ಕಾರು ಕೆಸರಾಯಿತು!

ಮಳೆ. ಎಲ್ಲೆಲ್ಲೂ ಮಳೆ. ಮಳೆ ಬಂತೆಂದರೆ ಸಾಕು ರಸ್ತೆಯಲ್ಲೆಲ್ಲ ನೀರು. ರಸ್ತೆಗಳೇ ಚರಂಡಿಗಳಾಗಿ ಮಾರ್ಪಟ್ಟಿರುತ್ತವೆ. ಸಾಕಷ್ಟು ಕಡೆಗಳಲ್ಲಿ ನೀರು ರಸ್ತೆ ಮೇಲೆ ಹರಿಯುತ್ತಿರುತ್ತದೆ. ಇನ್ನು ಕೆಲವೆಡೆ ನೀರು ರಸ್ತೆ ದಾಟುತ್ತಿರುತ್ತದೆ.
ಮಳೆಗಾಲದಲ್ಲಿ ವಾಹನ ಚಾಲನೆ ಎಷ್ಟು ಆನಂದದಾಯಕವೋ ಅಷ್ಟೇ ಅಪಾಯಕಾರಿ ಕೂಡ. ಸಾಮಾನ್ಯ ಹವಾಮಾನದಲ್ಲಿ ವಾಹನ ಚಲಾಯಿಸುವುದಕ್ಕೂ ಮಳೆ ಬರುತ್ತಿರುವಾಗ ಅಥವಾ ಮಳೆಗಾಲದಲ್ಲಿ ವಾಹನ ಚಲಾಯಿಸುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ನೀರು ಹರಿಯುತ್ತಿದ್ದರೆ ಅಥವಾ ನೀರು ನಿಂತಿದ್ದರೆ ಅಲ್ಲಿ ತಗ್ಗು, ಗುಂಡಿಗಳಿರುವುದು ಗೊತ್ತಾಗುವುದಿಲ್ಲ. ಗುಂಡಿ ಇಲ್ಲ ಎಂದು ಭಾವಿಸಿ ವಾಹನ ಗುಂಡಿಗೆ ಬಿದ್ದರೆ ಈ ಅನಿರೀಕ್ಷಿತ ಬೆಳವಣಿಗೆಯಿಂದ ಚಾಲಕ ಕಂಗಾಲಾಗಿ ವಾಹನ ನಿಯಂತ್ರಣ ತಪ್ಪುವ ಸಂದರ್ಭಗಳೇ ಹೆಚ್ಚು. ಏಟು ಜೋರಾಗಿದ್ದರೆ ಪಂಕ್ಚರ್ ಆದರೂ ಆದೀತು. ಇದರಿಂದ ಗಾಡಿಗೂ, ಅದರ ಒಳಗಿರುವ ಬಾಡಿಗಳಿಗೂ ಅಪಾಯ ತಪ್ಪಿದ್ದಲ್ಲ.
ಮಳೆಗಾಲದಲ್ಲಿ ವಾಹನ ಚಾಲಕರು ವಹಿಸಬೇಕಾದ ಎಚ್ಚರಿಕೆಗಳ ಕುರಿತು ಇಲ್ಲಿದೆ ಕೆಲವು ಸಲಹೆಗಳು...
ನಿಧಾನವೇ ಪ್ರಧಾನ
ಅತಿ ವೇಗದ ಚಾಲನೆ ಮತ್ತು ಬೇಗ ಹೋಗಬೇಕೆಂಬ ಆತುರ ಯಾವತ್ತೂ ಅಪಾಯಕಾರಿಯೇ. ಮಳೆಗಾಲದಲ್ಲಿ ತುಸು ಹೆಚ್ಚು. ಮಳೆಗಾಲದಲ್ಲಿ, ಮೋಡ ಕವಿದ ವಾತಾವರಣ ಇರುವಾಗ ವಿಸಿಬಲಿಟಿ ಕಡಿಮೆ ಇರುತ್ತದೆ. ಅಂದರೆ ರಸ್ತೆ ಸಂಪೂರ್ಣ ಸ್ಪಷ್ಟವಾಗಿ ದೂರದ ತನಕ ಕಾಣುವುದಿಲ್ಲ. ಅದರಲ್ಲೂ ಮಳೆ ಬರುತ್ತಿದ್ದರೆ ವಿಸಿಬಲಿಟಿ ಇನ್ನೂ ಕಡಿಮೆ ಇರುತ್ತದೆ. ಇಂಥ ಸಂದರ್ಭಗಳಲ್ಲಿ ವೇಗವಾಗಿ ಹೋಗುವಾಗ ಬೇರಾವುದೇ ವಾಹನ, ಪ್ರಾಣಿ, ಮನುಷ್ಯರು ಅಡ್ಡಬಂದರೆ ಆಗ ಗಾಡಿಯನ್ನು ನಿಯಂತ್ರಣಕ್ಕೆ ತರುವುದು ಕಷ್ಟವಾಗುತ್ತದೆ ಎಂಬುದು ನಿಮ್ಮ ಮನಸ್ಸಿನಲ್ಲಿರಲಿ. ಹೀಗಾಗಿ ವಿಸಿಬಿಲಿಟಿ ಮತ್ತು ರಸ್ತೆ ಸ್ಥಿತಿ ಆಧರಿಸಿ ನಿಮ್ಮ ವಾಹನದ ವೇಗವಿರಲಿ.
