ಪಂಚಾಮೃತ

ತುಳುನಾಡು ದಕ್ಷಿಣ ಕನ್ನಡ ಪರಂಪರೆಯ ರಾಜಮನೆತನದ ಆಳ್ವಿಕೆಗೆ ಸಾಕ್ಷಿಯಾಗಿರುವ ಭೂಭಾಗ ವಿಟ್ಲ. ಜಿಲ್ಲೆಯ ಬಂಟ್ವಾಳ ತಾಲೂಕಿನ ವ್ಯಾಪ್ತಿಯಲ್ಲಿದೆ. ವಿಟ್ಲ ಅರಸು ವಂಶಜರ ಆಳ್ವಿಕೆಯಲ್ಲೇ ಪಂಚಲಿಂಗೇಶ್ವರ ದೇವಳ ಇದ್ದುದು ಇತಿಹಾಸ. ವಿಟ್ಲ ಸೀಮೆಯ ದೇವಸ್ಥಾನ ಎಂದು ಇದು ಪ್ರಸಿದ್ಧಿ. ವಿಟ್ಲ ಸೀಮೆಯ ದೇವಸ್ಥಾನಗಳಲ್ಲೆಲ್ಲ ಇದೇ ಪ್ರಮುಖ ದೇವಾಲಯ ಮತ್ತು ಗಾತ್ರದ ದೃಷ್ಟಿಯಿಂದಲೂ ಇದನ್ನು ಮೀರಿಸುವ ದೇಗುಲಗಳಿಲ್ಲ. ಇದು ಸುಮಾರು ಒಂದು ಸಾವಿರ ವರ್ಷಗಳಿಗೂ ಮಿಕ್ಕಿದ ಪ್ರಾಚೀನ ದೇವಸ್ಥಾನವೆಂದು ಹಿರಿಯರು ಕೃತಿಗಳಲ್ಲಿ ಉಲ್ಲೇಖಿಸಿದ್ದಾರೆ.
ಹೆಚ್ಚಿನ ದೇಗುಲಗಳು ಪೂರ್ವಾಭಿಮುಖವಾಗಿರುತ್ತವೆ. ಆದರೆ, ವಿಟ್ಲ ಅರಮನೆ ಆಡಳಿತಕ್ಕೊಳಪಟ್ಟ ವಿಟ್ಲ ಮತ್ತು ಬಾಯಾರು ಶ್ರೀಪಂಚಲಿಂಗೇಶ್ವರ ದೇಗುಲಗಳು ಪಶ್ಚಿಮಾಭಿಮುಖವಾಗಿರುವುದು ವಿಶೇಷ. ಗಜಪ್ರಷ್ಟಾಕೃತಿಯಲ್ಲಿರುವುದು ಇಲ್ಲಿನ ಗರ್ಭಗೃಹ ವೈಭವದ ಪ್ರತೀಕವಾಗಿದೆ. ಮುಖಮಂಟಪವು ಗರ್ಭಗೃಹಕ್ಕೆ ಸೇರಿದಂತೆ ರಚಿತವಾಗಿರುವುದನ್ನು ಗಜಪ್ರಷ್ಟಾಕೃತಿ ಎಂದು ತಜ್ಞರು ಗುರುತಿಸಿದ್ದಾರೆ. ದೇಗುಲದ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿರುವುದರಿಂದ ಗರ್ಭಗೃಹದ ಮೂರು ಹಂತಗಳ ಇಳಿಜಾರು ಮಾಡುಗಳನ್ನು ಗಜಪ್ರಷ್ಟಾಕಾರವನ್ನು ಪ್ರಸ್ತುತ ದಿನಗಳಲ್ಲಿ ಕಾಣುವುದಕ್ಕೆ ಸಾಧ್ಯವಿಲ್ಲ.
