ಮಹೀ ಮಂತ್ರ

ಎಸ್‌ಯುವಿಗಳ ಮೂಲಕ ಭಾರತೀಯ ಕಾರು ಮಾರುಕಟ್ಟೆಯಲ್ಲಿ ತನ್ನ ಹಳೆಯ ಛಾಪು ಕಂಡುಕೊಂಡಿರುವ ಮಹೀಂದ್ರಾ ಕಂಪನಿಯು ಸಣ್ಣ ಕಾರುಗಳ ಲೋಕಕ್ಕೆ ಕಾಲಿಡುತ್ತಿದೆ.
ಕಳೆದ ವರ್ಷದ ಮಾರುಕಟ್ಟೆಯಲ್ಲಿ ಧನಾತ್ಮಕ ಬೆಳವಣಿಗೆ ಕಂಡಿದ್ದು ಕೇವಲ ಮಹೀಂದ್ರಾ ಕಂಪನಿಯ ಎಕ್ಸ್‌ಯುವಿ ಹಾಗೂ ರೆನೋ ಡಸ್ಟರ್ ಮಾತ್ರ. ಈ ಯಶಸ್ಸು ಹಾಗೂ ಡಸ್ಟರ್ ವೇಗವು ಮಹೀಂದ್ರಾವನ್ನು ಕೊಂಚ ಅಲುಗಾಡಿಸಿದ್ದು ನಿಜ. ಇದೇ ಕಾರಣದಿಂದ ಮಾರುತಿ ಸುಜುಕಿಯ ಅರ್ಧ ದಶಕದ ಹಿಂದಿನ ಕಾಲಕ್ಕೆ ಮಹೀಂದ್ರಾ ವಾಲಿದೆ. ಮಹೀಂದ್ರಾ ವೆರಿಟೋ ವೈಬ್ ಎನ್ನುವ ಹ್ಯಾಚ್‌ಬ್ಯಾಕ್ ಅನ್ನು ಕಳೆದವಾರ ಮಾರುಕಟ್ಟೆಗೆ ತಂದಿದೆ.
ಕಂಪನಿ ಹೇಳಿಕೊಂಡಂತೆ ಇದು ಮಾರುತಿ ಸುಜುಕಿಯ ಸ್ವಿಫ್ಟ್‌ಗೆ, ಟಾಟಾ ವಿಸ್ತಾ ಹಾಗೂ ಹುಂಡೈನ ಐ-20ಗೆ ಪೈಪೋಟಿ ನೀಡಲಿದೆ. ಈ ಮೇಲಿನ ಕಾರುಗಳು ಮಾರುಕಟ್ಟೆಗೆ ಬಂದು ಹಳಸಿದ ಮೇಲೆ ವೈಬ್ ಬರುತ್ತಿದೆ. ಆದ್ದರಿಂದ ಯಶಸ್ಸಿನ ನಿರೀಕ್ಷೆಯ ಬಗ್ಗೆ ಸಾಕಷ್ಟು ಪ್ರಶ್ನೆಗಳು ಎದ್ದಿವೆ.
ಈಗಾಗಲೇ ಬಾಡಿಗೆ ಸಡಾನ್ ಕಾರುಗಳಲ್ಲಿ ಮಹೀಂದ್ರಾ ಕಂಪನಿಯು ಶೇ.50ರಷ್ಟು ಪಾಲು ಹೊಂದಿದೆ. ಮಾರುಕಟ್ಟೆಯಲ್ಲಿರುವ ಮಹೀಂದ್ರಾ ವೆರಿಟೋ ಕಾರಿನ ಸಣ್ಣ ರೂಪವಿದು. ಆದರೆ ವೆರಿಟೋ ಬಾಡಿಗೆ ಕಾರಾಗಿಯೇ ಉಳಿದುಕೊಂಡಿತೇ ಹೊರತಾಗಿ ಖಾಸಗಿ ಬಳಕೆಗೆ ಬರಲೇ ಇಲ್ಲ. ಈ ಸಣ್ಣ ಕಾರಿನ ಮೂಲಕ ಕೊರತೆ ಮುಚ್ಚಿಕೊಳ್ಳಲು ಮುಂದಾಗಿದೆ. ಮಾರುಕಟ್ಟೆಯ ಪ್ರತೀತಿ ಏನೆಂದರೆ ಸಣ್ಣ ಕಾರಿನ ಯಶಸ್ಸಿನ ಬಳಿಕ ಅದರದೇ ಇನ್ನೊಂದು ರೂಪವಾಗಿ ಸಡಾನ್ ಹೊರಬರುತ್ತದೆ. ಆದರೆ ಮಹೀಂದ್ರಾ ಕಂಪನಿಯು ಮಾರುಕಟ್ಟೆಗೆ ತದ್ವಿರುದ್ಧ ಹೆಜ್ಜೆ ಇಟ್ಟಿದೆ.
