ವಾಹನ

ರಸ್ತೆ ರಾಜಕೀಯ

ಪೆಟ್ರೋಲ್‌ಗೆ ರು. 1.80 ಇಳಿಕೆ! ಪೆಟ್ರೋಲ್ ಗೆ 3 ಇಳಿಕೆ!! ಡೀಸೆಲ್ ದರ ರು. 1 ಏರಿಕೆ!!!

ರಸ್ತೆ ರಾಜಕೀಯ
Published On :

ಪೆಟ್ರೋಲ್‌ಗೆ ರು. 1.80 ಇಳಿಕೆ! ಪೆಟ್ರೋಲ್ ಗೆ 3 ಇಳಿಕೆ!! ಡೀಸೆಲ್ ದರ ರು. 1 ಏರಿಕೆ!!!
ಇಂಥ ಸುದ್ದಿ ಕೇಳಿದಾಗೆಲ್ಲ ಜನ ಇದೇನು ಕನಸೋ, ನನಸೋ ಅಂತ ಮೈ ಚಿವುಟಿ ನೋಡಿಕೊಳ್ಳುತ್ತಿದ್ದಾರೆ. ಪ್ರತಿ ಬಾರಿ ದರ ಇಳಿದಾಗಲೂ ಜನ ಖುಷಿಪಡುತ್ತಿದ್ದಾರೆ. ಈ ಖುಷಿಯಲ್ಲಿ ಜನ ಇನ್ನೊಂದು ವಿಷಯ ಮರೆಯುತ್ತಿದ್ದಾರೆ. ಅದೇನೆಂದರೆ ಡೀಸೆಲ್ ಬೆಲೆ ಗೊತ್ತಿಲ್ಲದೆ, ಸದ್ದಿಲ್ಲದೇ ವಾರ ವಾರ ಏರುತ್ತಿರುವುದು.
ಪೆಟ್ರೋಲ್ ದರ ಇಳಿಸಿದಾಗ ತೈಲ ಕಂಪನಿಗಳು ಕಚ್ಚಾ ತೈಲದ ಬೆಲೆಯಲ್ಲಿ ಇಳಿಕೆಯಾದ್ದರಿಂದ ದರ ಕಡಿತಗೊಳಿಸಲಾಗಿದೆ ಎಂಬ ಸಿದ್ಧ ಉತ್ತರ ನೀಡುತ್ತಿವೆ. ಇದು ನಿಜವೇ ಆಗಿದ್ದಲ್ಲಿ ಡೀಸೆಲ್ ದರವೂ ಇಳಿಯಬೇಕಿತ್ತಲ್ಲವೇ?
ಇಲ್ಲೇ ಇರುವುದು ಹಿಕ್ಮತ್ತು. ಪೆಟ್ರೋಲ್ ಬೆಲೆ ಇಳಿಯುತ್ತಿರುವುದಕ್ಕೆ ಬೇರೆಯದ್ದೇ ಆದ ಕಾರಣಗಳಿವೆ.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಏಕರೂಪಗೊಳಿಸಿ ಎಂಬ ಬೇಡಿಕೆಯನ್ನು ಕೇಂದ್ರ ಸರ್ಕಾರದ ಮುಂದಿಟ್ಟಿದ್ದರು. ಅದಕ್ಕೆ ಕೇಂದ್ರ ಸರ್ಕಾರ ಅಧಿಕೃತವಾಗಿ ಒಪ್ಪಲಿಲ್ಲ. ಆದರೆ ದಿಲ್ಲಿಯಲ್ಲಿ ಡೀಸೆಲ್ ಕಾರುಗಳ ತೆರಿಗೆಯನ್ನು ಹೆಚ್ಚಿಸಲಾಯಿತು. ಈಗ ಸದ್ದಿಲ್ಲದೇ ಪೆಟ್ರೋಲ್ ದರವನ್ನು ಮಾತ್ರ ಇಳಿಸುತ್ತಿದೆ.
