ಮಧುಗಣಪತಿ

ಕುಂದಾಪುರದಿಂದ ಶಿವಮೊಗ್ಗ ಮಾರ್ಗದ ಯಡಾಡಿ- ಮತ್ಯಾಡಿ ಗ್ರಾಮದಲ್ಲಿ ಹಸಿರು ಕಾನನ ಮಧ್ಯೆಯ ಬಯಲಿನಲ್ಲಿ ವಿರಾಜಮಾನವಾಗಿರುವ ಈ ದೇಗುಲಕ್ಕೆ ನಿತ್ಯ ಪ್ರವಾಸಿಗರು ಭೇಟಿ ನೀಡುತ್ತಾರೆ. ಗುಡ್ಡಟ್ಟು ಗಣೇಶ ವೀಕ್ಷಣೆಗೆ ಮಳೆಗಾಲವೇ ಸೂಕ್ತ ಕಾಲವಾದರೂ, ಧಾರ್ಮಿಕ ದೃಷ್ಟಿಯಿಂದ ಪ್ರವಾಸ ಕೈಗೊಳ್ಳುವರೇ ಹೆಚ್ಚು. ಬಂಡೆಯ ಗುಹೆಯ ಮಧ್ಯೆ ಪೂರ್ವಾಭಿಮುಖವಾಗಿ ತೆರೆದಿರುವ ಮಡುವಿನಲ್ಲಿ ಕಾಲು ಮಡಚಿ ದಕ್ಷಿಣಕ್ಕೆ ಮುಖ ಮಾಡಿ ಸೊಂಡಿಲನ್ನು ತಿರುಚಿ ಕುಳಿತಿರುವ ಡೊಳ್ಳು ಹೊಟ್ಟೆಯ ಸ್ವಯಂಭು ವಿಗ್ರಹವೇ ಇಲ್ಲಿಯ ಆರಾಧ್ಯ ದೈವ. ಶ್ರೀದೇವರ ಮೂಲ ಬಿಂಬವು ವರ್ಷದ ಎಲ್ಲ ವೇಳೆ ಕಂಠದವರೆಗೂ ನೀರಿನಲ್ಲೇ ಮುಳುಗಿರುವುದು ಇಲ್ಲಿನ ವಿಶೇಷ. ನಿಸರ್ಗ ಪ್ರಿಯರಿಗಂತೂ ಈ ಕ್ಷೇತ್ರ ರಮಣೀಯ. ರಾಜ್ಯದ ವಿವಿಧ ಭಾಗಗಳಿಂದ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ.
ಐತಿಹ್ಯ ಏನು ಹೇಳುತ್ತದೆ?
ತ್ರಿಪುರಾಸುರನ ಸಂಹಾರ ಕಾಲದಲ್ಲಿ ಈಶ್ವರನು ಯುದ್ಧಕ್ಕೆ ಹೋಗುವಾಗ ಪ್ರಮಾದವಶಾತ್ ಗಣಪತಿಯನ್ನು ಸ್ಮರಿಸದೇ ತೆರಳುತ್ತಾನೆ. ಯುದ್ಧದಲ್ಲಿ ಜಯ ಸಿಗದೆ ಪರದಾಡುತ್ತಿರುವಾಗ ತನ್ನ ಮಗನಿಂದಲೇ ತನಗೆ ವಿಘ್ನ ಬಂದಿದೆ ಎಂದು ಅರಿತು ಪರಶಿವ ಕೋಪಗೊಂಡು ಗಣಪತಿಯ ಮೇಲೆ ಆಗ್ನೇಯಾಸ್ತ್ರವನ್ನು ಪ್ರಯೋಗಿಸುತ್ತಾನೆ. ಆದರೆ, ಯಾವ ಅಸ್ತ್ರವು ಗಣಪತಿಯನ್ನು ಏನೂ ಮಾಡಲು ಸಾಧ್ಯವಾಗುವುದಿಲ್ಲ. ಅದೇ ರೀತಿ ಶಿವನು ಪ್ರಯೋಗಿಸಿದ ಅಸ್ತ್ರ ಹುಸಿಯಾಗಲೂ ಸಾಧ್ಯವಿಲ್ಲ. ಈ ಒಂದು ಸಂದಿಗ್ಧ ಪರಿಸ್ಥಿತಿಯಲ್ಲಿ ಆ ಅಸ್ತ್ರವು ಗಣಪತಿಯನ್ನು ಹೊತ್ತೊಯ್ದು ಮಧುಸಾಗರದಲ್ಲಿ ಕೆಡಹುತ್ತದೆ. ಮಧು ಅರ್ಥಾತ್ ಜೇನು. ಇದು ಗಣಪತಿಗೆ ಅತಿ ಪ್ರಿಯವಾದ ವಸ್ತುವಾದ ಕಾರಣ ಯಥೇಚ್ಛ ಮಧುಪಾನ ಮಾಡಿದ ಗಣಪತಿ ಸಂತೃಪ್ತಗೊಂಡು ತನ್ನನ್ನು ಇಲ್ಲಿಗೆ ತಂದು ಹಾಕಿದವರ ಕಾರ್ಯ ಜಯವಾಗಲೆಂದು ವರಪ್ರಸಾದ ಮಾಡುತ್ತಾನೆ. ತತ್ಪರಿಣಾಮ ತ್ರಿಪುರಾಸುರನ ಸಂಹಾರವಾಗಿ ಶಿವನಿಗೆ ಜಯ ಲಭಿಸುತ್ತದೆ. ಆದರೆ, ಅತಿಯಾದ ಮಧು ಸೇವನೆಯಿಂದ ದೇಹದಲ್ಲಿ ಉಷ್ಣ ಹೆಚ್ಚಾಗಿ ಉರಿ ಪ್ರಾರಂಭಿಸುವುದು ಸ್ವಾಭಾವಿಕ. ಇದೇ ಪರಿಸ್ಥಿತಿ ಗಣಪತಿಗೂ ಬಂದು ಆತ ಉಷ್ಣದಿಂದ ಒದ್ದಾಡುತ್ತಾನೆ. ಇದೇ ವೇಳೆಗೆ ಅಲ್ಲಿಗೆ ಬಂದ ಶಿವ ಗಣಪತಿಯ ಉರಿ ಶಮನಕ್ಕಾಗಿ ನರಸಿಂಹ ತೀರ್ಥದಲ್ಲಿ ಜಲಾಧಿವಾಸಿಯಾಗಿ ನೆಲೆಸು ಎಂದು ಗಣಪತಿಗೆ ಅನುಗ್ರಹಿಸುತ್ತಾನೆ. ಅಂತೆಯೇ ಇಲ್ಲಿ ಹರಿಯುವ ವಾರಾಹಿ ಉಪನದಿ ನರಸಿಂಹ ತೀರ್ಥ ಪಕ್ಕದಲ್ಲಿಯ ಬಂಡೆಯ ಮಡುವಿನಲ್ಲಿ ಜಲಾಧಿವಾಸವಾಗಿ ನೆಲೆಸಿ ಗಣಪತಿಯು ಭಕ್ತರನ್ನು ಉದ್ಧರಿಸುತ್ತಾನೆ ಎಂಬ ನಂಬಿಕೆ ಇದೆ. ಅಂದಹಾಗೆ, ಈ ದೇಗುಲದ ಗರ್ಭಗುಡಿಯು ಸುಮಾರು 800 ವರ್ಷಗಳಷ್ಟು ಪುರಾತನವಾಗಿದೆ. 1997 ರಲ್ಲಿ ನೂತನ ಗರ್ಭಗುಡಿ, ತೀರ್ಥಮಂಟಪ, ಹೆಬ್ಬಾಗಿಲು ನಿರ್ಮಿಸಲಾಗಿದೆ.
ಆಯರ್ ಕೊಡ: ಇದು ಇಲ್ಲಿನ ವಿಶೇಷ ಸೇವೆ. ಗುಹೆಯೊಳಗಿನ ನೀರನ್ನು ತಾಮ್ರದ ಕೈಬಟ್ಟಲು ಉಪಯೋಗಿಸಿ ಪೂರ್ತಿ ಖಾಲಿ ಮಾಡಲಾಗುತ್ತದೆ. ನಂತರ ದೇವರಿಗೆ ತೈಲಾಭ್ಯಂಜನ ಮಾಡಿಸಿ ರುದ್ರಾಭಿಷೇಕ ಮಾಡಲಾಗುತ್ತದೆ. ಅಭಿಷೇಕದ ನೀರು ಹೊರತೆಗೆದು ಭಕ್ತರಿಗೆ ಶ್ರೀದೇವರ ಮೂಲಬಿಂಬ ಪ್ರಸಾದ ನೀಡಲಾಗುತ್ತದೆ. ಪುನಃ ಮೂಲಬಿಂಬಕ್ಕೆ ಅಲಂಕಾರ ಪೂಜೆ ನೈವೇಧ್ಯ ನೆರವೇರಿಸಿ ಪವಮಾನ ಮಂತ್ರ ಪಠಿಸುತ್ತಾ ಗುಹೆಯೊಳಗೆ ತುಂಬಿ ಹರಿಯುವಷ್ಟು ಶುದ್ಧಜಲಾಭಿಷೇಕ ಮಾಡಿ ಪೂಜಿಸಲಾಗುತ್ತದೆ. ಹೀಗೆ ಹಳೆ ನೀರು ತೆಗೆದು, ಹೊಸ ನೀರಿನ ಅಭಿಷೇಕ, 2 ಬಾರಿ ರುದ್ರಾಭಿಷೇಕ, ಒಮ್ಮೆ ಪವನಾಭಿಷೇಕ ನಂತರ 1000 ಕೊಡ ಜಲ ಅಭಿಷೇಕವಾಗುವುದರಿಂದ ಈ ಸೇವೆಗೆ ಆಯರ್ ಕೊಡ ಎಂದು ಕರೆಯಲಾಗಿರುವುದು ವಿಶೇಷ. <
ಹೀಗೆ ಬನ್ನಿ
ಉಡುಪಿಯಿಂದ ಬ್ರಹ್ಮಾವರ- ಬಾರ್ಕೂರು- ಶಿರಾಯಿರ-ಗುಡ್ಡಟ್ಟು ಮಾರ್ಗದಲ್ಲಿ ಬರುವುದಾದರೆ 28 ಕಿ.ಮೀ. ಕುಂದಾಪುರದಿಂದ ಶಿವಮೊಗ್ಗ- ಮಾರ್ಗವಾಗಿ ಕೋಟೇಶ್ವರ-ಗುಡ್ಡಟ್ಟು ತಲುಪಲು 18 ಕಿ.ಮೀ. ಇನ್ನೂ ಒಂದು ಮಾರ್ಗವಿದ್ದು, ಶಿವಮೊಗ್ಗದಿಂದ ಹೊಸಂಗಡಿ-ಸಿದ್ಧಾಪುರ- ಶಂಕರನಾರಾಯಣ- ಗುಡ್ಡಟ್ಟು ಮಾರ್ಗವಾಗಿ ಚಲಿಸಿದರೆ 147 ಕಿ.ಮೀ.ನಷ್ಟು ದೂರದ ಪ್ರಯಾಣವಾಗಬಲ್ಲದು.
-ಲೇಖನ: ಸುಧಾಕರ ವಕ್ವಾಡಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


