ವಾಹನ

ನಾಮಕಾರುಣ

ಮೊಬೈಲ್, ಪೇಸ್ಟ್, ಪೆನ್‌ಡ್ರೈವ್, ಮನೆ, ಹೀಗೆ ಯಾವುದೇ ಇರಲಿ ಅದಕ್ಕೊಂದು ಹೆಸರು ಬೇಕು.

ನಾಮಕಾರುಣ
Published On :

ಮೊಬೈಲ್, ಪೇಸ್ಟ್, ಚಪ್ಪಲ್, ಪೆನ್‌ಡ್ರೈವ್, ಮನೆ, ಒಲೆ ಹೀಗೆ ಯಾವುದೇ ಇರಲಿ ಅದಕ್ಕೊಂದು ಹೆಸರು ಬೇಕು. ಕೆಲವೊಮ್ಮೆ ಆ ಹೆಸರೇ ಅದರ ಗುರುತು. ಮೊದಲು ಯಾರೂ ಹಲ್ಲುಜ್ಜೋ ಪೇಸ್ಟ್‌ಗೆ 'ಪೇಸ್ಟ್‌' ಅಂತ ಹೇಳುತ್ತಲೇ ಇರಲಿಲ್ಲ. 'ಕೋಲ್ಗೇಟ್‌' ಎನ್ನುತ್ತಿದ್ದರು. ಹಾಗೆಯೇ ಇಂದಿಗೂ ಎಷ್ಟೋ ಮಂದಿ ಕಬ್ಬಿಣದ ಕಪಾಟಿಗೆ 'ಗೋದ್ರೇಜ್ ಕಪಾಟು' ಅಂತಲೇ ಹೇಳುತ್ತಾರೆ. ಹಿರಿಯರನ್ನು ಕೇಳಿ ನೋಡಿ ಇಂದಿಗೂ ಡನ್‌ಲಪ್ ಟಯರೇ ಉತ್ಕೃಷ್ಟವಾದದ್ದು ಎನ್ನುತ್ತಾರೆ. ಹೆಸರು ಒಮ್ಮೆ ಜನರ ಮನಸ್ಸಿನಲ್ಲಿ ಕುಳಿತುಬಿಟ್ಟರೆ ಮತ್ತೆ ಅದನ್ನು ಬದಲಾಯಿಸುವುದು ಕಷ್ಟ.
ಹೀಗಿರುವಾಗ ಚೆಂದದ ಕಾರಿಗೊಂದು ಅಂದದ ಹೆಸರು ಬೇಡವೇ?
ಮಗುವಿಗೆ ಹೆಸರಿಡೋದು ಎಷ್ಟು ಕಷ್ಟವೋ ಅದಕ್ಕಿಂತ ಹೆಚ್ಚು ಕಷ್ಟ ಕಾರಿಗೆ ಹೆಸರಿಡೋದು. ಮಗುವಿನ ಹೆಸರು ಅಪ್ಪ- ಅಮ್ಮ ಅಥವಾ ಕುಟುಂಬದವರಿಗೆ ಇಷ್ಟವಾದರೆ ಸಾಕು. ಆದರೆ ಕಾರಿನ ಹೆಸರು? ದೇಶಾದ್ಯಂತ ಜನರಿಗೆ ಇಷ್ಟವಾಗಬೇಕು. ಜತೆಗೆ ಕಾರಿಗೆ ಸರಿಯಾಗಿ ಹೋಲಬೇಕು. ಹೀಗಾಗಿ ಮಗುವಿಗೆ ಹೆಸರಿಟ್ಟಿದ್ದಕಿಂತ ಹೆಚ್ಚು ಕಾಳಜಿಯಿಂದ ಕಾರಿನ ಹೆಸರಿಗಾಗಿ ಹುಡುಕಾಡುತ್ತವೆ ಕಂಪನಿಗಳು.
ನಮಗೆ ಕಾರಿನ ಹೆಸರುಗಳು ಗೊತ್ತು. ಆದರೆ ಸಾಕಷ್ಟು ಸಂದರ್ಭದಲ್ಲಿ ಅವುಗಳ ಅರ್ಥ ಗೊತ್ತಿಲ್ಲ. ಅದಕ್ಕಾಗಿ ನಾವು ಹೆಚ್ಚು ತಲೆಕೆಡಿಸಿಕೊಂಡಿರುವುದೂ ಇಲ್ಲ. ಕೆಲವು ವಾಹನಗಳ ಹೆಸರು ನಂಬರ್‌ನಿಂದ (ಮಾರುತಿ 800) ಆರಂಭವಾಗುತ್ತವೆ. ಇನ್ನು ಕೆಲವು ಇಂಗ್ಲಿಷ್‌ನ ಒಂದು ಅಕ್ಷರದಿಂದ (ಆಡಿ ಕ್ಯೂ 7, ಬೆಂಝ್ ಇ ಕ್ಲಾಸ್) ಆರಂಭವಾಗುತ್ತದೆ. ಇನ್ನು ಕೆಲವಕ್ಕೆ ಹೆಸರಿರುತ್ತದೆ.
ಈಗಂತೂ ವಿಶ್ವವೇ ಒಂದು ಹಳ್ಳಿಯಂತೆ ಬದಲಾಗುತ್ತಿದೆ. ಪರಿಣಾಮವಾಗಿ ಜಪಾನ್, ಕೊರಿಯಾ, ಇಟಲಿ ಭಾಷೆಯ ಹೆಸರುಗಳು ಭಾರತಕ್ಕೂ ಕಾಲಿಡುತ್ತಿವೆ. ಅವುಗಳ ಅರ್ಥ ನಮಗೆ ಗೊತ್ತಿರಲು ಸಾಧ್ಯವೇ ಇಲ್ಲ. ಟೊಯೋಟಾ ಕಂಪನಿ ಇತ್ತೀಚೆಗೆ ಜಾಹೀರಾತಿನಲ್ಲಿ 'ವಾಕುಡೋಕಿ' ಎಂಬ ಶಬ್ದವನ್ನು ಬಳಸಿತ್ತು. ಯಾರಿಗೂ ಹಾಗಂದರೇನು ಎಂಬುದು ಗೊತ್ತಿರಲಿಲ್ಲ. ವಿಚಾರಿಸಿದಾಗ ತಿಳಿದಿದ್ದೇನೆಂದರೆ ಜಪಾನ್ ಭಾಷೆಯಲ್ಲಿ 'ವಾಕುಡೋಕಿ' ಎಂದರೆ ಸಂತೋಷದ ಕ್ಷಣ ಅಂತ ಅರ್ಥವಂತೆ!
ಇಂಥ ಹಿನ್ನೆಲೆಯಲ್ಲಿ ವಾಹನಗಳ ಹೆಸರು, ಅದರ ಹಿಂದಿನ ಕೆಲವು ಆಸಕ್ತಿಕರ ಮಾಹಿತಿ ನಿಮಗಾಗಿ...