ವಿಶೇಷವಾಗಿ ನೀರು ಇರುವಲ್ಲಿ ವಾಹನ ಚಲಾಯಿಸುವಾಗ ಹೆಚ್ಚು ಜಾಗರೂಕರಾಗಿರಿ. ವೇಗವಾಗಿ ಹೋಗುವಾಗ ಒಂದು ಬದಿಯ ಚಕ್ರಮಾತ್ರ ನೀರಿನಲ್ಲಿ ಹೋದಾಗ ಆ ಎರಡು ಚಕ್ರದ ವೇಗ ಮಾತ್ರ ಕಡಿಮೆಯಾಗುತ್ತದೆ. ಹೀಗಾಗಿ ವಾಹನದ ಸಮತೋಲನ ತಪ್ಪುವ ಅಥವಾ ವಾಹನ ನೀರಿದ್ದ ಕಡೆ ಎಳೆಯಲ್ಪಡುವ ಸಂಭವವಿದೆ.
ಬ್ರೇಕ್ ಒತ್ತುವ ಮೊದಲು
ಮಳೆಗಾಲದಲ್ಲಿ ಬ್ರೇಕಿಂಗ್ ಉಳಿದ ಸಮಯಕ್ಕಿಂತ ಕಡಿಮೆ ಇರುತ್ತದೆ. ಕೆಲವೊಮ್ಮೆ ಬ್ರೇಕ್‌ಶೂಗಳಲ್ಲಿ (ರಬ್ಬರ್‌ಗೆ) ನೀರು ಸಿಲುಕಿರಬಹುದು, ರಸ್ತೆಯಲ್ಲಿ ಮಣ್ಣು, ಆಯಿಲ್, ಡೀಸೆಲ್ ಮುಂತಾದವು ನೀರಿನೊಂದಿಗೆ ಬೆರೆತು ಹೋಗಿರಬಹುದು. ಇದರಿಂದಾಗಿ ನೀವು ಹೇಳಿದಂತೆ ಬ್ರೇಕ್ ಕೇಳುತ್ತದೆ ಎಂದು ಭಾವಿಸಬೇಡಿ. ನಿಮ್ಮ ಕಾರಿಗೆ ಎಬಿಎಸ್ (ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ) ಇಲ್ಲವಾದಲ್ಲಿ (ಹಳೇ ವಾಹನಗಳಲ್ಲಿ ಇರುವುದಿಲ್ಲ) ಈ ಬಗ್ಗೆ ಇನ್ನೂ ಹೆಚ್ಚು ಎಚ್ಚರವಾಗಿರಿ. ಎಬಿಎಸ್ ಇದ್ದಲ್ಲಿ ಬ್ರೇಕ್ ಪಂಪ್‌ಮಾಡುವ ಅಥವಾ ಬಿಟ್ಟು, ಬಿಟ್ಟು ಬ್ರೇಕ್ ಹಾಕುವ ಅಗತ್ಯವಿಲ್ಲ. ಒಂದೇ ಸಮನಾಗಿ ಬ್ರೇಕ್ ಹಾಕಿದರೆ ಸಾಕು. ಎಬಿಎಸ್ ಇಲ್ಲದಿದ್ದಲ್ಲಿ ನೀವು ದಿಢೀರನೆ ಬ್ರೇಕ್ ಹಾಕಿದರೆ ಬ್ರೇಕ್ ಲಾಕ್ ಆಗಿಬಿಡುವ ಸಂಭವ ಹೆಚ್ಚು. ಆಗ ವಾಹನ ನಿಮ್ಮ ನಿಯಂತ್ರಣಕ್ಕೆ ಸಿಗಲಿಕ್ಕಿಲ್ಲ ಎಚ್ಚರ. ಅಂಥ ಸಂದರ್ಭದಲ್ಲಿ ಬ್ರೇಕ್ ಲಾಕ್ ಆಗದಂತೆ ಬಿಟ್ಟು ಬಿಟ್ಟು ಬ್ರೇಕ್ ಹಾಕಬೇಕಾದ ಜವಾಬ್ದಾರಿ ನಿಮ್ಮದೇ.
