ಎರ್‌ಕಾಡ್
ತಮಿಳುನಾಡಿನ ಎರ್‌ಕಾಡ್ 'ಬಡವರ ಊಟಿ'. ಇಷ್ಟವಾಗುವ ಪರಿಸರ. ಮನ ತೇಲುವಂಥ ಪರಿಸರ.

ತಮಿಳುನಾಡಿನ ಎರ್‌ಕಾಡ್ 'ಬಡವರ ಊಟಿ'. ಇಷ್ಟವಾಗುವ ಪರಿಸರ. ಮನ ತೇಲುವಂಥ ಪರಿಸರ. ಊಟಿ, ಕೊಡೈಕೆನಾಲ್‌ನಂತೆ ನಿತ್ಯ ಪ್ರವಾಸಿಗರನ್ನು ಆಕರ್ಷಿಸುವ ಪೂರ್ವಘಟ್ಟದ ತಣ್ಣನೆಯ ಗಿರಿಧಾಮ. ಸೇಲಂ ಜಿಲ್ಲೆಯ ಶೆರ್ವರಾಯನ್ ಅರಣ್ಯ ವ್ಯಾಪ್ತಿಯಲ್ಲಿ ಬರುತ್ತದೆ.
ಶೆರ್ವರಾಯನ್ ದೇಗುಲ ಇಲ್ಲಿನ ಮತ್ತೊಂದು ಆಕರ್ಷಣೆ. ಇಲ್ಲಿರುವ ಬೃಹತ್ ಕೆರೆ. ಅದರ ಸುತ್ತಲೂ ಬೃಹದಾಕಾರದ ಮರಗಳು. ತಮಿಳಲ್ಲಿ 'ಎರ್' ಎಂದರೆ ಕೆರೆ, 'ಕಾಡು' ಎಂದರೆ ಅರಣ್ಯ. 7 ಬೆಟ್ಟಗಳು ಎಂಬ ಅರ್ಥವೂ ಈ ಹೆಸರಿನ ಹಿಂದಿದೆ. ಕಡಿದಾದ ತಿರುವುಗಳಿರುವ ಕಾರಣಕ್ಕಾಗಿ ಎರ್‌ಕಾಡು ಯಾನ ನಿಜಕ್ಕೂ ರೋಚಕ. ಒಂದೆರಡಲ್ಲ... ಓಕ್, ರೇನ್‌ಟ್ರೀ, ಕಾಫಿ, ಪ್ಲಾಂಟೇಶನ್‌ಗಳ ಮಧ್ಯೆ ಹಾದುಹೋಗುವ ಸುಮಾರು 20 ಹೇರ್‌ಪಿನ್ ಕರ್ವ್‌ಗಳು.ಸೇಲಂನಿಂದ 30 ಕಿ.ಮೀ. ದೂರದ ಎರ್‌ಕಾಡಿಗೆ 1 ಗಂಟೆಯ ಪಯಣವಷ್ಟೆ.
ಮುಂಜಾನೆಯ ಚುಮುಚುಮು ಚಳಿಯಲ್ಲಿ ವಾಹನವೇರಿ ಹೊರಟರೆ ಕಟಕಟ ಹಲ್ಲು ಕಡಿಯುವುದು ತಡೆಯಲಾಗದಂಥ ಚಳಿ ಅಪ್ಪಿಕೊಳ್ಳುತ್ತದೆ. ಹೇರ್‌ಪಿನ್ ತಿರುವುಗಳಲ್ಲಿ ಒಬ್ಬರ ಮೇಲೊಬ್ಬರು ಬಿದ್ದು ಹೊರಳಾಡಿ ನಗುವಷ್ಟು ಮಜಾ. ಅಚ್ಚುಕಟ್ಟಾದ ರಸ್ತೆ ಫ್ಲಸ್‌ಪಾಯಿಂಟ್. ಗುಣಮಟ್ಟದ ಕಿತ್ತಲೆ, ಜ್ಯಾಕ್‌ಫ್ರೂಟ್, ಬಾಳೆಹಣ್ಣಿನ ಬೆಳೆಗೂ ಇದು ಫೇಮಸ್ಸು. ಫೋಟೋಗ್ರಫಿಗೆ ಸುಂದರ ಪರಿಸರ. ನಾಲ್ಕು ಗೋಡೆಗಳ ಮಧ್ಯೆ ಏರ್‌ಕೂಲರ್ ಆನ್ ಮಾಡಿಟ್ಟಷ್ಟು ಮಧುರ. ಪಶ್ಟಿಮಘಟ್ಟಗಳಿಂದ ಚಾರಣಪ್ರಿಯರು ಯಾನ ಕೈಗೊಳ್ಳಲು ಇಷ್ಟಪಡಲು ಇಲ್ಲಿನ ಸ್ವಚ್ಛಂದ ಹವಾಗುಣವೇ ಕಾರಣ.
