ಬಾವಲಿ ಗುಹೆ
ಉತ್ತರ ಕನ್ನಡ ಜಿಲ್ಲೆ ಪ್ರಾಕೃತಿಕವಾಗಿ ಸಂಪದ್ಭರಿತ. ಹೆಜ್ಜೆ ಹೆಜ್ಜೆಗೂ ಜಲಪಾತ....

ಉತ್ತರ ಕನ್ನಡ ಜಿಲ್ಲೆ ಪ್ರಾಕೃತಿಕವಾಗಿ ಸಂಪದ್ಭರಿತ. ಹೆಜ್ಜೆ ಹೆಜ್ಜೆಗೂ ಜಲಪಾತ. ತೊರೆ, ಝರಿ, ಇಳಿಜಾರು, ಗುಡ್ಡ, ಕಣಿವೆ, ಕಾಡು, ಗುಹೆ ಹೀಗೆ ಒಂದಿಲ್ಲೊಂದು ಬಗೆಯ ಸೃಷ್ಟಿ ಸೌಂದರ್ಯ. ಇಲ್ಲಿನ ಪ್ರಕೃತಿಯ ಮಡಿಲಲ್ಲಿ ಅದೆಷ್ಟೋ ವಿಸ್ಮಯಗಳು ಅಗೋಚರ. ಕೆಲವೊಂದು ಗೋಚರಿಸುತ್ತವೆ. ಅಂಥ ವಿಶಿಷ್ಟ ತಾಣಗಳಲ್ಲಿ ಯಲ್ಲಾಪುರ ತಾಲೂಕಿನ ಬಾವಲಿ ಗುಹೆ ಒಂದಾಗಿದೆ.
ಯಲ್ಲಾಪುರದಿಂದ 22 ಕಿ.ಮೀ. ಕಡಿದಾದ ಮಾರ್ಗದಲ್ಲಿ ಸಾಗಿದರೆ ಬಾವಲಿ ಗುಹೆ ಸಿಗುತ್ತದೆ. ಯಲ್ಲಾಪುರ-ವಜ್ರಳ್ಳಿ ಮಾರ್ಗದಿಂದ 3 ಕಿ.ಮೀ. ದಟ್ಟಡವಿಯ ಮಧ್ಯ ಸಂಚಾರಕ್ಕೆ ಯೋಗ್ಯವಾದ ರಸ್ತೆಯಿದೆ. ಆ ಮೂಲಕ ಬೆಣ್ಣೆಜಡ್ಡಿ ತಲುಪಬೇಕು. ಅಲ್ಲಿಂದ ಕಾಲ್ನಡಿಗೆಯಲ್ಲಿ ತೋಟಪಟ್ಟಿ ಮತ್ತು ಗುಡ್ಡದ ಇಳಿಜಾರಿನ ಅಂಚಿನಲ್ಲಿ ಬಾವಲಿ ಗುಹೆಗೆ ತಲುಪಬಹುದು. ಸಾಹಸಕ್ಕೆ ಮತ್ತು ಚಾರಣಕ್ಕೆ ಹೇಳಿ ಮಾಡಿಸಿದ ಸ್ಥಳ.
