ವಾಹನ

ಪಾಂಡುರಂಗವಿಠಲ

ಪಾಂಡುರಂಗವಿಠಲ
Published On :

ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರದ ಪಾಂಡುರಂಗನ ನೆಲೆಬೀಡಾದ ಪಂಢರಾಪುರ ಹೆಸರು ಕೇಳದವರಿಲ್ಲ. ತಿರುಪತಿಯ ನಂತರ ಅತಿ ಹೆಚ್ಚು ಯಾತ್ರಿಕರು ಬಂದು ದರ್ಶನ ಪಡೆದು ಹೋಗುವ ದೇಗುಲವಿದು. ಪಾಂಡುರಂಗ ಮತ್ತು ರುಕ್ಮಿಣಿದೇವಿಯನ್ನು ಇಲ್ಲಿ ಪೂಜಿಸಲಾಗುತ್ತದೆ. ಧಾರ್ಮಿಕ, ಆಧ್ಯಾತ್ಮಿಕ ಕೇಂದ್ರವಾದ ಇಲ್ಲಿ ನಾದಬ್ರಹ್ಮನಾದ ಪಾಂಡುರಂಗನು ನೆಲೆಸಿದ್ದಾನೆ. ಕೃಷ್ಣಾನದಿಯ ಉಪನದಿ ಭೀಮಾನದಿಯ ತೀರದಲ್ಲಿ ಪಂಢರಾಪುರವಿದೆ.
ಅರ್ಧ ಚಂದ್ರಾಕೃತಿಯಲ್ಲಿ ಹರಿಯುವುದರಿಂದ ಭೀಮಾ ನದಿಯನ್ನು ಇಲ್ಲಿ ಚಂದ್ರಭಾಗ ಎಂದು ಕರೆಯುತ್ತಾರೆ. ಸಾಕ್ಷಾತ್ ಚಂದ್ರನೇ ಧರೆಗಿಳಿದು ನದಿಯಲ್ಲಿ ಮಿಂದು ಪಾಂಡುರಂಗನ ದರ್ಶನ ಮಾಡಿದ್ದನೆಂದು ಪುರಾಣಗಳಲ್ಲಿ ಹೇಳಲಾಗಿರುವುದರಿಂದಲೂ ಈ ಹೆಸರು ಬಂದಿದೆಯಂತೆ. ಸೊಲ್ಲಾಪುರ ಜಿಲ್ಲೆಯಲ್ಲಿನ ಈ ಊರು ತಾಲೂಕು ಮುಖ್ಯ ಕೇಂದ್ರ. ಮೂಲತಃ 5ನೇ ಶತಮಾನದಲ್ಲಿ ರಾಷ್ಟ್ರಕೂಟರಿಂದ ನಿರ್ಮಾಣವಾದ ಈ ಮಂದಿರ 13ನೇ ಶತಮಾನದ ದಾಸಪಂಥ, ವೈಷ್ಣವ ಸಂತರಿಂದ ಹೆಚ್ಚು ಪ್ರಚಲಿತವಾಯಿತು. ಭಕ್ತಿರಸದ ಪಾಂಡುರಂಗನ ಮೇಲೆ ನೂರಾರು ಕಥೆ, ಲಕ್ಷಾಂತರ ಕೀರ್ತನೆ, ಭಜನೆ ರೂಪಿತವಾಗಿವೆ. ಇನ್ನು ಭಕ್ತ ಪುಂಡಲೀಕ ಹಾಗೂ ಪಂಢರಾಪುರವೆಂಬ ಹೆಸರು ಬಂದ ಹಿನ್ನೆಲೆಯೂ ಕುತೂಹಲ ಕೆರಳಿಸುವಂಥದು.