ಹಿಂದಕ್ ಹೋಗೋಣ...
ಶಿಲಾಯುಗದಿಂದ ಹಿಡಿದು ತೆಲಗು ಅರಸರ ಇತಿಹಾಸದಿಂದಲೂ ಪ್ರಸಿದ್ಧವಾಗಿರುವ ತಾಣ ಇದು. 1842ರಲ್ಲಿ ಮದ್ರಾಸ್ ಪ್ರೆಸಿಡೆನ್ಸಿಯ ಗೌರ್ನರ್ ಸರ್ ಥಾಮಸ್ ಮುರ್ರೋ ಬೇಸಿಗೆ ರಜೆ ಕಳೆಯಲು ಈ ತಾಣವನ್ನು ಹುಡುಕಿದನಂತೆ. ಸ್ಕಾಟ್ಲೆಂಡಿನ ಡೇವಿಡ್ ಕುಕ್‌ಬರ್ನ್ ಸೇಲಂ ಜಿಲ್ಲೆ ಕಲೆಕ್ಟರ್ ಆಗಿದ್ದಾಗ (1820- 1829) ಈ ಪ್ರದೇಶ ಅಭಿವೃದ್ಧಿ ಕಂಡಿತು. ಮೊದಲು ಯುರೋಪಿಯನ್ನರೊಂದಿಗೆ ಕಾಫಿ ವ್ಯವಹಾರ ಆರಂಭಿಸಿದ ಎಂ.ಎಸ್.ಪಿ. ರಾಜೇಶ್ ಇಲ್ಲಿನ ಬೆಟ್ಟದಲ್ಲಿ ಬಂದು ನೆಲೆಸಿದ ಭಾರತದ ಮೊಟ್ಟಮೊದಲ ಕಾಫಿ ಪ್ಲಾಂಟರ್. ಎಂಎಸ್‌ಪಿ ಪ್ಲಾಂಟೇಶನ್ಸ್, ಎಂಎಸ್‌ಪಿ ಕಾಫಿ ಹೆಸರಿನಿಂದಲೇ ಅವರ ಬ್ರಾಂಡ್ ಚಿರಪರಿಚಿತ.
ಹೇಗಿದೆ? ಏನೇನಿದೆ?
ಎರ್‌ಕಾಡ್‌ಗೆ ತಲುಪಲು ಮೂರು ಮಾರ್ಗಗಳಿವೆ. ಶೆವರಾಯ್ ರೇಂಜ್ ಹೆಚ್ಚಾಗಿ ಹಸಿರು ಹುಲ್ಲಿನಿಂದ ಆವೃತವಾದ ಪ್ರದೇಶ. ಇದನ್ನು ಅರಣ್ಯ ಪ್ರದೇಶವೆಂದು ಕರೆದಿಲ್ಲ. ಇಲ್ಲಿನ ಬಿದಿರು 3000 ಅಡಿ (910 ಮೀ.) ವರೆಗೆ ಬೆಳೆಯುತ್ತದೆ ಎನ್ನುತ್ತಾರಾದರೂ ನಂಬುವುದು ಕಷ್ಟ. ಶ್ರೀಗಂಧ, ಬ್ಲ್ಯಾಕ್‌ವುಡ್ ಮತ್ತು ತೇಗದ ಮರಗಳೂ ಗಗನಚುಂಬಿಗಳಂತೆ ಕತ್ತೆತ್ತಿವೆ. 9000 ಎಕರೆಯಷ್ಟು ಬೆಟ್ಟದ ಪ್ರದೇಶದಲ್ಲಿ ಕಾಫಿ ಬೆಳೆಯಲಾಗುತ್ತಿದೆ. ಕಾಳಿ ಎಸ್ಟೇಟ್‌ಗಳಲ್ಲಿ ಬೆಳೆಸಿದ ಸಿಲ್ವರ್‌ಓಕ್ (ಗ್ರೆವಿಲಿಯಾ ರೊಬಸ್ಟಾ) ಮರಗಳು ದೃಷ್ಟಿನೆಟ್ಟು ನೋಡುವಷ್ಟು ವಯ್ಯಾರದಿಂದ ತೂಗಾಡುತ್ತಿರುತ್ತವೆ. ವನ್ಯಜೀವಿಗಳ ವೈವಿಧ್ಯವಿದೆ.
