ಕೂಸಳ್ಳಿ ಕಂಡಿರಾ?

ಹೊರಪ್ರಪಂಚಕ್ಕೆ ತಿಳಿದಿರುವ ಜಲಪಾತಗಳಷ್ಟೇ ತಿಳಿಯದಿರುವ ಜಲಪಾತಗಳೂ ಅನೇಕ ಇವೆ. ಅವುಗಳಲ್ಲೊಂದು ಉಡುಪಿ ಜಿಲ್ಲೆಯ ಕೂಸಳ್ಳಿ ಜಲಪಾತ.
ಕೂಸಳ್ಳಿ ಎನ್ನುವುದು ಒಂದೇ ಜಲ ಪಾತ ಅಲ್ಲ, ಅದು 3 ಚಿಕ್ಕ ಮತ್ತು 3 ದೊಡ್ಡ ಜಲಪಾತಗಳ ಸರಣಿ. ಅದರಲ್ಲೂ ತುತ್ತತುದಿಯಲ್ಲಿರುವ ಜಲಪಾತ ನಯನ ಮನೋಹರ. 170 ಅಡಿಗಳಷ್ಟು ದೊಡ್ಡದಿದೆ. ಉಳಿದವು 50 ರಿಂದ 100 ಅಡಿಗಳಷ್ಟು ದೊಡ್ಡದಿವೆ. ತೂದಳ್ಳಿಯಿಂದ 4 ಕಿ.ಮೀ. ಸಾಗಿದರೆ ಎತ್ತರದಿಂದ ನೀರು ಬೀಳುವ ಸದ್ದು ಕೇಳುತ್ತದೆ. ಮುಂಭಾಗದಲ್ಲಿ ಸಿಗುವುದೇ ಕೂಸಳ್ಳಿಯ ಮೊದಲ ಜಲಪಾತ.
ಸುತ್ತಮುತ್ತ ಎಲ್ಲಿ ನೋಡಿದರೂ ಹಚ್ಚಹಸಿರು, ನಡುವೆ ಜುಳುಜುಳು ಜಲಪಾತ. ಹಕ್ಕಿ ಹಾಡು, ಕಾಡಿನ ಮಣ್ಣಿನ ಕಂಪು. ಮೈಮರೆಯುವುದಕ್ಕೆ ಇನ್ನೇನೂ ಬೇಕು? ಅಲ್ಲಿಂದ ಮತ್ತೆ ಮೇಲಕ್ಕೇರಿದರೆ ಒಂದೊಂದೇ ಜಲಪಾತಗಳು ಕಣ್ಣೆದುರು ತೆರೆದುಕೊಳ್ಳುತ್ತವೆ. ಪ್ರತಿಯೊಂದು ಜಲಪಾತವೂ ತನ್ನ ಗಾತ್ರ, ವಿನ್ಯಾಸದಿಂದ ವಿಭಿನ್ನವಾಗಿವೆ. ಮತ್ತೆ ಅರ್ಧ ಗಂಟೆ ಟ್ರೆಕ್ಕಿಂಗ್ ಮಾಡಿದರೆ ತುತ್ತ ತುದಿಯ ಜಲಪಾತದ ಸೌಂದರ್ಯ ಅನಾವರಣಗೊಳ್ಳುತ್ತದೆ. ಎದುರಿನಲ್ಲಿ ಬೆಳ್ಳನೇ ಹಾಲಿನಂಥ ಜಲಪಾತ, ತಲೆ ಮೇಲೆ ನೀರಿನ ಮುತ್ತಿನ ಸಿಂಚನ. ಕಾಲಡಿಯಲ್ಲಿ ಹರಿಯುವ ತಂಪು ಹೊಳೆ, ಮೈಜುಮ್ಮೆನ್ನುವ ತಂಪು ವಾತಾವರಣ.