ಸ್ಥಳ ಪುರಾಣ
ಈ ಪ್ರದೇಶದಲ್ಲಿ ಪಾಂಡವರು ತಮ್ಮ ಸುತ್ತಾಟದ ಸಂದರ್ಭ ನೆಲೆಸಿದ್ದರಂತೆ. ತಮ್ಮ ಭೇಟಿ ನೆನಪಿಗಾಗಿ ಶಿವನನ್ನು ಸ್ಥಾಪಿಸಲು ನಿರ್ಧರಿಸಿದ ಪಾಂಡವರು ವಾಯುವೇಗದಲ್ಲಿ ಗಮಿಸಬಲ್ಲ ಭೀಮನನ್ನು ಕಾಶಿಗೆ ಕಳುಹಿಸಿ ಲಿಂಗಗಳನ್ನು ತರಲು ನಿಯೋಜಿಸಿದರು. ಭೀಮ ಲಿಂಗಗಳನ್ನು ತರುವಾಗ ತಡವಾಗಿದ್ದರಿಂದ ನಿಶ್ಚಿತ ಲಗ್ನದಲ್ಲಿ ಆತನು ಆಗಮಿಸುವುದಕ್ಕೆ ಮೊದಲೇ ಶಿಲೆಯೊಂದನ್ನು ಪ್ರತಿಷ್ಠಿಸಿ ಪೂಜೆ ನೆರವೇರಿಸಿದರಂತೆ. ಆದರೆ, ಭೀಮನು ಆಗಮಿಸಿ ಪ್ರತಿಷ್ಠಾಪಿಸಿದ ಶಿಲೆ ಕಿತ್ತೆಸೆದು ತಾನು ತಂದ ಲಿಂಗಗಳನ್ನು ಪ್ರತಿಷ್ಠಾಪಿಸಿದನಂತೆ. ಭೀಮನು ಕಿತ್ತೆಸೆದ ಲಿಂಗವು ವಿಟ್ಲ ದೇಗುಲದ ಬಡಗು ದಿಕ್ಕಿನ ಕೆರೆಯ ಮಧ್ಯೆ ಕಲ್ಲಿನ ಮಂಟಪದಲ್ಲಿ ಈಗಲೂ ಇದೆಯೆಂದು ಹೇಳಲಾಗುತ್ತಿದೆ. ಹೀಗೆ ಈ ಶಿವಲಿಂಗಗಳು ಪಾಂಡವರಿಂದ ಪ್ರತಿಷ್ಠೆಗೊಂಡಿದ್ದವೆಂಬ ನಂಬಿಕೆ. ನೈವೆದ್ಯಕ್ಕೆ ಬೇರೇನೂ ಇಲ್ಲದುದರಿಂದ ಅದಾಗಲೇ ನೈವೇದ್ಯ ಮಾಡಲಾದ ಅನ್ನಕ್ಕಿಷ್ಟು ನೀರು ಚಿಮುಕಿಸಿ ಅದನ್ನೊಮ್ಮೆ ಬೆಂಕಿಗಿರಿಸಿ ತೆಗೆದು ಪುನಃ ನೈವೇದ್ಯ ಮಾಡಿದನೆಂಬುದು ಸ್ಥಳಪುರಾಣ. ಅದೇ ಕಾರಣಕ್ಕೆ ಇಲ್ಲಿನ ಪಂಚಲಿಂಗೇಶ್ವರನಿಗೆ ತಂಗುಳನ್ನದ ನೈವೇಧ್ಯ ಮಾಡುವುದು ಇಂದಿಗೂ ಆಚರಣೆಯಲ್ಲಿದೆ.
ಹೀಗೆಬನ್ನಿ: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು- ಕಲ್ಲಡ್ಕ ಮಾರ್ಗವಾಗಿ 40 ಕಿ.ಮೀ. ಕ್ರಮಿಸಿದರೆ ವಿಟ್ಲ ತಲುಪಬಹುದು. ಉಪ್ಪಿನಂಗಡಿ ಮಾರ್ಗವಾಗಿ ಬರುವವರು ಪುತ್ತೂರು- ಮಾಣಿ- ಕಲ್ಲಡ್ಕ ಮಾರ್ಗವಾಗಿ 30 ಕಿ.ಮೀ. ಕ್ರಮಿಸಿಯೂ ವಿಟ್ಲ ತಲುಪಬಹುದು.
-ಚಿತ್ರ-ಲೇಖನ: ಉದಯ ವಿಟ್ಲ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