ಕಾರಿನ ವಿಶೇಷವೇನು?
1.5 ಲೀಟರ್ ಡೀಸೆಲ್ ವೈಬ್ ಎಂಜಿನ್ ಹಾಗೂ ವೆರಿಟೋ ಎಂಜಿನ್‌ಗೆ ಯಾವುದೇ ವ್ಯತ್ಯಾಸವಿಲ್ಲ. ಕಳೆದ 2007ರಿಂದಲೂ ಇದೇ ಎಂಜಿನ್ ಅನ್ನು ಮಹೀಂದ್ರಾ ಉಳಿಸಿಕೊಂಡು ಬಂದಿದೆ. ಒಟ್ಟು 3 ಮಾದರಿಗಳನ್ನು ಮಾರುಕಟ್ಟೆಗೆ ತರಲಾಗಿದ್ದು, ಎಲ್ಲವೂ ಡೀಸೆಲ್ ಎಂಜಿನ್ ಅನ್ನೇ ಹೊಂದಿವೆ. ಬೇಸಿಕ್ ಡಿ-2 ಮಾದರಿಯು 5.63 ಲಕ್ಷದಿಂದ ಆರಂಭವಾಗಿದ್ದು ಐಷಾರಾಮಿ ಮಾದರಿಯು ರು. 6.49 ಲಕ್ಷಕ್ಕೆ ದೊರೆಯಲಿದೆ.
ಒಳ ವಿನ್ಯಾಸದಲ್ಲಿ ವೆರಿಟೋ ಹಾಗೂ ವೈಬ್‌ಗೆ ಅಂಥ ಯಾವುದೇ ವ್ಯತ್ಯಾಸವಿಲ್ಲ. ಆದರೆ ಮಹೀಂದ್ರಾ ಕಂಪನಿಯ ಕೆಟ್ಟ ವಿನ್ಯಾಸದ ಚಟ ಇಲ್ಲೂ ಕಾಣುತ್ತದೆ. ಮಹೀಂದ್ರಾ ಎಕ್ಸ್‌ಯುವಿನಲ್ಲಿ ಈ ಬದಲಾವಣೆ ಕಂಡಿತ್ತು. ಅದು ಮಹೀಂದ್ರಾ ಕಂಪನಿಯೇ ಮಾಡಿರುವ ಒಳವಿನ್ಯಾಸವೇ ಎಂದು ಹುಬ್ಬೇರಿಸುವ ಮಟ್ಟಿಗೆ ಆಕರ್ಷಣೀಯವಾಗಿತ್ತು. ಆದರೆ ವೈಬ್ ಕಾರಿನ ಒಳವಿನ್ಯಾಸ ನೋಡಿದರೆ ಕಂಪನಿಯ ವಿನ್ಯಾಸಕಾರರು ಬಾಡಿಗೆ ಕಾರಿನ ಮೂಡ್‌ನಿಂದ ಹೊರಬಂದಂತೆ ಭಾವಿಸುತ್ತಿಲ್ಲ. ಕಡಿಮೆ ಗುಣಮಟ್ಟ, ತುಸು ಒರಟಾದ ಪ್ಲಾಸ್ಟಿಕ್ ಅನ್ನು ಡೋರ್ ಹಾಗೂ ಕ್ಯಾಬಿನ್‌ಗಳಿಗೆ ಬಳಸಲಾಗಿದೆ. ಇದು ವೈಯಕ್ತಿಕ ಬಳಕೆಯ ಗ್ರಾಹಕರಿಗೆ ಹೇಗೆ ಇಷ್ಟವಾಗುತ್ತದೆಂದು ಕಾದು ನೋಡಬೇಕು.
