RIDER ಧೋನಿ

ಕ್ರಿಕೆಟ್‌ನಿಂದ ನಿವೃತ್ತರಾದ ಬಳಿಕ ಎಂ.ಎಸ್. ಧೋನಿ ಏನು ಮಾಡಬಹುದು? ಅನುಮಾನವೇ ಇಲ್ಲ, ಅವರು ಸೂಪರ್ ಬೈಕ್ ತಂಡದ ನಾವಿಕರಾಗಲಿದ್ದಾರೆ!
ತಮಾಷೆ ಅಲ್ಲ. ಕ್ರಿಕೆಟ್ ಲೋಕದ ಶ್ರೀಮಂತ ಆಟಗಾರ ಎಂಬ ಖ್ಯಾತಿಗೆ ಒಳಗಾಗಿರುವ ಭಾರತ ಕ್ರಿಕೆಟ್‌ನ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿ ಬೈಕ್ ರೇಸಿಂಗ್‌ನಲ್ಲಿ ಬ್ಯುಸಿಯಾಗಲಿದ್ದಾರೆ. ಕ್ರಿಕೆಟ್‌ನಿಂದ ನಿವೃತ್ತಿಯಾಗುವುದು ದೂರದ ಮಾತಾಗಿರಬಹುದು. ಆದರೆ ಆ ಬಳಿಕ ಏನು ಮಾಡಬೇಕು ಎನ್ನುವುದಕ್ಕೆ ಅಗತ್ಯ ತಯಾರಿಯನ್ನಂತೂ ಧೋನಿ ಈಗಾಗಲೇ ಆರಂಭಿಸಿದ್ದಾರೆ. ಮಹೀ ರೇಸಿಂಗ್ ತಂಡವನ್ನು ಪ್ರಾರಂಭಿಸಿರುವ ಧೋನಿ, ಆ ಮೂಲಕ ಕ್ರಿಕೆಟ್‌ನಿಂದ ದೂರವಾದ ಬಳಿಕ ರೇಸಿಂಗ್ ಗ್ರೌಂಡ್‌ನಲ್ಲಿ ಸಕ್ರಿಯವಾಗುವ ಸೂಚನೆ ನೀಡಿದ್ದಾರೆ.
ಕ್ರಿಕೆಟ್ ಆಡುವಾಗ ಹೆಲಿಕಾಪ್ಟರ್ ಶಾಟ್‌ಗಳ ಮೂಲಕ ಕ್ರಿಕೆಟ್ ಪ್ರೇಮಿಗಳ ಮನಗೆದ್ದಿದ್ದರೂ, ಸೂಪರ್ ಬೈಕ್‌ಗಳ ಮೇಲಿನ ಅಧಿಕ ವ್ಯಾಮೋಹದಿಂದ ಬೈಕ್ ರೇಸಿಂಗ್‌ನಲ್ಲಿ ತೊಡಗಿಕೊಳ್ಳಲಿದ್ದಾರೆ. ತೆಲುಗು ಚಿತ್ರೋದ್ಯಮದ ಸೂಪರ್‌ಸ್ಟಾರ್ ನಾಗಾರ್ಜುನ, ಅರುಣ ಪಾಂಡೆ ಹಾಗೂ ನಂದೀಶ್ ದೊಮ್ಲೂರ್ ಜತೆ ಸೇರಿ ಎಂ.ಎಸ್.ದೋನಿ ಮಹೀ ರೇಸಿಂಗ್ ತಂಡ ಆರಂಭಿಸಿದ್ದಾರೆ.
ವರ್ಷದ ಮೊದಲ ಸೂಪರ್ ಸ್ಪೋರ್ಟ್ ಸಿರೀಸ್‌ನಲ್ಲಿಯೇ ಜಯ ಗಳಿಸುವ ಮೂಲಕ ಮಹಿ ರೇಸಿಂಗ್ ಟೀಮ್ ಉತ್ತಮ ಆರಂಭವನ್ನೇ ಮಾಡಿದೆ. ಮುಂದಿನ 5 ವರ್ಷದಲ್ಲಿ ಸುಮಾರು 2 ಸಾವಿರ ಕೋಟಿ ಬಂಡವಾಳ ಹೂಡುವ ಉದ್ದೇಶವಿರಿಸಿಕೊಳ್ಳಲಾಗಿದೆ. ತಂಡದಲ್ಲಿ ಮಾಲೀಕತ್ವ ಹೆಚ್ಚಿನ ಪಾಲನ್ನು ಧೋನಿಯೇ ಹೊಂದಿದ್ದಾರೆ.
ವಿಶ್ವದ ಶ್ರೇಷ್ಟ ರೈಡರ್ಸ್ ಹಾಗೂ ಬೈಕ್‌ಗಳು
ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮೊದಲ ರೇಸಿಂಗ್ ತಂಡ ಇದಾಗಿದೆ. ಆದರೆ ನೆಪ ಮಾತ್ರಕ್ಕೆ ಈ ತಂಡವನ್ನು ಕಟ್ಟಲಾಗಿಲ್ಲ. ವಿಶ್ವದ ಶ್ರೇಷ್ಠ ಬೈಕ್ ರೈಡರ್ಸ್ ಹಾಗೂ ಬೈಕ್‌ಗಳನ್ನೇ ತಂಡಕ್ಕಾಗಿ ಖರೀದಿಸಲಾಗಿದೆ.