ಈ ಜಲಪಾತದ ಮುಂದೆ ನಿಂತು ಪಶ್ಚಿಮ ದಿಕ್ಕಿಗೆ ನೋಡಿದರೆ ನೀಲಿ ಬಣ್ಣದ ಅರಬ್ಬಿ ಸಮುದ್ರ ಕಾಣುತ್ತದೆ. ಬಹುಶಃ ಕೂಸಳ್ಳಿ ಬಿಟ್ಟರೆ ಬೇರೆ ಯಾವುದೇ ಜಲಪಾತಕ್ಕೆ ಅಭಿಮುಖವಾಗಿ ಸಮುದ್ರ ಇಲ್ಲ. ಇದು ಸಾರ್ವಕಾಲಿಕ ಜಲಪಾತವಾದರೂ ಈಗ ಅಂದರೆ ಬೇಸಿಗೆ ಗಾಲದಲ್ಲಿ ಜಲಪಾತ ಒಣಗಿ ಸೊರಗುತ್ತದೆ.
ಪರ್ಮಿಶನ್ ಬೇಕು...
ಕೇವಲ ಟ್ರೆಕ್ಕಿಂಗ್ ಅಲ್ಲ, ಸ್ವಲ್ಪ ಕಠಿಣ ಸಾಹಸಿಗಳಿಗೆ ಮಾತ್ರ ಈ ಜಲಪಾತದ ದರ್ಶನ ಸಾಧ್ಯ. ಕಾಡಿನ ದಾರಿ, ಅದೃಷ್ಟ ಇದ್ದರೆ ನವಿಲು ಇತ್ಯಾದಿ ಹಕ್ಕಿಗಳು, ಅನೇಕ ಬಗೆಯ ಹಾವುಗಳ ದರ್ಶನವೂ ಆಗುತ್ತದೆ. ಇದು ನಕ್ಸಲರು ಓಡಾಡುವ ಪ್ರದೇಶ. ಆದ್ದರಿಂದ, ಅರಣ್ಯ ಇಲಾಖೆಯಿಂದ ಮೊದಲೇ ಪರ್ಮಿಶನ್ ಪಡೆದುಕೊಳ್ಳಬೇಕು. ಕ್ಯಾಮೆರಾ ಕೈಯಲ್ಲಿದ್ದರೆ ಒಂದಷ್ಟು ಒಳ್ಳೆಯ ಕ್ಷಣಗಳನ್ನು ಸೆರೆ ಹಿಡಿದುಕೊಳ್ಳಬಹುದು. ಆದರೆ, ಅನಗತ್ಯ ಚೆಲ್ಲಾಟ, ಬಾಟಲಿ, ಪ್ಲಾಸ್ಟಿಕ್ ಇತ್ಯಾದಿ ತ್ಯಾಜ್ಯಗಳಿಗೆ ನಿಷೇಧ ಇದೆ. ಪರಿಸರ ಕಾಪಾಡುವ ಹೊಣೆ ಪ್ರವಾಸಿಗರಿಗೆ ಇದ್ದರೆ ಟ್ರಿಪ್ ಇನ್ನೂ ಸುಂದರವಾಗಬಲ್ಲದು.
ಹೀಗೆಬನ್ನಿ...
ಉಡುಪಿಯಿಂದ 80 ಕಿ.ಮೀ. ದೂರ ಕಾರವಾರಕ್ಕೆ ತೆರಳುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಶಿರೂರು ಇದೆ. ಶಿರೂರು ಚೆಕ್‌ಪೋಸ್ಟಲ್ಲಿ ಬಲಕ್ಕೆ ತಿರುಗಿದರೆ 8 ಕಿ.ಮೀ. ದೂರದಲ್ಲಿ ತೂದಳ್ಳಿ ಇದೆ. ಅಲ್ಲಿಯವರೆಗೆ ವಾಹನ ಹೋಗುತ್ತದೆ. ಅರಣ್ಯ ಇಲಾಖೆಯ ರಸ್ತೆ ಇದೆ. ಅಲ್ಲಿಂದ 4 ಕಿ.ಮೀ. ಟ್ರಕ್ಕಿಂಗ್ ಮಾಡಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