ಮಹೀಂದ್ರ ಎಕ್ಸ್‌ಯುವಿ 500
ಸಾಮಾನ್ಯವಾಗಿ ಎಲ್ಲವೂ 500 (ಐನೂರು) ಎಂದೇ ಓದುತ್ತಾರೆ. ಆದರೆ ಅದು ಐನೂರು ಅಲ್ಲ. ಬದಲಾಗಿ 5ಒಒ!!
ಈ ಹೆಸರಿನಲ್ಲಿರುವ ಎಕ್ಸ್ ಎಂಬುದು ಜನರೇಶನ್ ನೆಕ್ಸ್ಟ್ ಎಂಬುದನ್ನು ಪ್ರತಿನಿಧಿಸುತ್ತದಂತೆ. ಯು ಅಂದರೆ ಯುಟಿಲಿಟಿ, ವಿ ಅಂದರೆ ವೆಹಿಕಲ್. ಅಂದರೆ ಮುಂದಿನ ಜನಾಂಗವನ್ನು ಗುರಿಯಾಗಿಸಿಕೊಂಡು ಸಿದ್ಧಪಡಿಸಿದ ವಾಹನ ಎಂದರ್ಥ.
ಹೆಸರಿರುವುದೇ ಒಂದು ನಾವು ಓದುತ್ತಿರುವುದೇ ಇನ್ನೊಂದು!