ಸಾಧ್ಯವಾದಷ್ಟೂ ಎಕ್ಸಿಲರೇಟರ್ ಮತ್ತು ಗೇರ್ ಮೂಲಕವೇ ನಿಮ್ಮ ಕಾರಿನ ವೇಗ ನಿಯಂತ್ರಿಸಿ. ನಿಧಾನವಾಗಿ ಬ್ರೇಕ್‌ಗಳನ್ನು ಹಾಕಿ. ತುಂಬಾ ನೀರಿನ ಮೂಲಕ ವಾಹನ ಹಾದು ಹೋದಾಗ, ಬ್ರೇಕ್ ರಬ್ಬರ್‌ಗಳು ಒದ್ದೆಯಾಗುತ್ತವೆ. ಇದೂ ಬ್ರೇಕ್ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ತುಂಬಾ ನೀರಿನಲ್ಲಿ ವಾಹನ ಹಾದು ಹೋದ ನಂತರ ಲಘುವಾಗಿ ಬ್ರೇಕ್ ಹಾಕುವ ಮೂಲಕ ಬ್ರೇಕ್ ರಬ್ಬರ್‌ಗಳನ್ನು ಒಣಗಿಸಿಕೊಳ್ಳಿ.
ನೆಲವಬಿಟ್ಟು ನೀರ ಮೇಲೆ...
ನೀರಿರುವ ಪ್ರದೇಶ ದಾಟುವಾಗ ಎಚ್ಚರವಿರಲಿ. ರಸ್ತೆಯ ಮೇಲೆ ಎಷ್ಟು ಎತ್ತರಕ್ಕೆ ನೀರಿದೆ ಎಂಬುದರ ಅರಿವು ನಿಮಗಿಲ್ಲದಿದ್ದರೆ ದಾಟುವ ದುಸ್ಸಾಹಸಕ್ಕೆ ಮುಂದಾಗಬೇಡಿ. ರಸ್ತೆಯ ಅರಿವಿರುವ ವಾಹನ ಅಥವಾ ಸ್ವಲ್ಪ ದೊಡ್ಡ ವಾಹನ ಬರುವ ತನಕ ಕಾಯಿರಿ. ನೀರಿನಲ್ಲಿ ವಾಹನ ಚಲಾಯಿಸುವಾಗ ಕೆಲವರು ಅತಿವೇಗವಾಗಿ ಚಲಾಯಿಸಿಕೊಂಡು ಹೋಗುತ್ತಾರೆ. ಇದು ಬುದ್ಧಿವಂತರ ಲಕ್ಷಣವಲ್ಲ. ಯಾಕೆಂದರೆ ಹೀಗೆ ಹೋಗುವಾಗ ವಾಹನವನ್ನು ನಿಧಾನ ಮಾಡುವ ಅಥವಾ ನಿಲ್ಲಿಸುವ ಅನಿವಾರ್ಯ ಎದುರಾದರೆ ವೇಗಕ್ಕೆ ತಳ್ಳಲ್ಪಟ್ಟ ನೀರು ಮರಳಿ ಕಾರಿನ ಸೈಲೆನ್ಸರ್ ಪೈಪ್‌ಗೆ ನುಗ್ಗುವ ಅಪಾಯವಿರುತ್ತದೆ. ಒಮ್ಮೆ ಸೈಲೆನ್ಸರ್‌ಗೆ ನೀರು ನುಗ್ಗಿದರೆ ಕತೆ ಮುಗಿದಂತೆ.