ಕಾರು ಕಂಪನಿಗಳ ಈ ಲಾಬಿಗೆ ಕಾರಣವೂ ಇದೆ. ಪೆಟ್ರೋಲ್ ಕಾರಿನಲ್ಲಿ ಕಂಪನಿಗಳಿಗೆ ಲಾಭ ಜಾಸ್ತಿ. ಡೀಸೆಲ್ ಕಾರುಗಳಿಗೆ ಹೋಲಿಸಿದರೆ ಪೆಟ್ರೋಲ್ ಕಾರುಗಳ ಬೆಲೆಯೂ ಕಡಿಮೆ. ಹೀಗಾಗಿ ಕಾರು ಖರೀದಿಸುವ ಗ್ರಾಹಕರ ಸಂಖ್ಯೆ ಹೆಚ್ಚುತ್ತದೆ. ಅಲ್ಲದೇ ದಿಢೀರನೆ ಪೆಟ್ರೋಲ್ ಬೆಲೆಯಲ್ಲಾದ ಹೆಚ್ಚಳ ಪೆಟ್ರೋಲ್ ಕಾರುಗಳ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿತ್ತು. ಗ್ರಾಹಕರು ಕೂಡ ಪೆಟ್ರೋಲ್ ಕಾರುಗಳ ಖರೀದಿಯನ್ನು ಹೆಚ್ಚುಕಡಿಮೆ ನಿಲ್ಲಿಸಿಯೇಬಿಟ್ಟಿದ್ದರು. ಇದರಿಂದಾಗಿ ಕಾರು ಉತ್ಪಾದನಾ ಕಂಪನಿಗಳು ತಯಾರಿಸಿದ್ದ ಪೆಟ್ರೋಲ್ ಕಾರುಗಳು ಮಾರಾಟವಾಗದೇ ಉಳಿದಿವೆ.
ಕಾರುಗಳ ಒಟ್ಟಾರೆ ಮಾರಾಟ ಕುಸಿತದ ಜತೆಗೆ ಉತ್ಪಾದಿಸಿದ ಕಾರುಗಳು ಮಾರಾಟವಾಗದೇ ಉಳಿದಿರುವುದು ಕಾರು ಕಂಪನಿಗಳ ತಲೆನೋವಿಗೆ ಕಾರಣವಾಗಿದೆ. ಕಾರು ಕಂಪನಿಗಳಿಗೆ ಸಹಾಯ ಮಾಡುವ ಉದ್ದೇಶದಿಂದಲೇ ಈಗ ಪೆಟ್ರೋಲ್ ದರ ಇಳಿಸಲಾಗುತ್ತಿದೆ. ಅದೇ ಸಂದರ್ಭದಲ್ಲಿ ಡೀಸೆಲ್ ದರವನ್ನು ಇಳಿಸಲಾಗುತ್ತಿಲ್ಲ. ಹೀಗಾಗಿ ಕೇಂದ್ರ ಸರ್ಕಾರದ ದುರುದ್ದೇಶವೇನೆಂದರೆ ಈಗ ಪೆಟ್ರೋಲ್ ದರ ಕಡಿಮೆ ಮಾಡಿದಂತೆ ಮಾಡಿ, ಗ್ರಾಹಕರು ಪೆಟ್ರೋಲ್ ಕಾರುಗಳನ್ನು ಖರೀದಿಸಲು ಮನಸ್ಸು ಮಾಡುವಂತೆ ಮಾಡುವುದು. ಕಾರು ಕಂಪನಿಗಳ ಬಳಿ ಇರುವ ಪೆಟ್ರೋಲ್ ಕಾರುಗಳು ಮಾರಾಟವಾಗುತ್ತಿದ್ದಂತೆ ಮತ್ತೆ ಪೆಟ್ರೋಲ್ ದರ ಏರಿಸುವ ಹುನ್ನಾರ ಕೇಂದ್ರ ಸರ್ಕಾರದ್ದು.