ಎರ್ಟಿಗಾ
ಮಾರುತಿ ಸುಝುಕಿ ಕಂಪನಿಯ ಹೊಸ ಕಾರು ಎರ್ಟಿಗಾ. ಇದು ಮಿನಿ ಎಂಪಿವಿ (ಮಲ್ಟಿ ಯುಟಿಲಿಟಿ ವೆಹಿಕಲ್). ಭಾರತದಲ್ಲಿ ಬಿಡುಗಡೆಯಾದ ಮೊದಲ ಈ ರೀತಿಯ ವಾಹನ ಎಂಬ ಹೆಗ್ಗಳಿಕೆಯೂ ಇದೆ. ಎರ್ಟಿಗಾ ಎಂದು ಹೆಸರಿಟ್ಟಿದ್ದಾರೆ. ಬಹುತೇಕರಿಗೆ ಇದರ ಅರ್ಥ ಗೊತ್ತಿರಲಿಕ್ಕಿಲ್ಲ. ಆರ್-ಟಿಗಾ ಎಂಬ ಕಲ್ಪನೆಯಲ್ಲಿ ಈ ಹೆಸರಿಡಲಾಗಿದೆಯಂತೆ. ಟಿಗಾ ಅಂದರೆ ಇಂಡೋನೇಷ್ಯಾದಲ್ಲಿ ಮೂರು ಎಂದರ್ಥ. ಆರ್ ಅಂದರೆ ರೋಗಳು ಅಥವಾ ಸಾಲುಗಳು. ಅಲ್ಲಿಗೆ ಮೂರು ಸಾಲುಗಳು ಎಂದರ್ಥವಾಗುತ್ತದೆ. ಆರ್-3 ಎಂಬರ್ಥದಲ್ಲಿ ಪರಿಗಣಿಸಿದರೆ ಮೂರು ಸಾಲುಗಳ ಸ್ವಿಫ್ಟ್ ಎಂಬರ್ಥ ಬರುತ್ತದಂತೆ!

ಕಿರೀಟದ ಗರಿಗಳು    
ಟೊಯೋಟಾ ಕೊರೊಲಾ ಮತ್ತು ಕೊರೊನಾ (ಭಾರತದಲ್ಲಿಲ್ಲ) ಎಂಬ ಕಾರುಗಳಿವೆ. ಕೊರೊಲಾ ಅಂದರೆ ಸಣ್ಣ ಕಿರೀಟ (ಕ್ವೌನ್) ಎಂಬ ಅರ್ಥ ಲ್ಯಾಟಿನ್ ಭಾಷೆಯಲ್ಲಿದೆಯಂತೆ. ಹಾಗೆಯೇ ಕೊರೊನಾ ಅಂದರೆ ಕಿರೀಟ ಎಂದು ಅರ್ಥವಂತೆ. ಕೆಮ್ರಿ ಅಂತಲೂ ಒಂದು ಕಾರಿದೆ. ಜಪಾನಿ ಭಾಷೆಯಲ್ಲಿ ಇದಕ್ಕೆ ಕಿರೀಟ ಅಂತಲೇ ಅರ್ಥವಂತೆ. ಹೀಗಾಗಿ ಈ ಎರಡು ಕಾರುಗಳನ್ನು ಕಿರೀಟದ ಗರಿಗಳು ಎಂದು ಕರೆಯಬಹುದು.
ನಮ್ಮ ಕೆಎಸ್‌ಆರ್‌ಟಿಸಿ ಕೊರೊನಾ ಎಂಬ ಬಸ್ ಸೇವೆ ಆರಂಭಿಸಿದ್ದು ನಿಮಗೆ ನೆನಪಿರಬಹುದು! ಕೊರೊನಾ ಎಂಬುದು ಕಂಪನಿ ಹೆಸರಂತೆ!