ಆದ್ದರಿಂದ ತುಂಬ ನೀರಿದ್ದಾಗ 1 ಅಥವಾ 2ನೇ ಗೇರ್‌ನಲ್ಲಿ ಹದವಾದ ವೇಗದಲ್ಲಿ ಚಲಿಸಿ. ನೀರಿನ ನಡುವೆ ನಿಲ್ಲಿಸುವ ಪರಿಸ್ಥಿತಿ ನಿರ್ಮಾಣವಾಗದಂತೆ ಎಚ್ಚರವಹಿಸಿ. ಆಕಸ್ಮಾತ್ ನಿಲ್ಲಿಸಿದರೂ ಎಕ್ಸಿಲರೇಟರ್ ಬಿಡಬೇಡಿ. ಕ್ಲಚ್ ಮಾತ್ರ ಒತ್ತಿ, ಗಾಡಿ ರೇಸ್‌ನಲ್ಲೇ ಇರಿಸಿ. ಇದರಿಂದ ನೀರು ಸೈಲೆನ್ಸರ್ ಒಳಹೋಗುವುದನ್ನು ತಡೆಯಬಹುದು. ಕೆಲವೊಮ್ಮೆ ನೀರು ರಸ್ತೆ ದಾಟುತ್ತಿರುತ್ತದೆ. ಸೇತುವೆ ಅಥವಾ ಮಿನಿ ಸೇತುವೆ ಮೇಲೆ ಹರಿಯುತ್ತಿರುತ್ತದೆ. ಇಂಥ ಸಂದರ್ಭಗಳಲ್ಲಿ ವಾಹನ ಹಾಯಿಸುವ ಮೊದಲು ಕೊಂಚ ಯೋಚಿಸಿ. ನೀರು ಹೆಚ್ಚು ರಭಸವಾಗಿ ಹರಿಯುತ್ತಿದ್ದರೆ ಅದನ್ನು ದಾಟುವ ಹುಚ್ಚು ಸಾಹಸ ಬೇಡ. ಸಾಕಷ್ಟು ಬಾರಿ ನೀರು ವಾಹನವನ್ನು ಸೆಳೆದುಕೊಂಡು ಹೋದ ಉದಾಹರಣೆಗಳಿವೆ ಎಚ್ಚರ.
ವೈಪರ್, ಟಯರ್
ತಲೆ ಬೋಳಾದದ್ದರ ಬಗ್ಗೆ ತಲೆ ಕೆಡಿಸಿಕೊಳ್ಳುವ ಮಂದಿ ವಾಹನದ ಟಯರ್ ಬೋಳಾದರೆ ಕೊಂಚವೂ ಗಮನ ಹರಿಸುವುದಿಲ್ಲ. ಸವೆದ ಟಯರ್ ಮಳೆಗಾಲದಲ್ಲಿ ಅತ್ಯಂತ ಅಪಾಯಕಾರಿ. ಇದು ವಾಹನದ ಬ್ರೇಕಿಂಗ್, ಸಮತೋಲನ ಮತ್ತು ಗ್ರಿಪ್ ಮೇಲೆ ಪರಿಣಾಮ ಬೀರುತ್ತದೆ. ಅದರಲ್ಲೂ ಒಂದೆರಡು ಟಯರ್ ಮಾತ್ರ ಸವೆದಿದ್ದರೆ ಇನ್ನೂ ಅಪಾಯಕಾರಿ. ಆದ್ದರಿಂದ ಹಳತಾದ ಟಯರ್‌ಗಳನ್ನು ಬದಲಿಸಲು ಇದು ಸಕಾಲ.
ಮಳೆಗಾಲದಲ್ಲಿ ಹೆಚ್ಚು ಉಪಯೋಗಕ್ಕೆ ಬರುವ ಇನ್ನೊಂದು ಸಾಧನವೆಂದರೆ ವೈಪರ್. ಎದುರಿನ ಎರಡು ಹಾಗೂ ಹಿಂದಿನ ಒಂದು ವೈಪರ್ ಬ್ರೇಡ್‌ಗಳು (ರಬ್ಬರ್) ಸರಿಯಾಗಿದೆಯೇ ಎಂದು ಪರೀಕ್ಷಿಸಿಕೊಳ್ಳಿ. ಮಳೆಗಾಲಕ್ಕೂ ಮೊದಲು ಇದ್ದ ಬೇಸಿಗೆ ಮತ್ತು ಚಳಿಗಾಲದ ಪ್ರಭಾವದಿಂದ ವೈಪರ್ ಬ್ಲೇಡ್‌ಗಳು ಗಟ್ಟಿಯಾಗಿರುವ ಸಾಧ್ಯತೆಗಳೇ ಹೆಚ್ಚು. ಗಟ್ಟಿಯಾದ ರಬ್ಬರ್‌ಬ್ಲೇಡ್‌ಗಳು ಗಾಜಿನ ಮೇಲಿನ ನೀರನ್ನು ಸ್ವಚ್ಛವಾಗಿ ತೆಗೆಯಲಾರವು. ಅವು ಸರಿಯಾಗಿ ಕೆಲಸ ಮಾಡದಿದ್ದರೆ ರಸ್ತೆ ಸರಿಯಾಗಿ ಕಾಣದು.