2013ರ ಮಾರ್ಚ್‌ನಲ್ಲಿ ಮಾರಾಟವಾದ ಕಾರುಗಳು
ಕಂಪನಿ    ಡೀಸೆಲ್    ಪೆಟ್ರೋಲ್
ಟಾಟಾ    7339    57
ರೆನೋ    8050    167
ಶೆವರ್ಲೆ    4635    1643
ಫೋರ್ಡ್    4269    952
ಸ್ಕೋಡಾ    1730    302
ಫೋಕ್ಸ್ ವ್ಯಾಗನ್    3924    2443
ಟೊಯೊಟಾ    7078    2103
ನಿಸಾನ್    1274     498
ಫಿಯೆಟ್    415     47
ಒಟ್ಟು    38,714    8,212

ಜೀವ ಉಳಿಸುವ ತಂತ್ರಜ್ಞಾನ
ಬಹು ಸಮಯದಿಂದ ಸುದ್ದಿಯಲ್ಲಿರುವ ಮತ್ತು ಬಹುನಿರೀಕ್ಷಿತ ಫೋರ್ಡ್ ಇಕೋಸ್ಪೋರ್ಟ್‌ಗೆ ಜೂನ್ ತಿಂಗಳಿನಿಂದ ಬುಕಿಂಗ್ ಆರಂಭವಾಗಲಿದೆ. ಇದಕ್ಕಿಂತ ಪ್ರಮುಖ ಸುದ್ದಿ ಬೇರೆ ಇದೆ. ಅದೇನೆಂದರೆ ಫೋರ್ಡ್ ಸಂಸ್ಥೆ ಜೀವರಕ್ಷಕ ತಂತ್ರಜ್ಞಾನವೊಂದನ್ನು ಕಾರಿಗೆ ಅಳವಡಿಸಲು ನಿರ್ಧರಿಸಿದೆ. ಈ ತಂತ್ರಜ್ಞಾನ ಈಗಾಗಲೇ ಫೋರ್ಡ್‌ನ 50 ಲಕ್ಷ ಗ್ರಾಹಕರಿಗೆ ದೊರೆಯುತ್ತಿದೆ. ಅದನ್ನು ಇಕೋಸ್ಪೋರ್ಟ್ ಮೂಲಕ ಭಾರತೀಯ ಗ್ರಾಹಕರಿಗೂ ಒದಗಿಸಲು ಫೋರ್ಡ್ ಸಂಸ್ಥೆ ಮುಂದಾಗಿದೆ. ಇದಕ್ಕೆ ಯಾವುದೇ ಶುಲ್ಕವಿಲ್ಲ. ಹೆಚ್ಚುವರಿ ಹಣವೂ ಇಲ್ಲ. ಅಪಘಾತವಾಗಿ ಏರ್‌ಬ್ಯಾಗ್ ತೆರೆದುಕೊಂಡರೆ ಅಥವಾ ಡೀಸೆಲ್ ಪಂಪ್ ಬಂದ್ ಆದ 10 ಸೆಕೆಂಡ್ ಒಳಗೆ ಕಾರಿನೊಂದಿಗೆ ಪೇರ್ ಮಾಡಲಾದ ಮೊಬೈಲ್ ಮೂಲಕ ಸಂದೇಶ ರವಾನಿಸುತ್ತದೆ. ಆದರೆ ಸಂದೇಶ ರವಾನಿಸಬೇಕೇ? ಬೇಡವೇ? ಎಂಬ ಆಯ್ಕೆ ಮಾಡಲು ಚಾಲಕನಿಗೆ 10 ಸೆಕೆಂಡ್ ಕಾಲಾವಕಾಶ ನೀಡಲಾಗಿದೆ. ಆತ ಸಂದೇಶ ರವಾನಿಸುವುದು ಬೇಡ ಎಂದು ಆಯ್ಕೆ ಮಾಡಿದರೆ, ಇಲ್ಲವಾದಲ್ಲಿ ಸಂದೇಶ ರವಾನಿಸುತ್ತದೆ. ಸಂದೇಶದ ಜತೆಗೆ ಜಿಪಿಆರ್‌ಎಸ್ ಕೋಆರ್ಡಿನೇಟ್‌ಗಳನ್ನೂ ಕಳುಹಿಸುತ್ತದೆ. ಇದರಿಂದಾಗಿ ಸಂದೇಶ ಸ್ವೀಕರಿಸಿದವರಿಗೆ ಯಾವ ಪ್ರದೇಶದಲ್ಲಿ ಅಪಘಾತವಾಗಿದೆ ಎಂಬುದನ್ನು ತಿಳಿಯುವುದು ಕೂಡ ಸುಲಭವಾಗುತ್ತದೆ.
ಇದರ ಜತೆಗೆ ಹಿಲ್ ಲಾಂಚ್ ಅಸಿಸ್ಟ್ ವ್ಯವಸ್ಥೆಯನ್ನೂ ನೀಡಲಾಗಿದೆ. ಘಟ್ಟ ಹತ್ತುವ ಸಂದರ್ಭದಲ್ಲಿ ವಾಹನವನ್ನು ನಿಲ್ಲಿಸಿ ಮತ್ತೆ ಹೊರಡುವ ಸಂದರ್ಭದಲ್ಲಿ ಹಿಂದೆ ಚಲಿಸದಂತೆ ಕಾರನ್ನು ತಡೆಯುವ ವ್ಯವಸ್ಥೆಯನ್ನು ಹಿಲ್ ಲಾಂಚ್ ಅಸಿಸ್ಟ್ ಎಂದು ಕರೆಯಲಾಗುತ್ತದೆ. ಫೋರ್ಡ್ ಸಂಸ್ಥೆ ಇಕೋಸ್ಪೋರ್ಟ್ ಮೂಲಕ ಭಾರತದ ಮಾರುಕಟ್ಟೆಯಲ್ಲಿ ಉತ್ತಮ ಗ್ರಾಹಕರನ್ನು ಹೊಂದುವ ಮತ್ತು ಮಾರುಕಟ್ಟೆ ಪಾಲು ಹೆಚ್ಚಿಸಿಕೊಳ್ಳಲು ಯತ್ನಿಸುತ್ತಿದೆ. ಆದರೆ ಇಕೋಸ್ಪೋರ್ಟ್ ಬಿಡುಗಡೆ ಈಗಾಗಲೇ ನಿರೀಕ್ಷೆಗಿಂತ ತಡವಾಗಿದೆ. ಈ ವಿಳಂಬಕ್ಕೆ ಕಾರಣ ಇಕೋಸ್ಪೋರ್ಟ್ ಶೇ.70ರಷ್ಟು ಭಾರತೀಯವಾಗಿರಲಿದೆ. ತಡವಾಗಿಯಾದರೂ, ಭಾರತೀಯ ನಿರ್ಮಿತ ಮತ್ತು ತಂತ್ರಜ್ಞಾನ ಶ್ರೀಮಂತ ಮಿನಿ ಎಸ್‌ಯುವಿ ಚಲಾಯಿಸುವ ಅವಕಾಶ ಭಾರತೀಯ ಗ್ರಾಹಕರಿಗೆ ದೊರೆಯಲಿದೆ.