ಟೊಯೋಟಾ ಇನ್ನೋವಾ
ಕ್ವಾಲಿಸ್ ಎಂಬ ಜನಪ್ರಿಯ ವಾಹನದ ಉತ್ಪಾದನೆಯನ್ನು ನಿಲ್ಲಿಸಿದ ಟೊಯೋಟಾ ಕಂಪನಿ ಇನ್ನೋವಾ ಎಂಬ ವಾಹನವನ್ನು ಮಾರುಕಟ್ಟೆಗೆ ಪರಿಚಯಿಸಿತು. ಅದು ಕ್ವಾಲಿಸ್‌ಗಿಂತ ಹೆಚ್ಚು ಜನಪ್ರಿಯವಾಗಿದ್ದು, ಇತ್ತೀಚೆಗೆ ಸ್ವಲ್ಪ ಬದಲಾವಣೆಗಳೊಂದಿಗೆ ಮಿಂಚುತ್ತಿದೆ. ಆದರೆ ಇನ್ನೋವಾ ಎಂಬುದರ ಅರ್ಥವೇನು ಎಂಬುದು ಅದರ ಮಾಲೀಕರಿಗೂ ಗೊತ್ತಿರಲಿಕ್ಕಿಲ್ಲ. ಇನ್ನೋವಾ ಎಂದರೆ, 'ಹೊಸ ಆರಂಭ' ಅಂತ. ಕ್ವಾಲಿಸ್ ವಾಹನ ಉತ್ಪಾದನೆ ನಿಲ್ಲಿಸಿ, ನಂತರ ಹೊಸ ಎಂಜಿನ್, ಹೊಸ ಶೈಲಿಯನ್ನು ಹೊಂದಿರುವ ವಾಹನ ಮತ್ತು ಹೊಸ ಗ್ರಾಹಕರನ್ನು ದೃಷ್ಟಿಯಲ್ಲಿರಿಸಿಕೊಂಡು ನಿರ್ಮಿಸಿದ ವಾಹನ ಎಂಬರ್ಥದಲ್ಲಿ ಇನ್ನೋವಾ ಎಂಬ ಹೆಸರು ಕೊಡಲಾಗಿದೆಯಂತೆ. ಇಂಗ್ಲಿಷ್‌ನ 'ಇನ್ನೋವೋಷನ್‌' ಶಬ್ದ ಇದಕ್ಕೆ ಸ್ಫೂರ್ತಿ ಎನ್ನಲಾಗುತ್ತದೆ.

ಸ್ಕಾಲಾ
ನಿಸಾನ್ ಕಂಪನಿ ಸನ್ನಿ ಎಂಬ ಹೆಸರಿನಲ್ಲಿ ದೊಡ್ಡ ಕಾರನ್ನು ಮಾರುಕಟ್ಟೆಗೆ ಪರಿಚಯಿಸಿದರೆ, ರೆನೋ ಕಂಪನಿ ಅದೇ ರೀತಿಯ ಸ್ಕಾಲಾ ಕಾರನ್ನು ತಯಾರಿಸಿದೆ. ಸನ್ನಿ ಎಂದರೆ ಪ್ರಕಾಶಮಾನವಾದ ಎಂದರ್ಥ. ಸುಲಭಕ್ಕೆ ಅರ್ಥವಾಗುವಂತಿದೆ. ಆದರೆ ಸ್ಕಾಲಾ? ಈ 'ಸ್ಕಾಲಾ' ಎಂದರೆ ಲ್ಯಾಟಿನ್ ಭಾಷೆಯಲ್ಲಿ ಮೆಟ್ಟಿಲು, ಏಣಿ ಎಂಬರ್ಥವಂತೆ. ನಿಮ್ಮ ಯಶಸ್ಸಿನ ಮತ್ತು ಸುಖಕರ ಪ್ರಯಾಣದ ಮೆಟ್ಟಿಲು ಎಂಬರ್ಥದಲ್ಲಿ ಸ್ಕಾಲಾ ಎಂದು ಹೆಸರಿಟ್ಟಿರಬಹುದೇ?