ರಾತ್ರಿ ಅಪಾಯ ಖಾತ್ರಿ
ಮಳೆಗಾಲದಲ್ಲಿ ರಾತ್ರಿ ವಾಹನ ಚಲಾಯಿಸಬೇಕಾದರೆ ಹೆಚ್ಚು ಎಚ್ಚರ ಅಗತ್ಯ. ಗಾಜಿನ ಮೇಲಿರುವ ನೀರಿನಿಂದಾಗಿ ಎದುರಿನಿಂದ ಬರುವ ವಾಹನದ ಬೆಳಕು ಹರಡಿದಂತೆ ಬೀಳುತ್ತದೆ. ಇದರಿಂದಾಗಿ ಒಂದು ಕ್ಷಣದ ಕುರುಡು ಸೃಷ್ಟಿಯಾಗುತ್ತದೆ. ರಸ್ತೆಯಲ್ಲಿ ಎದುರಿಗೆ ಏನಿದೆ ಎಂಬುದು ಗೊತ್ತಾಗುವುದಿಲ್ಲ. ಮಳೆ ಬರುತ್ತಿದ್ದರಂತು ಇನ್ನೂ ಕಷ್ಟ.
ಹಿಂದಿಕ್ಕುವಾಗ ಎಚ್ಚರ
ಮಳೆಗಾಲದಲ್ಲಿ ವಿಶೇಷವಾಗಿ ವಾಹನಗಳ ಹಿಂದೆ ಹೋಗುವಾಗ ಮತ್ತು ಅವುಗಳನ್ನು ಹಿಂದಿಕ್ಕುವಾಗ ವಿಶೇಷ ಎಚ್ಚರ ಅಗತ್ಯ. ನೀವು ಇನ್ನೊಂದು ವಾಹನದ ಹಿಂದೆ ಹೋಗುತ್ತಿದ್ದರೆ ಆ ವಾಹನದ ಚಕ್ರದಿಂದ ಸಿಡಿದ ನೀರು ನಿಮ್ಮ ವಾಹನದ ಗಾಜಿನ ಮೇಲೆ ಬೀಳುತ್ತದೆ. ಇದು ಕೆಲವೊಮ್ಮೆ ಮಣ್ಣು ಮಿಶ್ರಿತ ನೀರೂ ಆಗಿರಬಹುದು. ಆಗ ರಸ್ತೆ ಸ್ಪಷ್ಟವಾಗಿ ಕಾಣದೇಹೋಗಬಹುದು. ದೊಡ್ಡ ವಾಹನದ ಹಿಂದಿದ್ದರೆ ಇದು ಇನ್ನೂ ಹೆಚ್ಚು. ಇದೇ ಸಂಕಷ್ಟ, ವಾಹನವನ್ನು ಹಿಂದಿಕ್ಕುವಾಗಲೂ ಬರುತ್ತದೆ. ಆಗ ಮುಂದಿನಿಂದ ಬರುತ್ತಿರುವ ವಾಹನ ನಿಮಗೆ ಕಾಣದಿರಬಹುದು. ಕೆಲವೊಮ್ಮೆ ಎದುರಿನಿಂದ ಬರುವ ವಾಹನದಿಂದ ಸಿಡಿದ ನೀರು ನಿಮ್ಮ ಗಾಜಿಗೆ ಸಿಡಿದು ರಸ್ತೆ ಕಾಣದಂತೆ ಆಗಬಹುದು. ಇವೆಲ್ಲದರ ಬಗ್ಗೆ ಗಮನವಿರಲಿ. ಇಂಥ ಅನಿರೀಕ್ಷಿತ ಆಘಾತಗಳ ನಿರೀಕ್ಷೆಯಲ್ಲಿರಿ.
- ವಕ್ರದಂತ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