ಕಾರು ಕೊಳ್ಳುವ ಮೊದಲು
ಕಾರು ಖರೀದಿ ಮಾಡುವ ಮೊದಲು ಸ್ವಲ್ಪ ಲೆಕ್ಕಾಚಾರ ಮಾಡಿ. ಪೆಟ್ರೋಲ್ ಕಡಿಮೆ ಆಗುತ್ತಿದೆ ಎಂಬ ಕಾರಣಕ್ಕೆ ಪೆಟ್ರೋಲ್ ಕಾರು ಖರೀದಿಸಬೇಡಿ. ಡೀಸೆಲ್ ಬೆಲೆ ಕಡಿಮೆ ಎಂಬ ಕಾರಣಕ್ಕೆ ಡೀಸೆಲ್ ಕಾರು ಖರೀದಿಸಬೇಡಿ. ಯಾಕೆಂದರೆ ನೀವು ಕಾರನ್ನು ಯಾವ ಪ್ರಮಾಣದಲ್ಲಿ ಬಳಸುತ್ತೀರಿ ಎಂಬುದನ್ನು ಆಧರಿಸಿ ಕಾರು ಖರೀದಿಸಿ. ಅಂದರೆ ಮಾತ್ರ ನೀವು ಸ್ಮಾರ್ಟ್ ನಿರ್ಧಾರ ಕೈಗೊಳ್ಳಬಹುದು. ಈ ಲೆಕ್ಕಾಚಾರದ ಬಗ್ಗೆ ಈ ಹಿಂದೆಯೇ ಸವಿವರವಾಗಿ ಬರೆಯಲಾಗಿತ್ತು. ಅದನ್ನು ಸರಳೀಕರಿಸಿ, ಸಂಕ್ಷಿಪ್ತವಾಗಿ ಹೇಳುವುದಾದರೆ ನೀವು ತಿಂಗಳಿಗೆ ಸರಾಸರಿ 1000-1300 ಕಿ.ಮೀ. ಕಾರು ಚಲಾಯಿಸುವವರಾದರೆ ಪೆಟ್ರೋಲ್ ಕಾರು ಖರೀದಿಸಿ. ಅದಕ್ಕಿಂತ ಹೆಚ್ಚು ಚಲಾಯಿಸುವವರಾದರೆ ಡೀಸೆಲ್ ಕಾರು ಖರೀದಿಸಿ. ಡೀಸೆಲ್ ದರ ಹೆಚ್ಚಾಗಬಹುದು. ಆದರೆ ಪೆಟ್ರೋಲ್ ದರವನ್ನು ಮೀರಿ ನಿಲ್ಲಲಾರದು. ಪೆಟ್ರೋಲ್ ದರ ಇಳಿಯಬಹುದು. ಆದರೆ ಡೀಸೆಲ್‌ಗಿಂತ ಕಡಿಮೆಯಾಗಲಾರದು. ಇನ್ನೂ ಒಂದು ಸಂಗತಿಯೆಂದರೆ, ಪೆಟ್ರೋಲ್ ಎಂಜಿನ್‌ಗಳಿಗಿಂತ ಡೀಸೆಲ್ ಎಂಜಿನ್‌ಗಳ ತಂತ್ರಜ್ಞಾನ ಅಭಿವೃದ್ಧಿಗೊಂಡಿದೆ. ಇಂದು ಡೀಸೆಲ್ ಎಂಜಿನ್‌ಗಳೇ ಹೆಚ್ಚು ಸಮರ್ಥ ಮತ್ತು ಶಕ್ತಿಶಾಲಿಯಾಗಿವೆ. ಪ್ರತಿ ಲೀಟರ್‌ಗೆ ಡೀಸೆಲ್ ಕಾರು ನೀಡುವ ಮೈಲೇಜ್ ಕೂಡ ಪೆಟ್ರೋಲ್ ಕಾರಿಗಿಂತ ಹೆಚ್ಚು.

ಸುಮ್ಕೆ ತಿಳ್ಕಂಡಿರಿ ಬೇಕಾಯ್ತದೆ!

ವಾಹನ ಹೆಚ್ಚು ಓಡಿಸುವವರು ಗಂಡಸರೇ ಆಗಿರಬಹುದು. ಆದರೆ ವಾಹನಗಳ ಗ್ಲಾಸಿಗೆ ಅಳವಡಿಸಲಾಗುವ ವೈಪರ್ಸ್ (wipers) ಕಂಡುಹಿಡಿದಿದ್ದು ಒಬ್ಬ ಮಹಿಳೆ! ಹೀಗಾಗಿ ಇದನ್ನು wifers  ಎಂದೂ ಕರೆಯಬಹುದೇನೊ!?

- ವಕ್ರದಂತ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.