ಮಂದಿರ ವಿವರಣೆ  
ಮಂದಿರವು ವಿಶಾಲ ಪ್ರಾಂಗಣವಿದ್ದು, 6 ಮುಖ್ಯದ್ವಾರಗಳನ್ನು ಹೊಂದಿದೆ. ಪೂರ್ವದ್ವಾರಕ್ಕೆ 'ನಾಮದೇವದ್ವಾರ' ಎಂದು ಕರೆಯಲಾಗಿದ್ದು, ಇದರ ಮೂಲಕವೇ ಮಂದಿರ ಪ್ರವೇಶಿಸಬೇಕು. ಇಲ್ಲಿ 'ಪಾದಸ್ಪರ್ಶ' ದರ್ಶನಕ್ಕೆ ಅವಕಾಶವಿದೆ. ಯಾವುದೇ ಧರ್ಮ, ಜಾತಿ, ಲಿಂಗಭೇಧವಿಲ್ಲ. ಇಲ್ಲಿ ಪಾಂಡುರಂಗನ ಮೂರ್ತಿ ಮಾತ್ರವಿದ್ದು, ರುಕ್ಮಿಣಿಯ ಮಂದಿರ ಮುಖ್ಯ ಮಂದಿರದ ಹಿಂಭಾಗದಲ್ಲಿದೆ. ಮುಂಜಾನೆಯ ಪೂಜೆ ಕಾಕಡಾರತಿಗೆ ಜನ ಕಾದುಕುಳಿತು ಹರಕೆ ತೀರಿಸುತ್ತಾರೆ. ಆಷಾಢ ಮತ್ತು ಕಾರ್ತಿಕ ಏಕಾದಶಿಯಂದು ವಿಶೇಷ ಪೂಜೆ ನಡೆಯುತ್ತದೆ. ವಾರ್ಷಿಕ ಯಾತ್ರೆ ವಾರಿ ಕಾಲ್ನಡಿಯಲ್ಲಿ ಭಕ್ತರು ಯಾತ್ರೆ ಕೈಗೊಳ್ಳುತ್ತಾರೆ. 'ವಾರ್ಕರಿ' ಹೆಸರಿನಿಂದ ಇಂಥ ಭಕ್ತರನ್ನು ಗುರುತಿಸಲಾಗುತ್ತದೆ. ಹಲವು ಸ್ಥಳಗಳಿಂದ ಭಕ್ತರು 'ದಿಂಡಿ' ಮಾಡಿಕೊಂಡು ಪಲ್ಲಕ್ಕಿ ಹೊತ್ತು ಆಷಾಢ ಏಕಾದಶಿಗೆ ಭಕ್ತರು ಆಗಮಿಸುತ್ತಾರೆ. ಈ ಸಂಪ್ರದಾಯ ಸುಮಾರು 700 ವರ್ಷಗಳಿಂದಲೂ ಆಚರಣೆಯಲ್ಲಿದೆ.

ಭೇಟಿ ನೀಡಲೇಬೇಕಾದ ತಾಣ  
ನದಿ ತೀರದಲ್ಲೇ ಇರುವ ಪುಂಡಲೀಕ ಮಂದಿರ, 10 ಕಿ.ಮೀ. ಅಂತರದಲ್ಲಿರುವ ಸತಿ ಸಕ್ಕೂಬಾಯಿ ವಾಸಿಸಿದ ಮನೆ ಹಾಗೂ ಬಳಸಲಾಗುತ್ತಿದ್ದ ವಸ್ತುಗಳನ್ನು ಗೋಪಾಲಪುರದಲ್ಲಿ ಸಂರಕ್ಷಿಸಿಡಲಾಗಿದೆ. ಭಕ್ತರು ಇಲ್ಲಿಗೂ ಹೆಚ್ಚು ಭೇಟಿ ನೀಡುತ್ತಾರೆ. ಸಂತ ಗಜಾನನ ಮಹಾರಾಜರ ಸಮಾಧಿಸ್ಥಳ, ಧ್ಯಾನ ಮಂದಿರ, ಪೀಠವಿರುವ ಗಜಾನನ ಮಂದಿರ, ಸಂತ ಕಾಕಡೆ ಬಾಬಾ ಸಮಾಧಿ ಮಂದಿರ, ಮಧಿ ಮಧ್ಯದ ವಿಷ್ಣುಪಾದ ಮಂದಿರ ಯಾತ್ರಿಗಳು ತಪ್ಪದೇ ಭೇಟಿ ನೀಡಬೇಕೆನಿಸುವಂಥವು.

ಹೀಗೆ ಬನ್ನಿ
ರೈಲು ಮಾರ್ಗವಾಗಿ ಬರುವವರು ಸೊಲ್ಲಾಪುರ- ಪುಣೆ ಮಾರ್ಗದ ಕುರ್ಡವಾಡಿಯಿಂದ, ಮೀರಜ್ ಮೂಲಕ ತಲುಪಬಹುದು. ಕರ್ನಾಟಕದ ಬಿಜಾಪುರದಿಂದ ಪ್ರತಿ 10 ನಿಮಿಷಕ್ಕೆ ಬಸ್ ಸೌಲಭ್ಯವಿದೆ. ಮಂದಿರದಿಂದ ಹಲವಾರು ಛತ್ರ, ಧರ್ಮಶಾಲೆ ನಿರ್ಮಿಸಿ ವಸತಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಖಾಸಗಿ ವಸತಿ ಗೃಹಗಳೂ ಇಲ್ಲಿವೆ. ಮಂದಿರ ವತಿಯಿಂದ ಭೋಜನ ವ್ಯವಸ್ಥೆಯೂ ಇದೆ.

-ಚಿತ್ರ-ಲೇಖನ: ಡಾ. ಕೆ.ವಿ. ಸಂತೋಷ್ ಹೊಳಲ್ಕೆರೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.