ಇನ್ನುಳಿದಂತೆ ವೆರಿಟೋ ಕಾರಿನ ತದ್ರೂಪವಂತೆ ಇದು ಕಾಣಿಸುತ್ತದೆ. ಸ್ವಿಫ್ಟ್ ಹಾಗೂ ವಿಸ್ತಾ ಕಾರುಗಳಿಗೆ ಪೈಪೋಟಿ ನೀಡುವ ಕನಸು ಕಂಡಿರುವ ಕಂಪನಿಯು ಒಳವಿನ್ಯಾಸ ಮಾಡುವಾಗ ಎಡವಿರುವುದು ಸ್ಪಷ್ಟವಾಗಿದೆ. ದರ, ಇಂಧನ ಕ್ಷಮತೆಯಲ್ಲೂ ಉಳಿದ ಕಾರು ಹಾಗೂ ವೈಬ್‌ಗೆ ಯಾವುದೇ ದೊಡ್ಡ ಬದಲಾವಣೆಯಿಲ್ಲ. ಆದರೆ 5 ವರ್ಷಗಳ ಹಿಂದೆ ಮಾರುಕಟ್ಟೆಯನ್ನು ಆಳಿದ ಹಾಗೂ ಇಂದು ಔಟ್ ಡೇಟೆಡ್ ಆಗುತ್ತಿರುವ ಕಾರುಗಳಿಗೆ ಇದು ಹೇಗೆ ಸ್ಪರ್ಧೆ ನೀಡುತ್ತದೆ ಎನ್ನುವುದು ಪ್ರಶ್ನೆಯಾಗಿದೆ.
ಇನ್ನು ಹೊರ ವಿನ್ಯಾಸದಲ್ಲಿ ಡಿಕ್ಕಿ ಸ್ಪೇಸ್ ಅನ್ನು ಸ್ವಲ್ಪ ಕಡಿಮೆ ಮಾಡಲಾಗಿದೆ. ಹಿಂಬದಿಯ ಗ್ಲಾಸ್ ತೆರೆಯದೇ ಕೇವಲ ಡಿಕ್ಕಿ ಬಾಗಿಲನ್ನು ತೆರೆಯಲು ಅವಕಾಶವಿದೆ. ಬ್ರೇಕ್ ಲೈಟ್‌ನ ವಿನ್ಯಾಸದಲ್ಲೂ ಬದಲಾವಣೆ ತರಲಾಗಿದೆ. ಕಾರಿನ ಮಟ್ಟಿಗೆ ಸ್ವಲ್ಪ ಆಕರ್ಷಕ ಹಾಗೂ ಭಿನ್ನವಾಗಿರುವುದು ಇದೊಂದೇ. ಗ್ಲಾಸ್‌ಗಿಂತಲೂ ಮೇಲೆ ಬ್ರೇಕ್ ಲೈಟ್ ಬಂದಿರುವುದು ಆಡಿ ಹಾಗೂ ಬಿಎಂಡಬ್ಲ್ಯೂ ಕಾರಿನ ಹಿಂಬದಿಯನ್ನು ನೆನಪಿಸುತ್ತದೆ.
ಮಹೀಂದ್ರಾ ಬ್ರಾಂಡ್ ಮೇಲೆ ಭಕ್ತಿ ಹೊಂದಿರುವವರು ಒಂದು ಕೈ ನೋಡಬಹುದು. ಕಂಪನಿ ಹೇಳಿಕೊಂಡಂತೆ ಸ್ವಿಫ್ಟ್ ಹಾಗೂ ವಿಸ್ತಾ ಕಾರುಗಳಿಗೆ ಪೈಪೋಟಿ ನೀಡಲು ಸಾಕಷ್ಟು ಬದಲಾವಣೆ ತರಬೇಕಿದೆ. ತನ್ನ ಗುಜರಿ ವಿನ್ಯಾಸದಿಂದ ಗುಣಮಟ್ಟದ ಕಡೆಗೆ ಗಮನ ನೀಡಬೇಕಿದೆ.
- ರಾಧೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


