ವಾಹನ

ಕೊಲ್ಲಿ ದ್ವೀಪ

ಕೊಲ್ಲಿ ದ್ವೀಪ
Published On :

ಕಪಿಲಾ ನದಿಯ ದಂಡೆಯಲ್ಲಿರುವ ಭೀಮನಕೊಲ್ಲಿ ಕಳೆಯೇ ವಿಭಿನ್ನ. ಇದು ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ತಾಲೂಕಿಗೆ ಸೇರುತ್ತದೆ. ಮೂರು ಕಡೆ ಜಲಾವೃತಗೊಂಡು, ಪರ್ಯಾಯ ದ್ವೀಪ ಕ್ಷೇತ್ರ ಎನಿಸಿಕೊಂಡಿದೆ ಈ ಭೀಮನಕೊಲ್ಲಿ.
ಪ್ರತಿವರ್ಷ ಫೆಬ್ರವರಿಯಲ್ಲಿ ಅಲ್ಲಿ ಮಹದೇಶ್ವರಸ್ವಾಮಿ ಜಾತ್ರೆ ನಡೆಯುತ್ತದೆ. ಕೈಲಾಸಪತಿ ಪರಶಿವ ಮಹದೇಶ್ವರನಾಗಿ ಭೂಮಂಡಲದಲ್ಲಿ ಅವತರಿಸಿ, ತಮ್ಮ ಧಾರ್ಮಿಕ ಪಯಣದ ಕಾಲದಲ್ಲಿ ಶ್ರೀಕ್ಷೇತ್ರ ಭೀಮನಕೊಲ್ಲಿಗೆ ಬಂದು ಭಕ್ತರು ಹರಕೆ ನೆರವೇರಿಸಿ, ಅಲ್ಲಿಂದ ಶ್ರೀಮಲೆಮಹದೇಶ್ವರ ಬೆಟ್ಟಕ್ಕೆ ತೆರಳಿದ ಎಂಬುದು ಪ್ರತೀತಿ. ಅಂದು ಈ ಕ್ಷೇತ್ರದಲ್ಲಿ ಶಿವನು ತಪಸ್ಸು ಆಚರಿಸಿ, ಸದ್ಬೋಧನೆ ಮಾಡಿದ ಪುಣ್ಯ ಸ್ಥಳದಲ್ಲಿ ಶಿವಲಿಂಗ ಉದ್ಭವಿಸಿ, ಸರ್ವರ ಆರಾಧ್ಯ ದೈವವಾಗಿ ಪೂಜಿತವಾಗುತ್ತಿದೆ.
ಎಚ್.ಡಿ. ಕೋಟೆ ತಾಲೂಕಿನ ಬೀಚನಹಳ್ಳಿ ಬಳಿ ಕಬಿನಿ ಜಲಾಶಯ ನಿರ್ಮಾಣವಾದ ನಂತರ ಭೀಮನಕೊಲ್ಲಿ ಕ್ಷೇತ್ರದ ಮೂರು ಕಡೆ ಜಲಾವೃತಗೊಂಡಿತು. ಬಹುಕಾಲ ಜನ ಸಂಪರ್ಕವಿಲ್ಲದಂತಾಗಿತ್ತು. ಆದರೆ 1989-90 ರಿಂದ ಪವಿತ್ರ ಯಾತ್ರಾ ಸ್ಥಳ, ಪ್ರವಾಸಿ ತಾಣವಾಗಿ ಅಭಿವೃದ್ಧಿ ಹೊಂದುತ್ತಿದೆ. ನಾಡಿನ ಮೂಲೆ ಮೂಲೆಗಳಿಂದ ಭಕ್ತರು, ಪ್ರವಾಸಿಗರು ವರ್ಷವಿಡೀ ಇಲ್ಲಿಗೆ ಬರುತ್ತಿದ್ದಾರೆ. ದೋಣಿ ವಿಹಾರ, ನೈಸರ್ಗಿಕ ಶಿಬಿರ ನಡೆಸುವವರಿಗೆ, ಪ್ರವಾಸಿಗರಿಗೆ, ಪರಿಸರ ಪ್ರಿಯರಿಗೆ ಬೇಕಾದ ನೈಸರ್ಗಿಕ ವಾತಾವರಣ ಈ ಕ್ಷೇತ್ರದಲ್ಲಿದೆ. ಮಂಗಳಕಾರ್ಯ, ಸೇವಾ ಕೈಂಕರ್ಯ, ಅನ್ನದಾಸೋಹ ಮೊದಲಾದ ಸೇವೆ ಮಾಡಿಸುವವರಿಗೆ ಹೇಳಿ ಮಾಡಿಸಿದ ತಾಣ.
ಇಲ್ಲಿರುವ ಶ್ರೀಮಹದೇಶ್ವರ ದೇವಸ್ಥಾನದಲ್ಲಿ ವರ್ಷದ ಎಲ್ಲಾ ಕಾಲದಲ್ಲೂ ಅರ್ಚಕರು ಹಾಜರಿದ್ದು, ಪೂಜೆ ನೆರವೇರಿಸುತ್ತಾರೆ. ಪ್ರತಿ ಅಮಾವಾಸ್ಯೆ, ಕಾರ್ತಿಕ ಮಾಸದ ಎಲ್ಲಾ ಸೋಮವಾರ ಮತ್ತು ಜಾತ್ರಾ ಮಹೋತ್ಸವ ಸಂದರ್ಭ ಪ್ರಸಾದದ ವ್ಯವಸ್ಥೆ ಇದೆ. ಆರ್ಥಿಕವಾಗಿ ಸಶಕ್ತವಾದ ನಂತರ ನಿತ್ಯ ದಾಸೋಹ ಮಾಡುವ ಉದ್ದೇಶ ದೇವಸ್ಥಾನ ಸಮಿತಿಗೆ ಇದೆ.
ಪರಿಸರ ಪ್ರವಾಸೋದ್ಯಮ
ಪ್ರವಾಸೋದ್ಯಮ ಇಲಾಖೆ ಮನಸ್ಸು ಮಾಡಿದರೆ ಪರಿಸರ ಪ್ರವಾಸೋದ್ಯಮ ತಾಣವಾಗಿ ರೂಪಿಸಬಹುದು. ಭೀಮನಕೊಲ್ಲಿ ಕ್ಷೇತ್ರದ ಸುತ್ತಲೂ ಟ್ರ್ಯಾಕ್ ನಿರ್ಮಿಸಿ, ಸೈಕ್ಲಿಂಗ್, ಪಕ್ಕದಲ್ಲಿಯೇ ನದಿ ಇರುವುದರಿಂದ ಬೋಟಿಂಗ್‌ಗೆ ಅವಕಾಶ ಕಲ್ಪಿಸಬಹುದು. ಹಟ್ ಮಾದರಿಯ 30 ಕಾಟೇಜ್ ನಿರ್ಮಿಸಿ, ಖಾಸಗಿಯವರಿಗೆ ಊಟ- ತಿಂಡಿ ಗುತ್ತಿಗೆ ನೀಡಿದರೆ ಸಾಕು. ಇದಕ್ಕಾಗಿ ಮೂಲ  ಸೌಕರ್ಯ ಒದಗಿಸಲು ರು. 15 ಕೋಟಿ ಬೇಕಾಗಬಹುದು. ಈ ಎಲ್ಲಾ ಸೌಲಭ್ಯ ಕಲ್ಪಿಸಿದಲ್ಲಿ ಇದು ಕ್ಲಿಕ್ ಆಗುವುದರಲ್ಲಿ ಹಾಗೂ ಸರ್ಕಾರಕ್ಕೆ ಹಾಕಿರುವ ಬಂಡವಾಳ ಕೆಲವೇ ವರ್ಷಗಳಲ್ಲಿ ವಾಪಸ್ ಬರುವುದರಲ್ಲಿ ಯಾವುದೇ ಸಂಶಯವಿಲ್ಲ. ಇದಕ್ಕೆ ಸಮೀಪದಲ್ಲಿಯೇ ಕಾರಾಪುರ ಜಂಗಲ್ ಲಾಡ್ಜ್, ಆರೆಂಜ್ ಕೌಂಟಿ ಮತ್ತು ಸಿಕಾಡ ರೆಸಾರ್ಟ್‌ಗಳಿವೆ. ಅವರು ಈಗಾಗಲೇ ಬೋಟಿಂಗ್ ಮತ್ತಿತರ ಸೌಲಭ್ಯ ಕಲ್ಪಿಸಿ, ಲಾಭ ಪಡೆಯುತ್ತಿದ್ದಾರೆ. ಭೀಮನಕೊಲ್ಲಿಯ ಬಹುಭಾಗ ತೋಟಗಾರಿಕೆ ಇಲಾಖೆಗೆ ಸೇರಿದ. ಈಗಾಗಲೇ ತೋಟಗಾರಿಕೆ ಇಲಾಖೆಯು ಕೆಮ್ಮಣ್ಣು ಗುಂಡಿ ಹಾಗೂ ನಂದಿ ಬೆಟ್ಟವನ್ನು ಪ್ರವಾಸಿತಾಣಗಳಾಗಿ ಅಭಿವೃದ್ಧಿಪಡಿಸಿರುವಂತೆ ಈ ಕ್ಷೇತ್ರವನ್ನೂ ಅಭಿವೃದ್ಧಿಪಡಿಸಬಹುದು. <
ಹೀಗೆ ಬನ್ನಿ...
ಭೀಮನಕೊಲ್ಲಿ ಮೈಸೂರಿನಿಂದ 65 ಕಿ.ಮೀ., ಎಚ್.ಡಿ. ಕೋಟೆಯಿಂದ 27 ಕಿ.ಮೀ. ದೂರದಲ್ಲಿದೆ. ಮೈಸೂರಿನಿಂದ ಎಚ್.ಡಿ. ಕೋಟೆ ರಸ್ತೆಯಲ್ಲಿ ಹ್ಯಾಂಡ್‌ಪೋಸ್ಟ್ ತಲುಪಿ, ಅಲ್ಲಿಂದ ಬೀಚನಹಳ್ಳಿ ಮಾರ್ಗವಾಗಿ ಭೀಮನಕೊಲ್ಲಿ ತಲುಪಬಹುದು. ಎಚ್.ಡಿ. ಕೋಟೆಯಿಂದ ಸಾರಿಗೆ ಸಂಸ್ಥೆಯ ಬಸ್ ಸೌಲಭ್ಯವಿದೆ. ಮೂರಾ ಬಂದ್ ಬಳಿ ಇಳಿದು, ಆಟೋ, ಜೀಪುಗಳಲ್ಲೂ ಭೀಮನಕೊಲ್ಲಿ ತಲುಪಬಹುದು. ಸ್ವಂತ ಅಥವಾ ಬಾಡಿಗೆ ವಾಹನಗಳಲ್ಲಿ ಹೋದಲ್ಲಿ ಅನುಕೂಲ. ಅಲ್ಲಿ ಯಾವುದೇ ಹೋಟೆಲ್‌ಗಳಿಲ್ಲ. ಹೀಗಾಗಿ ಜೊತೆಯಲ್ಲಿಯೇ ಊಟ- ತಿಂಡಿ- ನೀರು ತೆಗೆದುಕೊಂಡು ಹೋದಲ್ಲಿ ದೇವಸ್ಥಾನ ನೋಡಿಕೊಂಡು, ಪರ್ಯಾಯ ದ್ವೀಪದಲ್ಲಿ ಆರಾಮವಾಗಿದ್ದು ಬರಬಹುದು. ಒಟ್ಟಾರೆ ಪಿಕ್ನಿಕ್‌ಗೆ ಹೇಳಿ ಮಾಡಿಸಿದ ತಾಣ. ಸರಿಯಾಗಿ ಪ್ಲ್ಯಾನ್ ಮಾಡಿದಲ್ಲಿ ಕಬಿನಿ, ನುಗು ಜಲಾಶಯ, ಚಿಕ್ಕದೇವಮ್ಮನಬೆಟ್ಟ ನೋಡಿಕೊಂಡು ಬರಬಹುದು.

-ಚಿತ್ರ- ಲೇಖನ: ಅಂಶಿ ಪ್ರಸನ್ನಕುಮಾರ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.