ ನಕ್ಷತ್ರಾಕಾರದ ಜಗುಲಿ ಕಾಣಸಿಕ್ಕರೂ ಮಣ್ಣಲ್ಲಿ ಮುಚ್ಚಿ ಹೋಗಿರುವುದು ಕಂಡುಬರುತ್ತದೆ. ಗರ್ಭಗುಡಿ, ಅಂತರಾಳ, ನವರಂಗ ಹಾಗೂ ವಿಶಾಲ ಮುಖಮಂಟಪ ಹೊಂದಿದೆ. ಈ ಮುಖ ಮಂಟಪದಲ್ಲಿರುವ 50ಕ್ಕೂ ಹೆಚ್ಚು ನುಣುಪಾದ ಕಂಬಗಳು ಕಣ್ಮನ ಸೆಳೆಯುತ್ತವೆ.

ಗರ್ಭಗುಡಿಯಲ್ಲಿ ಅಮೃತೇಶ್ವರ ಲಿಂಗವಿದ್ದು, ಪ್ರತಿ ಸಂಕ್ರಾಂತಿಯಂದು ಸೂರ್ಯನ ಕಿರಣಗಳು ಲಿಂಗದ ಮೇಲೆ ಬೀಳುವಂತೆ ನಿರ್ಮಿಸಲಾಗಿದೆ. ಇಲ್ಲಿ ಶಿಲ್ಪಿಯ ಬುದ್ಧಿಶಕ್ತಿ, ಕೈ ಚಳಕ ಎದ್ದು ಕಾಣುತ್ತದೆ. ನವರಂಗದಲ್ಲಿ ಪುಸ್ತಕ ಹಿಡಿದ ಸರಸ್ವತಿಯ ವಿಗ್ರಹವಿದೆ. ಆದರೆ, ಇದನ್ನ ಕಾಲಾಂತರದಲ್ಲಿ ಯಾರೋ ಇಲ್ಲಿರಿಸಿರುವಂತೆ ಭಾಸವಾಗುವುದು ಸುಳ್ಳಲ್ಲ. ಐದು ಅಡಿ ಎತ್ತರವಿರುವ ಈ ಆಸೀನ ಸರಸ್ವತಿಯನ್ನ ಆರಾಧಿಸುವವರ ಸಂಖ್ಯೆ ಹೆಚ್ಚೇ ಇದೆ. ದೇವಿ ಸನ್ನಿಧಾನದಲ್ಲಿ ಅಕ್ಷರಾಭ್ಯಾಸ ಮಾಡಿಸಿಕೊಂಡು ಹೋಗುವವರೂ ಇದ್ದಾರೆ. ಇದೇ ಜಾಗದಲ್ಲಿ ಸಪ್ತ ಮಾತೃಕೆಯರ ವಿಗ್ರಹಗಳಿದ್ದು, ಗಮನ ಸೆಳೆಯುತ್ತವೆ. ಹೊರಭಿತ್ತಿಯಲ್ಲಿರುವ ಭವ್ಯವಾದ ಶಿಲ್ಪಾಲಂಕಾರ, ಅರೆ ಮಂಟಪ, ಲತಾ ಸುರುಳಿ, ಅರೆ ಗೋಪುರಗಳು ಅದ್ಭುತವಾದ ಕೆತ್ತನೆಗೆ ಸಾಕ್ಷಿಯಾಗಿವೆ. ದೇವಾಲಯದ ಗೋಡೆಗಳ ಮೇಲೆ ರಾಮಾಯಣ, ಮಹಾಭಾರತದ ಕಥೆಗಳನ್ನು ಕೆತ್ತಲಾಗಿದೆ.

ದೇವಾಲಯದ ಶಿಲ್ಪಕಲಾ ವೈಭವದ ಗುಂಗಿನಲ್ಲಿಯೇ ಹೊರ ಬಂದರೆ ಹಚ್ಚ ಹಸುರಿನ ಹುಲ್ಲು ಹಾಸು.  ದೇವಾಲಯ ಹಾಗೂ ಕೈತೋಟವನ್ನು ಪುರಾತತ್ವ ಇಲಾಖೆಯವರು ಅಚ್ಚುಕಟ್ಟಾಗಿ ನೋಡಿಕೊಂಡಿದ್ದಾರೆ. ದೇವಾಲಯ ಹಾಗೂ ಸುತ್ತಲಿನ ಹಸಿರು ಸೊಬಗಿನ ಇಷ್ಟಗಲ ಜಾಗವನ್ನೂ ಬಿಡದೆ ಕ್ಲಿಕ್ಕಿಸಿದೆವು. ಇಷ್ಟಾದರೂ ನಮ್ಮ ಉತ್ಸಾಹ ಕುಗ್ಗಿರಲಿಲ್ಲ. ಆದರೆ ಮರುದಿನ ಕೆಲಸಕ್ಕೆ ಹಾಜರಾಗಲೇಬೇಕಿತ್ತು. ಒಲ್ಲದ ಮನಸ್ಸಿನಿಂದ ಕಾರು ಹತ್ತಿದೆವು. <

ಹೀಗೆ ಬನ್ನಿ
ಚಿಕ್ಕಮಗಳೂರಿನಿಂದ 67 ಕಿ.ಮೀ, ಶಿವಮೊಗ್ಗದಿಂದ 35, ಹಾಸನದಿಂದ 110 ಕಿ.ಮೀ ದೂರದಲ್ಲಿದೆ ಅಮೃತಪುರ. ತರೀಕೆರೆಯಿಂದ ಐದು ಕಿ.ಮೀ. ಅಲ್ಲಿಂದ ಸಾರಿಗೆ ಸಂಪರ್ಕ ಚೆನ್ನಾಗಿದೆ. ತರೀಕೆರೆಯಲ್ಲಿಯೇ ಊಟ, ವಸತಿ ಸೌಲಭ್ಯ ಚೆನ್ನಾಗಿದೆ. ಬೆಳಗ್ಗೆ 6ರಿಂದ ಸಂಜೆ 6ರವರೆಗೆ ದೇವಾಲಯ ತೆರೆದಿರುತ್ತದೆ.

- ಮಂಜೇಶ್ ವಿಶ್ವನಾಥ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.