ವಾಹನ

ಬೀದರ್‌ ಬಾರ್

ಪರ್ಷಿಯನ್ ಶೈಲಿಯ ಮಿಳಿತವಿರುವ ಈ ಕಲಾಕೋಟೆ ಕೆಂಪುಕಲ್ಲು ಕಡೆದು ಕಟ್ಟಿಸಿದ...

ಬೀದರ್‌ ಬಾರ್
Published On :

ಕರ್ನಾಟಕದ ಉತ್ತರದ ಬೀದರ್ ಜಿಲ್ಲೆ ಅಕ್ಷರಶಃ ಉತ್ತುಂಗದ ನಿಲುಕು. ಗುಲ್ಬರ್ಗವರೆಗಿನ ಹವಾಗುಣವೇ ಬೇರೆ, ಬೀದರ್‌ನದ್ದೇ ಬೇರೆ. ಧುತ್ತೆಂದು ಎದ್ದುನಿಂತ ಕೆಂಪುಶಿಲೆ ಪ್ರಸ್ಥಭೂಮಿಯ ಮೇಲೆ ಅರೆಮಲೆನಾಡಿನ ವಾತಾವರಣ. ಗುರುನಾನಕರ ಪವಾಡದಿಂದ ಸದಾ ನೀರು ಉಕ್ಕಿಸುವ ನಾನಕ ಝರಾ, ಎದೆಮಟ್ಟ ನೀರಿನಲ್ಲಿ ಗುಹೆಯೊಳಗೆ ಹೋಗಿ ದೇವರ ದರ್ಶನ ರೋಮಾಂಚನದ ನರಸಿಂಹ ಝರಣಿ... ಹೀಗೆ ನೋಡಬಹುದಾದ ಸ್ಥಳಗಳು ಅನೇಕ. ಎಲ್ಲಕ್ಕೂ ಮುಕುಟಮಣಿಯಂತಿರುವುದು ಇಲ್ಲಿನ ಕೋಟೆ.
ಇನ್ನೂ ಸುಭದ್ರ ಸ್ಥಿತಿಯಲ್ಲಿರುವ, 5.5. ಕಿ.ಮೀ. ವಿಶಾಲವಾದ ಬೀದರ್ ಕೋಟೆ ನಿರ್ಮಾಣವಾಗಿದ್ದು 600 ವರ್ಷಗಳ ಹಿಂದೆ. ಅನಾರೋಗ್ಯ ಕಾರಣದಿಂದ ಗುಲ್ಬರ್ಗದಿಂದ ಬೀದರಿಗೆ ರಾಜಧಾನಿ ವರ್ಗಾಯಿಸಿದ್ದ ಸುಲ್ತಾನ್ ಅಹಮದ್ ಷಾ ಬಹಮನಿ ಕ್ರಿ.ಶ. 1426-32ರಲ್ಲಿ ಈ ಕೋಟೆ ಕಟ್ಟಿಸಿದ. ಪರ್ಷಿಯನ್ ಶೈಲಿಯ ಮಿಳಿತವಿರುವ ಈ ಕಲಾಕೋಟೆ ಕೆಂಪುಕಲ್ಲು ಕಡೆದು ಕಟ್ಟಿಸಿದ ಅಪರೂಪದ ಸ್ಮಾರಕ. ಅಲ್ಲಲ್ಲಿ ಅವಶೇಷಗೊಂಡ ಭವ್ಯ ಕಮಾನುಗಳು, ಬುರುಜುಗಳು, ದ್ವಾರಗಳು, 37 ಕಾವಲು ಗೋಪುರಗಳು, ಗುಪ್ತಮಾರ್ಗದ ಸುತ್ತ ಪ್ರಪಾತದಂಥ ಕಾಲುವೆಗಳು ಅನೇಕ. ಸೊಗಸಾದ ಕಂಬಗಳ ರಾಣಿವಾಸ, ನವಾಬ್ ಖಾನ, ಸಭಾಗೃಹ ನಯನ ಮನೋಹರ. ಅನಂತರ ಕಟ್ಟಿಸಿದ ಉರುಟು ಕಂಬಗಳ ಸೋಲಾ ಕಂಬ ಮಸೀದಿ, ಗಗನ್ ಮಹಲ್, ತಾಖತ್ ಮಹಲ್, ರಂಗೀನ್ ಮಹಲ್, ಶಾಹಿ ಮತಬಕ್ (ಅಡುಗೆ ಮನೆ), ದಿವಾನ್-ಇ ಆಮ್ (ಸಭಾಗೃಹ), ನೌಬತ್ ಖಾನಾ ಬಹಮನಿ ಸುಲ್ತಾನರ ಕಲಾಭಿರುಚಿಗೆ ಕನ್ನಡಿ.
ಮೊಘಲರಿಗೇ ತಲೆನೋವಾಗಿದ್ದ ಬಹಮನಿ ಸುಲ್ತಾನರನ್ನು ಅಂತೂಇಂತೂ ಸೋಲಿಸಿದ ಔರಂಗಜೇಬ ಬೀದರ್ ಕೋಟೆಯನ್ನು ವಶಪಡಿಸಿಕೊಂಡ. ಆದರೆ, ಭಗ್ನಗೊಳಿಸಲಿಲ್ಲ. ಇಲ್ಲಿ ಅನೇಕ ಚಲನಚಿತ್ರಗಳ ಹಾಡುಗಳು ಚಿತ್ರೀಕರಣಗೊಂಡಿವೆ. ಬೀದರ್ ಉತ್ಸವ ಇದೇ ಕೋಟೆಯಲ್ಲಿ ನಡೆದಿತ್ತು. ಪ್ರಾಚ್ಯವಸ್ತು ಇಲಾಖೆ ಕೋಟೆಯನ್ನು ನಿರ್ವಹಿಸುತ್ತಿದ್ದು, ಸ್ವಚ್ಛತೆ, ಸುಸ್ಥಿತಿಗೆ ಗಮನ ಕೊಡಲಾಗಿದೆ.
ಉತ್ತರದಲ್ಲಿದ್ದರೂ ತತ್ತರಿಸುವ ಸೆಖೆ ಇಲ್ಲ. ಬಿದರಿ ಕಲೆಯ ಬೀದರ್‌ಗೆ ರೈಲು, ಬಸ್ಸು ಸಂಪರ್ಕವಿದೆ. ಆದರೆ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಎಲ್ಲ ಬಸ್‌ಗಳೂ ಬೀದರಿನಿಂದ ಹೈದರಾಬಾದ್‌ಗೆ ಹೋಗಿಯೇ ಬೆಂಗಳೂರಿಗೆ ಬರುತ್ತವೆ. ರೈಲು ಕೂಡ. ಖಾಸಗಿ ಬಸ್‌ಗಳು ಮಾತ್ರ ಗುಲ್ಬರ್ಗ ಮಾರ್ಗವಾಗಿ ಬೆಂಗಳೂರಿಗೆ ಒಂದು ತಾಸು ಮುಂಚಿತವಾಗಿಯೇ ತಲುಪುತ್ತವೆ.

ಚಿತ್ರ-ಲೇಖನ: ಭವಿತ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.