ಹಾಲಿ ವಿಶ್ವ ಚಾಂಪಿಯನ್ ಟರ್ಕಿಯ ಕೆನನ್ ಸುಫೊಲು ಹಾಗೂ 2000ರಲ್ಲಿ ವಿಶ್ವ ಚಾಂಪಿಯನ್ ಆಗಿದ್ದ ಫೇಬಿಯನ್ ಫಾರೆಟ್ ತಂಡದ ಸದಸ್ಯರಾಗಿದ್ದಾರೆ. ಟರ್ಕಿಯ ಕೆನನ್ 2007, 2010 ಹಾಗೂ 2012ರಲ್ಲಿ ವಿಶ್ವಚಾಂಪಿಯಯನ್ ಆಗಿದ್ದಾರೆ.
ತಮ್ಮ ಮೇಲಿಟ್ಟಿರುವ ನಿರೀಕ್ಷೆಗಳನ್ನು ಉಳಿಸಿಕೊಂಡಿರುವ ಇವರು ಸೂಪರ್ ಸ್ಪೋರ್ಟ್ ಸಿರೀಸ್‌ನಲ್ಲಿ ಕ್ರಮವಾಗಿ ಮೊದಲ ಹಾಗೂ ನಾಲ್ಕನೇ ಸ್ಥಾನ ಗಳಿಸಿದ್ದಾರೆ. ವಿಶ್ವ ಚಾಂಪಿಯನ್‌ಶಿಪ್‌ನ ಅರ್ಹತಾ ಸುತ್ತಿನಲ್ಲೂ ಇವರು 2 ಮತ್ತು 3ನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ. ಇದರೊಂದಿಗೆ ಭಾರತ ಕ್ರಿಕೆಟ್‌ನ ಯಶಸ್ವಿ ನಾಯಕನ ಕನಸಿನ ತಂಡವು ವಿಶ್ವ ಬೈಕ್ ರೇಸಿಂಗ್‌ನ ಮೊದಲ ಪ್ರಯತ್ನದಲ್ಲಿಯೇ ಭರವಸೆ ಮೂಡಿಸಿದೆ.
ಬೈಕ್‌ನ ವಿಶೇಷತೆಯೇನು?
ಮಹೀ ರೇಸಿಂಗ್ ತಂಡದ ಇಬ್ಬರೂ ರೈಡರ್‌ಗಳು 636 ಸಿಸಿಯ ಕವಾಸಕಿ ನಿಂಝಾ ಸೂಪರ್ ಬೈಕ್‌ನ್ನು ಉಪಯೋಗಿಸುತ್ತಾರೆ. ಕವಾಸಕಿ ಕಂಪನಿಯು 1995ರಲ್ಲಿಯೇ ಈ ಸೂಪರ್ ಬೈಕ್‌ನ್ನು ಮಾರುಕಟ್ಟೆಗೆ ತಂದಿತ್ತು. ಇದರ ಸುಧಾರಿತ ಮಾದರಿಯೇ ಕವಾಸಕಿ ನಿಂಝಾ. ಕವಾಸಕಿ ನಿಂಝಾ ಸೂಪರ್‌ಬೈಕ್ ಧೋನಿಯ ಕನಸಿನ ಬೈಕ್ ಕೂಡ. ಮಹಿಯ ಬೈಕ್ ಸಂಗ್ರಹದಲ್ಲಿ ನಿಂಝಾ ಕೂಡ ಇದೆ.
ಧೋನಿಯ ಬೈಕ್ ಹುಚ್ಚು
ಕ್ರಿಕೆಟ್‌ನಲ್ಲಿ ಹೆಸರು ಗಳಿಸುವ ಮುಂಚೆಯೇ ಧೋನಿಗೆ ಬೈಕ್‌ಗಳ ಮೇಲೆ ಹುಚ್ಚು ಅತಿಯಾಗಿತ್ತು. ಆದರೆ ಸೂಪರ್ ಬೈಕ್‌ಗಳ ಮೇಲಿನ ಕ್ರೇಝ್ ನಿವಾರಿಸಿಕೊಳ್ಳಲು ಆರ್ಥಿಕ ಅಡಚಣೆಯಿತ್ತು. ಇಂದು ಅವರ ಬಳಿ ಬರೋಬ್ಬರಿ 60 ಲಕ್ಷದ ಸೂಪರ್ ಬೈಕ್ ಇದೆ. ಕಾನ್ಫಿಡರೇಟ್ ಮೋಟಾರ್ ಸೈಕಲ್ ಕಂಪನಿ ಹೆಲ್‌ಕ್ಯಾಟ್ 132 ಮಾದರಿಯ ಬೈಕ್ ಇದು. ತಯಾರಾಗಿರುವ ಎಲ್ಲ 150 ಬೈಕ್‌ಗಳು ಮಾರಾಟವಾಗಿವೆ. ವಿಶ್ವದ ಶ್ರೇಷ್ಠ ಬೈಕ್‌ಗಳಲ್ಲಿ ಇದೊಂದು. ಇದರೊಂದಿಗೆ ಧೋನಿಯ ಸೂಪರ್ ಬೈಕ್‌ಗಳ ಸಂಖ್ಯೆ 16ಕ್ಕೆ ಏರಿದೆ. ಇದರ ಹೊರತಾಗಿ ಎಲ್ಲ ಭಾರತೀಯರ ಫೆವರಿಟ್ ಯಮಹಾ ಆರ್‌ಎಕ್ಸ್, ಹ್ಯಾರ್ಲೆ ಡೆವಿಡ್‌ಸನ್ ಫ್ಯಾಟ್‌ಬಾಯ್, ಡುಕಾಟಿ ಬೈಕ್‌ಗಳು ಸೇರಿವೆ.
- ರಾಧೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