ಆರ್ಕಿಡಾರಿಯಂ
ಸಸ್ಯಸಂಕುಲ ಮತ್ತು ವನಸ್ಪತಿ ಅಧ್ಯಯನ ಉದ್ದೇಶದಿಂದ 1963ರಲ್ಲಿ ನ್ಯಾಷನಲ್ ಆರ್ಕಿಡಾರಿಯಂ ಸ್ಥಾಪಿಸಲಾಗಿದ್ದು, ಇದರ ಉಸ್ತುವಾರಿ ಸದರನ್ ಸರ್ಕಲ್ ಆಫ್ ಬಾಟ್ನಿಕಲ್ ಸರ್ವೇ ಆಫ್ ಇಂಡಿಯಾ. ಇದಕ್ಕಾಗಿ 18.4 ಹೆಕ್ಟೇರ್ ಪ್ರದೇಶ ಮೀಸಲಿಸಿದ್ದು, 3000 ಮರಗಳು ಮತ್ತು 1800 ವಿವಿಧ ಮಾದರಿಯ ಸಸ್ಯಕುಲದ ಪೊದೆಗಳನ್ನು ಬೆಳೆಸಲಾಗಿದೆ. ಪಶ್ಚಿಮಘಟ್ಟಗಳಲ್ಲಂತೆ ಎರ್‌ಕಾಡಿನಲ್ಲಿಯೂ ವಿವಿಧ ಗಿಡಮೂಲಿಕೆಗಳಿವೆ. <
ಹೀಗೆ ಬನ್ನಿ...
ವಿಮಾನ ಮಾರ್ಗ
ಎರಕಾಡ್‌ಗೆ ಹತ್ತಿರದ ವಾಯುಮಾರ್ಗವೆಂದರೆ 165 ಕಿ.ಮೀ. ಅಂತರದ ಟ್ರೀರ್ಚಿ ಏರ್‌ಪೋರ್ಟ್. ಕೊಯಂಬತ್ತೂರು ಏರ್‌ಪೋರ್ಟ್‌ಗೂ ಬಂದು ಸೇಲಂ ಮಾರ್ಗವಾಗಿ ಎರ್‌ಕಾಡ್ ತಲುಪಬಹುದು. ಕ್ಯಾಬ್ ಮತ್ತು ಬಸ್‌ಗಳ ಸೌಲಭ್ಯ ಎರ್‌ಕಾಡ್‌ಗೆ ಇದೆ.
ರೇಲ್ವೆ ಮಾರ್ಗ
ಎರ್‌ಕಾಡ್‌ಗೆ ಬೆಂಗಳೂರು, ಕೊಯಂಬತ್ತೂರು, ಚೆನ್ನೈನಿಂದ ನೇರ ರೈಲು ವ್ಯವಸ್ಥೆ ಇದೆ. ಹತ್ತಿರದ ರೇಲ್ವೆ ಸ್ಟೇಷನ್ ಎಂದರೆ ಸೇಲಂ.
ಬಸ್ ಮಾರ್ಗ
ಕೊಯಂಬತ್ತೂರಿನಿಂದ ಎರ್‌ಕಾಡ್‌ಗೆ ಬಸ್ ಮಾರ್ಗದಲ್ಲಿ 190 ಕಿ.ಮೀ., ಬೆಂಗಳೂರಿನಿಂದ 220 ಕಿ.ಮೀ. ಮತ್ತು ಚೆನ್ನೈನಿಂದ 357 ಕಿ.ಮೀ. ಆಗುತ್ತದೆ.
- ಶಿವಮೊಗ್ಗ ಗಿರಿಧರ್
girigadikoppa@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