ಟೊಯೋಟಾ ಇಟಿಯೋಸ್
ಟೊಯೋಟಾ ಕಂಪನಿ ಭಾರತೀಯ ಗ್ರಾಹಕರ ನಿರೀಕ್ಷೆಗಳಿಗನುಗುಣವಾಗಿ ಇಟಿಯೋಸ್ ಎಂಬ ಕಾರು ಹಾಗೂ ಇಟಿಯೋಸ್ ಲಿವಾ ಎಂಬ ಸಣ್ಣ ಕಾರನ್ನು ಮಾರುಕಟ್ಟೆಗೆ ಬಿಟ್ಟಿದೆ. ಇಟಿಯೋಸ್ ಎಂಬ ಹೆಸರನ್ನು ಗ್ರೀಕ್‌ನ ಇಥೋಸ್ ಎಂಬ ಶಬ್ದದಿಂದ ತೆಗೆದುಕೊಳ್ಳಲಾಗಿದೆಯಂತೆ. 'ಇಥೋಸ್‌' ಅಂದರೆ ಸ್ಪಿರಿಟ್ (ಜೋಶ್, ಉತ್ಸಾಹ), ವ್ಯಕ್ತಿತ್ವ, ಕಲ್ಪನೆಗಳು ಎಂಬ ಅರ್ಥವಿದೆಯಂತೆ.

ಪಜೆರೋ
ಎಸ್‌ಯುವಿಗಳಲ್ಲಿ ಪ್ರಸಿದ್ಧ ಹೆಸರು ಮಿಟ್ಸುಬಿಷಿ ಪಜೆರೊ. ಪಜೆರೊ ಎಂಬ ಹೆಸರು ಎಲ್ಲರಿಗೂ ಗೊತ್ತು. ಆದರೆ ಅರ್ಥ? ಪಜೆರೊ ಅಂದರೆ ಸ್ಪೇನ್ ಭಾಷೆಯಲ್ಲಿ ಬೆಟ್ಟಗಳು ಎಂದರ್ಥ. ಗುಡ್ಡ- ಬೆಟ್ಟ ಯಾವುದನ್ನು ಬೇಕಾದರೂ ಹತ್ತಿ ಹೋಗಬಲ್ಲದು ಎಂಬರ್ಥದಲ್ಲಿ ಪಜೆರೊ ಎಂದು ಹೆಸರಿಡಲಾಗಿದೆ.

ಕಿಜಾಷಿ
ಮಾರುತಿ- ಸುಜುಕಿ ಕಂಪನಿ ಕಿಜಾಷಿ ಎಂಬ ಹೆಸರಿನ ಕಾರನ್ನು ಮಾರುಕಟ್ಟೆಗೆ ಪರಿಚಯಿಸಿತ್ತು. ಆದರೆ ಜಾಹೀರಾತು ಬಂದಷ್ಟು ಕಾರು ಕೂಡ ಮಾರಾಟವಾಗಲಿಲ್ಲ. ಈಗ ಇದರ ಹೆಸರೂ ಕಾಣುವುದಿಲ್ಲ. ಆದರೆ ಹೆಸರಂತೂ ವಿಚಿತ್ರವಾಗಿತ್ತು. ಜಪಾನಿ ಭಾಷೆಯಲ್ಲಿ ಕಿಜಾಷಿ ಅಂದರೆ ಅದ್ಭುತವಾದದ್ದು ಬರುತ್ತಿದೆ ಎಂದು ಅರ್ಥವಂತೆ. ಬಹು ನಿರೀಕ್ಷೆಯಿಂದ ಕಂಪನಿ ಕಾರನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿತ್ತು. ಆದರೆ ಹೆಸರಿನಷ್ಟು ಅದ್ಭುತವಾಗಿ ಜನರಿಂದ ಪ್ರತಿಕ್ರಿಯೆ ದೊರೆಯಲಿಲ್ಲ ನೋಡಿ!

- ವಕ್ರದಂತ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.