ಕಡಿದಾದ ಇಳಿಜಾರು, ತಗ್ಗುದಿಣ್ಣೆಗಳ ಸಾಲಿನಲ್ಲಿ ಕೊಂಚ ಯಾಮಾರಿದರೆ ಪ್ರಪಾತಕ್ಕೆ ಬೀಳುತ್ತೀರಿ. ಅಂಥ ಸ್ಥಳದಲ್ಲೇ ಸಾಗಬೇಕು. ಬಾವಲಿಗಳು ಲಕ್ಷ ಲಕ್ಷ ಸಂಖ್ಯೆಯಲ್ಲಿ ವಾಸಿಸುತ್ತಿರುವ ಪ್ರದೇಶಕ್ಕೆ ಕಲ್ಲಿನಿಂದ ಆವೃತವಾದ ಕಡಿದಾದ ಮಾರ್ಗದಲ್ಲಿ, ಬಂಡೆಗಳನ್ನು ಹತ್ತಿ ಗುಹೆ ತಲುಪುವಷ್ಟರಲ್ಲಿ ಜೀವ ಹೈರಾಣು. ಪ್ರಕೃತಿ ಸೊಬಗು ಆ ದಣಿವನ್ನು ಒದ್ದೋಡಿಸುತ್ತದೆ. ಗುಹೆ ಪ್ರವೇಶಿಸುವಾಗ ಬೆಳಕಿನ ವ್ಯವಸ್ಥೆ ಸ್ಪಷ್ಟವಾಗಿರಬೇಕು. ಒಬ್ಬರು ಒಳ ನುಸುಳಬಹುದು. ಬ್ಯಾಟರಿ ಬೆಳಕನ್ನು ಗುಹೆಯ ಒಳಗಡೆ ಹಾಯಿಸುತ್ತಿದ್ದಂತೆ ಬಾವಲಿಗಳ ಹಾರಾಟ ಶುರು. ಅದೆಷ್ಟೋ ಬಾವಲಿಗಳು ನಮಗೆ ಢೀ ಕೊಟ್ಟು ಹೊರಹಾರುತ್ತವೆ. ಒಳಗಡೆಯೊಂದು ಕೊಳವಿದೆ. ಈ ನೀರು ಬೇಸಿಗೆಯಲ್ಲೂ ಹರಿದು ಕೆಳಗಿರುವ ತೋಟಪಟ್ಟಿಗಳಿಗೆ ತಂಪೆರೆಯುತ್ತದೆ. ಈ ನೀರಿಗೆ 'ಅಬ್ಬಿ ನೀರು' ಎನ್ನುವರು.
ಧೈರ್ಯವೊಂದಿದ್ದರೆ ಈ ಗುಹೆಯಲ್ಲಿ ಎಷ್ಟು ದೂರ ಬೇಕಾದರೂ ಸಾಗಬಹುದು. ಆದರೆ ಬಾವಲಿಗಳ ಹಿಕ್ಕೆ ಮತ್ತು ಮೂತ್ರದ ವಾಸನೆಗಳನ್ನು ತಡೆದುಕೊಳ್ಳುವ ಶಕ್ತಿ ಇರಬೇಕಷ್ಟೇ. ಒಳ ಪ್ರವೇಶಿಸಿದ ಮೇಲೆ 5-6 ಜನ ನಿಲ್ಲುವಷ್ಟು ಸ್ಥಳಾವಕಾಶವಿದೆ. ಗುಹೆ ಎಷ್ಟು ದೂರವಿದೆ ಎನ್ನುವ ಬಗ್ಗೆ ಈ ವರೆಗೆ ಯಾರಿಗೂ ನಿಖರ ಮಾಹಿತಿಯಿಲ್ಲ. ಮನುಷ್ಯರನ್ನು ಕಂಡು ಬಾವಲಿಗಳು ಹೊರಡಿಸುವ ಶಬ್ದಗಳು ಅಲ್ಪಮಟ್ಟಿನ ಭಯ ಹುಟ್ಟಿಸುತ್ತವೆ. ಆದರೂ ಬಾವಲಿ ಗುಹೆ ಸಾಹಸಿಗರ ಮತ್ತು ಪರಿಸರ ಪ್ರೇಮಿಗಳ ಅಚ್ಚುಮೆಚ್ಚಿನ ತಾಣ.
ಬಾವಲಿ ಗುಹೆಯೊಳಗಡೆ ಹೋದಂತೆ ಹಲವು ಉಪಮಾರ್ಗಗಳೂ ಇವೆ. ಅವು ಎಲ್ಲಿ ಸೇರುತ್ತವೆ ಎನ್ನುವುದು ಯಾರಿಗೂ ಗೊತ್ತಿಲ್ಲ. ಅಷ್ಟು ದೂರ ಕ್ರಮಿಸಲೂ ಸಾಧ್ಯವಿಲ್ಲ. ಪಕ್ಕದಲ್ಲಿ ಇನ್ನೊಂದು ಗುಹೆಯಿದೆ. ಈ ಗುಹೆಯನ್ನು ಯಾರೂ ಹೊಕ್ಕಿಲ್ಲ. ಕಾರಣ ಆ ಗುಹೆಯಲ್ಲಿ ಬಾವಲಿಗಳಿಲ್ಲ. ಬಾವಲಿಗಳಿಲ್ಲದ ಸ್ಥಳಗಳಲ್ಲಿ ಹಾವು, ಚೇಳುಗಳಂಥ ಅಪಾಯಕಾರಿ ಜೀವಿಗಳಿರುತ್ತವೆ ಎಂದು ಸ್ಥಳೀಯರು ಹೇಳುತ್ತಾರೆ.
ಮಹಾಭಾರತದ ಸಂದರ್ಭದಲ್ಲಿ ಪಾಂಡವರು ವನವಾಸದಲ್ಲಿದ್ದಾಗ ಈ ಗುಹೆಯಲ್ಲಿ ಆಶ್ರಯ ಪಡೆದಿದ್ದರಂತೆ. ಅದೇ ರೀತಿ ಗುಹೆಯ ಮೇಲಿನ ಗುಡ್ಡದಲ್ಲಿ ವನದೇವತೆಯಿದೆ. ಬಾವಲಿಗಳು ರೈತಸ್ನೇಹಿ ಎನ್ನುವುದು ಅನೇಕರಿಗೆ ಗೊತ್ತಿಲ್ಲ. ಬಾವಲಿಗಳ ಹಿಕ್ಕೆ ಕೃಷಿಗೆ ಉತ್ಕೃಷ್ಟ ಸಾವಯವ ಗೊಬ್ಬರ. ಸುತ್ತಮುತ್ತಲ ಐದಾರು ಕಿ.ಮೀ.ನ ಜನ ತಮಗೆಷ್ಟು ಬೇಕೋ ಅಷ್ಟು ಬಾವಲಿ ಹಿಕ್ಕೆಗಳನ್ನು ಕೊಂಡೊಯ್ದು ಕೃಷಿಗೆ ಬಳಸುತ್ತಾರೆ. ಗುಹೆಯ ಹೊರಭಾಗದಲ್ಲಿ ಅಬ್ಬಿ ನೀರಿರುವುದರಿಂದ ಅಲ್ಲಿಯ ವಾತಾವರಣ ಮನಸ್ಸಿಗೆ ಮುದ ನೀಡುತ್ತದೆ. ಬಾವಲಿ ಗುಹೆಗೆ ತೆರಳಲು ಪಕ್ವ ಕಾಲವೆಂದರೆ, ನವೆಂಬರ್‌ನಿಂದ ಮೇ.
ಬಾವಲಿ ಗುಹೆಗೆ ಹೋಗುವವರು ಕಟ್ಟುನಿಟ್ಟಾಗಿ ಪಾಲಿಸಲೇಬೇಕಾದ ಹಲವು ಅಂಶಗಳಿವೆ. ಬಾವಲಿಗಳ ಶಾಂತತೆಗೆ ಭಂಗ ತರಬಾರದು. ಒಂದು ವೇಳೆ ಅವುಗಳು ಸಿಟ್ಟಾದರೆ ಪ್ರವಾಸಿಗರ ಮೇಲೆ ದಾಳಿ ಮಾಡುವ ಸಾಧ್ಯತೆಗಳೂ ಇರುತ್ತವೆ. ನಿಸರ್ಗ ಮಧ್ಯದಲ್ಲಿನ ಈ ಸ್ಥಳದಲ್ಲಿ ಪ್ಲಾಸ್ಟಿಕ್ ಮುಂತಾದ ತ್ಯಾಜ್ಯಗಳನ್ನು ಎಸೆಯುವುದು ನಿಷೇಧ. ಹಾಗೊಂದು ವೇಳೆ ಪ್ಲಾಸ್ಟಿಕ್ ಎಸೆದರೆ ಸ್ಥಳೀಯರು ದಂಡ ಹಾಕುತ್ತಾರೆ. ಬಾವಲಿ ಗುಹೆಗೆ ಹೋಗ ಬಯಸುವವರು ತಾರಗಾರಿನ ಗಣೇಶ ಕಿರಿಗಾರಿ, ಮೊ. 9449112440 ಅಥವಾ 08419-238070 ಈ ದೂರವಾಣಿಗಳಿಗೆ ಸಂಪರ್ಕಿಸಿದರೆ ಅಗತ್ಯ ವ್ಯವಸ್ಥೆ ಕೈಗೊಳ್ಳುತ್ತಾರೆ. ಮೊದಲೇ ತಿಳಿಸಿದ್ದರೆ ಊಟದ ವ್ಯವಸ್ಥೆಯನ್ನೂ ಮಾಡುತ್ತಾರೆ. ಮಾರ್ಗದರ್ಶನವನ್ನೂ ಮಾಡುತ್ತಾರೆ.
ಚಿತ್ರ- ಲೇಖನ: ವಿಶ್ವಾಮಿತ್ರ ಹೆಗಡೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


